More

    ಮತ್ತೆಮತ್ತೆ ಮಟ್ಕಾ ‘ಮಾಫಿ’ಯಾ..!

    ಬೆಳಗಾವಿ: ರಾಜ್ಯದಲ್ಲಿ ದಿನವೂ ನಡೆಯುತ್ತಿರುವ ಪೊಲೀಸ್ ತನಿಖೆ ಮತ್ತು ದಾಳಿಗಳು ಡ್ರಗ್ಸ್ ಮಾಫಿಯಾದ ಪೆಡ್ಲರ್‌ಗಳಿಗೆ ನಡುಕ ಹುಟ್ಟಿಸಿದರೆ, ಮತ್ತೊಂದೆಡೆ ಮಟ್ಕಾ ಬುಕ್ಕಿಗಳು ‘ದಾಳಿ ನಂತರ ದಂಡ ತುಂಬಿದರೆ ಎಲ್ಲವೂ ಮಾಫಿ..!’ ಎನ್ನುತ್ತಲೇ ಜಾಮೀನು ಪಡೆದು ಮತ್ತದೇ ಚಾಳಿ ಮುಂದುವರಿಸುತ್ತಿದ್ದಾರೆ. ಇದು ಪೊಲೀಸರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

    ಅಚ್ಚರಿ ಎನಿಸಿದರೂ ಇದು ಸತ್ಯ. ಅಡ್ಡೆಗಳ ಮೇಲಿನ ಪೊಲೀಸ್ ದಾಳಿ ನಂತರ ದಂಡ ಕಟ್ಟಿದರೆ ಮುಗಿಯಿತು ಎಂಬ ಮನೊಭಾವ ಜೂಜುಕೋರರಲ್ಲಿ ಅಚ್ಚಾಗಿದೆ.
    ಹೀಗಾಗಿಯೇ ಎಷ್ಟೇ ಬಾರಿ ದಾಳಿ ನಡೆಸಿದರೂ ಮತ್ತದೇ ದಂಧೆಯಲ್ಲಿ ತೊಡಗುತ್ತಿದ್ದಾರೆ. ಅವರಿಗೆ ಸರಿಯಾದ ಪಾಠ ಕಲಿಸಿ ಜೂಜಾಟ ಕೊನೆಗಾಣಿಸಬೇಕಾದರೆ ಕಾನೂನು ತಿದ್ದಪಡಿಯೇ ಉಳಿದಿರುವ ಅಸ್ತ್ರ ಎಂದು ಸ್ವತಃ ಪೊಲೀಸ್ ಅಧಿಕಾರಿಗಳೇ ಅಭಿಪ್ರಾಯ ಪಟ್ಟಿದ್ದಾರೆ.

    ಈ ಬಗ್ಗೆ ‘ವಿಜಯವಾಣಿ’ ಜತೆ ಮಾತನಾಡಿದ ಬೆಳಗಾವಿ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಚಂದ್ರಶೇಖರ ನೀಲಗಾರ ಅವರು, ಕಾನೂನುಗಳು ಬಲಪಡದ ಹೊರತು ಎಷ್ಟೇ ದಾಳಿ ನಡೆಸಿದರೂ, ಶಿಕ್ಷೆಯ ಭಯ ಅವರಿಗಿರಲ್ಲ. ಸೆಕ್ಷನ್‌ಗಳೇ ಬೇಲೇಬಲ್ ಇದ್ದಾಗ ನಾವು ದಾಳಿ ನಡೆಸಿ, ಬಂಧಿಸಿದರೂ ಅವರು ಜಾಮೀನು ಪಡೆದು ಮತ್ತದೇ ಮಟ್ಕಾ, ಜೂಜಾಟದಲ್ಲಿ ತೊಡಗುತ್ತಾರೆ ಎಂದರು.

    ದಾಳಿ ದಂಡಕ್ಕಷ್ಟೇ ಸೀಮಿತ?!: ಜೂಜಾಟ ನಡೆಯುವ ಸ್ಥಳಗಳ ಮೇಲೆ ದಾಳಿ ನಡೆಸಿ, ಒಂದಿಷ್ಟು ಮಂದಿಯನ್ನು ಬಂಧಿಸುತ್ತಾರೆ. ಅಲ್ಲದೆ, ಅವರ ಬಳಿಯಿರುವ ಸಾವಿರಾರು ರೂಪಾಯಿ, ಒಂದೆರಡು ಮೊಬೈಲ್ ಹಾಗೂ ಇಸ್ಪೀಟ್ ಎಲೆಗಳನ್ನು ವಶಕ್ಕೆ ಪಡೆದು ಕೆ.ಪಿ.ಆ್ಯಕ್ಟ್ ಕಲಂ 78(111)ಅಡಿ ಪ್ರಕರಣ ದಾಖಲಿಸಿಕೊಳ್ಳುತ್ತಾರೆ. ದಾಳಿ ವೇಳೆ ಅಡ್ಡೆಯಲ್ಲಿ 100ರಿಂದ-ಲಕ್ಷಾಂತರ ರೂ.ಮೊತ್ತದ ಹಣ ಲಭ್ಯವಾದರೂ ಸಹ ಬಂಧಿತ ಆರೋಪಿಗಳು 200 ರಿಂದ 300 ರೂ. ಮಾತ್ರ ದಂಡವಾಗಿ ಪಾವತಿಸುತ್ತಿದ್ದು, ನಂತರ ನ್ಯಾಯಾಲಯದಿಂದ ಅವರು ಜಾಮೀನು ಪಡೆಯುತ್ತಿದ್ದಾರೆ.

    8,130 ಬಾರಿ ದಾಳಿ: ಇಂತಹ ದಾಳಿಗಳು ರಾಜ್ಯದಲ್ಲಿ 2020ರಲ್ಲಿ ಈವರೆಗೆ ಬರೋಬ್ಬರಿ 8,130 ನಡೆದಿವೆ. ಇಲಾಖೆಯ ಅಂಕಿ-ಅಂಶಗಳ ಪ್ರಕಾರ ಮಟ್ಕಾ-(78-ಕ್ಲಾಸ್-ಸಿ)-2437, ಸ್ಟ್ರೀಟ್ ಗ್ಯಾಂಬ್ಲಿಂಗ್(87)-5232, ಹೋಮ್ ಗ್ಯಾಂಬ್ಲಿಂಗ್(79-80)-205, ಬೆಟ್ಟಿಂಗ್-58 ಹಾಗೂ ಇತರೆ 198 ಪ್ರಕರಣಗಳು ನಡೆದಿದ್ದು, ಬಹುತೇಕ ಎಲ್ಲ ಪ್ರಕರಣಗಳ ಆರೋಪಿಗಳು ಜಾಮೀನು ಪಡೆದಿದ್ದು, ಮತ್ತದೇ ಚಾಳಿ ಮುಂದುವರಿಸಿದ್ದಾರೆ.

    ಅಧಿಕಾರಿಗಳ ಸಲಹೆ ಏನು?

    ಕರ್ನಾಟಕ ಪೊಲೀಸ್ ಆ್ಯಕ್ಟ್-1963 ತಿದ್ದುಪಡಿ ಮಾಡಿ ತಪ್ಪಿತಸ್ಥರಿಗೆ ದಂಡದ ಪ್ರಮಾಣ ಹೆಚ್ಚಿಸುವುದು. ಜಾಮೀನು ಪಡೆದ ಮೂರನೇ ಬಾರಿಯೂ ಜೂಜಾಟದಲ್ಲಿ ತೊಡಗಿಸಿಕೊಂಡವರಿಗೆ ಇನ್ನೂ ಹೆಚ್ಚಿನ ದಂಡ ವಿಧಿಸುವುದು. ಪದೇಪದೆ ಮಟ್ಕಾ ಬುಕ್ಕಿಂಗ್ ಮಾಡುವವರ ವಿರುದ್ಧ ರೌಡಿ ಶೀಟರ್ ಪೈಲ್ ಮಾಡುವುದು. ಅಥವಾ ಅವರನ್ನು ಗಡಿಪಾರು ಮಾಡುವುದು.

    ಸದ್ಯದ ಕರ್ನಾಟಕ ಪೊಲೀಸ್ ಆ್ಯಕ್ಟ್ ನ ಮಟ್ಕಾ ಪ್ರಕರಣಗಳಲ್ಲಿ ಸುಲಭವಾಗಿಯೇ ಜಾಮೀನು ಪಡೆಯುವ ಆರೋಪಿಗಳು ಪುನಃ ಅದೇ ಕೃತ್ಯದಲ್ಲಿ ತೊಡಗುತ್ತಿರುವುದು ತಿಳಿದಿದೆ. ಕಠಿಣ ಕಾನೂನು ಜಾರಿಯಾದರೆ ಪರಿಣಾಮಕಾರಿಯಾಗಿ ಗ್ಯಾಂಬ್ಲಿಂಗ್ ತಡೆಯಬಹುದು. ಇದಕ್ಕಾಗಿ ಸರ್ಕಾರವೇ ಕೆಪಿ ಆ್ಯಕ್ಟ್ ತಿದ್ದುಪಡಿ ಮಾಡಬೇಕಿದೆ.
    | ರಾಘವೇಂದ್ರ ಸುಹಾಸ್ಐ ಜಿಪಿ, ಉತ್ತರ ವಲಯ ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts