More

    ಹಣದ ಜತೆಗೆ ಜವಾಬ್ದಾರಿಯೂ ಹೆಚ್ಚಿದೆ: ಐಪಿಎಲ್ ಕೋಟಿವೀರ ಅಭಿನವ್ ಮನೋಹರ್ ಅಭಿಮತ

    ರಘುನಾಥ್ ಡಿ.ಪಿ. ಬೆಂಗಳೂರು
    ರಾಜ್ಯ ತಂಡದಲ್ಲಿ ಸ್ಥಾನ ಪಡೆಯಲು ಸಾಕಷ್ಟು ಬೇವರು ಸುರಿಸಿದ್ದ ಕ್ರಿಕೆಟಿಗ ಇಂದು ನೀರು ಕುಡಿದಷ್ಟೇ ಸುಲಭವಾಗಿ ಐಪಿಎಲ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾನೆ. ಐಪಿಎಲ್ ಮೆಗಾ ಹರಾಜಿನ ಮೊದಲ ದಿನವೇ ಕೆಲ ಫ್ರಾಂಚೈಸಿಗಳ ಗಮನಸೆಳೆದ ಹೆಸರು ಅಭಿನವ್ ಮನೋಹರ್. 2021-21ನೇ ಸಾಲಿನ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಕರ್ನಾಟಕದದ ಕ್ರಿಕೆಟ್ ಪ್ರಿಯರ ಮನಗೆದ್ದಿದ್ದ ಅಭಿನವ್ ಮನೋಹರ್ ಇದೀಗ ಐಪಿಎಲ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೂಲಬೆಲೆ 20 ಲಕ್ಷ ರೂಪಾಯಿಯೊಂದಿಗೆ ಬಿಡ್‌ಗಿಳಿದ ಅಭಿನವ್, ನಿರೀಕ್ಷೆಗೂ ಮೀರಿ 2.6 ಕೋಟಿ ರೂಪಾಯಿ ಮೊತ್ತಕ್ಕೆ ಗುಜರಾತ್ ಟೈಟಾನ್ಸ್ ತಂಡದ ಪಾಲಾದರು. 27 ವರ್ಷದ ಅಭಿನವ್ ಮನೋಹರ್ ತಮ್ಮ ಕ್ರಿಕೆಟ್ ಜರ್ನಿ ಹಾಗೂ ಮುಂದಿನ ಕನಸುಗಳ ಕುರಿತು ಸೋಮವಾರ ‘ವಿಜಯವಾಣಿ’ಯೊಂದಿಗೆ ಅಭಿಪ್ರಾಯ ಹಂಚಿಕೊಂಡರು.

    *ಇಷ್ಟೊಂದು ಮೊತ್ತಕ್ಕೆ ಮಾರಾಟವಾಗುವ ನಿರೀಕ್ಷೆ ಮಾಡಿದ್ದಿರಾ?
    -ಇಲ್ಲ. ಖಂಡಿತವಾಗಿಯೂ ಇಷ್ಟೊಂದು ದೊಡ್ಡ ಮೊತ್ತದ ಬಿಡ್ ನಿರೀಕ್ಷೆ ಮಾಡಿರಲಿಲ್ಲ. ನನ್ನ ನಿರೀಕ್ಷೆಗೂ ಮೀರಿ ಹಣಸಿಕ್ಕಿದೆ. ಇದನ್ನು ಬೋನಸ್ ಎಂದುಕೊಂಡಿರುವೆ. ಕಳೆದ ವಾರವಿಡೀ ಐಪಿಎಲ್ ಹರಾಜಿನ ಗುಂಗಿನಲ್ಲೇ ಇದ್ದೆ. 4 ದಿನ ರಾತ್ರಿ ನಿದ್ದೆ ಬಂದಿರಲಿಲ್ಲ. ಕಡೆಗೂ ಉತ್ತಮ ಮೊತ್ತ ಸಿಕ್ಕಿದ್ದು ಖುಷಿ ನೀಡಿದೆ.

    *ಇಂಥ ಅವಕಾಶ ಸಿಕ್ಕಿದ್ದು ನಿಮಗೆ ಹೇಗನಿಸುತ್ತಿದೆ?
    -ತುಂಬ ಖುಷಿಯಾಗುತ್ತಿದೆ. ಅಲ್ಲದೆ, ನನ್ನ ಜವಾಬ್ದಾರಿಯೂ ಹೆಚ್ಚಾಗಿದೆ ಎಂದು ಭಾವಿಸಿರುವೆ. ಇಂಥ ಸುಸಂದರ್ಭಕ್ಕೆ ನನ್ನ ವೃತ್ತಿಜೀವನದುದ್ದಕ್ಕೂ ಕಾದು ಕುಳಿತಿದ್ದೆ. ಸಿಕ್ಕ ಅವಕಾಶವನ್ನು ಸೂಕ್ತವಾಗಿ ಬಳಸಿಕೊಳ್ಳುವುದೇ ನನ್ನ ಮುಂದಿರುವ ದೊಡ್ಡ ಗುರಿ.

    *ಸ್ಟಾರ್ ಆಟಗಾರರಾದ ಹಾರ್ದಿಕ್ ಪಾಂಡ್ಯ, ರಶೀದ್ ಖಾನ್‌ರಂಥ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳುವ ಬಗ್ಗೆ ಎಷ್ಟು ಉತ್ಸುಕರಾಗಿದ್ದೀರಿ?
    -ತುಂಬಾ ಉತ್ಸುಕನಾಗಿದ್ದೇನೆ. ಅಂಥ ಸ್ಟಾರ್ ಆಟಗಾರರೊಂದಿಗೆ ಡ್ರೆಸ್ಸಿಂಗ್ ರೂಂ ಹಂಚಿಕೊಳ್ಳುವುದೇ ಒಂದು ಖುಷಿಯ ವಿಚಾರ. ಅವರುಗಳಿಂದ ಕಲಿಯುವುದೂ ಸಾಕಷ್ಟಿದೆ. ಹೀಗಾಗಿ ಅವರ ಜತೆ ಆಡಲು ಎದುರು ನೋಡುತ್ತಿದ್ದೇನೆ.

    *ಹರಾಜು ಪ್ರಕ್ರಿಯೆಗೂ ಮೊದಲು ಎಷ್ಟು ಮೊತ್ತ ನಿರೀಕ್ಷೆ ಮಾಡಿದ್ದಿರಿ?
    -ನಾನು ನಿರ್ದಿಷ್ಟ ಮೊತ್ತವನ್ನು ನಿರೀಕ್ಷೆ ಮಾಡಿರಲಿಲ್ಲ. ಐಪಿಎಲ್‌ನಲ್ಲಿ ಆಡಬೇಕು ಎಂಬುದೇ ನನ್ನ ಪ್ರಮುಖ ಧ್ಯೇಯವಾಗಿತ್ತು. ಇಷ್ಟೇ ಮೊತ್ತ ಬೇಕು ಅಂತ ನಿರೀಕ್ಷೆ ಮಾಡಿರಲಿಲ್ಲ.

    *ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯಲ್ಲಿ ಉತ್ತಮ ನಿರ್ವಹಣೆ ನೀಡಿದ್ದು ಐಪಿಎಲ್ ಆಯ್ಕೆಗೆ ಸಹಾಯವಾಯಿತೇ?
    -ಖಂಡಿತವಾಗಿಯೂ… ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯೇ ಐಪಿಎಲ್ ಆಯ್ಕೆಗೆ ರಹದಾರಿ ಆಯಿತು. ಅಲ್ಲಿ ತೋರಿದ ನಿರ್ವಹಣೆಯಿಂದ ನನ್ನ ಆತ್ಮವಿಶ್ವಾಸವೂ ವೃದ್ಧಿಸಿತು.

    *ಕರ್ನಾಟಕದಿಂದ 16 ಆಟಗಾರರು ಐಪಿಎಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕರ್ನಾಟಕ ಕ್ರಿಕೆಟ್ ಬಗ್ಗೆ ಏನು ಹೇಳಬಯಸುವಿರಿ?
    -ಕರ್ನಾಟ ಪ್ರತಿಭೆಗಳ ಕಣಜ. ಸಾಕಷ್ಟು ಕ್ರಿಕೆಟಿಗರು ನಮ್ಮ ರಾಜ್ಯದಲ್ಲಿದ್ದಾರೆ. ಇದು ಕೂಡ ಐಪಿಎಲ್‌ಗೆ ಹೆಚ್ಚು ಆಟಗಾರರು ಆಯ್ಕೆಯಾಗಲು ಪ್ರಮುಖ ಕಾರಣ. ಕರ್ನಾಟಕದ ನನ್ನ ಎಲ್ಲ ಸಹ-ಆಟಗಾರರು ಅವರ ಫ್ರಾಂಚೈಸಿಗಳ ಪರ ಉತ್ತಮ ನಿರ್ವಹಣೆ ತೋರಲಿದ್ದಾರೆ ಎಂಬ ವಿಶ್ವಾಸ ನನ್ನಲ್ಲಿದೆ.

    *ದೊಡ್ಡ ಮೊತ್ತ ಸಿಕ್ಕಿದೆ.. ಮುಂದಿನ ಯೋಜನೆ ಏನು?
    -ಹಣಕಾಸಿನ ವಿಚಾರದ ಬಗ್ಗೆ ನಾನು ಯಾವುದೇ ತೀರ್ಮಾನ ಮಾಡಿಲ್ಲ. ಮಾಡುವುದೂ ಇಲ್ಲ. ಅದರ ಜವಾಬ್ದಾರಿಯನ್ನು ನನ್ನ ತಂದೆ ನೋಡಿಕೊಳ್ಳುವರು.

    *ಅಭಿನವ್‌ನನ್ನು 6 ವರ್ಷದ ಬಾಲಕ ಆಗಿದ್ದಾಗಿನಿಂದಲೂ ನೋಡುತ್ತಿರುವೆ. ಆರಂಭಿಕ ಹಂತದಲ್ಲಿ ಚೆಂಡನ್ನು ಎದುರಿಸಲು ಸಾಕಷ್ಟು ಭಯ ಪಡುತ್ತಿದ್ದ. 20 ವರ್ಷಗಳಿಂದ ನನ್ನ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾನೆ. ವಿವಿಧ ವಯೋಮಿತಿ ರಾಜ್ಯ ತಂಡಗಳಲ್ಲಿ ಆಡಿದ್ದಾನೆ. ಆತನ ಕಠಿಣ ಶ್ರಮ ಇಲ್ಲಿವರೆಗೂ ತಂದು ನಿಲ್ಲಿಸಿದೆ’
    | ಇರ್ಫಾನ್​ ಸೇಠ್, ಬಾಲ್ಯದ ಕೋಚ್

    *ಸ್ಫೋಟಕ ಬ್ಯಾಟರ್ ಅಭಿನವ್
    ಕೆಪಿಎಲ್ ಟೂರ್ನಿಯಲ್ಲಿ ವಿವಿಧ ಫ್ರಾಂಚೈಸಿಗಳ ಪರ ಮಿಂಚಿದ್ದ ಅಭಿನವ್, 2021-22ನೇ ಸಾಲಿನಲ್ಲಿ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಯಲ್ಲಿ ಮಿಂಚಿನ ಬ್ಯಾಟಿಂಗ್ ಮೂಲಕ ಗಮನಸೆಳೆದಿದ್ದರು. ಆಡಿದ 4 ಇನಿಂಗ್ಸ್‌ಗಳಿಂದ ಸ್ಟ್ರೈಕ್‌ರೇಟ್ 150ರಂತೆ 162 ರನ್ ಬಾರಿಸಿದ್ದರು. ಸೌರಾಷ್ಟ್ರ ಎದುರು ಕೇವಲ 49 ಎಸೆತಗಳಲ್ಲಿ 70 ರನ್ ಸಿಡಿಸಿ ಮಿಂಚಿದ್ದರು.

    ಏಕದಿನ ವಿಶ್ವಕಪ್ ಕಡೆಗಣನೆ ಬಳಿಕ ಬ್ಯಾಟ್ ಕೆಳಗಿಟ್ಟು ಹಾಕಿ ಸ್ಟಿಕ್ ಹಿಡಿದ ಜೆಮೀಮಾ ರೋಡ್ರಿಗಸ್!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts