More

    ಸಂಸ್ಕೃತಿ ಮೇಳೈಸುವ ಅಕ್ಕಿಆಲೂರ ಉತ್ಸವ

    ಅಕ್ಕಿಆಲೂರ: ಅಕ್ಕಿಆಲೂರ ಪಟ್ಟಣದಲ್ಲಿ ಮಾ. 1ರಿಂದ 5ರವರೆಗೆ ಅಕ್ಕಿಆಲೂರ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಸಂಭ್ರಮ ಸಡಗರ ಮನೆ ಮಾಡಿದೆ.

    ಈ ಭಾಗದ ಆರಾಧ್ಯದೈವಗಳಾದ ಲಿಂ. ಚನ್ನವೀರ ಸ್ವಾಮೀಜಿ ಮತ್ತು ಲಿಂ.ಕುಮಾರೇಶ್ವರ ಸ್ವಾಮೀಜಿ ಪುಣ್ಯಸ್ಮರಣೋತ್ಸವ ಹಾಗೂ ವೀರಭದ್ರೇಶ್ವರ ಜಾತ್ರಾ ಮಹೋತ್ಸವದ ಪ್ರಯುಕ್ತ 5 ದಿನಗಳ ಕಾಲ ಆಯೋಜಿಸಿರುವ ಉತ್ಸವದಲ್ಲಿ ಧಾರ್ವಿುಕ, ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ವಿಚಾರಗೋಷ್ಠಿಗಳು ಜರುಗಲಿವೆ.

    ಶಿವಯೋಗ ಮಂದಿರ ಹಾಗೂ ಅಖಿಲ ಭಾರತ ವಿರಶೈವ ಮಹಾಸಭಾ ಸ್ಥಾಪಿಸಿ ನಾಡಿನ ಎಲ್ಲ ಮಠಗಳಿಗೆ ಸ್ವಾಮೀಜಿಗಳಾಗುವವರಿಗೆ ಸ್ವಾಮಿತ್ವದ ಸಂಸ್ಕಾರದ ಪರಿಪಾಠ ಬೋಧಿಸಿದ ಹಾನಗಲ್ಲ ಕುಮಾರ ಶಿವಯೋಗಿಗಳ ತತ್ವ ಮತ್ತು ಸಿದ್ಧಾಂತವನ್ನು ಅನುಸರಿಸಿ ಲೋಕಲ್ಯಾಣ ಮಾಡಿದ ಕೀರ್ತಿ ಅಕ್ಕಿಆಲೂರ ಚನ್ನವೀರೇಶ್ವರ ವಿರಕ್ತಮಠಕ್ಕೆ ಸಲ್ಲುತ್ತದೆ.

    ಶ್ರೀಮಠಕ್ಕೆ 1964ರ ಜನವರಿ 26ರಂದು ವಿರೂಪಾಕ್ಷಯ್ಯನವರು ಚನ್ನವೀರ ಮಹಾಸ್ವಾಮಿಗಳು ಎಂಬ ನಾಮಾಂಕಿತದಿಂದ ಪೀಠಾಧಿಪತಿಗಳಾದರು. ವೀರಶೈವ ಲಿಂಗಾಯತ ಪರಂಪರೆಯ ಸನಾತನ ಮಠಕ್ಕೆ ಸ್ವಾಮಿಗಳು ಇಲ್ಲ ಎಂಬ ಕೊರಗು ಭಕ್ತರನ್ನು ನೀಗಿಸಿತು. ಲಿಂ. ಚನ್ನವೀರ ಸ್ವಾಮೀಜಿ ಅವರು ಅಕ್ಕಿಆಲೂರ, ಮಾಳಗೊಂಡನಕೊಪ್ಪ, ಗೊಡಚಿಕೊಂಡ ಗ್ರಾಮಗಳಲ್ಲಿ ವರ್ಷದಲ್ಲಿ ಒಂದು ಬಾರಿ ನಿಸರ್ಗದ ಮಡಿಲಲ್ಲಿ, ತಿಂಗಳುಗಳ ಕಾಲ ಆಹಾರ, ನೀರು ತ್ಯಜಿಸಿ, ಮಾತನಾಡದೆ ಕೋಟಿ ಲಿಂಗ ಜಪ ಮಾಡುತ್ತಿದ್ದರು. ಅನೇಕ ಧಾರ್ವಿುಕ ಮತ್ತು ಸಾಮಾಜಿಕ ಕ್ರಾಂತಿ ನಂತರ 2009ರ ಜೂನ್ 14ರಂದು ಚನ್ನವೀರ ಶ್ರೀಗಳು ಲಿಂಗೈಕ್ಯರಾದರು.

    ನಂತರ ಶಿವಯೋಗ ಮಂದಿರಲ್ಲಿ ಶಿಕ್ಷಣ ಪೂರೈಸಿಕೊಂಡು, ಇಡೀ ಶಿವಯೋಗ ಮಂದಿರ ನಡೆಸುವ ಜವಾಬ್ದಾರಿ ಹೊತ್ತಿದ್ದ ನಿರಂಜನ ಶಿವಬಸವ ದೇವರು ಅಕ್ಕಿಆಲೂರಿನ ವಿರಕ್ತಮಠಕ್ಕೆ 2011ರ ಮೇ 13ರಂದು ಶಿವಬಸವ ಸ್ವಾಮೀಜಿಗಳಾಗಿ ಪಟ್ಟಾಧಿಕಾರ ಸ್ವೀಕರಿಸಿದರು. ಹಿಂದಿನ ಚನ್ನವೀರ ಶ್ರೀಗಳ ಧರ್ಮದ ಹಾದಿಯಲ್ಲಿಯೇ ನಡೆಯುತ್ತಿರುವ ಶಿವಬಸವ ಸ್ವಾಮೀಜಿ, ಮಠ, ಪೂಜೆ ಮತ್ತು ಧಾರ್ವಿುಕ ಕಾರ್ಯಕ್ಕೆ ಮಾತ್ರ ಸೀಮಿತವಾಗದೆ ವಿಭಿನ್ನ ಯೋಜನೆ ಮೂಲಕ ಅಕ್ಕಿಆಲೂರನ್ನು ಸಕಾರಾತ್ಮಕವಾಗಿ ನಾಡಿಗೆ ಗುರುತಿಸಲು ಯಶಸ್ವಿಯಾಗಿದ್ದಾರೆ.

    ಉಭಯ ಪೂಜ್ಯರ ಪುಣ್ಯಸ್ಮರಣೆಯೊಂದಿಗೆ 1977ರ ಜನವರಿ 24ರಂದು ಉದ್ಘಾಟನೆಗೊಂಡು ಪಟ್ಟಣದ ಜನತೆಗೆ ಸಂಘಟನಾತ್ಮಕವಾಗಿ ಬಲಿಷ್ಠಗೊಳಿಸಿದ ಧಾರ್ವಿುಕ ಕೇಂದ್ರ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವವನ್ನು ಅಕ್ಕಿಆಲೂರ ಉತ್ಸವದಲ್ಲಿ ಆಚರಿಸಲಾಗುತ್ತಿದೆ.

    ಅಕ್ಕಿಆಲೂರ ಉತ್ಸವದಲ್ಲಿಂದು

    ಮಾ. 1ರಂದು ಬೆಳಗ್ಗೆ 8 ಗಂಟೆಗೆ ವಿರಕ್ತಮಠದ ಆವರಣದಲ್ಲಿ ಹುಬ್ಬಳ್ಳಿ ಮೂರಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಅವರು ಷಟ್​ಸ್ಥಲ ಧ್ವಜಾರೋಹಣದ ಮೂಲಕ ಅಕ್ಕಿಆಲೂರ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಮಹಿಳೆಯರಿಂದ ಗ್ರಾಮದೇವಿಗೆ ಉಡಿ ತುಂಬುವ ಧಾರ್ವಿುಕ ಕಾರ್ಯಕ್ರಮ ಜರುಗಲಿದೆ. ಸಂಜೆ 6 ಗಂಟೆಗೆ ನಡೆಯಲಿರುವ ಸಮಾಜಕ್ಕೆ ಮಠಗಳ ಕೊಡುಗೆ ಚಿಂತನ ಗೋಷ್ಠಿಯಲ್ಲಿ ಹುಬ್ಬಳ್ಳಿ ಮೂರಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ನರಸೀಪುರ ಅಂಬಿಗರ ಚೌಡಯ್ಯ ಗುರುಪೀಠದ ಶಾಂತಭೀಷ್ಮ ಚೌಡಯ್ಯ ಶ್ರೀ ಅಧ್ಯಕ್ಷತೆ ವಹಿಸುವರು. ಹೊಳಲ ವಿರಕ್ತಮಠದ ಉತ್ತರಾಧಿಕಾರಿ ಚನ್ನಬಸವ ದೇವರು ಅನುಭವಾಮೃತ ನುಡಿಯಲಿದ್ದಾರೆ. ಮುತ್ತಿನಕಂತಿ ಮಠದ ಚಂದ್ರಶೇಖರ ಶಿವಾಚಾರ್ಯ ಶ್ರೀ, ಕೊಟ್ಟೂರಬಸಪ್ಪ ಬೆಲ್ಲದ, ಶರತ್ ಸಣ್ಣವೀರಪ್ಪನವರ, ಹೊಳೆಯಪ್ಪ ಅರಳಿಮನಿ ಪಾಲ್ಗೊಳ್ಳುವರು.

    ಅಕ್ಕಿಆಲೂರ ಉತ್ಸವದಲ್ಲಿ ಧಾರ್ವಿುಕ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಿಂಚನವಾಗುತ್ತಿದೆ. ಜನತೆಯ ಆತ್ಮಭಲ ಹೆಚ್ಚಿಸಿ ಸಮಾಜಸೇವೆಗೆ ಅಣಿಗೊಳಿಸಿದ ಚನ್ನವೀರ ಶ್ರೀ, ಕುಮಾರ ಶ್ರೀ ಮತ್ತು ವಿರಭದ್ರೇಶ್ವರ ದೇವರ ಆರಾಧನೆ ಆರಂಭವಾಗಿದೆ. ಮನುಷ್ಯ ಧರ್ಮದ ಹಾದಿಯಲ್ಲಿ ನಡೆಯಬೇಕೆಂಬು ಎಂಬುದನ್ನು ಅನೇಕ ಧಾರ್ವಿುಕ ಗೋಷ್ಠಿಗಳು ತಿಳಿಸಿಕೊಡಲಿವೆ. ಅಕ್ಕಿಆಲೂರ ಉತ್ಸವ ಮನೆಮನಗಳ ಹಬ್ಬವಾಗಿದೆ.

    | ಚಂದನ ಚೌಶೆಟ್ಟಿ, ಅಕ್ಕಿಆಲೂರ ಉದ್ಯಮಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts