More

    ಆರ್‌ಸಿಬಿ, ಅಹಮದಾಬಾದ್‌ನಿಂದ ಆಫರ್; ಯಾವ ಐಪಿಎಲ್ ತಂಡಕ್ಕೆ ಕೋಚ್ ಆಗ್ತಾರೆ ರವಿಶಾಸ್ತ್ರಿ?

    ನವದೆಹಲಿ: ಟೀಮ್ ಇಂಡಿಯಾದ ನಿರ್ಗಮನ ಕೋಚ್ ರವಿಶಾಸ್ತ್ರಿಗೆ ಬೆಂಗಳೂರಿನ ಆರ್‌ಸಿಬಿ ಮತ್ತು ಐಪಿಎಲ್‌ಗೆ ಹೊಸದಾಗಿ ಸೇರ್ಪಡೆಗೊಂಡಿರುವ ಅಹಮದಾಬಾದ್ ತಂಡಗಳಿಗೆ ಮುಖ್ಯ ಕೋಚ್ ಆಗುವಂತೆ ಆಫರ್ ನೀಡಲಾಗಿದೆ. ಈ ಪೈಕಿ ರವಿಶಾಸ್ತ್ರಿ ಯಾವ ತಂಡವನ್ನು ಆಯ್ಕೆ ಮಾಡಿಕೊಳ್ಳಬಹುದು ಎಂಬುದು ಕುತೂಹಲ ಮೂಡಿಸಿದೆ.

    ಅಹಮದಾಬಾದ್ ತಂಡವು, ಟಿ20 ವಿಶ್ವಕಪ್ ಬಳಿಕ ರವಿಶಾಸಿ ಜತೆಗೆ ಭಾರತ ತಂಡದ ಬೌಲಿಂಗ್ ಕೋಚ್ ಮತ್ತು ಫೀಲ್ಡಿಂಗ್ ಕೋಚ್ ಹುದ್ದೆಯಿಂದ ನಿರ್ಗಮಿಸಲಿರುವ ಭರತ್ ಅರುಣ್ ಮತ್ತು ಆರ್. ಶ್ರೀಧರ್ ಅವರಿಗೂ ಆಹ್ವಾನ ನೀಡಲಾಗಿದೆ ಎನ್ನಲಾಗಿದೆ.

    ಟೀಮ್ ಇಂಡಿಯಾದ ಮುಂದಿನ ಮುಖ್ಯ ಕೋಚ್ ಆಗಿ ರಾಹುಲ್ ದ್ರಾವಿಡ್ ಅವರನ್ನು ಈಗಾಗಲೆ ಅಧಿಕೃತವಾಗಿ ನೇಮಿಸಲಾಗಿದೆ. ಭಾರತ ತಂಡದ ಹುದ್ದೆಯಿಂದ ನಿರ್ಗಮಿಸಿದ ಬಳಿಕ ಐಪಿಎಲ್ ತಂಡಗಳ ಕೋಚ್ ಆಗುವತ್ತ ಆಸಕ್ತಿ ತೋರಿದ್ದ 59 ವರ್ಷದ ರವಿಶಾಸ್ತ್ರಿಗೆ ಈಗ ಅವರ ಆಪ್ತ ವಿರಾಟ್ ಕೊಹ್ಲಿ ಇರುವ ಆರ್‌ಸಿಬಿ ಮತ್ತು ಅಹಮದಾಬಾದ್ ತಂಡಗಳು ಆಫರ್ ನೀಡಿವೆ. ಈ ಪೈಕಿ ಯಾವ ತಂಡಕ್ಕೆ ಕೋಚ್ ಆಗುವೆ ಎಂಬ ಬಗ್ಗೆ ಟಿ20 ವಿಶ್ವಕಪ್ ಮುಗಿದ ಬೆನ್ನಲ್ಲೇ ರವಿಶಾಸಿ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.

    ಈ ವರ್ಷದ ಐಪಿಎಲ್ ಬಳಿಕ ವಿರಾಟ್ ಕೊಹ್ಲಿ ಆರ್‌ಸಿಬಿ ತಂಡದ ನಾಯಕತ್ವವನ್ನೂ ತ್ಯಜಿಸಿದ್ದಾರೆ. ಹೀಗಾಗಿ ಆರ್‌ಸಿಬಿ ಕೂಡ ಹೊಸ ತಂಡವನ್ನು ಕಟ್ಟಲಿದ್ದು, ಹೊಸ ನಾಯಕನನ್ನು ನೇಮಿಸಲಿದೆ. ಇದರೊಂದಿಗೆ ಹೊಸ ಕೋಚ್ ಕೂಡ ನೇಮಕ ಮಾಡುವ ಯೋಜನೆಯಲ್ಲಿದೆ. ಕೊಹ್ಲಿ ಆರ್‌ಸಿಬಿ ನಾಯಕತ್ವ ತ್ಯಜಿಸಿದ್ದರೂ, ಆಟಗಾರನಾಗಿ ತಂಡದಲ್ಲೇ ಉಳಿಯಲಿದ್ದಾರೆ. ಹೀಗಾಗಿ ಅವರಿಗೆ ಆಪ್ತರಾಗಿರುವ ರವಿಶಾಸ್ತ್ರಿಯನ್ನು ಸೆಳೆಯಲು ಬಯಸಿದ್ದಾರೆ. ಆರ್‌ಸಿಬಿ ಕಳೆದ 14 ವರ್ಷಗಳಿಂದ ಐಪಿಎಲ್‌ನಲ್ಲಿ ಆಡುತ್ತಿದ್ದರೂ, ಒಮ್ಮೆಯೂ ಪ್ರಶಸ್ತಿ ಜಯಿಸಿಲ್ಲ.

    ಅಹಮದಾಬಾದ್ ತಂಡದ ಮಾಲೀಕರಾಗಿರುವ ಸಿವಿಸಿ ಕ್ಯಾಪಿಟಲ್ಸ್ ಕಂಪನಿ ಶೀಘ್ರದಲ್ಲೇ ರವಿಶಾಸ್ತ್ರಿ ಬಳಗದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲು ಉತ್ಸುಕರಾಗಿದ್ದಾರೆ. ಆರಂಭದಿಂದಲೇ ಬಲಿಷ್ಠ ತಂಡ ಕಟ್ಟುವ ಸಿದ್ಧತೆ ಅದರದಾಗಿದೆ. ಅಹಮದಾಬಾದ್ ಜತೆಗೆ ಲಖನೌ ತಂಡವೂ ಐಪಿಎಲ್‌ಗೆ ಸೇರ್ಪಡೆಗೊಂಡಿದ್ದು, 2022ರಿಂದ ಒಟ್ಟು 10 ತಂಡಗಳು ಕಣಕ್ಕಿಳಿಯಲಿವೆ. ಸಿವಿಸಿ ಕ್ಯಾಪಿಟಲ್ಸ್ ಕಂಪನಿ 5625 ಕೋಟಿ ರೂ. ನೀಡಿ ಅಹಮದಾಬಾದ್ ತಂಡವನ್ನು ಖರೀದಿಸಿತ್ತು.

    ಮುಂದಿನ ಐಪಿಎಲ್ ಆವೃತ್ತಿಗೆ ಮುನ್ನ ಡಿಸೆಂಬರ್ ಅಥವಾ ಜನವರಿಯಲ್ಲಿ ಆಟಗಾರರ ಮೆಗಾ ಹರಾಜು ಪ್ರಕ್ರಿಯೆ ನಡೆಯುವ ನಿರೀಕ್ಷೆ ಇದೆ. ಹೊಸ 2 ತಂಡಗಳಿಗೆ ಹರಾಜಿಗೆ ಮುನ್ನವೇ 3 ಆಟಗಾರರೊಂದಿಗೆ ಒಪ್ಪಂದ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ.

    ಟೀಮ್ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ-ರವಿಶಾಸ್ತ್ರಿ ಯುಗ ಇಂದು ಮುಕ್ತಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts