

ನವದೆಹಲಿ: ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ಬರುವ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ತನ್ನ ಎಲ್ಲ ವಲಯ ಮತ್ತು ಪ್ರಾದೇಶಿಕ ಕಚೇರಿಗಳಿಗೆ ಹೊಸ ಸೂಚನೆಯನ್ನು ಜಾರಿಗೆ ತರಲು ಸುತ್ತೋಲೆ ಹೊರಡಿಸಿದೆ. ಈ ನಿಟ್ಟಿನಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡುವಂತೆ ಆಂತರಿಕ ವ್ಯವಸ್ಥೆ ವಿಭಾಗಕ್ಕೂ ನಿರ್ದೇಶನ ನೀಡಿದೆ. ಈ ಸೂಚನೆಯಲ್ಲಿ ಜನ್ಮ ದಿನಾಂಕಕ್ಕೆ ಪುರಾವೆಯಾಗಿ ಆಧಾರ್ ಕಾರ್ಡ್ಗೆ ಮಾನ್ಯತೆ ನೀಡುವುದಿಲ್ಲ ಎಂದು ಹೇಳಿದೆ.
ಇಪಿಎಫ್‌ಒ, ಸುತ್ತೋಲೆ ಸಂಖ್ಯೆ. ಡಬ್ಲ್ಯುಎಸ್‌ಯು/2024/1/ಯುಐಡಿಎಐ ಮ್ಯಾಟರ್/4090ರ ಪ್ರಕಾರ, ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಹೊರಡಿಸಿದ ನಿರ್ದೇಶನದಂತೆ ಕೇಂದ್ರ ಭವಿಷ್ಯ ನಿಧಿ ಆಯುಕ್ತರ ಅನುಮೋದನೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಆಧಾರ್ ಕಾರ್ಡ್ ಒಂದು ಅನನ್ಯ ಗುರುತು ಪತ್ರವಾಗಿದೆ. ಆದ್ದರಿಂದ ಇದನ್ನು ಗುರುತು ಮತ್ತು ವಿಳಾಸದ ಪುರಾವೆಯಾಗಿ ಬಳಸಬಹುದು ಎಂದು ಹೇಳಿದೆ. ಆದರೆ, ಆಧಾರ್ ಕಾಯ್ದೆ, 2016 ರ ಪ್ರಕಾರ ಜನ್ಮ ದಿನಾಂಕದ ಪುರಾವೆಯಾಗಿ ಆಧಾರ್ ಅನ್ನು ಗುರುತಿಸಲಾಗಿಲ್ಲ ಎಂದು ಅದು ಹೇಳಿದೆ.
“ಆಧಾರ್ ಒಬ್ಬ ನಿವಾಸಿಗೆ ಅವನ/ಅವಳ ಜನಸಂಖ್ಯಾ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಸಲ್ಲಿಸುವ ಮೂಲಕ ದಾಖಲಾತಿ ಪ್ರಕ್ರಿಯೆಗೆ ಒಳಗಾದ ನಂತರ ನೀಡಲಾದ ಅನನ್ಯ 12 ಅಂಕಿಯ ಐಡಿ (ಗುರುತುಪತ್ರ) ಎಂದು ನಮೂದಿಸುವುದು ಸೂಕ್ತವಾಗಿದೆ. ದಾಖಲಾತಿ/ಅಪ್‌ಡೇಟ್ ಸಮಯದಲ್ಲಿ, ಯುಐಡಿಎಐ ವೆಬ್‌ಸೈಟ್‌ನಲ್ಲಿ ಒದಗಿಸಲಾದ ಆಧಾರ್ ದಾಖಲಾತಿಗಾಗಿ ಪೋಷಕ ದಾಖಲೆಗಳ ಪಟ್ಟಿಯಡಿಯಲ್ಲಿ ನಿರ್ದಿಷ್ಟಪಡಿಸಿದಂತೆ, ಅವರು ಸಲ್ಲಿಸಿದ ದಾಖಲೆಗಳ ಆಧಾರದ ಮೇಲೆ, ನಿವಾಸಿಗಳು ಕ್ಲೈಮ್ ಮಾಡಿದ ಜ್ಮ ದಿನಾಂಕವನ್ನು ಯುಐಡಿಎಐ ದಾಖಲಿಸುತ್ತದೆ” ಎಂದು ಯುಐಡಿಎಐ ಹೇಳಿದೆ.