More

    ಸಂಪಿಗೆ ಕೆರೆಯಲ್ಲಿ ಧಾರಾಳ ಜಲ: ಬಳಕೆಯಾಗದ ನೀರು ಹೂಳೆತ್ತಿ ಉಪಯೋಗಿಯಾಗಿಸಲು ಒತ್ತಾಯ

    ನರೇಂದ್ರ ಎಸ್.ಮರಸಣಿಗೆ ಹೆಬ್ರಿ

    ಕುಚ್ಚೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಸ್ಥಾನ ಬೆಟ್ಟುವಿನಲ್ಲಿರುವ ಸಂಪಿಗೆ ಕೆರೆಯಲ್ಲಿ ಯಥೇಚ್ಛ ನೀರು ಇದೆ. ಬೇಸಿಗೆಯಿಡೀ ನೀರಿನ ಒರತೆಯೂ ಇರುತ್ತದೆ. ಆದರೆ ಈ ಕೆರೆ ನೀರು ಉಪಯೋಗವಾಗುತ್ತಿಲ್ಲ

    ಪ್ರತಿವರ್ಷ ಬೇಸಿಗೆಯಲ್ಲಿ ಕುಚ್ಚೂರು ಪಂಚಾಯಿತಿಯಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ. ಟ್ಯಾಂಕರ್ ನೀರು ಪೂರೈಸುವ ಸಂದರ್ಭವೂ ಬರುತ್ತದೆ. ಆದರೆ ಧಾರಾಳ ನೀರು ಇರುವ ಜಲಮೂಲವನ್ನು ಬಳಸಿಕೊಳ್ಳುವಲ್ಲಿ ಮಾತ್ರ ಯಾಕೋ ನಿರಾಸಕ್ತಿಯಿದೆ. ಈ ಕೆರೆಯನ್ನು ಬಳಸಿಕೊಂಡರೆ ಬಿರುಬೇಸಿಗೆಯ ಜಲಸಂಕಷ್ಟವನ್ನು ಒಂದಷ್ಟು ದೂರ ಮಾಡಬಹುದು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಗಮನ ಹರಿಸಬೇಕಾಗಿದೆ. ಸುತ್ತಮತ್ತ ಮನೆ, ಕಾರ್ಖಾನೆ, ಮತ್ತಿತರ ವಾಣಿಜ್ಯ ಸಂಸ್ಥಾಪನೆಗಳು ಇಲ್ಲದ ಕಾರಣ ಸಂಪಿಗೆ ಕೆರೆಯ ನೀರು ಕಲುಷಿತವಾಗದೆ ಸ್ವಚ್ಛವಾಗುಳಿದಿದೆ.

    ಸಂಪಿಗೆ ಕೆರೆಯ ಹೂಳೆತ್ತಬೇಕು

    ಕೆರೆಯಲ್ಲಿ ಪ್ರಸ್ತುತ ಭಾರಿ ಪ್ರಮಾಣದಲ್ಲಿ ಹೂಳು ತುಂಬಿಕೊಂಡಿದೆ. ಹೂಳೆತ್ತಿ ಕೆರೆಯನ್ನು ಸ್ವಚ್ಛಗೊಳಿಸಿದರೆ ನೀರು ಕುಡಿಯಲು ಯೋಗ್ಯವಾಗುತ್ತದೆ ಮಾತ್ರವಲ್ಲ, ಒರತೆಯೂ ಹೆಚ್ಚುತ್ತದೆ ಹಾಗೂ ಸಂಗ್ರಹ ಸಾಮರ್ಥ್ಯ ಹೆಚ್ಚುತ್ತದೆ. ಇಲ್ಲಿ ದೊರೆಯುವ ನೀರು ಉತ್ತಮ ಮಟ್ಟದ್ದಾಗಿರುವುದರಿಂದ ಮುಂದಿನ ದಿನಗಳಲ್ಲಿ ಕೆರೆಯ ಪುನರ್ ಬಳಕೆ ಮಾಡಲು ಯೋಜನೆ ರೂಪಿಸಲಾಗುವುದೆಂದು ಭೇಟಿ ನೀಡಿದ ಹೆಬ್ರಿ ತಾಲೂಕು ಪಂಚಾಯಿತಿ ಅಧಿಕಾರಿಗಳು ತಿಳಿಸಿದ್ದಾರೆ.

    ಸತ್ತುಹೋದ ಮೀನುಗಳು

    ಮೀನುಗಾರಿಕೆ ಇಲಾಖೆ ಕಳೆದ ವರ್ಷ ಪಂಚಾಯಿತಿಗಳಿಗೆ ಮೀನು ಬಿಡಲು ಆದೇಶಿಸಿತ್ತು. ಆ ಪ್ರಕಾರ ಹೆಬ್ರಿಯ ಕೆಲವು ಕೆರೆಗಳಲ್ಲಿ ಮೀನು ಬಿಟ್ಟಿದ್ದರು. ಆದರೆ ಬೇಸಿಗೆಯ ತಾಪಕ್ಕೆ ಕೆರೆಗಳೆಲ್ಲ ಬತ್ತಿಹೋಗಿ ಈ ಮೀನುಗಳು ಸತ್ತಿವೆ. ಮುಂದಾಲೋಚನೆಯಿಲ್ಲದ ಸರ್ಕಾರಿ ಯೋಜನೆಗಳಿಗೆ ಇದು ಒಂದು ಅತ್ಯುತ್ತಮ ಉದಾಹರಣೆ. ಕೆರೆಯಲ್ಲಿ ಬೆಳೆಯುವ ಮೀನುಗಳನ್ನು ಸ್ಥಳೀಯವಾಗಿ ತಿನ್ನುವುದಿಲ್ಲ. ಕನಿಷ್ಠ ಆ ಮೀನುಗಳು ಬದುಕುಳಿಯಲು ಪೂರಕ ವಾತಾವರಣ ಇದೆಯೇ ಎಂದು ಅಧ್ಯಯನ ಮಾಡದೆ ಮೀನು ಬಿಟ್ಟಿದ್ದರು. ಸುಮಾರು 1500 ಮೀನುಗಳು ಸತ್ತುಹೋಗಿದ್ದರೂ ಈ ಬಗ್ಗೆ ಯಾವ ಅಧಿಕಾರಿಯೂ ತಲೆಕೆಡಿಕೊಂಡಿಲ್ಲ.

    ಕಾಡಿದ ಜಲ ಸಂಕಷ್ಟ

    ಕಳೆದ ವರ್ಷ ಕುಚ್ಚೂರು ಗ್ರಾಮ ಪಂಚಾಯಿತಿಯಲ್ಲಿ ತೀವ್ರ ಜಲ ಸಮಸ್ಯೆಯಿತ್ತು. ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ನೀರು ಬೇಕಾದಷ್ಟು ಸಿಗಲಿಲ್ಲ. ಬೋರ್, ಇನ್ನಿತರ ಜಲಮೂಲಗಳು ಬತ್ತಿ ಹೋದಾಗ ಖಾಸಗಿಯವರ ನೆರವು ಪಡೆದು ಮನೆಗಳಿಗೆ ನೀರು ಸರಬರಾಜು ಮಾಡುವ ವ್ಯವಸ್ಥೆ ಗ್ರಾಪಂ ವತಿಯಿಂದ ನಡೆದಿದೆ. ಈ ವರ್ಷ ಮಳೆ ಕಡಿಮೆ ಆಗಿರುವುದರಿಂದ ನೀರಿನ ಸಮಸ್ಯೆ ಇನ್ನಷ್ಟು ಬಿಗಡಾಯಿಸಲಿದೆ.

    ಸಂಪಿಗೆ ಕೆರೆಯಲ್ಲಿ ಸಮೃದ್ಧ ನೀರು ಇದೆ. ಸ್ವಚ್ಛವಾದ ನೀರನ್ನು ಕುಡಿಯಲು ಬಳಸಬಹುದು. ಕೆರೆಯ ಹೂಳೆತ್ತಿ, ವಿಸ್ತರಣೆ ಮಾಡಿದರೆ ಕುಡಿಯಲು ಸರಬರಾಜು ಮಾಡಬಹುದು. ಕುಚ್ಚೂರು ಪಂಚಾಯಿತಿಯ ಬಹುದೊಡ್ಡ ಸಮಸ್ಯೆಯನ್ನು ನಿವಾರಿಸಲು ಈ ಕೆರೆ ಸಹಕಾರಿ ಆಗಬಹುದು. ಮುಂದಿನ ದಿನಗಳಲ್ಲಿ ಇದಕ್ಕೆ ಅನುದಾನಕೊಟ್ಟು ಊರಿಗೆ ನೀರು ದೊರಕಲು ಸಹಕಾರ ನೀಡಬೇಕು.
    -ಮಹೇಶ್ ಶೆಟ್ಟಿ ಬಾದ್ಲು, ಉಪಾಧ್ಯಕ್ಷರು, ಕುಚ್ಚೂರು ಗ್ರಾಪಂ

    ಕೆರೆಯನ್ನು ಖುದ್ದಾಗಿ ನೋಡಿಕೊಂಡು ಬಂದಿದ್ದೇನೆ. ಸ್ವಚ್ಛ ನೀರು ಧಾರಾಳ ಇದೆ. ಹೂಳೆತ್ತಿ, ವಿಸ್ತರಣೆ ಮಾಡುವ ಬಗ್ಗೆ ಯೋಜನೆ ರೂಪಿಸಲಾಗುವುದು. ಈ ಕೆರೆಯನ್ನು ಗ್ರಾಮ ಪಂಚಾಯಿತಿ ಬಳಸಿಕೊಂಡರೆ ಅನೇಕ ಜನರಿಗೆ ಕುಡಿಯುವ ನೀರನ್ನು ಒದಗಿಸಬಹುದು.
    -ಶಶಿಧರ್ ಕೆಜೆ, ಇಒ, ಹೆಬ್ರಿ ತಾಲೂಕು ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts