More

    ಗುಜರಾತ್​ನಲ್ಲಿ ಎಎಪಿಗೆ ಭಾರೀ ಹಿನ್ನಡೆ; ಶಾಸಕ ಸ್ಥಾನಕ್ಕೆ ಭೂಪೇಶ್ ಭಯಾನಿ ರಾಜೀನಾಮೆ

    ಅಹಮದಾಬಾದ್: ಮಹತ್ವದ ಬೆಳವಣಿಗೆ ಒಂದರಲ್ಲಿ ಗುಜರಾತ್​ನ ವಿಸಾವದರ್ ಕ್ಷೇತ್ರದ ಎಎಪಿ ಶಾಸಕ ಭೂಪೇಂದ್ರ ಭಯಾನಿ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಆಡಳಿತರೂಢ ಬಿಜೆಪಿ ಸೇರುವುದಾಗಿ ತಿಳಿಸಿದ್ದಾರೆ.

    ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಆಮ್​ ಆದ್ಮಿ ಪಾರ್ಟಿ 5 ಸ್ಥಾನಗಳಲ್ಲಿ ಗೆಲ್ಲುವ ಮೂಲಕ ರಾಷ್ಟ್ರೀಯ ಪಕ್ಷದ ಸ್ಥಾನಮಾನ ಪಡೆದಿತ್ತು. ಒಂದು ವರ್ಷದ ಬಳಿಕ ಪಕ್ಷದ ಶಾಸಕರೊಬ್ಬರು ರಾಜೀನಾಮೆ ನೀಡಿರುವುದು ಎಎಪಿಗೆ ಭಾರೀ ಹಿನ್ನಡೆಯಾಗಿದೆ. ಗಾಂಧಿನಗರದಲ್ಲಿ ವಿಧಾನಸಭೆ ಅಧ್ಯಕ್ಷ ಶಂಕರ್​ ಚೌಧರಿ ಅವರನ್ನು ಭೇಟಿ ಮಾಡಿದ ಭೂಪೇಂದ್ರ ಭಯಾನಿ ತಮ್ಮ ರಾಜೀನಾಮೆಯನ್ನು ಸಲ್ಲಿಸಿದ್ದಾರೆ.

    ರಾಜೀನಾಮೆ ಸಲ್ಲಿಸಿದ ಬಳಿಕ ಮಾತನಾಡಿದ ಭಯಾನಿ, ಜನಸೇವೆ ಮಾಡಲು ಆಮ್​ ಆದ್ಮಿ ಪಕ್ಷ ಸರಿಯಾದ ವೇದಿಕೆಯಲ್ಲ. ನಾನು ಶೀಘ್ರವೇ ಬಿಜೆಪಿ ಸೇರುತ್ತೇನೆ. ಮೂಲತಃ ನಾನು ಆ ಪಕ್ಷಕ್ಕೇ ಸೇರಿದ್ದೇನೆ. ಶಾಸಕನಾಗುವ ಮೊದಲು 22 ವರ್ಷಗಳ ಕಾಲ ಆ ಪಕ್ಷದಲ್ಲಿ ಕೆಲಸ ಮಾಡಿದ್ದೇನೆ. ಹೈಕಮಾಂಡ್ ಬಯಸಿದರೆ ಉಪ ಚುನಾವಣೆಗೆ ಸ್ಪರ್ಧಿಸುತ್ತೇನೆ. ಎಎಪಿ ತ್ಯಜಿಸಲು ನನಗೆ ಯಾವುದೇ ಒತ್ತಡ ಇರಲಿಲ್ಲ ಎಂದಿದ್ದಾರೆ.

    Resignation

    ಇದನ್ನೂ ಓದಿ: ಲೋಕಸಭೆ ಕಲಾಪ ವೇಳೆ ಭದ್ರತಾ ಲೋಪ; ಅಧಿವೇಶನದ ಪಾಸ್​ ಪಡೆಯಲು ಆರೋಪಿ ಮೂರು ತಿಂಗಳು ಅಲೆದಿದ್ದ

    ಇತ್ತ ತಮ್ಮ ಪಕ್ಷದ ಶಾಸಕ ರಾಜೀನಾಮೆ ನೀಡಿದ ಬೆನ್ನಲ್ಲೇ ಪ್ರತಿಕ್ರಿಯಿಸಿರುವ ಎಎಪಿ ರಾಜ್ಯಾಧ್ಯಕ್ಷ ಇಸುದಾನ್​ ಗದ್ವಿ, ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಬದಲು 156 ಸ್ಥಾನಗಳನ್ನು ಗೆದ್ದಿರುವ ಬಿಜೆಪಿಯು ನಮ್ಮ ಐದು ಶಾಸಕರಿಗೆ ಪಕ್ಷ ಬಿಡುವಂತೆ ಮತ್ತು ತಮ್ಮ ಪಕ್ಷ ಸೇರುವಂತೆ ಒತ್ತಡ ಹೇರುತ್ತಿದೆ. ಎಪಿಪಿ ಅಭ್ಯರ್ಥಿಗೆ ಮತ ನೀಡಿದ ವಿಸಾವದರ್‌ ಕ್ಷೇತ್ರದ ಜನರ ಕ್ಷಮೆ ಕೋರುತ್ತೇನೆ. ಅವರೀಗ ಮತ್ತೊಂದು ಚುನಾವಣೆ ಎದುರಿಸಬೇಕಿದೆ ಎಂದು ಹೇಳಿದ್ದಾರೆ.

    ಭೂಪೇಂದ್ರ ಅವರಿಗೆ ಸಂಬಂಧಿಸಿದಂತೆ ಹೇಳುವುದಾದರೆ, ಒಂದು ವರ್ಷದ ಹಿಂದೆ ಅವರ ಜಯದ ಬಳಿಕವೇ ಬಿಜೆಪಿ ಅವರನ್ನು ಸೆಳೆಯಲು ಯತ್ನಿಸಿತ್ತು. ಬಿಜೆಪಿ ನಾಯಕರು ಪ್ರತಿ ದಿನವೂ ಎಎಪಿಯ ಐವರು ಶಾಸಕರನ್ನು ಭೇಟಿ ಮಾಡಿ ಪಕ್ಷ ಸೇರಲು ಒತ್ತಡ ಹೇರುತ್ತಿದ್ದರು. ಪ್ರಜಾಪ್ರಭುತ್ವವನ್ನು ಕೊನೆಗಾಣಿಸಲು ಬಿಜೆಪಿ ಬಯಸಿದೆ ಎಂದು ಎಎಪಿ ರಾಜ್ಯಾಧ್ಯಕ್ಷ ಇಸುದಾನ್​ ಗದ್ವಿ ಆರೋಪಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts