More

    ಪತಿ-ಪತ್ನಿ ವರ್ಗಾವಣೆ ಷರತ್ತುಬದ್ಧ ಒಪ್ಪಿಗೆ

    ಬೆಂಗಳೂರು: ಸ್ವಂತ ಕೋರಿಕೆ ಮೇರೆಗೆ ಪತಿ-ಪತ್ನಿ ಅಂತರ ಜಿಲ್ಲಾ ವರ್ಗಾವಣೆಗೆ ರಾಜ್ಯ ಸರ್ಕಾರ ಅನುಮೋದನೆ ನೀಡಿ, ತಿದ್ದುಪಡಿ ನಿಯಮಕ್ಕೆ ಸಂಬಂಧಿಸಿದಂತೆ ಕರಡು ಅಧಿಸೂಚನೆ ಪ್ರಕಟಿಸಿದೆ. ಆಕ್ಷೇಪಣೆ ಸಲ್ಲಿಕೆಗೆ 15 ದಿನಗಳ ಕಾಲಾವಕಾಶ ನೀಡಲಾಗಿದೆ. ಆದರೆ, ಈ ನಿಯಮದನ್ವಯ ವರ್ಗಾವಣೆಯಾಗಬೇಕಾದರೆ ಒಂದೇ ಸ್ಥಳದಲ್ಲಿ ಕನಿಷ್ಠ 7 ವರ್ಷ ಸೇವೆ ಪೂರ್ಣಗೊಳಿಸಿರಬೇಕು ಎಂದು ಷರತ್ತು ವಿಧಿಸಿರುವುದಕ್ಕೆ ಸರ್ಕಾರಿ ನೌಕರರ ವಲಯದಲ್ಲಿ ಅಪಸ್ವರ ಕೇಳಿಬಂದಿದೆ. ಅದರಲ್ಲೂ ಪೊಲೀಸ್ ಇಲಾಖೆಯಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಕರ್ನಾಟಕ ನಾಗರಿಕ ಸೇವಾ (ತಿದ್ದುಪಡಿ) ನಿಯಮ 2021 ಹೊರಡಿಸುವ ಮೂಲಕ ಸ್ವಂತ ಕೋರಿಕೆ ವರ್ಗಾವಣೆಗೆ ಅವಕಾಶವಿದ್ದ 16 (ಎ) ನಿಯಮವನ್ನು ಕಾಯ್ದೆಯಿಂದ ತೆಗೆದುಹಾಕಲಾಗಿತ್ತು. ಇದರಿಂದ ಸಿ ಮತ್ತು ಡಿ ದರ್ಜೆಯ ನೌಕರರನ್ನು ಒಂದು ಜ್ಯೇಷ್ಠತಾ ಘಟಕದಿಂದ ಇನ್ನೊಂದು ಘಟಕದ ಸಮಾನ ಹುದ್ದೆಗೆ ಸ್ವಂತ ಕೋರಿಕೆ ಮೇರೆಗೆ ವರ್ಗಾವಣೆಗೊಳಿಸಲು ಇಲಾಖಾ ಮುಖ್ಯಸ್ಥರಿಗಿದ್ದ ಅಧಿಕಾರವನ್ನು ಮೊಟಕುಗೊಳಿಸಲಾಗಿತ್ತು. ಪತಿ-ಪತ್ನಿ ವರ್ಗಾವಣೆಗೂ ಅವಕಾಶ ಇರಲಿಲ್ಲ. ಸರ್ಕಾರಿ ನೌಕರರ ವಲಯದಿಂದ ಅತೃಪ್ತಿ ವ್ಯಕ್ತವಾದ ಹಿನ್ನೆಲೆಯಲ್ಲಿ ತಿದ್ದುಪಡಿ ತಂದು ಹಿಂದಿನ ನಿಯಮವನ್ನು ಮರುಸ್ಥಾಪನೆ ಮಾಡಲಾಗಿದೆ. ಇದರಿಂದಾಗಿ ಸ್ವಂತ ಕೋರಿಕೆ ಮೇರೆಗೆ ಪತಿ-ಪತ್ನಿ ಅಂತರ ಜಿಲ್ಲಾ ವರ್ಗಾವಣೆಗೆ ಅವಕಾಶ ದೊರೆಯುವಂತಾಗಿದೆ.

    ಯಾವ ಇಲಾಖೆಗೆ ಸಮಸ್ಯೆ: ಕೆಸಿಎಸ್​ಆರ್ ತಿದ್ದುಪಡಿ ನಿಯಮದಿಂದಾಗಿ ಪೊಲೀಸ್ ಇಲಾಖೆಯಲ್ಲಿ ಕಾನ್​ಸ್ಟೆಬಲ್​ನಿಂದ ಸಬ್ ಇನ್​ಸ್ಪೆಕ್ಟರ್​ವರೆಗೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಹಾಗೂ ಕಂದಾಯ ಇಲಾಖೆಯಲ್ಲಿರುವ ಗ್ರಾಮ ಲೆಕ್ಕಿಗರು ಹೆಚ್ಚು ತೊಂದರೆ ಅನುಭವಿಸುವಂತಾಗಿದೆ. ಇತರ ಸರ್ಕಾರಿ ಇಲಾಖೆಗಳ ಪ್ರಥಮ ದರ್ಜೆ ಸಹಾಯಕ (ಎಫ್​ಡಿಎ) ಹಾಗೂ ದ್ವಿತೀಯ ದರ್ಜೆ ಸಹಾಯಕ (ಎಸ್​ಡಿಎ)ರಿಗೂ ವರ್ಗಾವಣೆ ಸಂಕಷ್ಟವಿದೆ.

    ವಿಜಯವಾಣಿ ವಿಶೇಷ ವರದಿ

    ಸರ್ಕಾರಿ ನೌಕರರಾಗಿರುವ ಪತಿ-ಪತ್ನಿ ಸೇವಾವಧಿ ಪೂರ್ತಿ ಒಂದೇ ಜಿಲ್ಲೆ ಅಥವಾ ಘಟಕಕ್ಕೆ ವರ್ಗಾವಣೆಗೊಂಡು ಒಟ್ಟಿಗೆ ಕೆಲಸ ಮಾಡಲೂ ಅವಕಾಶ ಇಲ್ಲದ ಬಗ್ಗೆ ನ.11ರಂದು ‘ಸಿ, ಡಿ ಸಿಬ್ಬಂದಿಗೆ ವರ್ಗ ಸಂಕಷ್ಟ’ ಹಾಗೂ ನ.12ರಂದು ‘ಅವನಲ್ಲಿ, ಇವಳಿಲ್ಲಿ ದಂಪತಿ ಗೋಳಾಟ‘ ಶೀರ್ಷಿಕೆಯಡಿ ವಿಶೇಷ ವರದಿಗಳನ್ನು ಪ್ರಕಟಿಸುವ ಮೂಲಕ ವಿಜಯವಾಣಿ ಸರ್ಕಾರದ ಗಮನ ಸೆಳೆದು ಕೆಸಿಎಸ್​ಆರ್​ನ 16 (ಎ) ನಿಯಮ ಮರುಸ್ಥಾಪನೆಗೆ ಒತ್ತಾಯಿಸಿತ್ತು.

    ಅಪಸ್ವರ ಏಕೆ?: ಕನಿಷ್ಠ ಸೇವಾ ಷರತ್ತು ಸರಿಯಲ್ಲ. ಹೊಸದಾಗಿ ಮದುವೆಯಾದವರು 7 ವರ್ಷ ಬೇರೆಬೇರೆ ಜಿಲ್ಲೆಗಳಲ್ಲಿ ಕೆಲಸ ಮಾಡಿಕೊಂಡಿದ್ದರೆ ಸಂಸಾರ ನಡೆಸುವುದು ಕಷ್ಟ. ಸಾಮಾನ್ಯ ನೌಕರರಿಗೆ ವಿಧಿಸಿರುವ ಷರತ್ತನ್ನೇ ಪತಿ-ಪತ್ನಿ ವರ್ಗಾವಣೆಗೂ ನಿಗದಿಪಡಿಸಿರುವುದು ಸಮಂಜಸವಲ್ಲ. ಪತಿ-ಪತ್ನಿ ಪ್ರಕರಣವನ್ನು ವಿಶೇಷ ಪ್ರಕರಣ ಎಂದು ಪರಿಗಣಿಸಿ ವರ್ಗಾವಣೆಗೊಳಿಸಬೇಕು ಎಂಬುದು ನೌಕರರ ಒತ್ತಾಯವಾಗಿದೆ.

    ಅಧಿಸೂಚನೆಯಲ್ಲೇನಿದೆ?

    • ಕರ್ನಾಟಕ ನಾಗರಿಕ ಸೇವಾ (ತಿದ್ದುಪಡಿ) ನಿಯಮ 2022ರಲ್ಲಿ 16 ಎ ನಿಯಮ ಸೇರ್ಪಡೆ.
    • ಪತಿ ಅಥವಾ ಪತ್ನಿ ಇಬ್ಬರಲ್ಲಿ ಒಬ್ಬರು ಸ್ವಂತ ಕೋರಿಕೆ ವರ್ಗಾವಣೆಗೆ ಮನವಿ ಸಲ್ಲಿಸಬಹುದು
    • ಒಂದು ಜ್ಯೇಷ್ಠತಾ ಘಟಕದಿಂದ ಇನ್ನೊಂದು ಘಟಕದ ಸಮಾನ ಹುದ್ದೆಗೆ ವರ್ಗಾವಣೆಗೆ ಅವಕಾಶ
    • ಪ್ರಸ್ತುತ ಸೇವೆ ಸಲ್ಲಿಸುತ್ತಿರುವ ಸ್ಥಳದಲ್ಲಿ ಕನಿಷ್ಠ 7 ವರ್ಷ ಸೇವೆ ಪೂರ್ಣಗೊಂಡಿದ್ದರಷ್ಟೇ ಪರಿಗಣನೆ
    • ವರ್ಗಾವಣೆಯಾಗಲಿರುವ ಘಟಕ ಅಥವಾ ಸ್ಥಳದಲ್ಲಿ ಮಂಜೂರಾದ ಹುದ್ದೆ ಖಾಲಿ ಇರಬೇಕು
    • ಸ್ವಂತ ಕೋರಿಕೆಗೆ ಮನವಿಯನ್ನು ಘಟಕದ ಮುಖ್ಯಸ್ಥರು ಪರಿಶೀಲಿಸಲು ಕ್ರಮ ಕೈಗೊಳ್ಳಲಿದ್ದಾರೆ

     

    ಡಾ.ರಾಜ್​​ ಕುಟುಂಬದ ವಿರುದ್ಧ ಹಗುರ ಮಾತು ಆರೋಪ; ಪುನೀತ್ ಕೆರೆಹಳ್ಳಿ ಮೇಲೆ ದಾಳಿ, ಅಂಗಿ ಹರಿದು ಹೊಯ್​ಕೈ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts