More

    ಶುರುವಲ್ಲೇ ಸಂಪುಟ ಸಂಕಟ: ಮೇಲುಗೈ ಸಾಧಿಸಲು ಶಿವ-ರಾಮಯ್ಯ ಪೈಪೋಟಿ; ಅಧಿವೇಶನ ಬಳಿಕ ಮತ್ತೆ ದೆಹಲಿ ಭೇಟಿ

    ಬೆಂಗಳೂರು: ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಮ್ಯಾರಥಾನ್ ರಾಜಿ ಸಂಧಾನ ನಡೆಸಿದ್ದ ಕಾಂಗ್ರೆಸ್ ಹೈಕಮಾಂಡ್​ಗೆ ಈಗ ಮತ್ತೊಂದು ಸುತ್ತಿನ ಸವಾಲು ಎದುರಾಗಿದೆ. ಸಂಪುಟ ವಿಸ್ತರಣೆಗೆ ಆರಂಭದಲ್ಲೇ ಸಂಕಟ ಉಂಟಾಗಿದ್ದು, ತಮ್ಮನ್ನು ಕಡೆಗಣಿಸಲಾಗಿದೆ ಎಂದು ಸಚಿವಾಕಾಂಕ್ಷಿಗಳು ನಿಡುಸುಯ್ಯಲು ಆರಂಭಿಸಿದ್ದಾರೆ. ಮೊದಲ ಸುತ್ತಿನ ಸಂಪುಟ ರಚನೆಗೆ 20ರಿಂದ 22 ಸಚಿವ ಸ್ಥಾನ ಹಂಚಿಕೆ ಮಾಡಿ ಸರ್ಕಾರದ ಆಗುಹೋಗು ಸುಸೂತ್ರವಾಗಿ ಸಾಗುವಂತೆ ಮಾಡಬೇಕೆಂಬುದು ದೆಹಲಿ ನಾಯಕರ ಬಯಕೆಯಾಗಿತ್ತು. ಆದರೆ, ಸಂಪುಟದಲ್ಲಿ ಮೇಲು‘ಕೈ’ ಸಾಧಿಸಲು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ. ಶಿವಕುಮಾರ್ ಹಠ ತೊಟ್ಟಿದ್ದರಿಂದ ಈ ಆಶಯ ಈಡೇರಲಿಲ್ಲ. ಮೇ 20ರಂದು ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟ ಪದಗ್ರಹಣ ಬಳಿಕ ಉಳಿದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಸಂಬಂಧ ರಾತ್ರಿಯೇ ಸಿಎಂ-ಡಿಸಿಎಂ ಇಬ್ಬರೂ ದೆಹಲಿಗೆ ಬರುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿಗಳು ಸೂಚಿಸಿದ್ದರು. ಕೊನೆಯ ಕ್ಷಣದಲ್ಲಿ ಕಾರ್ಯಕ್ರಮ ರದ್ದಾಯಿತು.

    ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿ.ಕೆ. ಶಿವಕುಮಾರ್ ನೀಡಿರುವ ಮಾಹಿತಿ ಪ್ರಕಾರ, ಮೇ 23ರೊಳಗೆ ನೂತನ ಶಾಸಕರ ಪ್ರಮಾಣವಚನ ಪ್ರಕ್ರಿಯೆ ಮುಗಿಯಬೇಕು. ಈ ಹಿನ್ನೆಲೆಯಲ್ಲಿ ಅಧಿವೇಶನ ಕರೆದಿದ್ದು, ಮೇ 22 ಮತ್ತು 23ರಂದು ಶಾಸಕರ ಪ್ರತಿಜ್ಞಾವಿಧಿ ನಡೆಯಲಿದೆ. ಮೇ 24ರ ಬಳಿಕ ಸೂಕ್ತ ಸಮಯ ನೋಡಿಕೊಂಡು ದೆಹಲಿಗೆ ತೆರಳುವುದಾಗಿ ತಿಳಿಸಿದ್ದಾರೆ.ಸಚಿವಾಕಾಂಕ್ಷಿಗಳು ಬಹಿರಂಗವಾಗಿ ಆಕಾಂಕ್ಷೆಹೊರಹಾಕಲು ಆರಂಭಿಸಿದ್ದಾರೆ. ತಮ್ಮ ಸಮುದಾಯದ ನಾಯಕರ ಮೂಲಕ ದನಿ ಎತ್ತಿಸಲು ಪ್ರಯತ್ನಿಸಿದ್ದಾರೆ. ಹಾಗೆಯೇ ಹಿರಿಯ ಶಾಸಕರು ತಮ್ಮನ್ನು ಮೊದಲ ಸುತ್ತಿನಲ್ಲಿ ಪರಿಗಣಿಸದಿರುವುದಕ್ಕೆ ಅಸಮಾಧಾನವನ್ನೂ ಹೊರಹಾಕಿದ್ದಾರೆ.

    ಗುಂಪುಗಾರಿಕೆಯ ಭೀತಿ: ಪಕ್ಷದ ಭವಿಷ್ಯ, ದೂರದೃಷ್ಟಿಯಿಂದ ಹೊಸಬರು ಮತ್ತು ಹಳಬರ ಸಮ್ಮಿಶ್ರ ರೂಪದಲ್ಲಿ ಸಂಪುಟ ರಚನೆ ಮಾಡಬೇಕೆಂಬ ಹೈಕಮಾಂಡ್ ಬಯಕೆ ಕೂಡ ಈಡೇರುವ ಸಾಧ್ಯತೆ ಕಾಣಿಸುತ್ತಿಲ್ಲ. 1-2 ಬಾರಿ ಗೆದ್ದವರಿಗೆ ಅವಕಾಶ ನೀಡಿದರೆ ದೊಡ್ಡ ಸಂಖ್ಯೆಯಲ್ಲಿರುವ ಹಿರಿಯ ಶಾಸಕರು ಬೇರೆಬೇರೆ ರೂಪದಲ್ಲಿ ಕೋಪ ಹೊರಹಾಕಬಹುದು ಹಾಗೂ ಪಕ್ಷದಲ್ಲಿ ಗುಂಪುಗಾರಿಕೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂಬ ವಾದವೂ ಇದೆ.

    ಇನ್ನೊಂದು ಬೆಳವಣಿಗೆಯಲ್ಲಿ ಹೊಸ ಸರ್ಕಾರದ ಎರಡು ನಿಲುವುಗಳ ವಿಚಾರದಲ್ಲಿ ಆಂತರಿಕ ಮುಸುಕಿನ ಗುದ್ದಾಟ ನಡೆದಿದೆ. ಸರ್ಕಾರದ ಕಾರ್ಯಕ್ರಮಗಳ ಪ್ರಚಾರ ಮತ್ತು ನೇಮಕ ಸಂಬಂಧ ವಿಭಿನ್ನ ನಿಲುವು ದೆಹಲಿ ನಾಯಕರವರೆಗೂ ತಲುಪಿ ಚರ್ಚೆಯಾಗಿದೆ.

    ಶಕ್ತಿ ಕುಂದಿಸುವ ಲೆಕ್ಕಾಚಾರ

    ಸಿಎಂ, ಡಿಸಿಎಂ ಸೇರಿ ಒಟ್ಟು 10 ಮಂದಿ ಈಗ ಸ್ಥಾನ ಪಡೆದಿದ್ದಾರೆ. ಇನ್ನು ಉಳಿದಿರುವ 23 ಸ್ಥಾನಗಳನ್ನು ಹಂಚಿಕೆ ಮಾಡಬೇಕಿದೆ. ಸಂಪುಟದಲ್ಲಿ ಮೇಲು‘ಗೈ’ ಸಾಧಿಸಲು ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಪರಸ್ಪರ ಪ್ರಯತ್ನ ನಡೆಸಿರುವುದು ಗುಟ್ಟಾಗಿ ಉಳಿದಿಲ್ಲ. ಡಿ.ಕೆ. ಶಿವಕುಮಾರ್ ತಂದ ಪ್ರಸ್ತಾವನೆಗೆ ಅರ್ಹ ಕಾರಣ ನೀಡಿ ಸಿದ್ದರಾಮಯ್ಯ ಆಕ್ಷೇಪಿಸಿದರೆ, ಸಿದ್ದರಾಮಯ್ಯ ತಂದ ಪ್ರಸ್ತಾವನೆಗೆ ಉದಾಹರಣೆಸಹಿತ ಸಕಾರಣ ನೀಡಿ ಡಿ.ಕೆ. ಶಿವಕುಮಾರ್ ತಿರಸ್ಕರಿಸಿದ್ದಾರೆ. ಈ ಮೂಲಕ ಇಬ್ಬರೂ ಸಂಪುಟದಲ್ಲಿ ಎದುರಾಳಿ ಬಲ ಕುಂದಿಸುವ ಲೆಕ್ಕಾಚಾರವನ್ನೂ ಹಾಕಿದಂತಿದೆ.

    ಒಂದು ಕಸರತ್ತು, ಮೂರು ಆಯಾಮ

    ಅತ್ಯಂತ ಹಿರಿಯರು: ಸರ್ಕಾರದ ವರ್ಚಸ್ಸು ವೃದ್ಧಿಗೆ ಅನುಭವ ಅಗತ್ಯ. ಹಿರಿಯರಿಗೆ ಅವಕಾಶ ಕೊಟ್ಟರೆ ಈ ಗುರಿ ಈಡೇರಿದಂತೆ. ಪಕ್ಷಕ್ಕಾಗಿನ ನಮ್ಮ ತ್ಯಾಗಕ್ಕೂ ಬೆಲೆ.

    ಹಿರಿಯರು: ಹಲವು ಬಾರಿ ಸಚಿವರಾದವರನ್ನು ಕೈಬಿಡಬೇಕು. 3-4 ಬಾರಿ ಗೆದ್ದವರಿಗೆ ಈ ಬಾರಿ ಮೊದಲ ಆದ್ಯತೆ ಕೊಡಬೇಕು. ಅನುಭವಕ್ಕೇನು ಕೊರತೆಯಾಗದು.

    ಜಾತಿವಾರು ಲೆಕ್ಕ: ಸಮುದಾಯವಾರು ಆಯ್ಕೆಯಾದ ಶಾಸಕರ ಸಂಖ್ಯೆಗೆ ಅನುಗುಣವಾಗಿ ಸಂಪುಟದಲ್ಲಿ ಸ್ಥಾನ ಕೊಡಬೇಕು. ಹೆಚ್ಚಿನ ಡಿಸಿಎಂ ಅಂತೂ ಸೃಷ್ಟಿಸಲಿಲ್ಲ.

    ತಾಳಮೇಳ ತಪ್ಪುವ ಆತಂಕ: ಜಿಲ್ಲೆ, ಪ್ರದೇಶ, ಜಾತಿವಾರು ಪ್ರಾತಿನಿಧ್ಯ ಕಲ್ಪಿಸಿ ಸೈ ಎನಿಸಿಕೊಳ್ಳಬೇಕೆಂಬುದು ಹೈಕಮಾಂಡ್ ಆಶಯ. ಇದೀಗ ಈ ಲೆಕ್ಕಾಚಾರ ತಪ್ಪುವಂತೆ ಕಾಣಿಸಲು ಆರಂಭವಾಗಿದೆ. ಒಂದೆಡೆ, ಹಿರಿಯ ಶಾಸಕರು ಸಚಿವ ಸ್ಥಾನಕ್ಕೆ ಪಟ್ಟುಹಿಡಿದರೆ, ಸಿಎಂ ಹಾಗೂ ಡಿಸಿಎಂ ತಮ್ಮತಮ್ಮ ಆಪ್ತರಿಗೆ ಅವಕಾಶ ಕೊಡಿಸಲು ಜಿದ್ದಿಗೆ ಬಿದ್ದಿದ್ದಾರೆ.

    ಇಂದಿನಿಂದ ವಿಶೇಷ ಅಧಿವೇಶನ

    ರಾಜ್ಯದ ಜನತೆಗೆ ಐದು ಗ್ಯಾರಂಟಿಗಳನ್ನು ನೀಡಿ ಅಭೂತಪೂರ್ವ ಬೆಂಬಲದೊಂದಿಗೆ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ. ರಾಜ್ಯಾದ್ಯಂತ ನೂತನ ಸರ್ಕಾರದ ಭರವಸೆಗಳೇ ಚರ್ಚೆಯಲ್ಲಿವೆ. ಈ ನಡುವೆ ಸರ್ಕಾರ ಮೂರು ದಿನಗಳ ವಿಶೇಷ ಅಧಿವೇಶನ ನಡೆಸಲಿದೆ. ಮೇ 22 ರಿಂದ 24ರ ವರೆಗೆ 16ನೇ ವಿಧಾನಸಭೆಯ ಮೊದಲ ವಿಶೇಷ ಅಧಿವೇಶನ ನಡೆಯಲಿದೆ. ಮೊದಲ ಎರಡು ದಿನ 224 ನೂತನ ಶಾಸಕರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಹಂಗಾಮಿ ಸ್ಪೀಕರ್ ಆರ್.ವಿ. ದೇಶಪಾಂಡೆ ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ. ಸಭಾಧ್ಯಕ್ಷರು ಆಯ್ಕೆಯಾಗುವವರೆಗೆ ಆರ್. ವಿ. ದೇಶಪಾಂಡೆ ಅವರನ್ನು ಹಂಗಾಮಿ ಸ್ಪೀಕರ್ ಆಗಿ ರಾಜ್ಯಪಾಲರು ನೇಮಕ ಮಾಡಿದ್ದಾರೆ.

    24ರಂದು ಹೊಸ ಸ್ಪೀಕರ್ ಆಯ್ಕೆ

    ಮೇ 24 ರಂದು ವಿಧಾನಸಭಾಧ್ಯಕ್ಷರ ಆಯ್ಕೆ ನಡೆಯಲಿದೆ. ಅದಕ್ಕಾಗಿ ವಿಧಾನಸಭೆ ಬುಲೆಟಿನ್ ಹೊರಡಿಸಿದ್ದು, ಮಂಗಳವಾರ ಮಧ್ಯಾಹ್ನ 12ರ ಒಳಗೆ ಸ್ಪೀಕರ್ ಚುನಾವಣೆಗೆ ಸ್ಪರ್ಧಿಸುವವರು ನಾಮಪತ್ರ ಸಲ್ಲಿಸಬೇಕಾಗುತ್ತದೆ. ಸಾಮಾನ್ಯವಾಗಿ ಅವಿರೋಧ ಆಯ್ಕೆಯಾಗಿರುವ ಸಂಪ್ರದಾಯವಿದ್ದು, ಈ ನಿಟ್ಟಿನಲ್ಲಿ ಹಿರಿಯ ಶಾಸಕರೊಬ್ಬರ ಮನವೊಲಿಸುವ ಕೆಲಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪಕ್ಷದ ಹೈಕಮಾಂಡ್ ಮಾಡುತ್ತಿದ್ದಾರೆ. ಸಂಭಾವ್ಯರ ಪಟ್ಟಿಯಲ್ಲಿರುವ ಆರ್.ವಿ. ದೇಶಪಾಂಡೆ, ಟಿ.ಬಿ. ಜಯಚಂದ್ರ, ಎಚ್.ಕೆ. ಪಾಟೀಲ್ ಸ್ಪೀಕರ್ ಆಗಲು ಒಪ್ಪಿಲ್ಲ. ಹೀಗಾಗಿ ಸ್ಪೀಕರ್ ಆಯ್ಕೆ ಕೂಡ ತಲೆನೋವಾಗಿದೆ.

    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಮತ್ತೊಂದು ನಿರ್ಧಾರ; ಇದು ಎಲ್ಲ ಕಡೆಗೂ ಅನ್ವಯ ಎಂದ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts