More

    ಕೋವಿಡ್ ತಡೆಯಲು ಸಹಕಾರ ಅಗತ್ಯ

    ಎಚ್.ಡಿ.ಕೋಟೆ: ಒಂದು ಮತ್ತು ಎರಡನೇ ಕೋವಿಡ್ ಅಲೆಯಲ್ಲಿ ಕೆಲಸ ಮಾಡಿದಂತೆ ಈ ಬಾರಿಯೂ ಕೂಡ ಅಧಿಕಾರಿಗಳು ಶ್ರಮವಹಿಸಿ ಕೆಲಸ ಮಾಡುವ ಮೂಲಕ ಕೋವಿಡ್ ತಡೆಯಲು ತಾಲೂಕು ಮಟ್ಟದ ಅಧಿಕಾರಿಗಳು ಸಹಕಾರ ನೀಡಬೇಕು ಎಂದು ತಹಸೀಲ್ದಾರ್ ಶ್ರೀನಿವಾಸ್ ಮನವಿ ಮಾಡಿದರು.

    ಪಟ್ಟಣದ ತಾಲೂಕು ಆಡಳಿತ ಭವನದ ಸಭಾಂಗಣದಲ್ಲಿ ಗುರುವಾರ ಕರೊನ ವೈರಸ್ ತಡೆಗಟ್ಟುವಿಕೆ ಕುರಿತು ನಡೆದ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಕೇರಳ ಮತ್ತು ತಮಿಳುನಾಡಿನಲ್ಲಿ ಕರೊನ ವೈರಸ್ ಹೆಚ್ಚಾಗಿ ಜನರು ಆತಂಕದಲ್ಲಿದ್ದಾರೆ. ಈ ಸಂದರ್ಭದಲ್ಲಿ ಗಡಿ ಭಾಗದಲ್ಲಿ ಮುನ್ನೆಚ್ಚರಿಕೆ ವಹಿಸುವುದರ ಜತೆಗೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಸಂಬಂಧಿಸಿದ ಅಧಿಕಾರಿಗಳು ಕೈಗೊಳ್ಳಬೇಕು. ಒಂದನೇ ಮತ್ತು ಎರಡನೇ ಅಲೆಯಲ್ಲಿ ಸಾವು ನೋವು ಸೇರಿದಂತೆ ತುಂಬಾ ಕಷ್ಟ ಅನುಭವಿಸಿದ್ದೇವೆ. ಈ ಹಿನ್ನೆಲೆಯಲ್ಲಿ ಹಿಂದೆ ಒಗ್ಗೂಡಿ ಕೆಲಸ ಮಾಡಿದಂತೆ ಈಗಲೂ ನಾವು ಎಚ್ಚರಿಕೆ ವಹಿಸಿ ಕೆಲಸ ನಿರ್ವಹಿಸಿದರೆ ವೈರಸ್ ಹರಡುವಿಕೆ ತಡೆಯಬಹುದು ಎಂದರು.

    ಗ್ರಾಮಸ್ಥರಿಗೆ ಮನವರಿಕೆ ಮಾಡಿ: ಪ್ರತಿ ಗ್ರಾಮ ಪಂಚಾಯಿತಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ತಮ್ಮ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಜನರಿಗೆ ಮನವರಿಕೆ ಮಾಡಬೇಕು. 60 ವರ್ಷ ತುಂಬಿದ ಎಲ್ಲರೂ ಸಭೆ ಸಮಾರಂಭಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಅಧಿಕಾರಿಗಳು ಒಗ್ಗಟ್ಟಾಗಿ ಕರೊನ ವೈರಸ್ ತಡೆಗೆ ಸಜ್ಜಾಗಬೇಕು ಎಂದರು.

    2 ತಂಡ ರಚನೆ: ತಾಲೂಕು ಆರೋಗ್ಯ ವೈದ್ಯಾಧಿಕಾರಿ ಡಾ.ಟಿ.ರವಿಕುಮಾರ್ ಮಾತನಾಡಿ, ಬಾವಲಿ ಚೆಕ್ ಪೋಸ್ಟ್‌ನಲ್ಲಿ ಈಗಾಗಲೇ ಎರಡು ತಂಡ ರಚನೆ ಮಾಡಿ ಕೇರಳದಿಂದ ಬರುವವರ ಮೇಲೆ ನಿಗಾ ಇಡಲಾಗಿದೆ. ಅಗತ್ಯ ಇದ್ದವರನ್ನು ತಪಾಸಣೆ ಮಾಡಿ ಅವರಿಗೆ ಮಾಹಿತಿ ನೀಡಲಾಗುತ್ತಿದೆ. ಕೋವಿಡ್ ಸಿಂಟಮ್ಸ್ ಇದ್ದವರನ್ನು ತಪಾಸಣೆಗೆ ಒಳಪಡಿಸಿ ಅವರಿಗೆ ಚಿಕಿತ್ಸೆ ಕೊಡಿಸಲು ನಮ್ಮ ಸಿಬ್ಬಂದಿ ನೆರವಾಗಲಿದ್ದಾರೆ ಎಂದರು.

    ಜಿಲ್ಲಾಧಿಕಾರಿಗಳ ನಿರ್ದೇಶನದ ಮೇರೆಗೆ ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನ 20 ಆಸ್ಪತ್ರೆಗಳಲ್ಲಿ ಅಗತ್ಯ ಔಷಧಗಳನ್ನು ಇಟ್ಟುಕೊಂಡಿದ್ದು, ಯಾವುದೇ ಸಂದರ್ಭದಲ್ಲಿ ಚಿಕಿತ್ಸೆ ಕೊಡಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. ಈಗಾಗಲೇ ತಾಲೂಕಿನಲ್ಲಿ ಪ್ರತಿದಿನ 30 ಜನರನ್ನು ಕಡ್ಡಾಯವಾಗಿ ತಪಾಸಣೆಗೆ ಒಳಪಡಿಸಿ ಜಿಲ್ಲಾ ಆಡಳಿತಕ್ಕೆ ವರದಿ ನೀಡಲಾಗುತ್ತದೆ. ಜ್ವರ ಕೆಮ್ಮು ಗಂಟಲು ನೋವು ಸಾಮಾನ್ಯ ನೆಗಡಿ ಉಸಿರಾಟದ ತೊಂದರೆಗಳು ಕಂಡುಬಂದಲ್ಲಿ ಮಾಸ್ಕ್ ಧರಿಸಿ ಕೂಡಲೇ ಸಹಾಯವಾಣಿ ಸಂಪರ್ಕಿಸುವ ವ್ಯವಸ್ಥೆ ಮಾಡಬೇಕಿದೆ ಎಂದರು.

    ಸೋಂಕಿತ ವ್ಯಕ್ತಿಯ ಸಂಪರ್ಕದಲ್ಲಿದ್ದರೆ ಅಂತಹವರು 14 ದಿನಗಳವರೆಗೆ ಮನೆಯಲ್ಲಿ ಪ್ರತ್ಯೇಕವಾಗಿ ಇರಬೇಕು. ಜತೆಗೆ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ವರದಿ ಮಾಡಿಕೊಳ್ಳಬೇಕು. ಸೋಂಕು ಹರಡುವಿಕೆ ನಿಯಂತ್ರಿಸಲು ಇತರೆ ಜನರೊಂದಿಗೆ ಸಂಪರ್ಕ ಕಡಿತಗೊಳಿಸುವ ಮೂಲಕ ಸಮುದಾಯದ ಅಂತರ ಕಾಯ್ದುಕೊಳ್ಳಬೇಕು. ಇದರಿಂದ ಪ್ರಸರಣದ ಸರಪಳಿ ತಂಡರಿಸಲು ಸಹಾಯವಾಗುತ್ತದೆ. ಅನಗತ್ಯ ಪ್ರಯಾಣ, ಸಾಮಾಜಿಕ ಸಮಾರಂಭಗಳಿಂದ ದೂರವಿರಬೇಕು ಎಂದು ಹೇಳಿದರು.

    ಸಭೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ಸುರೇಶ್, ಅಬಕಾರಿ ಇನ್ಸೆಪೆಕ್ಟರ್ ಶಿವರಾಜು, ಎಡಿಎಲ್‌ಆರ್ ಜಗನಾಥ್, ಪರಿಶಿಷ್ಟ ವರ್ಗಗಳ ಕಲ್ಯಾಣ ಅಧಿಕಾರಿ ನಾರಾಯಣ ಸ್ವಾಮಿ, ಸಿಡಿಪಿಒ ಆಶಾ, ಪೊಲೀಸ್ ಇಲಾಖೆಯ ಸಿದ್ದರಾಜು, ಶ್ರೀಧರ್ ಮೂರ್ತಿ, ಸಿದ್ದರಾಜು, ರಘುನಾಥ್ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts