

ನವದೆಹಲಿ: ಟೀಮ್ ಇಂಡಿಯಾದ ಮಾಜಿ ಆಟಗಾರರಾದ ಗೌತಮ್ ಗಂಭೀರ್ ಮತ್ತು ಶ್ರೀಶಾಂತ್, ಲೆಜೆಂಡ್ ಲೀಗ್ ಕ್ರಿಕೆಟ್ (ಎಲ್ಎಲ್ಸಿ 2023) ಟೂರ್ನಿಯ ಎಲಿಮಿನೇಟರ್ ಪಂದ್ಯದ ವೇಳೆ ಮೈದಾನದಲ್ಲೇ ಕಿತ್ತಾಡಿಕೊಂಡಿರುವ ಘಟನೆ ನಡೆದಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಲ್ಲದೆ, ಈ ಘಟನೆಯ ಬೆನ್ನಲ್ಲೇ ಗೌತಿ, ಶ್ರೀಶಾಂತ್ಗೆ ತಿರುಗೇಟು ಸಹ ನೀಡಿದ್ದಾರೆ.
ಎಲಿಮಿನೇಟರ್ ಪಂದ್ಯ ಬುಧವಾರ ರಾತ್ರಿ ಸೂರತ್ನಲ್ಲಿ ನಡೆಯಿತು. ಗಂಭೀರ್ ನೇತೃತ್ವದ ಇಂಡಿಯನ್ಸ್ ಕ್ಯಾಪಿಟಲ್ಸ್ ತಂಡ ಮೊದಲು ಬ್ಯಾಟಿಂಗ್ ಮಾಡಿತು. ಎಂದಿನಂತೆ ಆರಂಭಿಕರಾಗಿ ಕಣಕ್ಕಿಳಿದ ಗಂಭೀರ್ ಉತ್ತಮ ಆಟವಾಡಿದರು. ಪಂದ್ಯದ ಎರಡನೇ ಓವರ್ ಅನ್ನು ಶ್ರೀಶಾಂತ್ ಎಸೆದರು. ಎರಡು ಮತ್ತು ಮೂರನೇ ಎಸೆತದಲ್ಲಿ ಕ್ರಮವಾಗಿ ಸಿಕ್ಸರ್ ಮತ್ತು ಬೌಂಡರಿಯನ್ನು ಗಂಭೀರ್ ಬಾರಿಸಿದರು. ಆದರೆ, ನಾಲ್ಕನೇ ಎಸೆತದಲ್ಲಿ ಯಾವುದೇ ರನ್ ಬರಲಿಲ್ಲ. ಈ ವೇಳೆ ಶ್ರೀಶಾಂತ್ ಅವರು ಗಂಭೀರ್ಗೆ ಏನೋ ಹೇಳಿದ್ದಾರೆ ಅಥವಾ ಗುರಾಯಿಸಿರುವಂತೆ ಕಾಣುತ್ತದೆ. ಇದರಿಂದ ಆಕ್ರೋಶಗೊಂಡ ಗಂಭೀರ್, ಏನು ಗುರಾಯಿಸ್ತಿದ್ದೀಯಾ ಎನ್ನುವಂತೆ ಶ್ರೀಶಾಂತ್ ಕಡೆ ದಿಟ್ಟಿಸಿ ನೋಡಿದ್ದಾರೆ. ಇದಾದ ಕೆಲವೇ ಕ್ಷಣಗಳಲ್ಲಿ ಇಬ್ಬರ ನಡುವೆ ಮಾತಿನ ಚಕಮಕಿಯು ಸಹ ನಡೆಯಿತು.
ಪಂದ್ಯದ ವಿಚಾರಕ್ಕೆ ಬಂದರೆ, ಗಂಭೀರ್ (51), ಬೆನ್ ಡಕ್ (30) ಹಾಗೂ ಭರತ್ ಚಿಪ್ಲಿ (35) ಅವರ ಅಮೋಘ ಆಟದಿಂದ ನಿಗದಿತ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ ಇಂಡಿಯಾ ಕ್ಯಾಪಿಟಲ್ಸ್ ತಂಡ 223 ರನ್ ಕಲೆಹಾಕಿತು. ಕ್ಯಾಪಿಟಲ್ಸ್ ತಂಡ ನೀಡಿದ 224 ರನ್ಗಳ ಗುರಿ ಬೆನ್ನತ್ತಿದ ಗುಜರಾತ್ ಜೈಂಟ್ಸ್ ಕ್ರಿಸ್ ಗೇಲ್ (84), ಓ ಬ್ರಿಯಾನ್ (57) ಅಬ್ಬರ ಬ್ಯಾಟಿಂಗ್ ನಡುವೆಯೂ ಸೋಲುಂಡಿತು. ಹೇಗೆಂದರೆ, ಅಂತಿಮ ಓವರ್ನಲ್ಲಿ ಗುಜರಾತ್ ತಂಡಕ್ಕೆ 20 ರನ್ಗಳ ಅವಶ್ಯಕತೆ ಇತ್ತು. ಆದರೆ, ಕೇವಲ 8 ರನ್ಗಳನ್ನು ಮಾತ್ರ ಕಲೆ ಹಾಕಿತು. ಹೀಗಾಗಿ ಕ್ಯಾಪಿಟಲ್ಸ್ ತಂಡಸ ಸುಲಭ ಜಯಸಾಧಿಸಿತು.
ತಂಡದ ಬೆನ್ನಲ್ಲೇ ಎಕ್ಸ್ ಖಾತೆಯಲ್ಲಿ ಪೋಸ್ಟ್ ಒಂದನ್ನು ಶೇರ್ ಮಾಡಿಕೊಳ್ಳುವ ಮೂಲಕ ಶ್ರೀಶಾಂತ್ಗೆ ಗಂಭೀರ್ ಟಾಂಗ್ ಕೊಟ್ಟಿದ್ದಾರೆ. ಕ್ರಿಕೆಟ್ನಲ್ಲಿ ತಮ್ಮ ಆರಂಭದ ದಿನದ ಫೋಟೋವೊಂದನ್ನು ಗೌತಿ ಪೋಸ್ಟ್ ಮಾಡಿದ್ದಾರೆ. ಫೋಟೋದಲ್ಲಿ ಗಂಭೀರ್ ನಗುತ್ತಿದ್ದು, ಜಗತ್ತು ಗಮನ ಹರಿಸುತ್ತಿರುವಾದ ನಗುತ್ತಿರು ಎಂದು ಬರೆಯಲಾಗಿದೆ. ಈ ಪೋಸ್ಟ್‌ನಲ್ಲಿ ಶ್ರೀಶಾಂತ್ ಬಗ್ಗೆ ಯಾವುದೇ ಉಲ್ಲೇಖವಿಲ್ಲದಿದ್ದರೂ, ಪರಿಸ್ಥಿತಿಯನ್ನು ನಿಭಾಯಿಸಲು ಇದು ಗಂಭೀರ್ ಅವರ ಸಲಹೆಯಾಗಿದೆ ಎಂದು ಹೇಳಲಾಗಿದೆ.
ಶ್ರೀಶಾಂತ್ ಸಹ ಗಂಭೀರ್ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ. ಗಂಭೀರ್ ಅವರೇ ನನ್ನನ್ನು ಕೆಣಕಿದರು. ನನ್ನನ್ನು ಯಾವಾಗಲೂ ಫಿಕ್ಸರ್ ಎಂದು ಕರೆಯುತ್ತಲೇ ಇದ್ದರು. ಅವರ ಪ್ರವೃತ್ತಿಯೇ ಹೀಗೆ. ಯಾವಾಗಲೂ ಸಹ ಆಟಗಾರರೊಂದಿಗೆ ಜಗಳವಾಡುತ್ತಾರೆ. ಹಿರಿಯ ಆಟಗಾರರನ್ನೂ ಗಂಭೀರ್ ಗೌರವಿಸುವುದಿಲ್ಲ ಎಂದಿದ್ದಾರೆ. (ಏಜೆನ್ಸೀಸ್)