ಕಡೂರು: ಮಹಿಳೆಯರು ವೈಯಕ್ತಿಕ ಸ್ವಚ್ಛತೆ ಜತೆಗೆ ಆರೋಗ್ಯಕರ ಜೀವನ ಶೈಲಿ ಅನುಸರಿಸುವುದರ ಮೂಲಕ ಗಂಭೀರ ಕಾಯಿಲೆಗಳು ಬಾರದಂತೆ ತಡೆಗಟ್ಟಬೇಕು ಎಂದು ಆಪ್ತ ಸಮಾಲೋಚಕಿ ಸುನಿತಾಬಾಯಿ ಹೇಳಿದರು.
ಅಜ್ಜಂಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಮಹಿಳಾ ಸಬಲೀಕರಣ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಸಹಯೋಗದಲ್ಲಿ ಶುಕ್ರವಾರ ನಡೆದ ವಿಶ್ವ ಮುಟ್ಟಿನ ನೈರ್ಮಲ್ಯ ದಿನ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಣ್ಣು ಮಕ್ಕಳು ಆರೋಗ್ಯವನ್ನು ನಿರ್ಲಕ್ಷ್ಯಿಸಿದರ ಪರಿಣಾಮ ಶೇ.30 ರಿಂದ 35 ಮಹಿಳೆಯರು ಗರ್ಭಕಂಠದ ಕ್ಯಾನ್ಸರ್‌ನಂಥ ಮಾರಣಾಂತಿಕ ಕಾಯಿಲೆಯಿಂದ ಸಾವನ್ನಪ್ಪುತ್ತಿದ್ದಾರೆ. ಈ ಕುರಿತು ಜಾಗೃತಿ ಹೊಂದುವುದರ ಮೂಲಕ ಅಮೂಲ್ಯ ಜೀವವನ್ನು ಉಳಿಸಿಕೊಳ್ಳಬೇಕು ಎಂದರು.
ಮಹಿಳಾ ಸಬಲೀಕರಣ ಘಟಕದ ಸಂಚಾಲಕ ಎನ್.ಆನಂದ್ ಮಾತನಾಡಿ, ಮಹಿಳೆಯರು ಹಿಂದೆಂದಿಗಿಂತಲೂ ಹೆಚ್ಚು ಆರೋಗ್ಯ ಕಾಪಾಡಿಕೊಳ್ಳಬೇಕಿದೆ. ಅದರಲ್ಲೂ ಮಾನಸಿಕ ಒತ್ತಡ, ಆತಂಕದಂಥ ಸಮಸ್ಯೆಗಳಿಂದ ಮುಕ್ತರಾಗಬೇಕು. ಈ ನಿಟ್ಟಿನಲ್ಲಿ ಉತ್ತಮ ಆರೋಗ್ಯಕ್ಕೆ ಯೋಗ, ಧ್ಯಾನಗಳು ಹೆಚ್ಚು ಸಹಕಾರಿಯಾಗಲಿವೆ ಎಂದು ಹೇಳಿದರು.
ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸಂಚಾಲಕ ವಿ.ಮೋಹನ್‌ಕುಮಾರ್ ಮಾತನಾಡಿ, ಮಹಿಳೆಯರು ಹಲವು ಆರೋಗ್ಯ ಸಮಸ್ಯೆಗಳನ್ನು ಗುಪ್ತವಾಗಿಟ್ಟುಕೊಂಡು ಗಂಭೀರವಾದ ನಂತರ ಆಸ್ಪತ್ರೆಗಳಿಗೆ ಹೋಗುತ್ತಾರೆ. ರೋಗ ಆರಂಭವಾದಗಲೇ ತಪಾಸಣೆ ಮಾಡಿಸಿಕೊಂಡರೆ ಪರಿಹಾರ ಕಂಡುಕೊಳ್ಳಬಹುದು ಎಂದರು.
ಪ್ರಾಚಾರ್ಯ ಕೆ.ರಾಜಣ್ಣ, ಐಕ್ಯೂಎಸಿ ಸಂಚಾಲಕ ಎಚ್.ವಿ.ನಾಗೇಶ್, ಬಿ.ಎಂ.ರಘು ಹಾಗೂ ಉಪನ್ಯಾಸಕರು ಇದ್ದರು.