More

    ಅರಣ್ಯೀಕರಣ ಗಿಡಗಳ ದರ ಪರಿಷ್ಕರಣೆ

    ಕೊರ‌್ಲಕುಂಟೆ ತಿಪ್ಪೇಸ್ವಾಮಿ ಚಳ್ಳಕೆರೆ

    ರೈತರ ಜಮೀನುಗಳಲ್ಲಿ ಹೆಚ್ಚಿನ ಅರಣ್ಯೀಕರಣದ ಉದ್ದೇಶದಿಂದ ಸರ್ಕಾರ ದರ ಪರಿಷ್ಕರಣೆ ಮಾಡಿದೆ. ಗಿಡಗಳ ಪೋಷಣೆ ಮತ್ತು ಉತ್ಪಾದನಾ ವೆಚ್ಚಕ್ಕೆ ಶೇ.50ರಷ್ಟು ರಿಯಾಯಿತಿ ನೀಡಿದೆ.

    ವಿಜಯವಾಣಿ ಪತ್ರಿಕೆ, ರೈತರಿಗೆ ಸಂಕಷ್ಟ ತಂದಿಟ್ಟ ಗಿಡಗಳ ದರ ಹೆಚ್ಚಳ ಎನ್ನುವ ವರದಿ ಮೂಲಕ ಸರ್ಕಾರದ ಗಮನ ಸೆಳೆದಿತ್ತು. ಇದರ ಬೆನ್ನಲ್ಲೇ ಗಿಡಗಳ ಬೆಲೆಯನ್ನು ಕಡಿಮೆ ಮಾಡಿದ್ದು ರೈತರು ಸಂತಸಗೊಂಡಿದ್ದಾರೆ.

    ತಾಲೂಕಿನಲ್ಲಿ ಮುಂಗಾರು ಮಳೆ ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ. ಇದರಿಂದ ಶೇಂಗಾ ಬಿತ್ತನೆ ಸೇರಿ ಅರಣ್ಯ ವಲಯದಲ್ಲಿ ಸಸಿ ನೆಡುವ ಗುರಿ ಸಾಧನೆ ಆಗುತ್ತಿಲ್ಲ.

    ಗಿಡಗಳ ದರ ಇಳಿಕೆ
    6 ರಿಂದ 9 ಇಂಚಿನ ಗಿಡದ ದರ 6 ರೂ.ನಿಂದ 1 ರೂ.ಗೆ ಇಳಿಸಿದ್ದು, 8 ರಿಂದ 12 ಇಂಚಿನ ಗಿಡಕ್ಕೆ 23ರೂ. ನಿಂದ 3 ರೂ.ಗೆ, 14 ರಿಂದ 20 ಇಂಚಿನ ಗಿಡಕ್ಕೆ 20 ರೂ.ನಿಂದ 5 ರೂ.ಗೆ ಇಳಿಕೆ ಮಾಡಲಾಗಿದೆ.

    5 ರಿಂದ 8 ಇಂಚಿನ ಗಿಡ, 6 ರಿಂದ 9 ಇಂಚಿನ ಗಿಡ, 8 ರಿಂದ 12 ಇಂಚಿನ ಗಿಡದ ಉತ್ಪಾದನಾ ವೆಚ್ಚದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗಿದೆ. ಇಲಾಖೆಯ ಈ ನಡೆಯನ್ನು ರೈತ ಪರ ಸಂಘಟನೆಗಳು ಮತ್ತು ಮುಖಂಡರು ಸ್ವಾಗತಿದ್ದಾರೆ.

    ಅರಣ್ಯ ವಲಯ ವಿಸ್ತರಣೆ ಮಾಡಿಕೊಳ್ಳಲು ಮತ್ತು ನಿಗದಿತ ಪ್ರಾದೇಶಿಕ ಅರಣ್ಯವನ್ನು ಅಭಿವೃದ್ಧಿಪಡಿಸಲು ಇಲಾಖೆ ರೈತರ ಕಡೆ ಮುಖ ಮಾಡಿದೆ.

    ಇಲಾಖೆ ವತಿಯಿಂದ ತೇಗ, ಮಹಾಗನಿ, ಸಿಲಿವಾರ, ಹೆಬ್ಬೇವು, ರಕ್ತಚಂದನ, ಶ್ರೀಗಂಧ, ನುಗ್ಗೆ, ಹುಣಸೆ ಸೇರಿ ವಿವಿಧ ಗಿಡಗಳನ್ನು ಬೆಳೆಸಲು ರೈತರಿಗೆ ನೀಡಲಾಗುತ್ತದೆ.

    ಪ್ರತಿ ವರ್ಷ ಉಳಿಕೆ ಆಗುವ ಗಿಡಗಳಿಗೆ ತಲಾ ಇಂತಿಷ್ಟು ವಂತಿಕೆ ಹಣವನ್ನು ನೀಡುವ ಯೋಜನೆ ಅರಣ್ಯ ಇಲಾಖೆಯಲ್ಲಿದೆ.

    ಉದ್ಯೋಗ ಖಾತ್ರಿ ಯೋಜನೆಯಡಿ ಜಮೀನಿನಲ್ಲಿ ಗಿಡ ಬೆಳೆಸಿಕೊಳ್ಳಲು ಸಹಾಯ ಧನದ ಕಾರ್ಯಕ್ರಮಗಳು ಇಲಾಖೆ ವ್ಯಾಪ್ತಿಯಲ್ಲಿವೆ ಎನ್ನುತ್ತಾರೆ ಅಧಿಕಾರಿಗಳು.

    ಅತಿ ಕಡಿಮೆ ಮಳೆ ಬೀಳುವ ತಾಲೂಕಿನಲ್ಲಿ ಅರಣ್ಯೀಕರಣ ಪೋಷಣೆ ಮಾಡಿಕೊಳ್ಳುವುದು ಮತ್ತು ಅಭಿವೃದ್ಧಿಪಡಿಸುವುದು ಕಷ್ಟದ ಕೆಲಸವಾಗಿದೆ.

    ಇದಕ್ಕಾಗಿ ಹೊಲದ ಬದುಗಳಲ್ಲಿ ಮತ್ತು ಬೆಳೆ ಬೆಳೆಯಲು ಅನುಪಯುಕ್ತವಾದ ಜಮೀನುಗಳಲ್ಲಿ ಅರಣ್ಯ ಗಿಡ ಬೆಳೆಸಲಾಗುತ್ತದೆ.

    ಈ ದೃಷ್ಟಿಯಲ್ಲಿ 1.22 ಲಕ್ಷ ಗಿಡಗಳನ್ನು ಬೆಳೆಸಲಾಗಿತ್ತು. ಪ್ರಸ್ತುತ ವರ್ಷ ಗಿಡಗಳ ಮಾರಾಟದ ದರ ಹೆಚ್ಚಳವಾಗಿದ್ದ ಕಾರಣ, ರೈತರು ಆಸಕ್ತಿ ತೋರಿರಲಿಲ್ಲ. ಇದುವರೆಗೂ ಕೇವಲ 4 ಸಾವಿರ ಗಿಡಗಳನ್ನು ವಿತರಿಸಲಾಗಿತ್ತು.

    ಗಿಡ ನೆಡುವ ಕಾರ್ಯ ಕುಂಠಿತವಾಗಲು ದರದ ಹೆಚ್ಚಳ ಕಾರಣ ಎಂಬುವುದನ್ನು ಪತ್ರಿಕೆಯಲ್ಲಿ ವರದಿ ಮಾಡಲಾಗಿತ್ತು. ರಾಜ್ಯ ಸರ್ಕಾರ ದರ ಪರಿಷ್ಕರಣೆ ಮಾಡಿ ಕಡಿಮೆ ದರದಲ್ಲಿ ಗಿಡ ವಿತರಣೆಗೆ ನಿರ್ದೇಶನ ನೀಡಿದೆ.
    ಡಿ.ಬಹುಗುಣ, ವಲಯ ಅರಣ್ಯಾಧಿಕಾರಿ

    ಅರಣ್ಯೀಕರಣಕ್ಕೆ ಪೂರಕವಾಗಿ ಗಿಡಗಳನ್ನು ಬೆಳೆಸಲು ರೈತರಿಗೆ ಆರ್ಥಿಕ ನೆರವು ನೀಡುವ ಯೋಜನೆಗಳನ್ನು ಅರಣ್ಯ ಇಲಾಖೆ ಜಾರಿ ಮಾಡಬೇಕು. ರೈತರು ಖರೀದಿಸುವ ಗಿಡಗಳ ಬೆಲೆ ಕಡಿಮೆ ಮಾಡಿರುವುದು ಸ್ವಾಗತಾರ್ಹ.
    ರೆಡ್ಡಿಹಳ್ಳಿ ವೀರಣ್ಣ, ರಾಜ್ಯ ರೈತ ಸಂಘ ಉಪಾಧ್ಯಕ್ಷ


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts