More

    ಶುರುವಾಗಲಿ ಕನ್ನಡ ಪ್ರಜ್ಞೆ ಜಾಗೃತಿ ಚಳವಳಿ  ಸಮ್ಮೇಳನಾಧ್ಯಕ್ಷ ಪ್ರೊ. ಸಿ.ವಿ. ಪಾಟೀಲ್ ಆಶಯ  ದಾವಣಗೆರೆ ಜಿಲ್ಲಾ ಅಕ್ಷರ ಜಾತ್ರೆ ಆರಂಭ

    ದಾವಣಗೆರೆ: ಸ್ವಾಭಿಮಾನ, ಸಮನ್ವಯದ ಮೂಲಕ ಕನ್ನಡದ ಪ್ರಜ್ಞೆ ಮೂಡಿಸುವ ಚಳವಳಿಗಳು ಪ್ರಾರಂಭವಾಗಬೇಕಿದೆ. ಇದಕ್ಕೆ ಕಸಾಪ, ಕನ್ನಡಪರ ಸಂಘಟನೆಗಳು ನೇತೃತ್ವ ವಹಿಸಬೇಕಿದೆ ಎಂದು ಸಮ್ಮೇಳನಾಧ್ಯಕ್ಷ ಪ್ರೊ. ಸಿ.ವಿ. ಪಾಟೀಲ್ ಆಶಯ ವ್ಯಕ್ತಪಡಿಸಿದರು.
    ಹರಿಹರದಲ್ಲಿ ಆಯೋಜಿಸಿರುವ ದಾವಣಗೆರೆ ಜಿಲ್ಲಾ 13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಸೋಮವಾರ ಅಧ್ಯಕ್ಷೀಯ ನುಡಿಗಳನ್ನಾಡಿದರು.
    ಕನ್ನಡ ಅಳಿಯದು, ಉಳಿದು ಬೆಳೆಯುವ ಭಾಷೆಯಾಗಿದೆ. ಕೇವಲ ವ್ಯವಹಾರಿಕವಲ್ಲ; ಅದೊಂದು ಜನಾಂಗದ ಬದುಕು, ಸಂಸ್ಕೃತಿಯಾಗಿದೆ. ಕನ್ನಡದ ಅಂತಃಸತ್ವವಾದ ಸ್ವಾಭಿಮಾನ, ಸಮನ್ವಯವನ್ನು ಹೊಸ ಪೀಳಿಗೆಗೆ ತಿಳಿಸಬೇಕು ಎಂದು ಹೇಳಿದರು.
    ಭಾಷೆ, ಸಾಹಿತ್ಯ, ಸಂಸ್ಕೃತಿ ಹಾಗೂ ಶಿಕ್ಷಣದಂಥ ಅಭಿವೃದ್ಧಿ ಪೂರಕ ಅಂಶಗಳ ಮೇಲೆ ಕೇಂದ್ರದ ನೀತಿ, ರಾಜ್ಯದ ನೀತಿ ಎಂಬ ಇಬ್ಬಾಯ ಖಡ್ಗವನ್ನು ಪ್ರಯೋಗಿಸಬಾರದು. ಶಿಕ್ಷಣ, ಆಡಳಿತ, ವ್ಯವಹಾರದಲ್ಲಿ ಪೂರ್ಣ ಪ್ರಮಾಣದ ಕನ್ನಡ ಬಳಕೆಯನ್ನು ಕಾನೂನುಬದ್ಧವಾಗಿಸಬೇಕಿದೆ. ಅತಿಯಾದ ಔದಾರ್ಯ ಬಿಡಬೇಕು ಎಂದೂ ಸೂಕ್ಷ್ಮವಾಗಿ ಹೇಳಿದರು.
    ರಾಜ್ಯ ಜನ್ಮ ತಾಳಿ ಏಳೂವರೆ ದಶಕವಾದರೂ ಉದಯವಾಗಲಿ ಚೆಲುವ ಕನ್ನಡನಾಡು, ಹೆಸರಾಯಿತು ಕರ್ನಾಟಕ, ಉಸಿರಾಗಲಿ ಕನ್ನಡ ಎಂಬ ಆಶಯಗಳು ಘೋಷಣೆಯಲ್ಲಿವೆ. ಕರ್ನಾಟಕದ ಅನನ್ಯತೆಯ ಚರ್ಚೆ ಮುಂದುವರಿದಿದೆ. ಯಾವುದೇ ವಿಶ್ವಭಾಷೆಗಿಲ್ಲದ ಸತ್ವ ಮತ್ತು ಸಾಮರ್ಥ್ಯ ಕನ್ನಡಕ್ಕಿದೆ. ನಾವೆಲ್ಲರೂ ಸೇರಿ ‘ಕನ್ನಡ ಕನ್ನಡ, ಬನ್ನಿ ನಮ್ಮ ಸಂಗಡ’ ಎಂಬ ಕರೆ ಮೂಲಕ ಸಮನ್ವಯ-ಸ್ವಾಭಿಮಾನದ ಕನ್ನಡ ಕಟ್ಟಬೇಕಿದೆ ಎಂದು ಹೇಳಿದರು.
    ಕಾನೂನಾತ್ಮಕ ಅಂಶಗಳಡಿ ಜನಭಾಷೆ ಕಲಿಸದಿರುವುದು, ಉದ್ಯೋಗದ ಹೆಸರಲ್ಲಿ ಇಂಗ್ಲಿಷ್ ವ್ಯಾಮೋಹ, ವಿದ್ಯುನ್ಮಾನ ಮಾಧ್ಯಮಗಳ ಸೌಲಭ್ಯ, ಕನ್ನಡ ಅನ್ನದ ಭಾಷೆಯಲ್ಲ ಎಂಬ ಸ್ವಕಲ್ಪಿತ ಚಿಂತನೆಗಳಿಂದ ಓದುವ ಮತ್ತು ಬರೆಯುವ ಸಂಸ್ಕೃತಿ ಕಣ್ಮರೆಯಾಗುತ್ತಿದೆ. ಕನ್ನಡದ ಬಳಕೆ ಕಡಿಮೆಯಾದಂತೆ ಅದರ ಶವದ ಪೆಟ್ಟಿಗೆಗೆ ಕನ್ನಡಿಗರೇ ಅಂತಿಮ ಮೊಳೆ ಹೊಡೆಯಲು ಕಾರಣರಾಗುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು.

    ಹರಿಹರ ಉತ್ಸವ, ಪ್ರವಾಸಿ ಕೇಂದ್ರ ಆಗಲಿ
    ಉತ್ತರ ಕರ್ನಾಟಕ, ದಕ್ಷಿಣ ಕರ್ನಾಟಕದ ಹೆಬ್ಬಾಗಿಲು ಹರಿಹರ ನಗರಾಭಿವೃದ್ಧಿಗೆ ಕೆಲ ರಾಜಕೀಯ ಪೋಷಕಾಂಶಗಳ ಸಮನ್ವಯದ ಕೊರತೆಯಿದೆ. ಮೈಸೂರು ಕಿರ್ಲೋಸ್ಕರ್ ಕಂಪನಿ ಲಾಕ್‌ಔಟ್ ಆದಾಗ ಆರ್ಥಿಕ ಸ್ಥಿತಿಗೆ ಲಕ್ವಾ ಬಡಿಯಿತು. ಇದನ್ನು ಸಮತೋಲಿತಗೊಳಿಸುವ ಹಾಗೂ ಸರ್ಕಾರದ ನಾಗರಿಕರ ಪರ ಅಭಿವೃದ್ಧಿ ಕಾರ್ಯಗಳು ಈ ನೆಲದಲ್ಲಿ ಆಗಿಲ್ಲ, ಪ್ರಗತಿಶೂನ್ಯವಾಗಿದೆ ಎಂದು ಪ್ರೊ.ಸಿ.ವಿ.ಪಾಟೀಲ್ ಭಾಷಣದಲ್ಲಿ ಬೆಳಕು ಚೆಲ್ಲಿದರು.
    ಹರಿಹರೇಶ್ವರ ದೇಗುಲಕ್ಕೆ ಗ್ರೇಡ್ ಎ ಮಾನ್ಯತೆ ಒದಗಿಸಿ, ಪ್ರವಾಸೋದ್ಯಮ ಕೇಂದ್ರವಾಗಿಸಬೇಕು. ಹರಿಹರ ಉತ್ಸವ ಆಯೋಜಿಸಬೇಕು. ಹರಿಹರದ ಜನರು ಬೇಸಿಗೆಯಲ್ಲಿ ನೀರಿಗಾಗಿ ತತ್ತರಿಸುವ ಸಮಸ್ಯೆ ಇದೆ. ನಗರಸಭೆ ಆಯವ್ಯಯದಲ್ಲಿ ಮಂಡಿಸಿದಂತೆ ಅಗಸನಕಟ್ಟೆ ಕೆರೆಯ ಪುನರುಜ್ಜೀವನ, ಭೈರನಪಾದ ಏತ ನೀರಾವರಿ ಯೋಜನೆ ಪೂರ್ಣಗೊಳಿಸಬೇಕು.
    ಹರಿಹರಕ್ಕೆ ನೀರೊದಗಿಸುವ ಘಟಕಗಳನ್ನು ಸ್ಥಾಪಿಸಬೇಕು. ಭದ್ರಾ ಅಚ್ಚುಕಟ್ಟು ರೈತರ ಹಿತ ಕಾಯಬೇಕು. ಕೈಗಾರಿಕಾ ಘಟಕಗಳನ್ನು ಆರಂಭಿಸಬೇಕು. ಟೆಕ್ಸ್‌ಟೈಲ್ಸ್ ಪಾರ್ಕ್, ಪವನ ವಿದ್ಯುತ್‌ಸ್ಥಾವರಗಳೊಂದಿಗೆ ಈ ನಗರವನ್ನು ಸಂತುಷ್ಟವಾಗಿಸಲು ಜನಪ್ರತಿನಿಧಿಗಳು ಸರ್ಕಾರದ ಮೇಲೆ ಒತ್ತಡ ತರಬೇಕೆಂದರು.
    ಆಶುಕವಿತೆಗಳನ್ನು ಹೇಳಿದ ಯುಗಧರ್ಮ ರಾಮಣ್ಣ ಕನ್ನಡ ಧ್ವಜ ಹಸ್ತಾಂತರಿಸಿದರು. ಸ್ಮರಣ ಸಂಚಿಕೆ ‘ಸಂಗಮ ಸಿರಿ’ ಜತೆಗೆ ಎನ್.ಟಿ. ಎರ‌್ರಿಸ್ವಾಮಿ ಅವರ ನಾಯಕನಹಟ್ಟಿ ಶ್ರೀಗುರು ತಿಪ್ಪೇರುದ್ರಸ್ವಾಮಿ, ಸೀತಾ ಎಸ್. ನಾರಾಯಣ ಅವರ ಜ್ಞಾನವಾರಧಿ, ಎಚ್.ಎನ್.ಶಿವಕುಮಾರ್ ಅವರ ಶ್ರಾವಣ ಸಂಭ್ರಮ ಕೃತಿ ಬಿಡುಗಡೆಯಾದವು.
    ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಪ್ರಾಸ್ತಾವಿಕ ಮಾತನಾಡಿದರು. ಆಶಾ ಸಿ.ವಿ. ಪಾಟೀಲ್, ತಪೋವನ ಸಂಸ್ಥೆಯ ಡಾ. ಶಶಿಕುಮಾರ್ ಮೆಹರ‌್ವಾಡೆ, ಸರ್ಕಾರಿ ನೌಕರರ ಸಂಘದ ಎ.ಕೆ.ಭೂಮೇಶ್, ಸಾಹಿತಿ ಪ್ರೊ.ಎಚ್.ಎ.ಭಿಕ್ಷಾವರ್ತಿಮಠ, ಮುಖಂಡರಾದ ಗಣಪತಿ ಮಾಳಂಜಿ, ರಮೇಶ್ ಮಾನೆ, ಇಲಿಯಾಸ್ ಅಹ್ಮದ್, ಪ್ರೀತಂಬಾಬು, ಎಚ್. ಸುಧಾಕರ್, ಈಶಪ್ಪ ಬೂದಿಹಾಳ್, ಶಶಿನಾಯ್ಕ ಇತರರಿದ್ದರು. ಬಿ. ದಿಳ್ಯಪ್ಪ ಸ್ವಾಗತಿಸಿದರು. ರೇವಣಸಿದ್ದಪ್ಪ ಅಂಗಡಿ, ಕೆ. ರಾಘವೇಂದ್ರ ನಾಯರಿ ಕಾರ್ಯಕ್ರಮ ನಿರ್ವಹಿಸಿದರು. ಜಿಗಳಿ ಪ್ರಕಾಶ್ ವಂದಿಸಿದರು.

    ನಮಗಿರಲಿ ತಮಿಳಿಗರು, ಕೇರಳಿಗರ ಅಭಿಮಾನ
    ತಮಿಳುನಾಡಿನ ಸಂಗೀತ ಕಛೇರಿಗಳಲ್ಲಿ ಹಾಡು, ಅಂಗಡಿ-ಮುಂಗಟ್ಟುಗಳ ನಾಮಫಲಕಗಳಲ್ಲೂ ತಮಿಳು ಭಾಷೆ ರಾರಾಜಿಸುತ್ತದೆ. ಕೇರಳಿಗರು ಹೆಚ್ಚು ಮಲಯಾಳಿ ಪುಸ್ತಕಗಳನ್ನು ಖರೀದಿಸಿ ಓದುತ್ತಾರೆ. ಐದಾರು ತಿಂಗಳಲ್ಲಿ 1000 ಕೃತಿಗಳು ಬಿಕರಿಯಾಗುತ್ತವೆ. ದಿನಸಿ ಜತೆಗೆ ಪುಸ್ತಕ, ಪತ್ರಿಕೆಗಳನ್ನು ತರುತ್ತಾರೆ. ಈ ವ್ಯವಧಾನ ಕನ್ನಡಿಗರಲ್ಲೂ ಬರಬೇಕು ಎಂದು ಬೆಂಗಳೂರು ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರ ಜಿ. ವೆಂಕಟೇಶ್ ಆಶಿಸಿದರು.
    ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಪ್ರಧಾನ ಭಾಷಣ ಮಾಡಿದ ಅವರು, ನಿಮ್ಮ ಮಕ್ಕಳಿಗೆ ವಾರಕ್ಕೊಮ್ಮೆ ಮಸಾಲೆದೋಸೆ ಕೊಡಿಸುವ ಜತೆಗೆ ಪುಸ್ತಕದಂಗಡಿಯತ್ತ ಬಿಡಿ. ಕನಿಷ್ಠ ಮೊತ್ತದ ಪುಸ್ತಕ ಒದಿಸಿ ಕನ್ನಡದ ಅಭಿರುಚಿ ಮೂಡಿಸಿ. ಅಲಂಕಾರಿಕ ವಸ್ತುಗಳನ್ನು ಇರಿಸುವ ಕಪಾಟುಗಳಂತೆಯೇ ಮನೆಗಳಲ್ಲಿಯೇ ಪುಸ್ತಕದ ಕೋಣೆ ಸ್ಥಾಪಿಸಿ ಎಂದು ಹೇಳಿದರು.
    ಕನ್ನಡ ನಿಘಂಟು, ಕೋಶ, ರಾಮಾಯಣ, ಮಹಾಭಾರತ ಮೊದಲಾದ ಪುಸ್ತಕ ಕೊಡಿಸಿ. ಮಕ್ಕಳಿಗೆ ದಾಸರ ಕೀರ್ತನೆಗಳನ್ನು ಕೇಳಿಸಿ. ತಿಂಗಳಿಗೆ ಕನಿಷ್ಠ 200 ಪುಸ್ತಕ ಖರೀದಿಸಿದರೂ ಪುಸ್ತಕ ಪ್ರಪಂಚ ಸಮೃದ್ಧಿಯಾಗಿರಲಿದೆ. ಲೇಖಕ, ಪ್ರಕಾಶಕ, ಓದುಗರನ್ನು ಉಳಿಸಲು ಮೊದಲು ಪುಸ್ತಕೋದ್ಯಮ ಉಳಿಸಿ. ಸಂಪಾದನೆಯ ಶೇ.5ರಷ್ಟು ಹಣ ಪುಸ್ತಕ, ವೃತ್ತಪತ್ರಿಕೆಗೆ ಮೀಸಲಿಡಿ ಎಂದು ಕಿವಿಮಾತು ಹೇಳಿದರು.

    13ರ ಪೋರನೇ ಕನ್ನಡ ಗುರು!
    27 ವರ್ಷದ ನನ್ನ ಹಿರಿಯ ಮಗ ಸಮರ್ಥ, ಮೊದಲ ನಾಲ್ಕು ವರ್ಷ ಕರ್ನಾಟಕದಲ್ಲಿ ವ್ಯಾಸಂಗ ಮಾಡಿ ಹೊರರಾಜ್ಯ ನಂತರ ವಿದೇಶದಲ್ಲಿ ಓದಿದ್ದಾನೆ. ಮೂರು ವರ್ಷದಿಂದ ದಾವಣಗೆರೆಗೆ ಬಂದಿದ್ದಾನೆ. ಅವನಿಗೆ ಕನ್ನಡ ಕಲಿಸುತ್ತಿರುವುದು, 13 ವರ್ಷದವನಾದ ನನ್ನ ಕಿರಿಯ ಮಗ ಶಿವ!.  ಕಾಪಿರೈಟಿಂಗ್ ಪುಸ್ತಕಸಹಿತವಾಗಿ ಕನ್ನಡದ ಸ್ವರ-ವ್ಯಂಜನ ಹಾಗೂ ಒಂದನೇ ತರಗತಿ ಪುಸ್ತಕದ ಪಾಠಗಳನ್ನು ಕಲಿಸುತ್ತಿದ್ದಾನೆ. ಹಿರಿಮಗ ಈಗೀಗ ಕನ್ನಡ ವೃತ್ತಪತ್ರಿಕೆಗಳನ್ನು ನಿಧಾನವಾಗಿ ಓದುತ್ತಿದ್ದಾನೆ. 
    ಎಸ್ಸೆಸ್ ಕೇರ್ ಟ್ರಸ್ಟ್‌ನ ಆಜೀವ ಟ್ರಸ್ಟಿ ಡಾ.ಪ್ರಭಾ ಮಲ್ಲಿಕಾರ್ಜುನ್ ಅವರ ಮನದ ಮಾತಿದು. ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಕನ್ನಡ ಓದಿಸಲು ಹೆಚ್ಚು ಪ್ರೋತ್ಸಾಹಿಸಿದಲ್ಲಿ ಇಂಥಹ ಸಮ್ಮೇಳನ ಹಾಗೂ ಸರ್ಕಾರದ ಕಾರ್ಯಕ್ರಮಗಳಿಗೆ ಉತ್ತೇಜನ ಸಿಗಲಿದೆ ಎಂದರು.
    ಸರ್ಕಾರಿ ಅಥವಾ ಖಾಸಗಿ ಶಾಲೆಗಳಲ್ಲಿ ಕನ್ನಡ ಕಲಿಕೆಗೆ ಆದ್ಯತೆ ನೀಡಬೇಕು. ಕನ್ನಡ ರಾಜ್ಯೋತ್ಸವ ಒಂದು ದಿನಕ್ಕೆ ಮಾತ್ರವಲ್ಲದೆ ವರ್ಷವಿಡೀ ಕನ್ನಡದ ಪ್ರಬಂಧ, ಚರ್ಚಾ ಸ್ಪರ್ಧೆ, ನಾಟಕ, ಕಲಾ ಪ್ರದರ್ಶನಗಳನ್ನು ಆಯೋಜಿಸಬೇಕು. ಇದು ಕೇವಲ ಕಸಾಪ, ಸಂಘಟನೆಗಳು ಮಾತ್ರವಲ್ಲದೆ ನಮ್ಮೆಲ್ಲರ ಜವಾಬ್ದಾರಿ ಆಗಬೇಕು ಎಂದು ಹೇಳಿದರು.

    ರಾಜಕೀಯೇತರ ಸಮ್ಮೇಳನ!
    ಆಹ್ವಾನಪತ್ರಿಕೆಯಲ್ಲಿ ಜನಪ್ರತಿನಿಧಿಗಳು ಸೇರಿ 15 ಮಂದಿ ರಾಜಕಾರಣಿಗಳ ಹೆಸರಿತ್ತು. ನೀತಿಸಂಹಿತೆ ಜಾರಿ ಹಿನ್ನೆಲೆಯಲ್ಲಿ ಅವರ‌್ಯಾರೂ ಇತ್ತ ಸುಳಿಯಲಿಲ್ಲ. ಹೀಗಾಗಿ ಇದು ಅಪ್ಪಟ ರಾಜಕೀಯೇತರ ಸಮ್ಮೇಳನವಾಗಿ ಉಳಿಯಿತು. ಕನ್ನಡಪರ ಸಂಘಟನೆಗಳ ಮುಖಂಡರು ಅವರ ಕುರ್ಚಿಗಳಲ್ಲಿ ಕುಳಿತು ಮುಂದಿನ ಸಾಲಿನಲ್ಲೇ ಸ್ಥಾನ ಗಿಟ್ಟಿಸಿದರು.

    ಗಮನ ಸೆಳೆದ ಚಿತ್ರಕಲಾಕೃತಿಗಳು
    ಸಿದ್ದೇಶ್ವರ ಪ್ಯಾಲೇಸ್ ಮಂಟಪದ ಒಳಾವರಣದಲ್ಲಿ ಆಯೋಜಿಸಿದ್ದ ಚಿತ್ರಕಲಾ ಪ್ರದರ್ಶನ ಗಮನ ಸೆಳೆಯಿತು. ಎ. ಮಹಲಿಂಗಪ್ಪ, ಆರ್.ಶಿವಕುಮಾರ್, ಚಂದ್ರಶೇಖರ ಸಂಗಾ, ಶಿವಶಂಕರ ಸುತಾರ ಮೊದಲಾದ ಕಲಾವಿದರು ರಚಿಸಿದ ಪೇಂಟಿಂಗ್, ವ್ಯಕ್ತಿಚಿತ್ರ, ನಿಸರ್ಗ ಮೊದಲಾದ ಕಲಾಕೃತಿಗಳನ್ನು ನೋಡುಗರು ಕಣ್ತುಂಬಿಕೊಂಡರು.
    ಪುಸ್ತಕ ಮಳಿಗೆಗಳು, ಗೃಹಪಯೋಗಿ ವಸ್ತುಗಳು, ಕುರುಕಲು ತಿಂಡಿ, ಕೈಮಗ್ಗ ಉಡುಪು-ವಸ್ತ್ರಗಳು ಅಲ್ಲಿ ಪ್ರದರ್ಶನಗೊಂಡವು. ಸಮ್ಮೇಳನಾಧ್ಯಕ್ಷರು ಭಾಷಣ ಓದುತ್ತಿದ್ದಾಗಲೇ ಹೊರಭಾಗದಲ್ಲಿ ಒಒಡಿ ಸೌಲಭ್ಯದ ಚೀಟಿಗಾಗಿ ಶಿಕ್ಷಕರು ಮುಗಿಬಿದ್ದರು. ಸಾಹಿತ್ಯಾಸಕ್ತರು ಮಧ್ಯಾಹ್ನ ಗೋಧಿ ಪಾಯಸ, ಚಿತ್ರಾನ್ನ, ಅನ್ನ-ಸಾಂಬಾರು ಸವಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts