More

    ವಸತಿ ನಿಲಯ ಪ್ರವೇಶಕ್ಕೆ ನಿರ್ಬಂಧ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ಕರೊನಾ ವೈರಸ್ ಹಿನ್ನೆಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿರುವ ಸರ್ಕಾರಿ ವಸತಿ ನಿಲಯಗಳ ಪ್ರವೇಶಕ್ಕೆ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿದೆ. ಪರೀಕ್ಷೆ ಮುಗಿಯುವವರೆಗೆ ವಿದ್ಯಾರ್ಥಿಗಳ ಆರೋಗ್ಯ ಸಂರಕ್ಷಣೆಯ ಜವಾಬ್ದಾರಿಯನ್ನು ಅಧಿಕಾರಿಗಳ ಹೆಗಲಿಗೆ ಹಾಕಲಾಗಿದೆ.

    ಗ್ರಾಮೀಣ ಮತ್ತು ಪಟ್ಟಣ ಪ್ರದೇಶಗಳಲ್ಲಿನ ಕೂಲಿ ಕಾರ್ಮಿಕರು, ಬಡವರು ಮಕ್ಕಳು ಅಧಿಕ ಪ್ರಮಾಣದಲ್ಲಿ ಸರ್ಕಾರಿ ವಸತಿ ನಿಲಯಗಳಲ್ಲಿದ್ದಾರೆ. ಅದರಲ್ಲಿ 1 ರಿಂದ 6ನೇ ತರಗತಿ ವರೆಗಿನ ವಿದ್ಯಾರ್ಥಿಗಳ ಪರೀಕ್ಷೆ ರದ್ದು ಪಡಿಸಿ ಎಲ್ಲ ಶಾಲೆಗಳಿಗೆ ಮಾ. 14ರಿಂದಲೇ ರಜೆ ಘೋಷಣೆ ಮಾಡಿದೆ. ಸರ್ಕಾರಿ ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿರುವ 7, 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳನ್ನು ಪಾಲಕರು ಸ್ವಯಂ ಪ್ರೇರಣೆಯಿಂದ ಮನೆಗೆ ಕರೆದುಕೊಂಡು ಹೋಗಲು ಅವಕಾಶ ನೀಡಲಾಗಿದೆ.

    ಮಾ. 27ರಿಂದ ಏಪ್ರಿಲ್ 9ರ ವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿಯುವವರೆಗೂ ವಿದ್ಯಾರ್ಥಿಗಳು ವಸತಿ ನಿಲಯಗಳಲ್ಲಿಯೇ ಇರಬೇಕು. ಅವರಿಗೆ ನೆಗಡಿ, ಜ್ವರ, ಶೀತ ಉಂಟಾಗದಂತೆ ಆಯಾ ವಸತಿ ನಿಲಯದ ಅಧಿಕಾರಿಗಳು ಉಸ್ತುವಾರಿ ವಹಿಸಬೇಕು. ಜತೆಗೆ ನೂರಾರು ವಿದ್ಯಾರ್ಥಿಗಳು ಒಂದೇ ಕಡೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಈ ವಸತಿ ನಿಲಯಯಗಳಿಗೆ ಸಾರ್ವಜನಿಕರು, ಪಾಲಕರು ಆಗಮಿಸುವುದನ್ನು ಸರ್ಕಾರ ನಿರ್ಬಂಧಿಸಿದೆ. ಅಲ್ಲದೆ ಅಡುಗೆ ಸಿಬ್ಬಂದಿ, ಸ್ವಚ್ಛತಾ ಸಿಬ್ಬಂದಿಯೂ ವಸತಿ ನಿಲಯ ಬಿಟ್ಟು ಹೊರಗಡೆ ಹೋಗುವಂತಿಲ್ಲ.

    ಒಂದು ವೇಳೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುನ್ನವೇ ಪಾಲಕರು ಬಯಸಿದರೆ ಅವರ ಮಕ್ಕಳನ್ನು ಮನೆಗೆ ಕರೆದುಕೊಂಡು ಹೋಗಲು ಅನುಮತಿ ನೀಡಲಾಗುವುದು. ಆದರೆ, ಪರೀಕ್ಷೆ ಸಂದರ್ಭದಲ್ಲಿ ಕೇಂದ್ರಕ್ಕೆ ಕರೆತರುವುದು ಪಾಲಕರದ್ದೇ ಜವಾಬ್ದಾರಿ. ಪರೀಕ್ಷೆ ಸಮಯದಲ್ಲಿ ವಸತಿ ನಿಲಯಕ್ಕೆ ವಾಪಸ್ ಕರೆದುಕೊಂಡು ಬಂದರೆ ಪ್ರವೇಶ ನೀಡುವುದಿಲ್ಲ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    166 ವಸತಿ ನಿಲಯಗಳು: ಬೆಳಗಾವಿ ಮತ್ತು ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಗಳಲ್ಲಿ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯಲ್ಲಿ 66 ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿ 580 ಹಾಗೂ ಹಿಂದುಳಿದ ವರ್ಗ ಇಲಾಖೆ ವ್ಯಾಪ್ತಿಯ 100 ಮೆಟ್ರಿಕ್ ಪೂರ್ವ ವಸತಿ ನಿಲಯಗಳಲ್ಲಿ 1080
    ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿದ್ದಾರೆ. ಅವರೆಲ್ಲರ ಆರೋಗ್ಯ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಕುರಿತು ಎಲ್ಲ ವಸತಿ ನಿಲಯಗಳ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ. ದಿನದಲ್ಲಿ ಮೂರು ಬಾರಿ ಬಿಸಿಯಾಗಿರುವ ಊಟ ಹಾಗೂ ಇತರ ಪದಾರ್ಥ ನೀಡಬೇಕು. ಒಂದೊಂದು ಕೊಠಡಿಯಲ್ಲಿ 4 ವಿದ್ಯಾರ್ಥಿಗಳ ಬದಲಾಗಿ ಇಬ್ಬರಿಗೆ ವ್ಯವಸ್ಥೆ ಮಾಡುವಂತೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿರುವ ವಸತಿ ನಿಲಯಗಳ ಮೇಲೆ ವಿಶೇಷ ನಿಗಾ ವಹಿಸಲಾಗಿದೆ. ಮಕ್ಕಳ ಆರೋಗ್ಯ ರಕ್ಷಣೆ ನಮ್ಮ ಜವಾಬ್ದಾರಿ. ವಸತಿ ನಿಲಯಗಳಿಗೆ ಸಾರ್ವಜನಿಕರ ಪ್ರವೇಶ ನಿರ್ಬಂಧಿಸಲಾಗಿದೆ. ಯಾವುದೇ ಕಾರಣಕ್ಕೂ ಹೊರಗಿನ ಆಹಾರ ಪದಾರ್ಥಗಳನ್ನು ಮಕ್ಕಳಿಗೆ ನೀಡದಂತೆ ಮತ್ತು ಮಕ್ಕಳಿಗೆ ನೆಗಡಿ,ಕೆಮ್ಮು, ಜ್ವರ ಕಂಡು ಬಂದರೆ ತಕ್ಷಣ ವೈದ್ಯರ ಗಮನಕ್ಕೆ ತರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
    | ಡಾ. ಕೆ.ವಿ. ರಾಜೇಂದ್ರ ಜಿಪಂ ಸಿಇಒ

    ಕರೊನಾ ವೈರಸ್ ಹಿನ್ನೆಲೆಯಲ್ಲಿ ಸರ್ಕಾರಿ ವಸತಿ ನಿಲಯಗಳಲ್ಲಿರುವ ವಿದ್ಯಾರ್ಥಿಗಳ ಆರೋಗ್ಯ ರಕ್ಷಣೆಗಾಗಿ ವಿಶೇಷ ಕಾಳಜಿ ವಹಿಸಲಾಗಿದೆ. ಮುಂಜಾಗ್ರತವಾಗಿ ಎಲ್ಲ ರೀತಿಯ ಕ್ರಮ ವಹಿಸಲಾಗಿದ್ದು, ಯಾರೂ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ.
    | ಡಾ. ಎಸ್.ಬಿ. ಬೊಮ್ಮನಹಳ್ಳಿ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts