More

    ಜೇನು ಕೃಷಿ ಪ್ರವೃತ್ತಿಯಲ್ಲಿ ಖುಷಿ, ವಿವಿಧೆಡೆ 60 ಪೆಟ್ಟಿಗೆಗಳನ್ನಿಟ್ಟ ಯಶಸ್ವಿ ಕೃಷಿಕ

    ಸಂದೀಪ್ ಸಾಲ್ಯಾನ್ ಬಂಟ್ವಾಳ
    ಉದ್ಯೋಗ ನಿವೃತ್ತಿ ಬಳಿಕ ಕೃಷಿ ಮತ್ತಿತರ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವುದು ಸಾಮಾನ್ಯ. ಆದರೆ ಇಲ್ಲೊಬ್ಬರು ನೌಕರಿಯಲ್ಲಿದ್ದೆ ಜೇನು ಕೃಷಿಯನ್ನು ಪ್ರವೃತ್ತಿಯನ್ನಾಗಿರಿಸಿ ಯಶಸ್ಸು ಕಂಡಿದ್ದಾರೆ. ಬಾಲ್ಯದಿಂದ ಬಂದ ಜೇನು ಕೃಷಿಯ ಒಡನಾಟ ಇಂದು ಯಶಸ್ವಿ ಜೇನು ಕೃಷಿಕರನ್ನಾಗಿ ಮಾಡಿದ್ದಲ್ಲದೆ ಓರ್ವ ಅನುಭವಿ ಜೇನು ತರಬೇತುದಾರರನ್ನಾಗಿಯೂ ರೂಪಿಸಿದೆ.

    ಬಂಟ್ವಾಳ ಅಮ್ಟಾಡಿ ಗ್ರಾಮದ ಕಿನ್ನಿಬೆಟ್ಟುವಿನ ಕೆ.ಲಕ್ಷ್ಮಣಗೌಡ ಆರೋಗ್ಯ ಇಲಾಖೆಯ ವಾಹನ ಚಾಲಕರು. ಜೇನು ಸಾಕಾಣೆ ಮೆಚ್ಚಿನ ಹವ್ಯಾಸ. ಸುಳ್ಯದ ಕರ್ತಡ್ಕ ಹುಟ್ಟೂರಾದರೂ ವೃತ್ತಿಗಾಗಿ ಬಂಟ್ವಾಳದಲ್ಲಿದ್ದಾರೆ. ಸರಕಾರಿ ವಾಹನ ಚಾಲಕರಾದರೆ ಇತರ ಚಟುವಟಿಕೆಗಳಿಗೆ ಸಮಯಾವಕಾಶ ಕಡಿಮೆ. ಕೆಲವೊಮ್ಮೆ ರಜಾ ದಿನಗಳಲ್ಲೂ ಕರ್ತವ್ಯ ನಿರ್ವಹಿಸಬೇಕಾದ ಅನಿವಾರ್ಯತೆ. ಇದರ ಮಧ್ಯೆಯೂ ಅವರು ಜೇನು ಸಾಕಾಣೆಗೆ ಹಾಗೂ ತರಬೇತಿಗಾಗಿ ಸಮಯ ಸರಿದೂಗಿಸುತ್ತಾರೆ.

    ಪ್ರಸ್ತುತ ಲಕ್ಷ್ಮಣ ಗೌಡ ಅವರಲ್ಲಿ 60 ಜೇನು ಕುಟುಂಬಗಳಿವೆ. ಮನೆ ಸುತ್ತಮುತ್ತ, ಗೆಳೆಯರ ತೋಟಗಳಲ್ಲಿ 30 ಜೇನು ಪೆಟ್ಟಿಗೆಗಳಿಗೆ ಸ್ಥಳ ಕಲ್ಪಿಸಿದ್ದಾರೆ. ಹುಟ್ಟೂರಿನಲ್ಲೂ 30 ಪೆಟ್ಟಿಗೆಗಳನ್ನು ಇಟ್ಟಿದ್ದಾರೆ. ಒಂದು ಪೆಟ್ಟಿಗೆಯಲ್ಲಿ ವರ್ಷಕ್ಕೆ ಸರಾಸರಿ 10 ರಿಂದ 20 ಕೆ.ಜಿ.ಜೇನು ತುಪ್ಪ ಸಂಗ್ರಹಿಸುತ್ತಾರೆ.
    ಜೇನು ಸಾಕಾಣೆ ಮಾಡುವ ಪ್ರತಿಯೊಬ್ಬರಿಗೂ ತರಬೇತಿ ಅಗತ್ಯ. ಹೆಚ್ಚು ಆಸಕ್ತಿಯಿಂದ ಹಾಗೂ ಜೇನು ಕುಟುಂಬದ ಬಗ್ಗೆ ಸರಿಯಾದ ಮಾಹಿತಿ ತಿಳಿದು ಕೃಷಿ ಆರಂಭಿಸಿದರೆ ಪ್ರತಿಯೊಬ್ಬರೂ ಲಾಭ ಪಡೆದುಕೊಳ್ಳಲು ಸಾಧ್ಯ ಎನ್ನುವುದು ಲಕ್ಷ್ಮಣ ಗೌಡ ಅವರ ಗಟ್ಟಿ ನಿಲುವು.

    ಜೇನು ನೊಣದ ಬಗ್ಗೆ ಕಾಳಜಿ ವಹಿಸುವ ಅವರು ಪರಿಸರದಲ್ಲಿ ಹಾರಾಡಿಗೊಂಡಿರುವ ಜೇನುನೊಣಗಳನ್ನು ಮಣ್ಣಿನ ಮಡಕೆಗಳಿಗೆ ಆಕರ್ಷಿಸಿ, ಮತ್ತೆ ಕುಟುಂಬ ಸಮೇತ ಜೇನು ಪೆಟ್ಟಿಗೆಗೆ ಸ್ಥಳಾಂತರಿಸುವಲ್ಲಿ ಸಿದ್ಧಹಸ್ತರು. ಅವರ ಜೇನು ಕೃಷಿ ಸಾಧನೆ ಗುರುತಿಸಿ ಸೌರಭರತ್ನ ರಾಜ್ಯ ಪ್ರಶಸ್ತಿ ದೊರೆತಿದೆ.

    ಜೇನು ತರಬೇತುದಾರ: ಕೆ.ಲಕ್ಷ್ಮಣಗೌಡ ತೋಟಗಾರಿಕೆ ಇಲಾಖೆಯಲ್ಲೂ ತರಬೇತುದಾರರಾಗಿಯೂ ಕಾರ್ಯನಿರ್ವಹಿಸುತ್ತಾರೆ. ಇದುವರೆಗೆ ಐವತ್ತಕ್ಕಿಂತಲೂ ಅಧಿಕ ಕಾರ್ಯಕ್ರಮಗಳಲ್ಲಿ ತರಬೇತಿ ನೀಡಿದ್ದಾರೆ. ಜತೆಯಲ್ಲಿ ಬಹಳಷ್ಟು ತರಬೇತಿಗಳಿಗೆ ಅವರ ಮನೆಯಂಗಳವೇ ಪ್ರಾಯೋಗಿಕ ಪಾಠಶಾಲೆ.

    ಬಾಲ್ಯದಿಂದಲೂ ಜೇನು ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡವ. ನೌಕರಿ ನಡುವೆ ಸಮಯ ಹೊಂದಾಣಿಕೆ ಕಷ್ಟ ಸಾಧ್ಯವಾದ ಕಾರಣ ಹೆಚ್ಚು ಪೆಟ್ಟಿಗೆಗಳನ್ನು ಇಟ್ಟುಕೊಂಡಿಲ್ಲ. 2012ರಿಂದ ಜೇನು ಕೃಷಿ ಬಗ್ಗೆ ತರಬೇತಿ ನೀಡುತ್ತಿದ್ದೇನೆ.
    – ಕೆ. ಲಕ್ಷ್ಮಣಗೌಡ, ಜೇನು ಕೃಷಿಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts