More

    ಭಾರತ-ಚೀನಾ ಆರ್ಥಿಕ ಸಂಘರ್ಷದಲ್ಲಿ ಅದಾನಿ ಸೈನಿಕ.?!

    ಬೆಂಗಳೂರು: ಈಗ ಜಗತ್ತಿನ ಎರಡನೇ ಅತಿ ಶ್ರೀಮಂತ ವ್ಯಕ್ತಿ ಓರ್ವ ಭಾರತೀಯ. ಆತನೇ ಗೌತಮ್​ ಅದಾನಿ. ಒಂದು ಕಡೆ ವಿರೋಧ ಪಕ್ಷದವರು ಅದಾನಿ, ಅಂಬಾನಿಗಳ ಹೆಸರನ್ನು ಬಳಸಿಕೊಂಡು ಬಿಜೆಪಿ ಆಡಳಿತದ ವಿರುದ್ಧ ಮುನ್ನುಗ್ಗುತ್ತಿದ್ದರೆ ಇನ್ನೊಂದು ಕಡೆ ಅದಾನಿ, ಸದ್ದಿಲ್ಲದೇ ಚೀನಾ ಬೆನ್ನು ಮುರಿಯುತ್ತಿದ್ದಾರೆ.

    ಈಗ 137 ಬಿಲಿಯನ್ ಡಾಲರ್​ ಸಂಪತ್ತಿನ ರಾಶಿಯ ಮೇಲೆ ಕುಳಿತಿರುವ ಅದಾನಿ, ಬಂದರು, ಕಲ್ಲಿದ್ದಲು ಸ್ಥಾವರ, ವಿದ್ಯುತ್ ಉತ್ಪಾದನೆ ಮತ್ತು ವಿತರಣೆ, ಹೀಗೆ ಅನೇಕ ಕ್ಷೇತ್ರಗಳಲ್ಲಿ ವ್ಯಾಪಿಸಿರುವ ತಮ್ಮ ವ್ಯಾಪಾರದ ಸಾಮ್ರಾಜ್ಯವನ್ನು ನಿಯಂತ್ರಿಸುತ್ತಿದ್ದಾರೆ. ಭಾರತದಲ್ಲಿ ಹೆಚ್ಚಿನ ಲಾಭ ಗಳಿಸಿದ ಅದಾನಿ ಕ್ರಮೇಣ ವಿದೇಶದಲ್ಲೂ ತಮ್ಮ ವ್ಯಾಪಾರವನ್ನು ವಿಸ್ತರಿಸುತ್ತಿದ್ದಾರೆ. ಅವರು ಈ ವರ್ಷ ಜುಲೈನಲ್ಲಿ ಷೇರುದಾರರಿಗೆ ‘ನಾನು ಭಾರತದ ಗಡಿಯನ್ನು ಮೀರಿ ಜಗತ್ತಿನಾದ್ಯಂತ ವ್ಯಾಪಾರವನ್ನು ವಿಸ್ತರಿಸುತ್ತೇನೆ. ಈಗ ಅನೇಕ ವಿದೇಶಿ ಸರ್ಕಾರಗಳು ತಮ್ಮ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಮಾಡಲು ನಮ್ಮ ಸಂಸ್ಥೆಯನ್ನು ಸಂಪರ್ಕಿಸುತ್ತಿದ್ದಾರೆ’ ಎಂದು ಹೇಳಿದ್ದರು.

    ಈ ನಡೆಗಳು, ಅದಾನಿ ಪ್ರಧಾನಿ ಮೋದಿಗೆ ಹತ್ತಿರದ ವ್ಯಕ್ತಿ ಆಗಿರುವ ಸುಳಿವುಗಳನ್ನು ನೀಡುತ್ತದೆ. ಚೀನಾ ಒನ್​ ಬೆಲ್ಟ್​ ಒನ್​ ರೋಡ್​ ಯೋಜನೆಯ ಮೂಲಕ ಜಗತ್ತಿನಾದ್ಯಂತ ತನ್ನ ಪ್ರಭಾವವನ್ನು ಬೆಳೆಸುತ್ತಿದೆ. ಇದನ್ನು ನಿಲ್ಲಿಸಲು ಅದಾನಿ ಮೂಲಕ ಜಗತ್ತಿನಲ್ಲಿ ಭಾರತ ತನ್ನ ಪ್ರಭಾವವನ್ನು ಬೆಳೆಸುತ್ತಿದೆ ಎಂದು ರಾಜಕೀಯ ಚಿಂತಕರ ಅಭಿಪ್ರಾಯವಾಗಿದೆ. ಈ ಅಭಿಪ್ರಾಯಕ್ಕೆ ಬೆಂಬಲವಾಗಿ ಅನನೇಕ ಪುರಾವೆಗಳೂ ಸಿಗುತ್ತವೆ. ಚೀನಾದ ಪ್ರಭಾವ ಕಡಿಮೆ ಇರುವ ದೇಶಗಳಲ್ಲೇ ಅದಾನಿ ವ್ಯಾಪಾರದಲ್ಲಿ ಗೆಲುವನ್ನು ಕಾಣುತ್ತಿದ್ದಾರೆ.

    ಭಾರತ ನೇರವಾಗಿ ವಿದೇಶದಲ್ಲಿ ಹೆಚ್ಚಾಗಿ ಹೂಡಿಕೆ ಮಾಡುತ್ತಿಲ್ಲ. ಇದಕ್ಕೆ ಕಾರಣ ಹಲವಾರು. ಮೊದಲನೆಯದು, ಖುದ್ದು ದೇಶವೇ ಕರೊನಾ ನಂತರದ ದಿನಗಳಲ್ಲಿ ಹಣದುಬ್ಬರವನ್ನು ನಿಯಂತ್ರಿಸಲು ಕಷ್ಟಪಡುತ್ತಿದೆ. ಇಂತಹದೇ ಅನೇಕ ಕಾರಣಗಳು ಭಾರತಕ್ಕಿವೆ. ಯಾವ ದೇಶಗಳಲ್ಲಿ ಭಾರತ ಹೂಡಿಕೆ ಮಾಡಿದರೆ ಭಾರತದ ಪ್ರಭಾವ ಹೆಚ್ಚುತ್ತಿತ್ತೋ, ಆ ದೇಶಗಳಲ್ಲಿ ಅದಾನಿ ಹೂಡಿಕೆ ಮಾಡುತ್ತಿದ್ದಾರೆ. ಅಂದರೆ ನೇರವಾಗಿ ಭಾರತ ಸರ್ಕಾರ ಹೂಡಿಕೆ ಮಾಡದೆ ಅದಾನಿ ಗ್ರೂಪ್ಸ್​ ಮೂಲಕ ಹೂಡಿಕೆ ಮಾಡುತ್ತಿದೆ. ಇದರಿಂದ ಭಾರತಕ್ಕೆ ಎರಡು ಲಾಭ. ಮೊದಲನೆಯದ್ದು, ಭಾರತದ ಖಜಾನೆಯಿಂದ ನೇರವಾಗಿ ಹಣ ಖರ್ಚಾಗುತ್ತಿಲ್ಲ. ಎರಡನೆಯದು, ಭಾರತದ ಪ್ರಭಾವ ವಿದೇಶದಲ್ಲಿ ನಿರಾಯಾಸವಾಗಿ ಬೆಳೆಯುತ್ತಿದೆ.

    ಉದಾಹರಣೆಗೆ ಶ್ರೀಲಂಕಾ. ಆ ದೇಶ, ತನ್ನ ಪ್ರಮುಖ ಬಂದರು ಆದ ಹಂಬನ್​ಟೋಟಾವನ್ನು ಚೀನಾದ ಕೈಗೆ ಕೊಟ್ಟು ಕೂತಿದೆ. ಕಾರಣ? ಹಿಂದೆ ಮಾಡಿದ್ದ ಸಾಲ. ನಂತರ ಅಲ್ಲಿನ ಆರ್ಥಿಕ ಪರಿಸ್ಥಿತಿ ಕರೊನಾದಿಂದಾಗಿ ಸಂಪೂರ್ಣವಾಗಿ ಹದಗೆಟ್ಟಾಗ, ಕೆಲವೇ ತಿಂಗಳುಗಳಲ್ಲಿ ಅದಾನಿ ಶ್ರೀಲಂಕಾದಲ್ಲಿ ಹೂಡಿಕೆ ಮಾಡುವುದನ್ನು ಶುರು ಮಾಡುತ್ತಾರೆ. ಇದಾದ ಮೇಲೆ ಶ್ರೀಲಂಕಾ ಹಾಗು ಭಾರತದ ಸಂಬಂಧಗಳು ಉತ್ತಮಗೊಳ್ಳುತ್ತಾ ಹೋಗುತ್ತದೆ. ಎಲ್ಲಿಯವರೆಗೆ ಎಂದರೆ ಭಾರತದ ಸರ್ಕಾರಿ ಸ್ವಾಮ್ಯದ ಸಂಸ್ಥೆ ಒಎನ್​ಜಿಸಿ, ತೈಲ ಹಾಗೂ ಪ್ರಾಕೃತಿಕ ಅನಿಲದ ಕಾರ್ಪೊರೇಶನ್​, ಸಾಲ ರೂಪದಲ್ಲಿ ಶ್ರೀಲಂಕಾದಲ್ಲಿ ಪೆಟ್ರೋಲ್​ ವಿತರಿಸಲು ಶುರು ಮಾಡುತ್ತದೆ. ಅಂದ ಹಾಗೆ, ಅದಾನಿ ಗ್ರೂಪ್ಸ್​, ಶ್ರೀಲಂಕಾದಲ್ಲಿ ಹೂಡಿದ ಹಣ ಎಷ್ಟು ಎಂದು ತಿಳಿದರೆ ನಿಮ್ಮ ಹುಬ್ಬೇರೋದು ಗ್ಯಾರೆಂಟಿ. ಅದಾನಿ ಹೂಡಿದ್ದು ಬರೋಬ್ಬರಿ 750 ಮಿಲಿಯನ್​ ಡಾಲರ್​!

    ಶ್ರೀಲಂಕಾ ಸಾಲದ ಸುಳಿಯಿಂದ ಹೊರಬರ ಬೇಕು ಎಂದರೆ ಅದರ ಇಂಧನ ಅಗತ್ಯಗಳನ್ನು ತಾನೇ ಪೂರೈಸಿಕೊಳ್ಳಬೇಕು. ಇದನ್ನು ಮಾಡದೇ ಶ್ರೀಲಂಕಾ ಭಾರತದ ಕಡೆಗೆ ವಾಲುವುದಿಲ್ಲ ಎನ್ನುವುದು ಭಾರತ ಸರ್ಕಾರಕ್ಕೆ ಅರಿವಾಗುತ್ತೆ. ನಂತರ 2022ರ ಪ್ರಾರಂಭದಲ್ಲಿ ಅದಾನಿ, ಶ್ರೀಲಂಕಾದಲ್ಲಿ 500 ಮೆಗಾವ್ಯಾಟ್​ ಉತ್ಪಾದಿಸುವ ನವೀಕರಿಸಬಹುದಾದ ಇಂಧನ ವ್ಯವಸ್ಥೆಯಲ್ಲಿ ಹೂಡುತ್ತಾರೆ. ಈ ಬಗ್ಗೆ ಅನೇಕ ತಿಂಗಳುಗಳ ನಂತರ ಶ್ರೀಲಂಕಾದ ಕಂಚನಾ ವಿಜೆಸೇಖರ ಟ್ವೀಟ್​ ಮಾಡುತ್ತಾರೆ. ವಿಚಿತ್ರ ಎಂದರೆ ಇಷ್ಟು ದೊಡ್ಡ ಹೂಡಿಕೆಗಳಿಗೆ ಭಾರತ ಸರ್ಕಾರ ಪ್ರಚಾರವನ್ನೇ ಕೊಡುವುದಿಲ್ಲ.

    ಭಾರತ, ತನ್ನ ಸುತ್ತಲೂ ಇರುವ ದೇಶಗಳಲ್ಲಿ ಚೀನಾದ ಪ್ರಭಾವವನ್ನು ತಗ್ಗಿಸಲು ಪ್ರಯತ್ನಿಸುತ್ತಿದೆ. ಅದಕ್ಕೆ ಸಹಾಯಕ ಅಂಶವಾಗಿ ಸರ್ಕಾರ ಅದಾನಿಯನ್ನು ಬಳಸಿಕೊಳ್ಳುತ್ತಿದೆ ಎಂದು ಹೇಳಲಾಗುತ್ತಿದೆ. ಇದರ ಬದಲಾಗಿ ಸರ್ಕಾರದಿಂದ ಅದಾನಿಗೆ ಏನಾದರೂ ಸಿಗುತ್ತಾ ಎಂಬ ಪ್ರಶ್ನೆಗೆ ಇಲ್ಲಿಯವರೆಗೂ ಅವರು ‘ಇಲ್ಲ’ ಎಂದೇ ಹೇಳುತ್ತಾ ಬರುತ್ತಿದ್ದಾರೆ. ಅದಲ್ಲದೇ ಇತ್ತೀಚೆಗೆ ಅದಾನಿ, ಚೀನಾವನ್ನು ನೇರವಾಗಿ ಟೀಕಿಸುತ್ತಿದ್ದಾರೆ. ಇತ್ತೀಚೆಗೆ ಅವರು ಸಿಂಗಾಪುರದ ಒಂದು ಕಾನ್ಫರೆನ್ಸ್​ನಲ್ಲಿ ಚೀನಾದ ಆರ್ಥಿಕ ನೀತಿಗಳ ಬಗ್ಗೆ ಹಾಗು ಒನ್​ ಬೆಲ್ಟ್​ ಒನ್​ ರೋಡ್​ ಬಗ್ಗೆ ಕಟುವಾಗಿ ಟೀಕಿಸಿದ್ದರು.

    ಅದಾನಿ ಗ್ರೂಪ್ಸ್​, ಕೇವಲ ಶ್ರೀಲಂಕಾದಲ್ಲಿ ಹೂಡಿಕೆ ಮಾಡುತ್ತಿದೆ ಎಂದು ನೀವು ಅಂದುಕೊಂಡರೆ ತಪ್ಪು. ಈ ಸಂಸ್ಥೆ, ಇಸ್ರೇಲ್​, ಆಫ್ರಿಕಾದ ಅನೇಕ ದೇಶಗಳು, ಬಾಂಗ್ಲಾದೇಶ, ಆಸ್ಟ್ರೇಲಿಯಾ, ಇಂಡೊನೇಷ್ಯಾ, ಹೀಗೆ ಭಾರತಕ್ಕೆ ಹತ್ತಿರದ ಸಂಬಂಧ ಅಗತ್ಯವಿರುವ ಎಲ್ಲಾ ದೇಶಗಳಲ್ಲಿ ಅದಾನಿ ಗ್ರೂಪ್ಸ್​ನ ಹೂಡಿಕೆ ಇದೆ.

    ಒಟ್ಟಿನಲ್ಲಿ ಭಾರತ, ದೂರಗಾಮಿ ಆಟವನ್ನು ಆಡುತ್ತಿದೆ ಎಂದೇ ಹೇಳಬಹುದು. ಖಜಾನೆ ಖಾಲಿ ಮಾಡದೇ ಓರ್ವ ವ್ಯಾಪಾರಿಯ ಮೂಲಕ ಅಂತಾರಾಷ್ಟ್ರೀಯ ರಾಜಕಾರಣದಲ್ಲಿ ಪ್ರಭಾವ ಬೆಳೆಸುವುದನ್ನು ಬಹುಷಃ ಈವರೆಗೆ ಭಾರತದ ಇತಿಹಾಸದಲ್ಲಿ ಯಾರೂ ಮಾಡಿಲ್ಲ ಎಂದೇ ಹೇಳಬಹುದು.​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts