More

    ಉತ್ಸವಗಳು ಸ್ಥಳೀಯ ಕಲಾವಿದರಿಗೆ ವೇದಿಕೆ

    ಸಾಗರ: ಜಾತ್ರೋತ್ಸವಗಳು ಸ್ಥಳೀಯ ಕಲಾವಿದರಿಗೆ ವೇದಿಕೆ ಒದಗಿಸಿಕೊಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಇಂತಹ ಉತ್ಸವಗಳು ಹೆಚ್ಚು ನಡೆಯಬೇಕು ಎಂದು ಉಪವಿಭಾಗಾಧಿಕಾರಿ ಆರ್.ಯತೀಶ್ ಅಭಿಪ್ರಾಯಪಟ್ಟರು.

    ಸಾಗರದ ಮಹಾಗಣಪತಿ ಜಾತ್ರಾ ಮಹೋತ್ಸವ ಅಂಗವಾಗಿ ಏರ್ಪಡಿಸಿರುವ ಐದು ದಿನಗಳ ಸಾಂಸ್ಕೃತಿಕ ವೈಭವ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.
    ಸುಮಾರು 500 ವರ್ಷಗಳ ಹಿಂದೆ ಕೆಳದಿ ಅರಸರು ಸಾಗರದ ಗಣಪತಿ ದೇವಸ್ಥಾನ ನಿರ್ಮಿಸಿದ್ದರು. ಇಂದು ನಾವು ಒಟ್ಟಿಗೆ ಸೇರಿ ಇಂತಹ ಮಹೋತ್ಸವ ಆಚರಿಸಲು ಅವಕಾಶವಾಗಿದೆ. ಗಣಪತಿ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದರೂ ಎಲ್ಲರೂ ಸೇರಿ ಸಾಗರದಲ್ಲಿ ಗಣಪತಿ ಜಾತ್ರೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವುದು ಸಂತೋಷದ ಸಂಗತಿ ಎಂದರು.
    ತಾಲೂಕು ಪಂಚಾಯಿತಿ ಇಒ ಸುನೀತಾ ಮಾತನಾಡಿ, ಗಣಪತಿ ಜಾತ್ರೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತಾಲೂಕು ಆಡಳಿತದಿಂದ ಮತದಾನ ಜಾಗೃತಿಗಾಗಿ ಅನೇಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮತದಾನ ಮಾಡಬೇಕು. ಸಾಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.90ರಷ್ಟು ಮತದಾನ ನಡೆಸುವ ಉದ್ದೇಶದಿಂದ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಸ್ಥಳೀಯರು ಮತದಾನ ಮಾಡುವ ಜತೆಗೆ ಸಾಗರ ಕ್ಷೇತ್ರದವರು ಬೇರೆ ಊರಿನಲ್ಲಿದ್ದರೆ ಅವರನ್ನು ಕರೆಸಿ ಮತದಾನ ಮಾಡಿಸಬೇಕು ಎಂದು ಮನವಿ ಮಾಡಿದರು.
    ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕುಗ್ವೆ ಗ್ರಾಮದ ವೀತರಾಗಾಯ ತಂಡದವರು ವಿ.ಟಿ.ಸ್ವಾಮಿ ರಚಿಸಿದ ಮತದಾನ ಜಾಗೃತಿ ಗೀತೆ ಹಾಡಿದರು. ತಹಸೀಲ್ದಾರ್ ಸೈಯದ್ ಕಲೀಮುಲ್ಲಾ, ಗಣಪತಿ ದೇವಸ್ಥಾನದ ಆಡಳಿತಾಧಿಕಾರಿ ಪ್ರಮೀಳಾಕುಮಾರಿ, ಜಿ.ಬಸವರಾಜ್, ವಿ.ಟಿ.ಸ್ವಾಮಿ, ವಿವಿಧ ಸಮಿತಿ ಪದಾಧಿಕಾರಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts