More

    24ಕ್ಕೂ ಅಧಿಕ ಪ್ರಕರಣಗಳ ಆರೋಪಿ ಬಂಧನ, ಪೊಲೀಸರಿಗೆ ಹಲ್ಲೆಗೆ ಯತ್ನಿಸಿದ ಪತ್ನಿಯೂ ಅರೆಸ್ಟ್

    ಗುರುಪುರ: ಸ್ಥಳೀಯ ಮತ್ತು ರಾಜ್ಯದ ಹಲವು ಪೊಲೀಸ್ ಠಾಣೆಗಳಲ್ಲಿ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿರುವ ಮೊಹಮ್ಮದ್ ಮನ್ಸೂರ್ ಅಲಿಯಾಸ್ ಆದ್ಯಪಾಡಿ ಮನ್ಸೂರ್(41) ಎಂಬಾತನನ್ನು ಬಜ್ಪೆ ಮತ್ತು ಮೂಡುಬಿದಿರೆ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಶನಿವಾರ ಬಂಧಿಸಿದ್ದಾರೆ.

    ನ್ಯಾಯಾಲಯದ ಅರೆಸ್ಟ್ ವಾರೆಂಟ್ ಅನ್ವಯ ಬಜ್ಪೆ ಪೊಲೀಸ್ ನಿರೀಕ್ಷಕ ಪ್ರಕಾಶ್ ಮತ್ತು ಮೂಡುಬಿದಿರೆ ಪಿಎಸ್‌ಐ ಸುದೀಪ್ ನೇತೃತ್ವದ ಪೊಲೀಸರ ತಂಡ ಆರೋಪಿ ಮನ್ಸೂರ್‌ನನ್ನು ಬಂಧಿಸಲು ಆತನ ವಾಸಿಸುತ್ತಿದ್ದ ಆದ್ಯಪಾಡಿ ಸೈಟ್ ಮನೆಗೆ ತೆರಳಿತ್ತು. ಈ ಸಂದರ್ಭ ಪೊಲೀಸರನ್ನು ಕಂಡ ಮನ್ಸೂರ್ ತಪ್ಪಿಸಿಕೊಳ್ಳಲು ಯತ್ನಿಸಿದ್ದು, ಆತನ ಈ ಕೃತ್ಯಕ್ಕೆ ಸಹಕರಿಸಿದ ಪತ್ನಿ ಅಸ್ಮತಾ ಹಾಗೂ ಮನೆಮಂದಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಈ ವೇಳೆ ಪೊಲೀಸರಿಗೆ ತರಚು ಗಾಯಗಳಾಗಿವೆ. ತಕ್ಷಣ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಮನ್ಸೂರ್ ಹಾಗೂ ಆತನ ಪತ್ನಿಯನ್ನು ಬಂಧಿಸಿದ್ದಾರೆ.

    ಮನ್ಸೂರ್ ವಿರುದ್ಧ ಬಜ್ಪೆ ಠಾಣೆಯಲ್ಲಿ 6, ಅಜೆಕಾರುವಿನಲ್ಲಿ 1, ಕಾರ್ಕಳದಲ್ಲಿ 1, ಕಾವೂರಿನಲ್ಲಿ 1, ಸುರತ್ಕಲ್‌ನಲ್ಲಿ 2, ಮೂಡುಬಿದಿರೆಯಲ್ಲಿ 4, ಸೋಮವಾರಪೇಟೆಯಲ್ಲಿ 3, ಮಡಿಕೇರಿಯಲ್ಲಿ 1, ತಿಪಟೂರು, ಹಳಿಯಾಲದಲ್ಲಿ 1, ಕುಶಾಲನಗರದಲ್ಲಿ 3, ಸಕಲೇಶಪುರ ಅರೆಹಳ್ಳಿ ಠಾಣೆಯಲ್ಲಿ ಒಂದು ಪ್ರಕರಣಗಳ ಸಹಿತ 24ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.
    ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಕೆಲವು ಅಹಿತಕರ ಘಟನೆಗಳಿಗೆ ಸಂಬಂಧಿಸಿದಂತೆ ಮುಂಜಾಗ್ರತಾ ಕ್ರಮವಾಗಿ ಆರೋಪಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮಂಗಳೂರು ಪೊಲೀಸ್ ಆಯುಕ್ತ ಶಶಿಕುಮಾರ್ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಹಲವು ಅಪರಾಧ ಪ್ರಕರಣಗಳಿಗೆ ಸಂಬಂಧಿಸಿ ನ್ಯಾಯಾಲಯದ ವಾರೆಂಟ್ ಎದುರಿಸುತ್ತಿದ್ದ ಮನ್ಸೂರ್ ಬಂಧನವಾಗಿದೆ ಎಂದು ಬಜ್ಪೆ ಪೊಲೀಸರು ತಿಳಿಸಿದರು.

    
    

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts