More

    ಕೃಷಿಕರಿಗೆ ಬೊಮ್ಮಾಯಿ ಬಜೆಟ್ ಖುಷಿ: ಬಡ್ಡಿರಹಿತ ಅಲ್ಪಾವಧಿ ಕೃಷಿ ಸಾಲ ಮಿತಿ 5 ಲಕ್ಷ ರೂ.ಗೆ ಹೆಚ್ಚಳ; ಭೂ ಸಿರಿ, ಜೀವನ್​ಜ್ಯೋತಿ ವಿಮಾ ಘೋಷಣೆ

    ಬೆಂಗಳೂರು: ಕಳೆದ ವರ್ಷದಂತೆ ಈ ವರ್ಷವೂ ಬಜೆಟ್​ನಲ್ಲಿ ಸಹಕಾರ ಇಲಾಖೆಗೆ ಆದ್ಯತೆ ನೀಡಿರುವ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ, ಬಡ್ಡಿರಹಿತ ಅಲ್ಪಾವಧಿ ಕೃಷಿ ಸಾಲ ಮಿತಿ ಹೆಚ್ಚಳ, ‘ಭೂ ಸಿರಿ’ ಹಾಗೂ ‘ಜೀವನ್​ಜ್ಯೋತಿ ವಿಮಾ’ ಯೋಜನೆ ಸೇರಿ ಹಲವು ಕಾರ್ಯಕ್ರಮಗಳನ್ನು ಬಜೆಟ್​ನಲ್ಲಿ ಘೋಷಿಸಿದೆ.

    ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸಹಕಾರಿ ಬ್ಯಾಂಕ್​ಗಳಲ್ಲಿ ಬಡ್ಡಿರಹಿತ ಅಲ್ಪಾವಧಿ ಕೃಷಿ ಸಾಲದ ಮಿತಿಯನ್ನು ರಾಜ್ಯ ಸರ್ಕಾರ, 3 ಲಕ್ಷ ರೂ.ನಿಂದ 5 ಲಕ್ಷ ರೂ.ಗೆ ಹೆಚ್ಚಿಸಿದೆ. ಈ ಮೂಲಕ ರೈತರಿಗೆ ಬಂಪರ್ ಕೊಡುಗೆ ಸಿಕ್ಕಿದಂತಾಗಿದೆ. ಕೃಷಿ ಚಟುವಟಿಕೆಗಳಿಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲು ರೈತರಿಗೆ ಸುಲಭವಾಗಿ ಹಾಗೂ ಅಗತ್ಯಕ್ಕೆ ತಕ್ಕಂತೆ ಸಾಲ ಸೌಲಭ್ಯ ದೊರಕಿಸಲು ಹಲವು ಸುಧಾರಣೆಗಳ ಕ್ರಮ ಕೈಗೊಂಡಿರುವ ಸರ್ಕಾರ, ಈ ವರ್ಷ 30 ಲಕ್ಷಕ್ಕಿಂತ ಹೆಚ್ಚಿನ ರೈತರಿಗೆ 25 ಸಾವಿರ ಕೋಟಿ ರೂ.ಸಾಲ ವಿತರಣೆ ಗುರಿ ಹಾಕಿಕೊಂಡಿದೆ. ಅಲ್ಲದೆ, ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ ‘ಭೂ ಸಿರಿ’ ಎಂಬ ನೂತನ ಯೋಜನೆಯನ್ನು ಬಜೆಟ್​ನಲ್ಲಿ ಘೋಷಿಸಿದೆ.

    2023-24ನೇ ಸಾಲಿನಿಂದ ಯೋಜನೆಯಡಿ 10 ಸಾವಿರ ರೂ.ಹೆಚ್ಚುವರಿ ಸಹಾಯಧನ ಸಿಗಲಿದೆ. ತುರ್ತು ಸಂದರ್ಭಗಳಲ್ಲಿ ರೈತರಿಗೆ ಬೀಜ, ರಸಗೊಬ್ಬರ, ಕ್ರಿಮಿನಾಶಕ ಸೇರಿ ಮುಂತಾದ ಪರಿಕರಗಳನ್ನು ಖರೀದಿಸಲು ಅನುಕೂಲವಾಗಲಿದೆ. ನಬಾರ್ಡ್​ನ 7,500 ರೂ. ರಾಜ್ಯ ಸರ್ಕಾರದ 2,500 ರೂ. ಸೇರಿ ಒಟ್ಟು 10 ಸಾವಿರ ರೂ. ಸಹಾಯಧನ ರೈತರಿಗೆ ದೊರೆಯಲಿದೆ. ರಾಜ್ಯದ ಅಂದಾಜು 50 ಲಕ್ಷ ರೈತರಿಗೆ ಅನುಕೂಲವಾಗಲಿದೆ. ರಾಜ್ಯದ 56 ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರ ಕುಟುಂಬಗಳಿಗೆ 180 ಕೋಟಿ ರೂ.ವೆಚ್ಚದಲ್ಲಿ ‘ಜೀವನ್​ಜ್ಯೋತಿ ವಿಮಾ’ ಯೋಜನೆ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ. ರೈತರ ಬದುಕಿಗೆ ಭದ್ರತೆ ಒದಗಿಸಲು ಯೋಜನೆ ಸಹಾಯವಾಗಲಿದೆ.

    ರೈತ ಸಿರಿಗೆ ಹೈಟೆಕ್ ಪರಿಕರ: ರೈತಾಪಿ ವರ್ಗ ಎದುರಿಸುತ್ತಿರುವ ಕೂಲಿಯಾಳುಗಳ ಸಮಸ್ಯೆ ನೀಗಿಸಲು ಹೈಟೆಕ್ ಮಾದರಿಯ ಕೊಯ್ಲು ಯಂತ್ರಗಳನ್ನು ಒದಗಿಸಲು 50 ಕೋಟಿ ರೂ. ಅನುದಾನ ಒದಗಿಸುವ ಮಹತ್ವದ ತೀರ್ವನವನ್ನು ಬಜೆಟ್​ನಲ್ಲಿ ಪ್ರಕಟಿಸಲಾಗಿದೆ. ಕೃಷಿ ಇಲಾಖೆ ಈಗಾಗಲೆ ನಿರ್ವಹಿಸುತ್ತಿರುವ ‘ಕೃಷಿ ಯಂತ್ರಧಾರೆ’ ಕೇಂದ್ರಗಳಲ್ಲಿ 300 ಹೈಟೆಕ್ ಹಾರ್ವೆಸ್ಟರ್​ಗಳನ್ನು ಹಂತಹಂತವಾಗಿ ಒದಗಿಸಲು ಉದ್ದೇಶಿಸಲಾಗಿದೆ. 2023-24ನೇ ಸಾಲಿನಲ್ಲಿ ತಲಾ 50 ಲಕ್ಷ ರೂ. ವೆಚ್ಚದಲ್ಲಿ 100 ‘ಹೈಟೆಕ್ ಹಾರ್ವೆಸ್ಟರ್’ಗಳನ್ನು ಹಂತ ಹಂತವಾಗಿ ಕೃಷಿಕರಿಗೆ ಒದಗಿಸಲು 50 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಇಸ್ರೋ ಸಂಸ್ಥೆ ಸಹಯೋಗದೊಂದಿಗೆ ಡಿಜಿಟಲ್ ಕೃಷಿಯಲ್ಲಿ ಜಿಯೋ-ಸ್ಪೇಷಿಯಲ್ ತಾಂತ್ರಿಕತೆಗಳನ್ನು ಅಳವಡಿಸಲು 50 ಕೋಟಿ ರೂ. ವೆಚ್ಚದಲ್ಲಿ ಹೊಸ ಕಾರ್ಯಕ್ರಮ ರೂಪಿಸಲಾಗುತ್ತದೆ. ಈ ಯೋಜನೆಯಿಂದ ದೊರೆಯುವ ಮಾಹಿತಿಯನ್ನು ಬಳಸಿಕೊಂಡು ‘ಪ್ರಿಸಿಸನ್ ಫಾರ್ವಿುಂಗ್’ ಸೇರಿ ಉತ್ಪಾದನೆಯನ್ನು ಹೆಚ್ಚಿಸಲು ತಿಳಿವಳಿಕೆಯುಳ್ಳ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲು ರೈತರಿಗೆ ಅನುಕೂಲವಾಗಲಿದೆ ಎಂದು ಬೊಮ್ಮಾಯಿ ಬಜೆಟ್​ನಲ್ಲಿ ತಿಳಿಸಿದ್ದಾರೆ.

    ಸಹಸ್ರ ಸರೋವರ ಅಭಿವೃದ್ಧಿ: ರಾಜ್ಯದಲ್ಲಿ 1,000 ಸಣ್ಣ ಸರೋವರಗಳನ್ನು ‘ಸಹಸ್ರ ಸರೋವರ’ ಕಾರ್ಯಕ್ರಮದಡಿ ಅಭಿವೃದ್ಧಿಪಡಿಸಲಾಗುತ್ತದೆ. ಜತೆಗೆ ‘ಸಹ್ಯಾದ್ರಿ ಸಿರಿ’ ಯೋಜನೆಯಡಿ ಕರಾವಳಿ, ಮಲೆನಾಡು, ಅರೆ ಮಲೆನಾಡು ಪ್ರದೇಶಗಳಲ್ಲಿ ಬೇಸಿಗೆಯಲ್ಲಿ ನೀರು ಸಂಕ್ಷಣೆಗಾಗಿ ಬಾವಿ, ಕಿಂಡಿ, ಅಣೆ, ನಾಲಾ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತಿದ್ದು, -ಠಿ;75 ಕೋಟಿ ಮೀಸಲಿಡಲಾಗಿದೆ. ರೈತರ ಜಮೀನುಗಳಲ್ಲಿ ಜಲಹೊಂಡ ನಿರ್ವಿುಸಿ ನೀರು ಸಂರಕ್ಷಣೆ ಕಾಮಗಾರಿ ಕೈಗೊಳ್ಳಲು ‘ಜಲನಿಧಿ’ ಯೋಜನೆ ಆರಂಭಿಸಲಾಗುತ್ತದೆ. ಇದನ್ನು ನರೇಗಾದೊಂದಿಗೆ ಸಮನ್ವಯಗೊಳಿಸಲಾಗುತ್ತದೆ.

    ಸಿರಿಧಾನ್ಯ ಬೆಳೆಗಾರರಿಗೆ ಪ್ರೋತ್ಸಾಹ: ದೇಶದಲ್ಲೇ ಸಿರಿಧಾನ್ಯ ಬೆಳೆ ಉತ್ಪಾದನೆಯಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ‘ಅಂತಾರಾಷ್ಟ್ರೀಯ ಸಿರಿಧಾನ್ಯ ವರ್ಷ 2023’ ಹಿನ್ನೆಲೆಯಲ್ಲಿ ಇತ್ತೀಚಿಗೆ ಕೇಂದ್ರ ಸರ್ಕಾರ ಪೂರಕ ಕಾರ್ಯಕ್ರಮಗಳನ್ನು ಪ್ರಕಟಿಸಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾರ ಕೂಡ ಕಿರುಧಾನ್ಯಗಳ ವಿಸ್ತೀರ್ಣ, ಉತ್ಪಾದನೆ ಹಾಗೂ ಉತ್ಪಾದಕತೆಯನ್ನು ಹೆಚ್ಚಿಸಲು ‘ರೈತ ಸಿರಿ’ ಯೋಜನೆಯಡಿ ಬೆಳೆಗಾರರಿಗೆ ಪ್ರತಿ ಹೆಕ್ಟೇರ್​ಗೆ 10 ಸಾವಿರ ರೂ. ಮೊತ್ತದ ಪ್ರೋತ್ಸಾಹಧನ ನೀಡುವ ಘೋಷಣೆ ಮಾಡಿದೆ. ಜತೆಗೆ ಸಿರಿಧಾನ್ಯಗಳನ್ನು ಕ್ಷೇತ್ರ ಮಟ್ಟದಲ್ಲಿ ಸಂಸ್ಕರಣೆ, ಗ್ರೇಡಿಂಗ್, ಪ್ಯಾಕಿಂಗ್ ಮಾಡುವ ರೈತ ಉತ್ಪಾದಕ ಸಂಸ್ಥೆ (ಎಫ್​ಪಿಒ) ಗಳಿಗೆ ಮುಖ್ಯಮಂತ್ರಿ ರೈತ ಉನ್ನತಿ ಯೋಜನೆಯಡಿ ಸಹಾಯಧನಕ್ಕೆ ಪ್ರಾಶಸ್ಱ ನೀಡಲಾಗುತ್ತದೆ. ಹಾಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ರೈತ ಉತ್ಪಾದಕ ಸಂಸ್ಥೆಗಳನ್ನು ಪ್ರೋತ್ಸಾಹಿಸಲು ತಲಾ 10 ಲಕ್ಷ ರೂ. ವರೆಗಿನ ಬಂಡವಾಳಕ್ಕೆ 5 ವರ್ಷಗಳ ಅವಧಿಗೆ ಬ್ಯಾಂಕ್​ಗಳ ಮೂಲಕ ಮುಖ್ಯಮಂತ್ರಿ ರೈತ ಉನ್ನತಿ ಯೋಜನೆಯಡಿ ಬಡ್ಡಿ ಸಹಾಯಧನ ಒದಗಿಸಲಾಗುತ್ತದೆ.

    ನೈಸರ್ಗಿಕ ಸಮಗ್ರ ಕೃಷಿ: ರೈತರ ಆದಾಯ ದುಪ್ಟಟ್ಟು ಉಪಕ್ರಮಕ್ಕೆ ಸಮಗ್ರ ಕೃಷಿ ರಾಮಬಾಣ ಎಂಬುದನ್ನು ತಜ್ಞರು, ಪರಿಣತರು ಸಾಬೀತುಪಡಿಸಿದ್ದಾರೆ. ಈ ಪದ್ಧತಿ ಅಳವಡಿಸಿಕೊಂಡಿರುವ ರೈತರು ವರ್ಷಪೂರ್ತಿ ಆದಾಯ ಪಡೆಯುತ್ತಿರುವ ಯಶೋಗಾಥೆ ನಾಡಿನೆಲ್ಲೆಡೆ ಸದ್ದು ಮಾಡಿದೆ. ಇದಕ್ಕೆ ಪೂರಕವಾಗಿ ಕೇಂದ್ರ ಸರ್ಕಾರ 1 ಕೋಟಿ ರೈತರನ್ನು ನೈಸರ್ಗಿಕ ಕೃಷಿಯತ್ತ ಆಕರ್ಷಿಸುವ ಯೋಜನೆ ಘೋಷಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಪ್ರತಿ ತಾಲೂಕಿಗೆ ಒಂದರಂತೆ ತಲಾ 50 ಹೆಕ್ಟೇರ್ ಪ್ರದೇಶದಲ್ಲಿ ಗುಚ್ಛ ಮಾದರಿಯನ್ನು ಅನುಸರಿಸಿ, ಮುಂದಿನ 4 ವರ್ಷಗಳಲ್ಲಿ ಒಂದು ಲಕ್ಷ ಹೆಕ್ಟೇರ್ ಪ್ರದೇಶವನ್ನು ನೈಸರ್ಗಿಕ ಹಾಗೂ ಸಮಗ್ರ ಕೃಷಿಗೆ ಒಳಪಡಿಸುವ ಗುರಿಯನ್ನು ಬೊಮ್ಮಾಯಿ ಘೋಷಿಸಿದ್ದಾರೆ.

    ರೇಷ್ಮೆ ಬೆಳೆ ವಿಸ್ತರಣೆ: ಕಚ್ಚಾ ರೇಷ್ಮೆ ಉತ್ಪಾದನೆಯಲ್ಲಿ ರಾಜ್ಯ ದೇಶದಲ್ಲಿಯೇ ಮುಂಚೂಣಿಯಲ್ಲಿದ್ದು, 1.39 ಲಕ್ಷ ರೈತ ಕುಟುಂಬಗಳು 1.15 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ರೇಷ್ಮೆ ಕೃಷಿ ಮಾಡುತ್ತಿವೆ. ಒಟ್ಟು ಉತ್ಪಾದನೆ 9,686 ಮೆಟ್ರಿಕ್ ಟನ್​ಗಳಷ್ಟಿದ್ದು, ಮುಂದಿನ ದಿನಗಳಲ್ಲಿ 10 ಸಾವಿರ ಎಕರೆ ಪ್ರದೇಶಕ್ಕೆ ರೇಷ್ಮೆ ಬೆಳೆ ವಿಸ್ತರಿಸುವುದಾಗಿ ಬಜೆಟ್​ನಲ್ಲಿ ಘೋಷಿಸಲಾಗಿದೆ. ಈಗಾಗಲೆ ರೇಷ್ಮೆ ಬೆಳೆಗಾರರಿಗೆ ವೈಜ್ಞಾನಿಕ ದರ ಒದಗಿಸಲು ಹಾಗೂ ಮಾರುಕಟ್ಟೆಯಲ್ಲಿ ಪಾರದರ್ಶಕತೆ ತರಲು ಇ-ಹರಾಜು -ಇ ನಗದು ವ್ಯವಸ್ಥೆ ಅಳವಡಿಸಲಾಗಿದೆ. ಜತೆಗೆ ರಾಜ್ಯದಲ್ಲಿ ಹೊಸದಾಗಿ ಆರು ಗೂಡು ಪರೀಕ್ಷಾ ಕೇಂದ್ರಗಳು, ಆಧುನಿಕ ರೇಷ್ಮೆಗೂಡು ಮಾರುಕಟ್ಟೆ ಹಾಗೂ ಶೈತ್ಯಾಗಾರ ನಿರ್ಮಾಣ ಮಾಡಲಾಗಿದೆ.

    ಮೂಲ ಸೌಕರ್ಯಕ್ಕೆ 8 ಕೋಟಿ ರೂ.: ರೇಷ್ಮೆ ಗೂಡನ್ನು ದೀರ್ಘಾವಧಿಗೆ ಸಂರಕ್ಷಿಸಿ ರೈತರಿಗೆ ಉತ್ತಮ ಬೆಲೆ ದೊರೆಯುವಂತೆ ಅನುಕೂಲ ಕಲ್ಪಿಸಲು ರಾಜ್ಯದ 10 ಪ್ರಮುಖ ರೇಷ್ಮೆ ಬೆಳೆಯುವ ಪ್ರದೇಶಗಳಲ್ಲಿ ‘ಹಾಟ್ ಏರ್ ಕನ್ವೇಯರ್ ಡ್ರೖೆಯರ್’ ಅಳವಡಿಸಲು 5 ಕೋಟಿ ರೂ. ಅನುದಾನ ಮೀಸಲಿಡಲಾಗಿದೆ. ಅಲ್ಲದೆ, ಮೂಲ ಬಿತ್ತನೆ ಗೂಡನ್ನು ನಿರಂತರ ಉತ್ಪಾದನೆ ಮತ್ತು ಸರಬರಾಜಿಗಾಗಿ ಮೈಸೂರು ಬಿತ್ತನೆ ಪ್ರದೇಶದಲ್ಲಿ ಮೂಲ ಸೌಕರ್ಯ ಬಲಪಡಿಸಲು 8 ಕೋಟಿ ರೂ. ಒದಗಿಸುವುದಾಗಿ ತಿಳಿಸಲಾಗಿದೆ.

    ಹೈಟೆಕ್ ಪುಷ್ಪಾರ್ಪಣೆ: ರಾಜ್ಯದಲ್ಲಿ ಪುಷ್ಪಗಳ ರಫ್ತಿಗೆ ವಿಫುಲ ಅವಕಾಶಗಳಿರುವ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಜಾಗತಿಕ ಮಟ್ಟದ ಹೈಟೆಕ್ ಹೂವಿನ ಮಾರುಕಟ್ಟೆ ಸ್ಥಾಪಿಸಲಾಗುತ್ತದೆ. ಇದರಿಂದ ಆ ಭಾಗದ ಪುಷ್ಪೋದ್ಯಮದಲ್ಲಿ ತೊಡಗಿರುವ ಬೆಳೆಗಾರರ ಬಹುದಿನದ ಕನಸು ಈಡೇರಿದಂತಾಗಿದೆ. ಬೆಂಗಳೂರು, ಹಾವೇರಿಯಲ್ಲಿ ಆಧುನಿಕ ತಂತ್ರಜ್ಞಾನ ಆಧಾರಿತ ಹೂವಿನ ಚಿಲ್ಲರೆ ಮಾರುಕಟ್ಟೆ ನಿರ್ವಿುಸುವ ಪ್ರಸ್ತಾಪ ಮಾಡಲಾಗಿದೆ.

    ದ್ರಾಕ್ಷಿ ಬೆಳೆಗಾರರಿಗೆ ಶತ ಕೋಟಿ: ರಾಜ್ಯದಲ್ಲಿ ದ್ರಾಕ್ಷಿ ಬೆಳೆ ಹಾಗೂ ಬೆಳೆಗಾರರನ್ನು ಉತ್ತೇಜಿಸಲು 100 ಕೋಟಿ ರೂ. ವೆಚ್ಚದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ವಿಜಯಪುರ ಹಾಗೂ ಬೆಂಗಳೂರಿನ ವಿವಿಧೆಡೆ ದ್ರಾಕ್ಷಿ ಬೆಳೆ ರೈತರ ಆದಾಯ ವೃದ್ಧಿಸಿದೆ. ಇದನ್ನು ಮನಗಂಡು ಸರ್ಕಾರ ‘ದ್ರಾಕ್ಷಿ ಹಾಗೂ ದ್ರಾಕ್ಷಾರಸ ಮಂಡಳಿ’ ಮೂಲಕ ಈ ಅನುದಾನದಡಿ ವಿವಿಧ ಯೋಜನೆಗಳನ್ನು ಜಾರಿ ಮಾಡುವ ಭರವಸೆ ನೀಡಲಾಗಿದೆ. ಕೃಷಿ ಹಾಗೂ ತೋಟಗಾರಿಕೆ ಉತ್ಪನ್ನಗಳ ರಫ್ತು ಮತ್ತು ಸಂಸ್ಕರಣೆ ವಲಯದ ಉತ್ತೇಜನಕ್ಕಾಗಿ ರೈತ ಸಂಪದ ಯೋಜನೆಯಡಿ ‘ಕೆಪೆಕ್’ ಸಂಸ್ಥೆ ಮೂಲಕ 100 ಕೋಟಿ ರೂ. ವೆಚ್ಚದಲ್ಲಿ ಯೋಜನೆಯೊಂದನ್ನು ರೂಪಿಸಲಾಗುತ್ತದೆ. ಅಡಕೆ ಬೆಳೆಯಲ್ಲಿ ರೋಗ ತಡೆ ಹಾಗೂ ಉತ್ಪಾದನೆ ಹೆಚ್ಚಳಕ್ಕಾಗಿ ತೀರ್ಥಹಳ್ಳಿಯ ಕೃಷಿ ಹಾಗೂ ತೋಟಗಾರಿಕೆ ಸಂಶೋಧನಾ ಕೇಂದ್ರಕ್ಕೆ 10 ಕೋಟಿ ರೂ. ನೆರವು ಘೋಷಿಸಲಾಗಿದೆ. ಆಲೂಗಡ್ಡೆ ಬಿತ್ತನೆಯಲ್ಲಿ ಸ್ವಾವಲಂಬನೆ ಸಾಧಿಸಲು ಎಪಿಕಲ್ ರೂಟ್ ಕಲ್ಚರ್ ತಂತ್ರಜ್ಞಾನವನ್ನು ಬೆಳೆಗಾರರಿಗೆ ಪರಿಚಯಿಸಲಾಗುತ್ತದೆ. ಶ್ರೀಗಂಧ ಬೆಳೆ ವಿಸ್ತರಣೆ, ಮಾರಾಟ ಪ್ರಕ್ರಿಯೆ ಸರಳೀಕರಿಸಿದ್ದು, ಈಗ ಸುಧಾರಿತ ತಳಿಗಳನ್ನು ರೈತರಿಗೆ ವಿತರಿಸಲಾಗುತ್ತದೆ.

    ಆವರ್ತ ನಿಧಿಗೆ ಆರ್ಥಿಕ ಬಲ: ರೈತರು ಬೆಳೆಯುವ ವಿವಿಧ ಉತ್ಪನ್ನಗಳ ದರ ಕುಸಿತ ಉಂಟಾದಾಗ ಅನ್ನದಾತರಿಗಾದ ನಷ್ಟ ಸರಿದೂಗಿಸಲು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಆರ್ಥಿಕ ನೆರವು ಒದಗಿಸಲು ಆವರ್ತ ನಿಧಿ ಸ್ಥಾಪಿಸಲಾಗಿದೆ. ಇದರಿಂದ ರೈತರಿಗೆ ತ್ವರಿತವಾಗಿ ಹಣಪಾವತಿ ಮಾಡಲು ಅನುಕೂಲವಾಗುತ್ತದೆ. ಇದಕ್ಕಾಗಿ 2,000 ಕೋಟಿ ರೂ. ಅನುದಾನ ತೆಗೆದಿರಿಸಲಾಗುವುದೆಂದು 2021-22ನೇ ಸಾಲಿನಲ್ಲಿ ಸರ್ಕಾರ ವಾಗ್ದಾನ ನೀಡಿ, ಅದನ್ನು ಈಡೇರಿಸಿತ್ತು. 2022-23ನೇ ಸಾಲಿನಲ್ಲಿ ತಲಾ 1,500 ಕೋಟಿ ರೂ. ಅನುದಾನ ಒದಗಿಸಿ ಒಟ್ಟಾರೆ 3,500 ಕೋಟಿ ರೂ.ಗೆ ಏರಿಸುವ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮೊತ್ತದ ಆವರ್ತ ನಿಧಿ ಆಗಿರಲಿದೆ.

    ಸಹಕಾರಿಗೆ ಸಿಕ್ಕಿದ್ದು

    • ಯಶಸ್ವಿನಿ ಯೋಜನೆ ಮರು ಜಾರಿಯಿಂದ ಪ್ರಸ್ತುತ 35 ಲಕ್ಷ ರೈತರು ನೋಂದಣಿ.
    • ಹೆಚ್ಚಿನ ಸಂಖ್ಯೆ ಮಹಿಳೆಯರು ಆರ್ಥಿಕ ಚಟುವಟಿಕೆಗೆ ತೊಡಗಿಸಿಕೊಳ್ಳುವುದಕ್ಕಾಗಿ ನೂತನ ‘ಗೃಹಿಣಿ ಶಕ್ತಿ’ ಯೋಜನೆ ಜಾರಿ. ಯೋಜನೆಯಡಿ ಶೂನ್ಯ ಬಡ್ಡಿದರದಲ್ಲಿ ಸಾಲ ನೀಡಿಕೆ.
    • ಪ್ರಮಾಣಿತ ಉತ್ಪನ್ನಗಳನ್ನು ತಯಾರಿಸಲು ನೆರವಾಗುವ ಉದ್ದೇಶದಿಂದ ಸ್ತ್ರೀ ಸಾಮರ್ಥ್ಯ ಯೋಜನೆಯಡಿ 50 ಸಾವಿರ ಸ್ವಸಹಾಯ ಗುಂಪುಗಳಿಗೆ ತಲಾ 1 ಲಕ್ಷ ರೂ.ನಂತೆ ಒಟ್ಟು -ಠಿ;500 ಕೋಟಿ ಬಂಡವಾಳ ನಿಧಿ ನೀಡಿಕೆ
    • ವಿವಿಧ ಸ್ವಯಂ ಉದ್ಯೋಗ ಯೋಜನೆಗಳಡಿ 7,239 ಸ್ವಸಹಾಯ ಸಂಘಗಳಿಗೆ 108 ಕೋಟಿ ರೂ. ಸಮುದಾಯ ಬಂಡವಾಳ ನಿಧಿ.
    • 5.68 ಲಕ್ಷ ಸ್ವಸಹಾಯ ಗುಂಪುಗಳಿಗೆ ಬ್ಯಾಂಕ್ ಸಂಪರ್ಕದಡಿ 11,391 ಕೋಟಿ ರೂಪಾಯಿ ಸಾಲ.
    • ವೈಯಕ್ತಿಕ, ಗುಂಪು ಒಳಗೊಂಡ 9,688 ಫಲಾನುಭವಿಗಳಿಗೆ ಕಿರು ಉದ್ದಿಮೆ ಪ್ರಾರಂಭಿಸಲು ಬ್ಯಾಂಕ್​ನಲ್ಲಿ ಸಾಲ ಸೌಲಭ್ಯ.
    • ಕಳೆದ ವರ್ಷ ಸಹಕಾರ ವಲಯದಲ್ಲಿ 40 ಸಾವಿರ ಮಹಿಳಾ ಸ್ವಸಹಾಯ ಗುಂಪುಗಳಿಗೆ 1,600 ಕೋಟಿ ರೂ. ಶೂನ್ಯ ಬಡ್ಡಿದರದಲ್ಲಿ ಸಾಲವನ್ನು -ಠಿ;96 ಕೋಟಿ ಬಡ್ಡಿ ಸಹಾಯ ಧನದೊಂದಿಗೆ ನೀಡಲಾಗಿತ್ತು. ಪ್ರಸಕ್ತ ಸಾಲಿನಲ್ಲಿ 45000 ಸ್ವಸಹಾಯ ಗುಂಪುಗಳಿಗೆ ಬಡ್ಡಿ ರಹಿತ 1,800 ಕೋಟಿ ರೂ. ಸಾಲ ನೀಡಿಕೆ ಗುರಿ.

    ಇನ್ನೇನು ನಿಮ್ಮ ಕೆಲಸದ ಅವಧಿ ಮುಗಿಯುತ್ತೆ, ಮನೆಗೆ ಹೊರಡಿ: ಈ ಕಂಪನಿಯಲ್ಲಿ ಉದ್ಯೋಗಿಗಳಿಗೆ ಹೀಗೊಂದು ಎಚ್ಚರಿಕೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts