More

  ಜಗತ್ತು, ಜೀವನ ನಿಯಂತ್ರಿಸುವ ಶಕ್ತಿಯೇ ದೇವರು

  ಎನ್.ಆರ್.ಪುರ: ಜಗತ್ತು ಮತ್ತು ಜೀವನವನ್ನು ನಿಯಂತ್ರಿಸುವ ಶಕ್ತಿಯೇ ದೇವರು ಎಂದು ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.

  ಕೂಸ್ಗಲ್ ಶ್ರೀ ರಂಗನಾಥ ಸ್ವಾಮಿ ಹಾಗೂ ಶ್ರೀ ಚನ್ನಮ್ಮದೇವಿ ಜಾತ್ರಾ ಮಹೋತ್ಸವದ ಧಾರ್ಮಿಕ ಸಭೆ ಹಾಗೂ ಶಿವದೀಕ್ಷೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ, ಜಗತ್ತು ಕ್ರಮಬದ್ಧವಾಗಿ ನಡೆಯುತ್ತಿದೆ. ಸ್ವಯಂ ರೂಪುಗೊಂಡ ವ್ಯವಸ್ಥೆಯಲ್ಲಿ ಶಿಸ್ತು, ನಿಯಮ, ಕ್ರಮಬದ್ಧತೆ, ನಿಖರ ಇರುವುದಿಲ್ಲ. ಆದರೆ ಜಗತ್ತು ಮತ್ತು ಜೀವನಕ್ಕೆ ಕ್ರಮಬದ್ಧತೆ, ನಿಖರವಿದೆ. ಏಕೆಂದರೆ ಅವುಗಳನ್ನು ನಿಯಂತ್ರಿಸಬಹುದು ಎಂದರು.
  ದೇವರು, ಋಷಿ ಪರಂಪರೆ, ತಂದೆ, ತಾಯಿ, ಸಮಾನ ಸಮಾಜ ಮತ್ತು ಪ್ರಕೃತಿಯಿಂದ ಸಾಲ ಪಡೆದುಕೊಂಡು ಬಂದಿದ್ದೇವೆ. ಅವರೆಲ್ಲರಿಗೂ ಋಣಿಯಾಗಿರಬೇಕು. ಆದ್ದರಿಂದ ಬೆಳಗ್ಗೆ ಮತ್ತು ಸಂಜೆ ಭಕ್ತಿಯಿಂದ ದೇವರ ಧ್ಯಾನ ಮಾಡುವುದರ ಮೂಲಕ ದೇವರ ಸಾಲ ತೀರಿಸಬೇಕು. ಉತ್ತಮ ಪುಸ್ತಕಗಳನ್ನು ಓದುವುದರ ಮುಖಾಂತರ ಋಷಿ ಪರಂಪರೆ ಸಾಲ ತೀರಿಸಬೇಕು. ಸದಾಚಾರ, ಮೌಲ್ಯಯುತವಾಗಿ ಜೀವನ ಸಾಗಿಸುವುದರ ಮೂಲಕ ತಂದೆ, ತಾಯಿಯ ಸಾಲ ತೀರಿಸಬೇಕು. ಸಮಾನತೆ, ಐಕ್ಯತೆ ಭಾವನೆಯಿಂದ ಪರೋಪಕಾರ ಮಾಡುವುದರ ಮೂಲಕ ಸಮಾನ ಸಮಾಜದ ಸಾಲ ತೀರಿಸಬೇಕು. ಗಿಡ, ಮರಗಳನ್ನು ಬೆಳೆಸುವ ಮೂಲಕ ಪ್ರಕೃತಿಯ ಸಾಲ ತೀರಿಸಬೇಕು. ಪ್ರಕೃತಿಗೆ ಗೌರವಕೊಟ್ಟು ಸಂರಕ್ಷಿಸಬೇಕು. ಪ್ರಕೃತಿಗೆ ವಿರುದ್ಧವಾಗಿ ನಡೆದುಕೊಂಡರೆ ಆರೋಗ್ಯ ಕಳೆದುಕೊಳ್ಳಬೇಕಾಗುತ್ತದೆ ಎಂದು ನುಡಿದರು.
  ಜ್ಞಾನ ಸಂಪಾದಿಸಿ ಇತರರಿಗೆ ಹಂಚಬೇಕು. ದೇವರನ್ನು ಒಲಿಸಿಕೊಳ್ಳಲು ನಿಷ್ಕಲ್ಮಶ ಭಕ್ತಿ ಸಾಕು. ಆಹಾರ ಪದ್ಧತಿ ಹಾಗೂ ದೈವಾರಾಧನೆಗೂ ಸಂಬಂಧ ಕಲ್ಪಿಸಬಾರದು. ನಿರ್ಮಲ ಮನಸ್ಸಿನಿಂದ ಶಿವ ಪೂಜೆ ಮಾಡಿ ಧ್ಯಾನಿಸಿ. ರುದ್ರಾಕ್ಷಿಯನ್ನು ಯಾರು ಬೇಕಾದರೂ ಧರಿಸಬಹುದು. ಶಿವದೀಕ್ಷೆಯಿಂದ ಜನ್ಮ ಪಾವನವಾಗಲಿದೆ. ದೇವರ ಸಮೀಪಕ್ಕೆ ಹೋಗಲು ಸುಲಭ ಹಾಗೂ ಸರಳ ದಾರಿ ಶಿವದೀಕ್ಷೆ. ಎಲ್ಲರೂ ಒಟ್ಟಾಗಿ ಬಾಳುವುದೇ ಭಾರತದ ಸಂಸ್ಕೃತಿ. ದೇವರ ಧ್ಯಾನದಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುತ್ತದೆ. ಎಷ್ಟೇ ಹಣವಿದ್ದರೂ ನೆಮ್ಮದಿ ಇಲ್ಲದಿದ್ದರೆ ಪ್ರಯೋಜನವಿಲ್ಲ ಎಂದು ಹೇಳಿದರು.
  ಹರಿಹರಪುರದ ಸ್ವಾಮೀಜಿಯವರು ಆಗಮಿಸಿದ ಎಲ್ಲ ಭಕ್ತರಿಗೂ ಶಿವದೀಕ್ಷೆ ನೀಡಿದರು. ಕೂಸ್ಗಲ್ ಶ್ರೀ ರಂಗನಾಥ ಸ್ವಾಮಿ ಹಾಗೂ ಶ್ರೀ ಚನ್ನಮ್ಮದೇವಿ ದೇವಸ್ಥಾನ ಸಮಿತಿ ಅಧ್ಯಕ್ಷ ಜೆ.ಇ.ದಯಾನಂದ್, ಜಮೀನ್ದಾರರಾದ ಗದ್ದೇಮನೆ ಅಣ್ಣೇಗೌಡ, ಉಜ್ಜಯಿನಿ ಶ್ರೀ ಬನ್ನಿ ಮಹಾಂಕಾಳಿ ಅಮ್ಮನವರ ದೇವಸ್ಥಾನದ ಧರ್ಮದರ್ಶಿ ಗೋಪಾಲಗೌಡ, ಎಸ್.ಎಸ್.ಗುರುಮೂರ್ತಿ, ಸಾವಿರಾರು ಭಕ್ತರು ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts