More

    ಬಾಲಿವುಡ್‌ನಲ್ಲಿ ಬರಲಿದೆ ಹಾಕಿ ಮಾಂತ್ರಿಕ ಧ್ಯಾನ್‌ಚಂದ್ ಬಯೋಪಿಕ್

    ನವದೆಹಲಿ: ಈಗಾಗಲೆ ಹಲವಾರು ಕ್ರೀಡಾ ತಾರೆಯರ ಬಯೋಪಿಕ್ ನಿರ್ಮಿಸಿ ಯಶಸ್ಸು ಕಂಡಿರುವ ಬಾಲಿವುಡ್‌ನಲ್ಲಿ ಇದೀಗ ಮತ್ತೊಂದು ಬಯೋಪಿಕ್‌ಗೆ ವೇದಿಕೆ ಸಜ್ಜಾಗಿದೆ. ಹಾಕಿ ಮಾಂತ್ರಿಕ ಮೇಜರ್ ಧ್ಯಾನ್‌ಚಂದ್ ಅವರ ಯಶೋಗಾಥೆಯನ್ನು ಬೆಳ್ಳಿತೆರೆಯ ಮೇಲೆ ತರಲು ನಿರ್ದೇಶಕ ಅಭಿಷೇಕ್ ಚೌಬೆ ಮುಂದಾಗಿದ್ದಾರೆ. ರೋನಿ ಸ್ಕ್ರೀವಾಲಾ ಪ್ರಧಾನ ನಿರ್ಮಾಪಕರಾಗಿದ್ದರೆ, ಪ್ರೇಮ್‌ನಾಥ್ ರಾಜ್‌ಗೋಪಾಲನ್ ಸಹ-ನಿರ್ಮಾಪಕರಾಗಿರುತ್ತಾರೆ.

    ಮೇಜರ್ ಧ್ಯಾನ್‌ಚಂದ್ ಬಯೋಪಿಕ್ 2021ರಲ್ಲಿ ಸೆಟ್ಟೇರಲಿದ್ದು, 2022ರಂದು ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಕಾಣಲಿದೆ. ಸಿನಿಮಾದ ತಾರಾಗಣ ಇನ್ನೂ ಅಂತಿಮಗೊಂಡಿಲ್ಲ. ಧ್ಯಾನ್‌ಚಂದ್ ಪಾತ್ರದಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲವೂ ಮೂಡಿದೆ.

    1928, 1932 ಮತ್ತು 1936ರ ಒಲಿಂಪಿಕ್ಸ್‌ನಲ್ಲಿ ಭಾರತೀಯ ಹಾಕಿ ತಂಡ ಸ್ವರ್ಣ ಪದಕ ಜಯಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದ ಮೇಜರ್ ಧ್ಯಾನ್‌ಚಂದ್, 1926ರಿಂದ 1948ರವರೆಗೆ ಭಾರತ ತಂಡದ ಪರ ಆಡಿದ್ದರು. ಅಂತಾರಾಷ್ಟ್ರೀಯ ಹಾಕಿ ವೃತ್ತಿಜೀವನದಲ್ಲಿ 185 ಪಂದ್ಯಗಳಲ್ಲಿ ಅವರು 400ಕ್ಕೂ ಅಧಿಕ ಗೋಲು ಸಿಡಿಸಿದ್ದರು. 1956ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜರಾಗಿದ್ದರು.

    1905ರ ಆಗಸ್ಟ್ 29ರಂದು ಜನಿಸಿದ್ದರು. ಮೇಜರ್ ಧ್ಯಾನ್‌ಚಂದ್ ಜನ್ಮದಿನವನ್ನು ಈಗ ರಾಷ್ಟ್ರೀಯ ಕ್ರೀಡಾದಿನವನ್ನಾಗಿ ಆಚರಿಸಲಾಗುತ್ತದೆ. ಒಟ್ಟಾರೆ 22 ವರ್ಷಗಳ ವೃತ್ತಿಜೀವನದಲ್ಲಿ ಅವರು 1500ಕ್ಕೂ ಅಧಿಕ ಗೋಲು ಬಾರಿಸಿದ್ದರು.

    ‘ಮೇಜರ್ ಧ್ಯಾನ್‌ಚಂದ್ ಶ್ರೇಷ್ಠ ಹಾಕಿ ಆಟಗಾರರು. ಅವರ ಬಯೋಪಿಕ್ ನಿರ್ದೇಶಿಸುವುದು ನನಗೆ ಹೆಮ್ಮೆಯ ವಿಷಯ. ಅವರ ಜೀವನದ ಬಗ್ಗೆ ಸಾಕಷ್ಟು ಅಧ್ಯಾಯನ ನಡೆಸಿರುವೆ. ಅವರ ಪ್ರತಿ ಸಾಧನೆಯ ಬಗ್ಗೆಯೂ ಪ್ರತ್ಯೇಕವಾದ ಸಿನಿಮಾಗಳನ್ನು ತೆಗೆಯಬಹುದಾಗಿದೆ. ಮುಂದಿನ ವರ್ಷ ಸಿನಿಮಾದ ಚಿತ್ರೀಕರಣ ಆರಂಭಿಸುವುದಕ್ಕೆ ಕಾತರದಿಂದಿರುವೆ. ಶೀಘ್ರದಲ್ಲೇ ನಾಯಕ ನಟನ ಹೆಸರನ್ನು ಪ್ರಕಟಿಸುವೆವು’ ಎಂದು ನಿರ್ದೇಶಕ ಅಭಿಷೇಕ್ ಚೌಬೆ ತಿಳಿಸಿದ್ದಾರೆ. ಅವರು ಈ ಹಿಂದೆ ಸುಶಾಂತ್ ಸಿಂಗ್ ರಜಪೂತ್ ನಟನೆಯ ಸೋಂಚಿರಿಯಾ ಸಿನಿಮಾ ನಿರ್ದೇಶಿಸಿದ್ದರು. ಇಶ್ಕಿಯಾ, ಉಡ್ತಾ ಪಂಜಾಬ್, ಡೇಡ್ ಇಶ್ಕಿಯಾ ಮುಂತಾದ ಸಿನಿಮಾಗಳನ್ನೂ ನಿರ್ದೇಶಿಸಿದ್ದರು. ಅದಕ್ಕೆ ಮುನ್ನ ನಿರ್ದೇಶಕ ವಿಶಾಲ್ ಭಾರಧ್ವಾಜ್‌ಗೆ ಸಹಾಯಕರಾಗಿದ್ದರು.

    ಧ್ಯಾನ್‌ಚಂದ್ ಸಿನಿಮಾದ ಬಗ್ಗೆ ಕಾತರಗೊಂಡಿರುವೆ ಎಂದು ಅವರ ಪುತ್ರ ಅಶೋಕ್ ಕುಮಾರ್ ತಿಳಿಸಿದ್ದಾರೆ. ಅಶೋಕ್ ಕುಮಾರ್ ಕೂಡ ಭಾರತ ತಂಡದ ಪರ ಆಡಿ ಒಲಿಂಪಿಕ್ಸ್ ಪದಕ ಜಯಿಸಿದ್ದರು. ‘ಧ್ಯಾನ್‌ಚಂದ್ ಅವರಿಗಿಂತ ಉತ್ತಮ ಹಾಕಿ ಆಟಗಾರರು ಇದುವರೆಗೆ ಯಾರೂ ಬಂದಿಲ್ಲ. ಸಿನಿಮಾ ನಿರ್ಮಾಣದ ಬಗ್ಗೆ ನನ್ನನ್ನು ಸಂಪರ್ಕಿಸಿದಾಗ ಪೂರ್ಣ ಸಹಕಾರ ನೀಡಿದೆ. ಧ್ಯಾನ್‌ಚಂದ್ ಸಾಧನೆಗಳನ್ನು ಬೆಳ್ಳಿತೆರೆಯ ಮೇಲೆ ನೋಡಲು ಕಾತರದಿಂದ ಕಾಯುತ್ತಿರುವೆ’ ಎಂದು ಅಶೋಕ್ ಕುಮಾರ್ ಹೇಳಿದ್ದಾರೆ.

    ಮಹಿಳೆಯರ ಕ್ರಿಕೆಟ್ ವಿಶ್ವಕಪ್ ವೇಳಾಪಟ್ಟಿ ಪ್ರಕಟ, ಭಾರತಕ್ಕೆ ಮೊದಲ ಎದುರಾಳಿ ಯಾರು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts