More

    40 ಎಕರೆ ಹಡಿಲು ಗದ್ದೆಯಲ್ಲಿ ಕೃಷಿ ಕಾರ‌್ಯ, ಭತ್ತ, ಅಡಕೆ, ತೆಂಗು ಬೆಳೆ ಜತೆ ಹೈನುಗಾರಿಕೆ

    ಹರಿಪ್ರಸಾದ್ ನಂದಳಿಕೆ ಬೆಳ್ಮಣ್
    ಕರೊನಾದಿಂದ ಉದ್ಯಮ ವಲಯಕ್ಕೆ ಸಂಕಷ್ಟ ಎದುರಾದರೂ ಊರಿನಲ್ಲಿ ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡು 40 ಎಕರೆ ಬಂಜರು ಭೂಮಿಯಲ್ಲಿ ಕೃಷಿ ಮಾಡಿ ಮಾದರಿ ಎನಿಸಿದ್ದಾರೆ ಮುಂಬೈನ ಸ್ಟಾರ್ ಹೋಟೆಲ್ ಮಾಲೀಕ ನಂದಳಿಕೆ ಕಾಪಿಕೆರೆ ಕೃಷ್ಣ ಶೆಟ್ಟಿ.

    ಕರೊನಾದಿಂದ ಮುಂಬೈನಲ್ಲಿ ಸಮಸ್ಯೆ ಎದುರಾಗಿ ಊರಿಗೆ ಬಂದಿದ್ದ ಕೃಷ್ಣ ಶೆಟ್ಟಿಯವರು ಕಾಲಹರಣ ಮಾಡದೆ ತನ್ನೂರಿನ 40 ಎಕರೆ ಭೂಮಿಯಲ್ಲಿ ಕೃಷಿ ಮಾಡಿದ್ದಾರೆ. ಮುಂಬೈ ಹೋಟೆಲ್ ಉದ್ಯಮದಲ್ಲಿ ಕೃಷ್ಣ ಪ್ಯಾಲೆಸ್ ಕೃಷ್ಣ ಶೆಟ್ಟರೆಂದೇ ಹೆಸರುವಾಸಿಯಾಗಿರುವ ಇವರು ಹಡಿಲು ಗದ್ದೆಗಳನ್ನು ಹಸನಾಗಿಸಿದ್ದಾರೆ. ಭತ್ತ ಬೆಳೆಯುವ ಜತೆಗೆ ಅಡಕೆ, ತೆಂಗು, ಬಾಳೆ, ವಿವಿಧ ರೀತಿಯ ಫಲವಸ್ತುಗಳನ್ನು ಬೆಳೆಸುತ್ತಿದ್ದು ಹೈನುಗಾರಿಕೆಯನ್ನೂ ಮಾಡಿ ಗಮನ ಸೆಳೆದಿದ್ದಾರೆ.

    ಕೃಷ್ಣ ಶೆಟ್ಟರ ಜಮೀನಿನಲ್ಲಿ ವರ್ಷಪೂರ್ತಿ ನೀರು ತುಂಬಿರುವ ಮೂರು ಬೃಹತ್ ತೆರೆದ ಬಾವಿಗಳ ಜತೆ ಎರಡು ಬೋರ್‌ವೆಲ್‌ಗಳಿವೆ. ಕೆರೆಗಳ ಅಭಿವೃದ್ಧಿಯಲ್ಲೂ ತೊಡಗಿದ್ದು ಶಾಸಕ ವಿ.ಸುನೀಲ್ ಕುಮಾರ್ ಈ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಿರ್ವ ಮಟ್ಟಾರ ಪರಾರಿ ಎಲ್ಲಪ್ಪ ಹೆಗ್ಡೆ ಹಾಗೂ ಬೆಳ್ಮಣ್ ಬೆರ್ಮಸಗುತ್ತು ಗುಲಾಬಿ ಶೆಟ್ಟರ ಪುತ್ರ ಕೃಷ್ಣ ಶೆಟ್ಟಿಯವರು 1959ರಲ್ಲಿ ಮುಂಬೈಗೆ ತೆರಳಿ ಹೋಟೆಲ್ ಉದ್ಯಮದಲ್ಲಿ ಯಶಸ್ಸು ಕಂಡಿದ್ದಾರೆ. ಭಾರತೀಯ ಹೋಟೆಲ್ ಅಸೋಸಿಯೇಶನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದು, ಕರೊನಾ ಸಂಕಷ್ಟ ಕಾಲದಲ್ಲಿ ತನ್ನ ಹೋಟೆಲ್‌ನ 600 ಮಂದಿಗೆ ನಿರಂತರ ನೆರವು ನೀಡಿದ್ದಾರೆ.

    ಹಡಿಲು ಗದ್ದೆಗೆ ಹಸಿರಿನ ಬಣ್ಣ: ಕಾರ್ಮಿಕರ ಕೊರತೆ ಹಾಗೂ ಕೃಷಿ ಕ್ಷೇತ್ರದ ಕಡೆಗೆ ಒಲವು ಕಡಿಮೆಯಾಗಿ ಕೃಷಿ ಭೂಮಿಗಳು ಹಡಿಲು ಬೀಳುತ್ತಿರುವುದು ಸಾಮಾನ್ಯ. ಆದರೆ ನಂದಳಿಕೆ ಕಾಪಿಕೆರೆಯಲ್ಲಿ ಹಡಿಲು ಭೂಮಿ ಪ್ರಸಕ್ತ ಹಸಿರಾಗಿ ಕಂಗೊಳಿಸುತ್ತಿವೆ. 40 ಎಕರೆ ಭೂಮಿ ಹಚ್ಚ ಹಸಿರಿನಿಂದ ಕೂಡಿದ್ದು ಗದ್ದೆಗೆ ಹಸಿರು ಹೊದೆಸಿದಂತೆ ಕಾಣುತ್ತಿದೆ.

    40 ಎಕರೆ ಜಾಗದಲ್ಲಿ ಕೃಷಿ ಚಟುವಟಿಕೆ ನಡೆಸಿದ್ದೇನೆ. ಕೃಷಿ ಆರೋಗ್ಯಕ್ಕೂ ಉತ್ತಮ. ಮಾನಸಿಕ, ದೈಹಿಕ ದೃಢತೆಗೂ ಒಳ್ಳೆಯದು. ಕೃಷಿ ಪರಂಪರೆಯನ್ನು ಉಳಿಸಬೇಕಾಗಿದೆ. ಮುಂದೆ ಅದು ಅಗತ್ಯವೂ ಹೌದು. 

    – ಕೃಷ್ಣ ಶೆಟ್ಟಿ, ನಂದಳಿಕೆ ಕಾಪಿಕೆರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts