More

    ನೂತನ ಕೃಷಿ ಕಾಯ್ದೆಯಿಂದ ರೈತರ ಆದಾಯ ದ್ವಿಗುಣ: ಸಂಸದೆ ಶೋಭಾ ಕರಂದ್ಲಾಜೆ

    ಪಡುಬಿದ್ರಿ: ಗುಜರಾತ್ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವಲ್ಲಿ ಯಶಸ್ವಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ 2023ರಲ್ಲಿ ದೇಶಾದ್ಯಂತ ರೈತರಿಗೆ ಇದರ ಪ್ರಯೋಜನೆ ಸಿಗಬೇಕೆಂಬ ಮಹದಾಸೆಯೊಂದಿಗೆ ಕೃಷಿ ಕಾಯ್ದೆ ಜಾರಿ ಮಾಡಿದ್ದಾರೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
    ಕಳೆದ ವರ್ಷ ಬೆಂಬಲ ಬೆಲೆಯಲ್ಲಿ 2,44,000 ಟನ್ ಭತ್ತ ಮತ್ತು ಗೋಧಿ ಖರೀದಿಯಾಗಿತ್ತು. ಕಾಯ್ದೆ ಜಾರಿ ಬಳಿಕ ಈ ವರ್ಷ ಬೆಂಬಲ ಬೆಲೆಯಲ್ಲಿ 3,44,000 ಮೆಟ್ರಿಕ್ ಟನ್ ಭತ್ತ ಮತ್ತು ಗೋಧಿ ಖರೀದಿಯಾಗಿದೆ. ರೈತರು ಬೆಂಬಲ ಬೆಲೆಗೆ ಸೀಮಿತವಾಗಬಾರದು ಎನ್ನುವ ಕಾರಣಕ್ಕೆ ರೈತಪರವಾಗಿ ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ ಎಂದು ಶನಿವಾರ ಕಾಪು ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
    ನೂತನ ಕೃಷಿ ಕಾಯ್ದೆಯಲ್ಲಿ ರೈತರು ಬೆಳೆದ ಬೆಳೆಯನ್ನು ಎಪಿಎಂಸಿ ಅಥವಾ ನೇರ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು. ಆದರೆ ಕೃಷಿ ಕಾಯ್ದೆ ಬಗ್ಗೆ ಕೆಲವು ಡೋಂಗಿವಾದಿಗಳು ರೈತರನ್ನು ದಾರಿ ತಪ್ಪಿಸುತ್ತಿದ್ದಾರೆ ಪಂಜಾಬ್‌ನಲ್ಲಿ ನಡೆಯುತ್ತಿರುವುದು ಎಪಿಎಂಸಿ ಲಾಬಿ. ಅವರ ಲಾಬಿಗೆ ಮಣಿದು ಅಲ್ಲಿನ ಸರ್ಕಾರ ಕೇಂದ್ರ ಸರ್ಕಾರವನ್ನು ವಿರೋಧಿಸುವ ಷಡ್ಯಂತ್ರ ನಡೆಸುತ್ತಿದೆ ಎಂದು ಶೋಭಾ ಆರೋಪಿಸಿದರು.

    ಶಾಸಕ ಲಾಲಾಜಿ ಆರ್.ಮೆಂಡನ್, ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್, ಕಾಪು ಕ್ಷೇತ್ರಾಧ್ಯಕ್ಷ ಶ್ರೀಕಾಂತ ನಾಯಕ್, ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಸದಸ್ಯರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಜಿ. ಸುವರ್ಣ, ತಾಪಂ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ, ಪುರಸಭೆ ಅಧ್ಯಕ್ಷ ಅನಿಲ್‌ಕುಮಾರ್, ನಗರ ಯೋಜನಾ ಪ್ರಾಧಿಕಾರ ಅಧ್ಯಕ್ಷ ಸುಧಾಮ ಶೆಟ್ಟಿ, ಪ್ರಮುಖರಾದ ಗುರ್ಮೆ ಸುರೇಶ್ ಶೆಟ್ಟಿ, ಕುತ್ಯಾರು ನವೀನ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

    ಬಾಕಿ ಕಾಮಗಾರಿ ಶೀಘ್ರ ಪೂರ್ಣ
    ಪಡುಬಿದ್ರಿ ಹಾಗೂ ಕುಂದಾಪುರ ಭಾಗದಲ್ಲಿ ಬಾಕಿ ಉಳಿದಿರುವ ರಾಷ್ಟ್ರೀಯ ಹೆದ್ದಾರಿ 66ರ ವಿಳಂಬವಾಗಿರುವ ಕಾಮಗಾರಿಯನ್ನು ಇನ್ನೆರಡು ತಿಂಗಳಿನಲ್ಲಿ ಪೂರ್ಣಗೊಳಿಸುವಂತೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಸೂಚನೆ ನೀಡಿದ್ದಾರೆ ಎಂದು ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. ಕಟಪಾಡಿ ಮೇಕಲ್ಸೇತುವೆ ಕಾಮಗಾರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಹೆದ್ದಾರಿಗೆ ಹೊಂದಿಕೊಂಡು ಸರ್ವೀಸ್ ರಸ್ತೆ ನಿರ್ಮಾಣಕ್ಕೆ ಎರಡನೇ ಹಂತದಲ್ಲಿ ಯೋಜನೆ ಸೇರಿಸಿದ ಪರಿಣಾಮ ಅದೂ ವಿಳಂಬವಾಗಿದೆ. ಅದನ್ನೂ ಶೀಘ್ರ ಪೂರ್ಣಗೊಳಿಸುವಂತೆ ಹೆದ್ದಾರಿ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts