More

    ಆ ಕ್ಷಣ… : ಐಪಿಎಸ್ ಅಧಿಕಾರಿಯ ಕರಾಮತ್ತು!

    ಆ ಕ್ಷಣ... : ಐಪಿಎಸ್ ಅಧಿಕಾರಿಯ ಕರಾಮತ್ತು!ಷಾಜೀ ಮೋಹನ್ ಕೇರಳದ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಪ್ರತಿಭಾವಂತ ವಿದ್ಯಾರ್ಥಿ. ಆತನ ತಂದೆ ವರ್ಗೀಸ್ ಯೋಹಾನನ್ ಭಾರತೀಯ ಸೈನ್ಯದಲ್ಲಿ ಸುಬೇದಾರ್ ಮೇಜರ್ ಆಗಿ ಶೌರ್ಯ ಮೆಡಲ್ ಪಡೆದಿದ್ದರು. ಮೋಹನ್ ತನ್ನ ಬಾಲ್ಯವನ್ನು ಉತ್ತರ ಭಾರತದಲ್ಲಿಯೇ ಕಳೆದ. ಜಬಲ್​ಪುರ್ ವಿಶ್ವವಿದ್ಯಾಲಯದಿಂದ ಪಶುವೈದ್ಯ ಪದವಿ ಪಡೆದ ಮೋಹನ್ ಐಎಎಸ್ ಅಧಿಕಾರಿಯಾಗಬೇಕೆಂದು ಕನಸು ಕಂಡು ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆದ. ಎರಡನೆಯ ಪ್ರಯತ್ನದಲ್ಲಿ ಆತ 1995ರಲ್ಲಿ ಐಪಿಎಸ್ ಹುದ್ದೆಗೆ ಆಯ್ಕೆಯಾದ. ಕೇರಳದಲ್ಲಿ ನೌಕರಿ ಮಾಡುವ ಅವಕಾಶ ದೊರೆಯುತ್ತದೆ ಎಂದು ಭಾವಿಸಿದ್ದ ಆತನಿಗೆ ಜಮ್ಮು-ಕಾಶ್ಮೀರ ರಾಜ್ಯಕ್ಕೆ ನೇಮಕವಾದಾಗ ದುಃಖಿತನಾದ. ಉಪವಿಭಾಗವೊಂದರ ಅಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ನಂತರ ಮೋಹನ್ 1999ರಲ್ಲಿ ಪದೋನ್ನತಿಗೊಂಡು ದೋಡಾ ಜಿಲ್ಲೆಯ ಎಸ್ಪಿಯಾದ. ರಾಜ್ಯದಲ್ಲಿ ಭಯೋತ್ಪಾದನಾ ಘಟನೆಗಳು ಪರಾಕಾಷ್ಠೆ ಮುಟ್ಟಿದ್ದ ಕಾರಣ ಕೇರಳದಲ್ಲಿ ಕೆಲಸ ಮಾಡಬೇಕೆಂದು ಆತ ಕೇಂದ್ರ ಸರ್ಕಾರದ ಎರವಲು ಸೇವೆಗೆ ಹೋಗಲು ಅರ್ಜಿ ಸಲ್ಲಿಸಿದ.

    ಏಳು ವರ್ಷ ಮೋಹನ್ ದೋಡಾ ಜಿಲ್ಲೆಯ ಎಸ್​ಪಿ ಆಗಿಯೇ ಮುಂದುವರಿದ. 2006ರಲ್ಲಿ ಕೇಂದ್ರ ಸರ್ಕಾರ ಅವನ ಅರ್ಜಿ ಪುರಸ್ಕರಿಸಿ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (ಎನ್.ಸಿ.ಬಿ-ಮಾದಕ ಪದಾರ್ಥಗಳ ನಿಯಂತ್ರಣ ಸಂಸ್ಥೆ)ದ ಚಂಡೀಗಢ ಶಾಖೆಗೆ ನೇಮಿಸಿತು. ಕೇರಳಕ್ಕೆ ಹೋಗಲಾಗದಿದ್ದರೂ ಕಾಶ್ಮೀರದಿಂದ ಹೊರಬಂದ ಸಂತಸದಿಂದ ಮೋಹನ್ ಕೂಡಲೇ ಹೊಸ ಹುದ್ದೆಗೆ ಸೇರಿದ.

    ಇಂದಿನಂತೆಯೇ ಆ ಸಮಯದಲ್ಲಿಯೂ ಪಾಕಿಸ್ತಾನದಿಂದ ಭಾರತಕ್ಕೆ ಭಾರಿ ಪ್ರಮಾಣದ ಮಾದಕ ವಸ್ತುಗಳು ಕಳ್ಳಸಾಗಾಣಿಕೆಯಾಗುತ್ತಿದ್ದವು. ಇದನ್ನು ತಡೆಯಲು ಎನ್​ಸಿಬಿ ಗಡಿ ರಾಜ್ಯಗಳ ಪೊಲೀಸರಲ್ಲದೆ ಗಡಿ ಭದ್ರತಾ ಪಡೆಯ ಸಹಕಾರವನ್ನೂ ಪಡೆಯಬೇಕಾಗಿತ್ತು. ಹೆಚ್ಚು ಪ್ರಕರಣಗಳನ್ನು ಪತ್ತೆಮಾಡಲು ಆತ ಕಳ್ಳಸಾಗಾಣಿಕೆ ಜಾಲವೊಂದರ ಪೂರ್ವ ಸದಸ್ಯನಾದ ಖಾದಿರ್ ಎನ್ನುವವನನ್ನು ತನ್ನ ಮಾಹಿತಿದಾರನನ್ನಾಗಿ ನೇಮಿಸಿಕೊಂಡ. ಖಾದಿರ್​ನ ಮಾಹಿತಿ ಮೇರೆಗೆ ಮೋಹನ್ ಹಲವಾರು ಕೋಟಿ ರೂಪಾಯಿ ಬೆಲೆಯ ಮಾದಕ ವಸ್ತುಗಳನ್ನು ವಶಪಡಿಸಿಕೊಂಡ.

    ಕ್ಲಬ್​ಗಳು, ಬಾರ್​ಗಳು, ಡಿಸ್ಕೋ ಪಾರ್ಟಿಗಳಿಗೆ ಖುದ್ದಾಗಿ ಹೋಗುತ್ತಿದ್ದ ಮೋಹನ್ ಮಾದಕ ವಸ್ತುಗಳ ಸಾಗಣೆಯ ಬಗ್ಗೆ ಮಾಹಿತಿ ಸಂಗ್ರಹಿಸತೊಡಗಿದ. ಜೀನ್ಸ್, ಟೀ ಶರ್ಟ್, ಲೆದರ್ ಜಾಕೆಟ್ ಧರಿಸಿ, ಕೂಲಿಂಗ್ ಗ್ಲಾಸ್ ಹಾಕಿ ಪಾರ್ಟಿಗಳಿಗೆ ಹೋದರೆ ಮೋಹನ್ ಪೊಲೀಸ್ ಅಧಿಕಾರಿಯೆಂದು ಯಾರಿಗೂ ತಿಳಿಯುತ್ತಿರಲಿಲ್ಲ. ಆತ ಮಾಡುತ್ತಿದ್ದ ದಾಳಿಗಳ ಬಗ್ಗೆ ಪ್ರತಿದಿನವೂ ಪತ್ರಿಕೆಯಲ್ಲಿ, ಟಿ.ವಿಯಲ್ಲಿ ವರದಿಗಳು ಬರತೊಡಗಿದವು. ಸ್ಥಳೀಯ ಯುವಕರಿಗೆ ಆತ ಹೀರೋ ಆಗಿದ್ದ. ಎನ್​ಸಿಬಿ ಮಾದಕವಸ್ತುಗಳನ್ನು ವಶಪಡಿಸಿಕೊಳ್ಳುವಾಗ ಸ್ಥಳೀಯ ಪೊಲೀಸರು ಸುಮ್ಮನಿರುವ ಬಗ್ಗೆ ಸಾರ್ವಜನಿಕ ಟೀಕೆಗಳು ಕೇಳಿಬಂದವು. ಷಾಜೀ ಮೋಹನ್​ನ ಜನಪ್ರಿಯತೆ ರಾಜ್ಯ ಪೊಲೀಸರ ಕೆಂಗಣ್ಣಿಗೆ ಗುರಿಯಾಯಿತು. ಏತನ್ಮಧ್ಯೆ ಆತನಿಗೂ ಖಾದಿರ್​ಗೂ ಮನಸ್ತಾಪವುಂಟಾಗಿ ಮೋಹನ್​ನ ಮಾಹಿತಿ ಜಾಲ ಕಡಿಯಿತು. ಆಗ ಇನ್ನೊಬ್ಬ ಸ್ಮಗ್ಲರ್ ಮೋಹನ್​ನನ್ನು ಸಂಧಿಸಿ ‘ನನ್ನೊಡನೆ ಶಾಮೀಲಾದರೆ ಭಾರಿ ಹಣವನ್ನು ಕೊಡುವುದಲ್ಲದೆ ನೀವು ಕಾಲಕಾಲಕ್ಕೆ ರೇಡ್ ಮಾಡಿದಾಗ ವಶಪಡಿಸಿಕೊಳ್ಳಲು ಮಾದಕ ವಸ್ತುಗಳನ್ನೂ ನೀಡುವೆ’ ಎಂದ. ಮೋಹನ್ ಅನಾಯಾಸವಾಗಿ ಬಲೆಗೆ ಬಿದ್ದ.

    ಚಂಡೀಗಢದಲ್ಲಿ ಎರಡು ವರ್ಷಗಳ ಸೇವೆ ಪೂರೈಸಿದ್ದರಿಂದ ಮೋಹನ್​ನನ್ನು ಕೇರಳದ ಕೊಚ್ಚಿನ್​ಗೆ ವರ್ಗಾವಣೆ ಮಾಡಲಾಯಿತು. ತಾಯಿನಾಡಿಗೆ ಹೋಗುವೆನೆಂದು ಮೋಹನ್ ಖುಷಿಗೊಂಡಿದ್ದ. ತುರ್ತು ಕೆಲಸಗಳನ್ನು ಪೂರೈಸಲು ಆತ ಚಂಡೀಗಢದಲ್ಲಿಯೇ ಮುಂದುವರಿದಿದ್ದ. ದೆಹಲಿಯಲ್ಲಿನ ಸಭೆಯೊಂದಕ್ಕೆ ಹಾಜರಾಗುವೆನೆಂದು ಹೇಳಿ ಮೋಹನ್ ಒಂದು ದಿನ ಕಾರಿನಲ್ಲಿ ಹೊರಟ.

    ಏತನ್ಮಧ್ಯೆ ಮುಂಬೈನ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಒಬೇರಾಯ್ ಎಂಬ ವ್ಯಕ್ತಿ ಮೇಲೆ ನಿಗಾ ಇಟ್ಟಿತ್ತು. ಈತ ಸಿನಿಮಾತಾರೆಯರು, ಉದ್ಯಮಿಗಳು, ಶ್ರೀಮಂತರು ಹಾಗೂ ಖ್ಯಾತನಾಮರಿಗೆ ಹೆರಾಯಿನ್ ಮುಂತಾದ ಬಹು ಬೆಲೆಯ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದನೆಂಬ ಸಂಶಯವಿತ್ತು. ಒಬೇರಾಯ್ ಸರಬರಾಜು ಮಾಡುತ್ತಿದ್ದ ವಸ್ತುಗಳು ಪಾಕಿಸ್ತಾನದಿಂದಲೇ ಬರುತ್ತಿದ್ದು, ಅವನ್ನು ಭಾರತಕ್ಕೆ ಕಳುಹಿಸುತ್ತಿದ್ದದ್ದು ಅಲ್ಲಿಯ ಒಂದು ಭಯೋತ್ಪಾದಕ ಸಂಘಟನೆ ಎಂದು ಪೊಲೀಸರಿಗೆ ಅನುಮಾನವಿತ್ತು. ಒಬೇರಾಯ್ ಮುಂಬೈನಲ್ಲಿ ಕೆಲವು ಆತಂಕವಾದಿಗಳಿಗೆ ಮಾದಕ ವಸ್ತುಗಳನ್ನು ಮಾರಲಿದ್ದಾನೆ ಎಂಬ ಮಾಹಿತಿ ಮೇರೆಗೆ ಎಟಿಎಸ್ ಅವನಿಗೆ ಹೊಂಚು ಹಾಕುತ್ತಿತ್ತು. 2009ರ ಜನವರಿ 17ರ ಮುಂಜಾನೆ ಓಷಿನಾರಾ ಎಂಬ ಬಡಾವಣೆಯಲ್ಲಿ ಒಬೆರಾಯ್ ಕಣ್ಣಿಗೆ ಬಿದ್ದಾಗ ಎಟಿಎಸ್​ನವರು ಅವನ ಕಾರನ್ನು ತಡೆದು ನಿಲ್ಲಿಸಿ ಶೋಧಿಸಿದಾಗ ಅದರಲ್ಲಿ ಅಂದಿಗೆ -ಠಿ; 15 ಕೋಟಿ ಬೆಲೆಬಾಳುವ ಹದಿಮೂರೂವರೆ ಕಿಲೋ ಹೆರಾಯಿನ್ ಸಿಕ್ಕಿತು. ಕೂಡಲೇ ಒಬೇರಾಯ್ ಮತ್ತು ಕಾರಿನ ಚಾಲಕ ಕಟಾರಿಯಾ ಎನ್ನುವವನನ್ನು ಪೊಲೀಸ್ ಕಚೇರಿಗೆ ಕರೆದೊಯ್ಯಲಾಯಿತು. ಇವರಿಬ್ಬರನ್ನೂ ಪ್ರಶ್ನಿಸಿದಾಗ ಕಟಾರಿಯಾ ‘ನಾನು ಪಂಜಾಬ್ ಪೊಲೀಸಿನ ಹೆಡ್ ಕಾನ್ಸ್​ಟೇಬಲ್. ನಾನು ಚಾಲನೆ ಮಾಡುತ್ತಿದ್ದ ವಾಹನ ಚಂಡೀಗಢದಲ್ಲಿರುವ ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋಗೆ ಸೇರಿದ್ದು. ನಾನು ಷಾಜೀ ಮೋಹನ್ ಎಂಬ ಐಪಿಎಸ್ ಅಧಿಕಾರಿಯ ಕಾರಿನ ಚಾಲಕ. ಸಾಹೇಬರ ಸೂಚನೆಯ ಮೇರೆಗೆ ಒಬೇರಾಯ್ಗೆ ಮುಟ್ಟಿಸಲು ಚಂಡೀಗಢದಿಂದ ಮಾದಕ ವಸ್ತುಗಳನ್ನು ಕಾರಿನಲ್ಲಿ ತಂದಿದ್ದೆ’ ಎಂದ. ಒಬೇರಾಯ್ನನ್ನು ವಿಚಾರಿಸಿದಾಗ ಮೋಹನ್ ಕಾಲಕಾಲಕ್ಕೆ ತನಗೆ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ, ತನ್ನಿಂದ ಹಣ ಪಡೆಯಲು ಬಂದಿರುವ ಆತ ಅಂಧೇರಿ ಬಡಾವಣೆಯಲ್ಲಿರುವ ಒಂದು ಕ್ಲಬ್ಬಿನಲ್ಲಿದ್ದಾನೆಂದು ತಿಳಿಸಿದ. ಪೊಲೀಸರು ಆ ಕ್ಲಬ್​ಗೆ ಹೋಗಿ ಮೋಹನ್​ನನ್ನು ತಮ್ಮೊಡನೆ ಬರಲು ಹೇಳಿದಾಗ ‘ಒಬ್ಬ ಐಪಿಎಸ್ ಅಧಿಕಾರಿಯನ್ನು ಅವೇಳೆಯಲ್ಲಿ ಕರೆಯಲು ನಿಮಗೆಷ್ಟು ಧೈರ್ಯ’ ಎಂದು ಗದರಿದ. ಆಗ ಪೊಲೀಸರು ಒಬೇರಾಯ್ ಮತ್ತು ಕಟಾರಿಯಾನನ್ನು ಹಾಜರುಮಾಡಿದಾಗ ಅವನು ಸುಮ್ಮನಾದ. ಅವನ ಕೋಣೆಯನ್ನು ಶೋಧಿಸಿದಾಗ ಬ್ಯಾಗ್​ನಲ್ಲಿ 12 ಪ್ಯಾಕೆಟ್ ಹೆರಾಯಿನ್ ಇತ್ತು. ಇದಲ್ಲದೆ ಅವನು ಮುಂಬೈನ ಒಂದು ಮನೆಯಲ್ಲಿ ಅಡಗಿಸಿದ್ದ 22 ಕೆಜಿ ಹೆರಾಯಿನ್ ಪತ್ತೆಯಾಯಿತು. ಮೋಹನ್​ನನ್ನು ವಿಚಾರಣೆ ಮಾಡಿದಾಗ ತನ್ನ ಬಳಿ ಸಿಕ್ಕ ಹೆರಾಯಿನ್ ಬಗ್ಗೆಯಾಗಲೀ, ತಾನು ಅನಧಿಕೃತವಾಗಿ ಮುಂಬೈಗೆ ಬಂದದ್ದಕ್ಕಾಗಲೀ ಉತ್ತರ ನೀಡಲಿಲ್ಲ. ಅವನನ್ನು ಬಂಧಿಸಿ ಚಂಡೀಗಢಕ್ಕೆ ಕರೆದುಕೊಂಡು ಹೋಗಿ ಅವನ ಮನೆ ಮತ್ತು ಕಚೇರಿಗಳನ್ನು ಶೋಧ ಮಾಡಲಾಯಿತು. ಏಕೆಂದರೆ ಎನ್​ಸಿಬಿ ವಶಪಡಿಸಿಕೊಂಡಿದ್ದ ಮಾದಕ ವಸ್ತುಗಳನ್ನೇ ಮೋಹನ್ ಮಾರಾಟ ಮಾಡಿದ್ದ ಎಂದು ಅವನ ಚಾಲಕ ತಿಳಿಸಿದ್ದ. ಮನೆಯಲ್ಲಿ ಏನೂ ಸಿಗಲಿಲ್ಲ. ಅವನ ಕಚೇರಿಯ ಉಗ್ರಾಣದಲ್ಲಿದ್ದ ಭಾರಿ ಪ್ರಮಾಣದ ಮಾದಕ ವಸ್ತುಗಳನ್ನು ತೂಕ ಮಾಡಿ ನೋಡಿದಾಗ ಅವು ಕಡತಗಳಲ್ಲಿ ನಮೂದಿಸಿದ್ದ ಪ್ರಮಾಣದಷ್ಟೇ ಇದ್ದವು. ಹಾಗಾದರೆ ಮುಂಬೈಗೆ ತಂದಿದ್ದ 35 ಕಿಲೋ ಹೆರಾಯಿನ್ ಎಲ್ಲಿಂದ ಬಂದಿತು ಎಂದು ಮೋಹನ್​ನನ್ನು ಕೇಳಿದಾಗ ‘ನನಗೇನೂ ಗೊತ್ತಿಲ್ಲ’ ಎಂದ.

    ಅಷ್ಟರಲ್ಲಿ ಆ ಕಚೇರಿಯ ಅಧಿಕಾರಿಯೊಬ್ಬ ದಾಸ್ತಾನಾಗಿರುವ ಮಾದಕ ವಸ್ತುಗಳ ರಾಸಾಯನಿಕ ಪರೀಕ್ಷೆ ಮಾಡಿಸಿ ಎಂದು ಗುಪ್ತವಾಗಿ ಸೂಚಿಸಿದ. ಅಂತೆಯೇ ತಜ್ಞರು ಪರೀಕ್ಷಿಸಿದಾಗ, ಅದರಲ್ಲಿ 50 ಕೆಜಿಯಷ್ಟು ಕಳವು ಮಾಡಿ ಅದರ ಬದಲಾಗಿ ಸುಣ್ಣದ ಪುಡಿ ಬೆರೆಸಿದ್ದು ತಿಳಿದುಬಂದಿತು. ಮಾದಕ ವಸ್ತುಗಳನ್ನು ಜಪ್ತಿ ಮಾಡಿದ ನಂತರ ಷಾಜೀ ಮೋಹನ್ ಕಾಲಕಾಲಕ್ಕೆ ಎರಡು-ಮೂರು ಕಿಲೋ ತನ್ನಲ್ಲಿಟ್ಟುಕೊಂಡು ಅಷ್ಟೇ ಪ್ರಮಾಣದ ಸುಣ್ಣದ ಪುಡಿಯನ್ನು ಮಿಶ್ರಣ ಮಾಡುತ್ತಿದ್ದ ಅಂಶ ತಿಳಿಯಿತು. ಕಳ್ಳತನ ಮಾಡಿದ್ದ ಹೆರಾಯಿನ್ ಅನ್ನು ಆತ ಮುಂಬೈ ಅಲ್ಲದೆ ಸ್ಥಳೀಯ ಕಳ್ಳಸಾಗಾಣಿಕೆದಾರರಿಗೂ ಮಾರುತ್ತಿದ್ದ. ಒಂದು ವರ್ಷದಲ್ಲಿ -ಠಿ; 40 ಕೋಟಿ ಬೆಲೆಯ 50 ಕೆಜಿ ಮಾದಕ ವಸ್ತು ಕಳ್ಳತನ ಮಾಡಿದ್ದ.

    ಆ ಸಮಯದಲ್ಲಿ ಜಮ್ಮು-ಕಾಶ್ಮೀರದ ನಾರ್ಕೋಟಿಕ್ ಬ್ಯೂರೋ ಕಚೇರಿಯೂ ಮೋಹನ್​ನ ವ್ಯಾಪ್ತಿಯಲ್ಲಿಯೇ ಬರುತ್ತಿದ್ದ ಕಾರಣ ಆ ಕಚೇರಿಯ ತಪಾಸಣೆ ಮಾಡಿದಾಗ ಅಲ್ಲಿಯೂ ಜಪ್ತಿ ಮಾಡಿದ ಮಾದಕವಸ್ತುಗಳನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿತು. ಇಷ್ಟು ಸಾಲದೆಂಬಂತೆ ಮೋಹನ್ ಚಂಡೀಗಢದ ತನ್ನ ಕಚೇರಿಯಲ್ಲಿ 8 ಲಕ್ಷ ರೂಪಾಯಿಗಳನ್ನು ದುರುಪಯೋಗ ಮಾಡಿದ್ದ. ಆತನ ಮೇಲೆ ಎರಡು ಬೇರೆ ಬೇರೆ ಪ್ರಕರಣಗಳನ್ನು ದಾಖಲು ಮಾಡಿ ನ್ಯಾಯಾಲಯಕ್ಕೆ ಆರೋಪಪಟ್ಟಿಯನ್ನು ಸಲ್ಲಿಸಿದಾಗ ಒಬ್ಬ ಹಿರಿಯ ಐಪಿಎಸ್ ಅಧಿಕಾರಿ ಹೀಗೆ ಮಾಡಲು ಸಾಧ್ಯವೇ ಎಂದು ಎಲ್ಲರೂ ಚಕಿತರಾದರು. ಕಾಶ್ಮೀರ ಆತಂಕವಾದಿಗಳ ವಿರುದ್ಧದ ಕಾರ್ಯಾಚರಣೆಗೆ ರಾಷ್ಟ್ರಪತಿಗಳ ಶೌರ್ಯ ಪದಕ ಗಳಿಸಿದ್ದ ಮೋಹನ್​ಗೆ ಮುಂಬೈನ ಪ್ರಕರಣದಲ್ಲಿ 15 ವರ್ಷ, ಚಂಡೀಗಢದ ಪ್ರಕರಣದಲ್ಲಿ 5 ವರ್ಷ ಕಾರಾಗೃಹವಾಸವಾಯಿತು. 52 ವರ್ಷ ವಯಸ್ಸಿನ ಮೋಹನ್ ಕಾರಾಗೃಹಕ್ಕೆ ಹೋದ ನಂತರ ಆತನ ತಾಯಿ ಕೊರಗಿನಿಂದ ಅಸುನೀಗಿದರು.

    ‘ಅಧಿಕಾರವು ಭ್ರಷ್ಟತೆಯನ್ನುಂಟುಮಾಡುತ್ತದೆ ಹಾಗೂ ಅತಿಯಾದ ಅಧಿಕಾರ ಅತಿಯಾದ ಭ್ರಷ್ಟತೆಯನ್ನುಂಟುಮಾಡುತ್ತದೆ’ ಎಂದ 19ನೇ ಶತಮಾನದ ಬ್ರಿಟಿಷ್ ಸಂಸದ ಲಾರ್ಡ್ ಆಕ್ಟನ್​ನ ಮಾತುಗಳಿಗೆ ಮೋಹನ್ ಸೂಕ್ತ ನಿದರ್ಶನ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts