More

    ಕೃಷಿಕನ ಕನಸಿಗೆ ಬೇಕಿದೆ ಬೆಂಬಲ, ಹೋಟೆಲ್, ಮನೆಗಳಿಂದ ಹಸಿತ್ಯಾಜ್ಯ ಸಂಗ್ರಹಿಸಿ ಗೊಬ್ಬರ ತಯಾರಿ

    ಅನ್ಸಾರ್ ಇನೋಳಿ ಉಳ್ಳಾಲ

    ಮನೆಯಲ್ಲೇ ಹಸಿತ್ಯಾಜ್ಯ ನಿರ್ವಹಣೆ ನಿಟ್ಟಿನಲ್ಲಿ ಕೋಟೆಕಾರ್ ಪಟ್ಟಣ ಪಂಚಾಯಿತಿ ವಿವಿಧ ಯೋಜನೆಗಳನ್ನು ಆರಂಭಿಸಿದೆ. ಇದೇ ಪರಿಸರದಲ್ಲಿ ಉತ್ಸಾಹಿ ಕೃಷಿಕರೋರ್ವರು ಹೋಟೆಲ್ ಮಾತ್ರವಲ್ಲದೆ ಮನೆಗಳಿಂದಲೂ ಹಸಿತ್ಯಾಜ್ಯ ಸಂಗ್ರಹಿಸಿ ಸಾವಯವ ಗೊಬ್ಬರವಾಗಿಸಿ ಕೃಷಿಗೆ ಬಳಸುತ್ತಿರುವುದು ಬೆಳಕಿಗೆ ಬಾರದಿರುವುದು ಅಚ್ಚರಿ!

    ಕೋಟೆಕಾರ್ ಬೀರಿ ನಿವಾಸಿ ರೊನಾಲ್ಡ್ ಕ್ಯಾಸ್ಟಲಿನೊ ಎಂಬುವರು ಸಾವಯವ ಗೊಬ್ಬರ ತಯಾರಿಸುತ್ತಿರುವ ಕೃಷಿಕ. ಇವರು ಮೂಲತಃ ಮುದರಂಗಡಿ ಸಾಂತೂರು ಗ್ರಾಮದವರು. ನಾಗಾರ್ಜುನ ವಿದ್ಯುತ್ ಸ್ಥಾವರದ ಹಾರುವ ಬೂದಿಯಿಂದ ಇವರ ಕೃಷಿ ಜಮೀನು ನಿಷ್ಪ್ರಯೋಜಕವಾಯಿತು. ಇದರಿಂದ ಬೇಸರಗೊಂಡು ರೊನಾಲ್ಡ್ 1987ರಲ್ಲಿ ಊರು ತೊರೆದು ಕೋಟೆಕಾರ್ ಬೀರಿಗೆ ಬಂದು 25 ಸೆಂಟ್ಸ್ ಜಮೀನು ಖರೀದಿಸಿ ಮನೆ ನಿರ್ಮಿಸಿ ಬಳಿಕ ವಿದೇಶ ಸೇರಿದರು. 15 ವರ್ಷ ಅಟೋಮೊಬೈಲ್ ಕಂಪನಿಯಲ್ಲಿ ಕೆಲಸ ನಿರ್ವಹಿಸಿ ಹಿಂದಿರುಗಿದ ಅವರು, ಮನೆ ಆವರಣದಲ್ಲೇ ಜೇನು ಮತ್ತು ಇತರ ಕೃಷಿ ಕೆಲಸದಲ್ಲಿ ತೊಡಗಿಕೊಂಡರು. ಜತೆಗೆ ಬಾಳೆ, ಲಕ್ಷ್ಮಣ ಫಲ, ಮಾವು, ಜಂಬುನೇರಳೆ, ಪೇರಳೆ, ತೆಂಗು, ಲಿಂಬೆ, ತೊಂಡೆಕಾಯಿ, ಬಸಳೆ, ಶುಂಠಿ, ಅರಶಿನ, ಮೂಸಂಬಿ, ಲಿಂಬೆ, ಮಲ್ಲಿಗೆ, ನೆಲಮಲ್ಲಿಗೆ ಸಹಿತ ಇನ್ನಿತರ ಕೃಷಿ ಹಾಗೂ ಹೂವಿನ ಗಿಡಗಳನ್ನು ಬೆಳೆಸಿದರು.

    ಗೊಬ್ಬರಕ್ಕೆ ತ್ಯಾಜ್ಯ ಸಂಗ್ರಹ: ಗಿಡಗಳಿಗೆ ಬೇಕಾದ ಗೊಬ್ಬರ ತಾವೇ ತಯಾರಿಸಲು ಮುಂದಾಗಿ ಕೆಲವು ಸಮಯಗಳಿಂದ ಆಸುಪಾಸಿನ ಎಂಟು ಮನೆಗಳು ಹಾಗೂ ಹೋಟೆಲೊಂದರ ಹಸಿತ್ಯಾಜ್ಯ ಸಂಗ್ರಹಿಸಿ ಅದರಲ್ಲೇ ಸಾವಯವ ಗೊಬ್ಬರ ತಯಾರಿಸುತ್ತಿದ್ದಾರೆ.

    ನೀರು ಸಮಸ್ಯೆಗೆ ಪರಿಹಾರ: 10ನೇ ತರಗತಿ ಓದಿರುವ ರೊನಾಲ್ಡ್, ಕುಡಿಯುವ ನೀರಿನ ಸಮಸ್ಯೆಗೂ ಪರಿಹಾರ ಕಂಡುಕೊಂಡು, ಪಕ್ಕದ ಮೂರ್ನಾಲ್ಕು ಮನೆಗಳಿಗೂ ಪ್ರೇರಣೆ ನೀಡಿದ್ದಾರೆ. ಇವರ ಬಾವಿಯಲ್ಲಿ ಬೇಸಿಗೆಯಲ್ಲೂ ನೀರು ಸಿಗುತ್ತಿತ್ತು. ಆದರೆ ಅಕ್ಕಪಕ್ಕ ಕೊಳವೆಬಾವಿಗಳು ನಿರ್ಮಾಣವಾದ ಬಳಿಕ ಏಪ್ರಿಲ್, ಮೇನಲ್ಲಿ ಬಾವಿ ಖಾಲಿಯಾಗುತ್ತಿದೆ. ಈ ಸಂದರ್ಭ ಪಂಚಾಯಿತಿಯಿಂದ ಬರುತ್ತಿದ್ದ ಟ್ಯಾಂಕರ್ ನೀರಿಗಾಗಿ ಕೈಕಾಲು ಹಿಡಿಯಬೇಕಿತ್ತು. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಮನೆಯಂಗಳದಲ್ಲಿರುವ ತೆರೆದ ಬಾವಿ ಪಕ್ಕದಲ್ಲೇ 10 ಅಡಿ ಆಳ, ಆರು ಅಡಿ ಸುತ್ತಳತೆಯ ಹೊಂಡ ತೆಗೆದು ರಿಂಗ್ ಅಳವಡಿಸಿ ವೈಟ್ ಸಿಮೆಂಟ್ ಕೋಟಿಂಗ್ ಕೊಟ್ಟು ತೊಟ್ಟಿ ನಿರ್ಮಿಸಿದ್ದಾರೆ. ತೆರೆದ ಬಾವಿಯಲ್ಲಿ ನೀರು ಖಾಲಿಯಾಗುವ ತಿಂಗಳ ಮೊದಲೇ ಈ ತೊಟ್ಟಿಗೆ ನೀರು ತುಂಬಿಸಿ ಬಾವಿ ಖಾಲಿಯಾದಾಗ ಕುಡಿಯಲು ಬಳಸಲಾಗುತ್ತದೆ. ಇದು ರೊನಾಲ್ಡ್ ಮನೆಯಲ್ಲಿ ಯಶಸ್ವಿಯಾದ ಬಳಿಕ ಪಕ್ಕದ ಮೂರ್ನಾಲ್ಕು ಮನೆಗಳಲ್ಲೂ ಪ್ರಯೋಗಿಸಲಾಗಿದೆ.

    ಬೇಕಿದೆ ಆಡಳಿತದ ಬೆಂಬಲ: ಹೋಟೆಲ್ ಮತ್ತು ಮನೆಗಳಿಂದ ಹಸಿತ್ಯಾಜ್ಯ ಸಂಗ್ರಹಿಸುತ್ತಿರುವ ರೊನಾಲ್ಡ್, ಕೋಟೆಕಾರ್ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಎಲ್ಲ ಮನೆಗಳಿಂದಲೂ ಹಸಿತ್ಯಾಜ್ಯ ಸಂಗ್ರಹಿಸಿ ಸಾವಯವ ಗೊಬ್ಬರದ ಜತೆಗೆ ಬಯೋಗ್ಯಾಸ್ ತಯಾರಿಸಿ ಮನೆಗಳಿಗೆ ಸಂಪರ್ಕ ನೀಡಲು ಯೋಜನೆ ರೂಪಿಸಿದ್ದಾರೆ. ಇದಕ್ಕಾಗಿ ಸರ್ಕಾರಿ ಜಮೀನು ಒದಗಿಸುವಂತೆ ಕೇಳಿದ್ದರು. ಆದರೆ ಮನವಿಗೆ ಬೆಲ ಸಿಕ್ಕಿಲ್ಲ.

    ಮನೆ ಆವರಣದಲ್ಲೇ ಕೃಷಿ ಮಾಡಿ ಹಸಿತ್ಯಾಜ್ಯದಿಂದ ಸಾವಯವ ಗೊಬ್ಬರ ಬಳಸಲಾಗುತ್ತಿದೆ. ಇದಕ್ಕಾಗಿ ಹೋಟೆಲ್ ಮತ್ತು ಮನೆಗಳ ಹಸಿತ್ಯಾಜ್ಯ ಪಡೆಯುತ್ತಿದ್ದು, ಕೋಟೆಕಾರ್ ಪಟ್ಟಣ ಪಂಚಾಯಿತಿ ಜಮೀನು ನೀಡಿದಲ್ಲಿ ಎಲ್ಲ ಮನೆಗಳಿಂದ ಹಸಿತ್ಯಾಜ್ಯ ಸಂಗ್ರಹಿಸಿ ಸಾವಯವ ಗೊಬ್ಬರ ಮತ್ತು ಬಯೋಗ್ಯಾಸ್ ತಯಾರಿಸುವ ಯೋಜನೆ ಹಿಂದೆ ರೂಪಿಸಲಾಗಿತ್ತು.

    ರೊನಾಲ್ಡ್ ಕ್ಯಾಸ್ಟಲಿನೋ ಬೀರಿ
    ಕೃಷಿಕ

    ಕೋಟೆಕಾರ್ ಭಾಗದಲ್ಲಿ ಉತ್ತಮ ಹಾಗೂ ಉತ್ಸಾಹಿ ಕೃಷಿಕರಾಗಿರುವ ರೊನಾಲ್ಡ್ ಸಾವಯವ ಗೊಬ್ಬರ ತಯಾರಿಕೆಯಲ್ಲೂ ಪರಿಣತಿ ಹೊಂದಿದ್ದಾರೆ. ಅವರ ಸಹಕಾರ ಪಡೆದು ಎಲ್ಲ ಹೋಟೆಲ್ ಮತ್ತು ಮನೆಗಳ ಹಸಿತ್ಯಾಜ್ಯದಲ್ಲಿ ಸಾವಯವ ಗೊಬ್ಬರ ತಯಾರಿಸಿ ಆದಾಯ ಪಡೆಯಲು ಕೋಟೆಕಾರ್ ಪಟ್ಟಣ ಪಂಚಾಯಿತಿ ಯೋಜನೆ ರೂಪಿಸಬೇಕು.

    ರೇಣುಕಾ ಶೆಟ್ಟಿ
    ಮಾಜಿ ಅಧ್ಯಕ್ಷೆ, ಕೋಟೆಕಾರ್ ಗ್ರಾಮ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts