More

    ಅನಂತ್ ನಾಗ್ @75; ಮುಂದಿನ ವರ್ಷ ಚಿತ್ರರಂಗದಲ್ಲಿ 50 ಪೂರ್ಣ

    ಬೆಂಗಳೂರು: ಹಿರಿಯ ನಟ ಅನಂತ್ ನಾಗ್ ಅವರಿಗೆ ಭಾನುವಾರ (ಸೆ. 4) ಹುಟ್ಟುಹಬ್ಬದ ಸಂಭ್ರಮ. 75ನೇ ವಸಂತಕ್ಕೆ ಕಾಲಿಟ್ಟ ಅನಂತ್ ನಾಗ್, ನಿನ್ನೆ ಅಭಿಮಾನಿಗಳು ಹಾಗೂ ಕುಟುಂಬದವರ ಜತೆ ಸರಳವಾಗಿ ಮನೆಯಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಂಡರು. ಇದೇ ಖುಷಿಯಲ್ಲಿ ವಿಜಯವಾಣಿ ಜತೆ ಮಾತಿಗೆ ಸಿಕ್ಕ ಅವರು, ‘ಈಗ 74 ವರ್ಷ ಮುಗಿದು 75ನೇ ವರ್ಷಕ್ಕೆ ಕಾಲಿಟ್ಟಿದ್ದೇನೆ. ಮೊದಲೆಲ್ಲ ಹುಟ್ಟುಹಬ್ಬ ಎಂಬ ಸಂಭ್ರಮ ಇರುತ್ತಿತ್ತು. ಆದರೆ, ಈಗ ಆ ರೀತಿ ಏನಿಲ್ಲ. ಬೆಳಗ್ಗೆ ಬೇಗ ಎದ್ದು ದೇವರ ಪೂಜೆ ಮಾಡುತ್ತೇನೆ. ಮನೆ ಬಳಿ ಬೆಳಗ್ಗೆಯಿಂದ ರಾತ್ರಿ ಎಂಟು ಗಂಟೆಯವರೆಗೂ ಜನ ಬರುತ್ತಿರುತ್ತಾರೆ. ಹುಟ್ಟುಹಬ್ಬದ ಶುಭ ಕೋರುತ್ತಾರೆ, ಫೋಟೋಸ್ ಪಡೆಯುತ್ತಾರೆ. ‘ಗಾಳಿಪಟ 2’ ರೀತಿಯ ಚಿತ್ರ ನೋಡಿ ಈಗಿನ ಕಾಲದ ಹುಡುಗರು ಮನೆ ಬಳಿ ಬಂದು ವಿಶ್ ಮಾಡುತ್ತಿದ್ದಾರೆ’ ಎನ್ನುತ್ತಾರೆ ಅನಂತ್ ನಾಗ್.

    ಅಂದಹಾಗೆ ಹುಟ್ಟುಹಬ್ಬದ ದಿನ ಅವರು ಮನೆಯಿಂದ ಎಲ್ಲೂ ಹೊರಗೆ ಹೋಗುವುದಿಲ್ಲವಂತೆ. ಮನೆಯಲ್ಲೇ ಕುಟುಂಬದವರು, ಸ್ನೇಹಿತರು, ಕೆಲ ಆಪ್ತ ನಿರ್ದೇಶಕರು, ನಿರ್ವಪಕರು ಮತ್ತು ಚಿತ್ರರಂಗದವರ ಜತೆ ಸರಳವಾಗಿ ಹುಟ್ಟುಹಬ್ಬ ಆಚರಿಸುತ್ತಾರಂತೆ. ಈಗ ಚಿತ್ರರಂಗದಲ್ಲಿ 49 ವರ್ಷಗಳನ್ನು ಪೂರೈಸಿರುವ ಅನಂತ್ ನಾಗ್ ಮುಂದಿನ ವರ್ಷ 5 ದಶಕಗಳನ್ನು ಪೂರೈಸಲಿದ್ದಾರೆ. ಈ ಪಯಣದ ಬಗ್ಗೆ ಮೆಲುಕು ಹಾಕುವ ಅವರು, ‘ಮುಂದಿನ ವರ್ಷ ಚಿತ್ರರಂಗದಲ್ಲಿ 50 ವರ್ಷಗಳನ್ನು ಪೂರೈಸಲಿದ್ದೇನೆ. ವಯಸ್ಸಿಗೆ ತಕ್ಕಂತ ಪಾತ್ರಗಳನ್ನು ಮಾಡುತ್ತಿದ್ದೇನೆ. ಗಂಭೀರವಾದ, ಸಮಾಜಕ್ಕೆ ಉತ್ತಮ ಸಂದೇಶ ನೀಡುವಂತಹ ಪಾತ್ರಗಳು ಸಿಕ್ಕರೆ ಮಾತ್ರ ಮಾಡುತ್ತೇನೆ’ ಎನ್ನುತ್ತಾರೆ.

    ಇತ್ತೀಚಿನ ವರ್ಷಗಳಲ್ಲಿ ಭಿನ್ನ, ವಿಭಿನ್ನ ಪಾತ್ರಗಳಲ್ಲಿ ಅನಂತ್ ನಾಗ್ ಗಮನ ಸೆಳೆಯುತ್ತಿದ್ದಾರೆ. ‘ಪ್ಲಸ್’ ಚಿತ್ರದಲ್ಲಿ ಶ್ರೀಮಂತ ಉದ್ಯಮಿಯಾಗಿ ಸ್ಟೈಲಿಶ್ ಲುಕ್​ನಲ್ಲಿ, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರದಲ್ಲಿ ಮರೆವಿನ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಯಾಗಿ, ‘ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ’ ಚಿತ್ರದಲ್ಲಿ ಸಾಮಾಜಿಕ ಹೋರಾಟಗಾರನ ಪಾತ್ರದಲ್ಲಿ, ‘ಕವಲುದಾರಿ’ ಚಿತ್ರದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿಯಾಗಿ, ‘ಗಾಳಿಪಟ 2’ ಚಿತ್ರದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ನಟಿಸಿದ್ದಾರೆ. ಇನ್ನು ಡಾ. ಆನಂದ ಸಂಕೇಶ್ವರ ಅವರು ನಿರ್ವಿುಸುತ್ತಿರುವ, ರಿಶಿಕಾ ಶರ್ಮಾ ನಿರ್ದೇಶನದ ಪದ್ಮಶ್ರೀ ಡಾ. ವಿಜಯ ಸಂಕೇಶ್ವರ ಅವರ ಜೀವನಾಧಾರಿತ ‘ವಿಜಯಾನಂದ’ ಚಿತ್ರದಲ್ಲಿ ಅನಂತ್ ನಾಗ್, ಡಾ. ವಿಜಯ ಸಂಕೇಶ್ವರರ ತಂದೆ ಬಿ.ಜಿ. ಸಂಕೇಶ್ವರ ಅವರ ಪಾತ್ರದಲ್ಲಿ ನಟಿಸುತ್ತಿದ್ದು, ಇನ್ನು ಕೆಲವೇ ದಿನಗಳಲ್ಲಿ ಚಿತ್ರ ತೆರೆಗೆ ಬರಲಿದೆ. ಅದರ ಜತೆಗೆ ‘ಮೇಡ್ ಇನ್ ಬೆಂಗಳೂರು’, ‘ರುದ್ರಪ್ರಯಾಗ’ ಸೇರಿದಂತೆ ಇನ್ನೂ ಕೆಲವು ಚಿತ್ರಗಳಲ್ಲಿ ಅನಂತ್ ನಾಗ್ ನಟಿಸುತ್ತಿದ್ದಾರೆ.

    18ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಉದ್ಯಮಿ!; ನಷ್ಟದಲ್ಲಿದೆ 50 ವರ್ಷಗಳ ಇತಿಹಾಸವಿರುವ ಕಂಪನಿ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts