More

    ಮಾರುಕಟ್ಟೆಯಲ್ಲಿ ರಾಡಿ.. ತೆಗ್ಗು ಗುಂಡಿ..

    ಹುಬ್ಬಳ್ಳಿ: ಇದು ಹುಬ್ಬಳ್ಳಿಯ ‘ಗೇಟ್ ವೇ ಆಫ್ ಇಂಡಿಯಾ’. ಗಬ್ಬೂರ ಕ್ರಾಸ್ ಮತ್ತು ಬಂಕಾಪುರ ಚೌಕ!

    ನಗರಕ್ಕೆ ಖರೀದಿಗೆ ಬರುವ ಬಹುತೇಕರು ಬಂಕಾಪುರ ಚೌಕದ ಮೂಲಕವೇ ಮಾರುಕಟ್ಟೆ ಪ್ರದೇಶದತ್ತ ಹೆಜ್ಜೆ ಹಾಕುತ್ತಾರೆ.

    ಹೌದು, ಬಂಕಾಪುರ ಚೌಕದಿಂದ ಕಿರಾಣಿ ಹೋಲ್​ಸೇಲ್ ಮಾರ್ಕೆಟ್ ಇರುವ ಅಕ್ಕಿಹೊಂಡವು ಸಮೀಪದಲ್ಲೇ ಇದೆ. ಬಟ್ಟೆ ಅಂಗಡಿಗಳಿರುವ ಜವಳಿಸಾಲ ಕೂಡ ಇಲ್ಲಿಂದ ದೂರವಲ್ಲ. ಬಂಗಾರದ ಸಾಲುಸಾಲು ಅಂಗಡಿಗಳಿರುವ ಸರಾಫ ಗಟ್ಟಿಗೂ ಇದು ಹತ್ತಿರ. ಹಾರ್ಡ್​ವೇರ್, ಗೃಹೋಪಯೋಗಿ ವಸ್ತುಗಳ ಖರೀದಿಗಾಗಿ ಹೆಚ್ಚು ಜನ ಬರುವ ಹಿರೇಪೇಟೆ, ಮೂರುಸಾವಿರ ಮಠದ ಏರಿಯಾ, ಮಹಾವೀರ ಗಲ್ಲಿಗಳೂ ಬಹಳ ದೂರವಲ್ಲ. ಆದರೆ, ಸ್ಮಾರ್ಟ್ ಸಿಟಿ ಕಾಮಗಾರಿ ಆರಂಭವಾದ ನಂತರ ಇವೆಲ್ಲವೂ ಬಹಳಷ್ಟು ದೂರವಾಗಿ ಬಿಟ್ಟಿವೆ!!

    ಬಂಕಾಪುರ ಚೌಕದಿಂದ ಭೂಸಪೇಟೆ, ಅಕ್ಕಿಹೊಂಡ, ಕಂಚಗಾರ ಗಲ್ಲಿ ದಾಟಿ ಕಾಳಮ್ಮನ ಅಗಸಿ ತಲುಪಲು ಸುಮಾರು ಒಂದು ಕಿ.ಮೀ. ಅಂತರ. ನಡೆದುಕೊಂಡು ಹೋದರೆ ಹೆಚ್ಚೆಂದರೆ 10-15 ನಿಮಿಷ ಸಾಕು. ಆದರೆ, ಸದ್ಯ ಈ ಅಂತರವನ್ನು ವಾಹನದಲ್ಲಿ ಕ್ರಮಿಸಬೇಕಾದರ ಅರ್ಧ ಗಂಟೆಗೂ ಅಧಿಕ ಸಮಯ ಬೇಕು. ಸಾಮಾನ್ಯ ದಿನಗಳಲ್ಲಿ ವಾಹನದ ಮೂಲಕ ಈ ಮಾರ್ಗ ಕ್ರಮಿಸಲು 5 ನಿಮಿಷವೂ ಬೇಡ.

    ಇನ್ನು ಇದರ ಅಕ್ಕಪಕ್ಕವೇ ಇರುವ ಮಾರುಕಟ್ಟೆ ಪ್ರದೇಶಗಳಲ್ಲಿ ಸಂಚರಿಸುವುದೆಂದರೆ ಸರ್ಕಸ್ಸು ಮಾಡಿದಂತೆ ಸರಿ.

    ಪೇಪರ್, ಆಮಂತ್ರಣ ಪತ್ರಿಕೆ, ಬುಕ್​ಸ್ಟಾಲ್ ಅಂಗಡಿಗಳೇ ಹೆಚ್ಚಾಗಿರುವ ಕುಬಸದ ಗಲ್ಲಿಯ ಪರಿಸ್ಥಿತಿಯಂತೂ ತೀರ ಹದಗಟ್ಟಿದೆ. ಇಲ್ಲಿ ಟಾರ್ ರಸ್ತೆಯೇ ಕಾಣುವುದಿಲ್ಲ. ರಸ್ತೆ ತುಂಬ ಮಣ್ಣು ಮೆತ್ತಿಕೊಂಡಿದೆ. ಜೋರಾಗಿ ಮಳೆಬಂದರಂತೂ ರಂಭಾರಾಡಿ.

    ಸಿಂಪಿ ಗಲ್ಲಿ, ಹಿರೇಪೇಟೆ, ಜವಳಿಸಾಲ, ಬೆಳಗಾವಿ ಗಲ್ಲಿ, ದಾಜಿಬಾನಪೇಟೆ ಮುಂತಾದ ಮಾರುಕಟ್ಟೆ ಪ್ರದೇಶಗಳಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಲ್ಲ.

    ಹೀಗೇಕೆ?:

    ಮೊದಲೇ ಈ ಮಾರುಕಟ್ಟೆ ಪ್ರದೇಶಗಳಲ್ಲಿ ಸಂಚರಿಸುವುದು ಕಷ್ಟಕರ. ಈಗ ಇಲ್ಲಿ ಸಂಚಾರ ಇನ್ನಷ್ಟು ದುಸ್ತರವಾಗಿರುವುದೇಕೆ?

    ಇದಕ್ಕೆ ಕಾರಣ, ಸ್ಮಾರ್ಟ್ ಸಿಟಿ ಪ್ರೖೆವೇಟ್ ಲಿಮಿಟೆಡ್ ವತಿಯಿಂದ ಕೈಗೊಳ್ಳಲಾಗಿರುವ 44.44 ಕೋಟಿ ರೂಪಾಯಿ ವೆಚ್ಚದ ಗಟಾರ್ ನಿರ್ಮಾಣ ಹಾಗೂ ರಸ್ತೆ ಸುಧಾರಣೆ ಕಾಮಗಾರಿ.

    ವ್ಯವಸ್ಥಿತ ಯೋಜನೆ ಇಲ್ಲದೆ, ಸೂಕ್ತ ಸಮಯಕ್ಕೂ ಕಾಯದೇ ಮನತೋಚಿದಂತೆ ಈ ಕಾಮಗಾರಿಯನ್ನು ಮಾರುಕಟ್ಟೆ ಪ್ರದೇಶದಲ್ಲಿ ಕೈಗೊಂಡಿರುವುದು ಸಂಚಾರಕ್ಕೆ ಸಂಚಕಾರ ತಂದಿಟ್ಟಿದೆ.

    ಈ ಕಾಮಗಾರಿಯಡಿ ಈ ಪ್ರದೇಶಗಳಲ್ಲಿ ಗಟಾರ್ ನಿರ್ವಿುಸಲು ಸುಮಾರು ಎರಡು ಅಡಿ ಅಗಲ ಹಾಗೂ ಎರಡು ಅಡಿ ಆಳದ ತಗ್ಗು ತೆಗೆಯಲಾಗಿದೆ. ಕೆಲವೆಡೆ ಒಂದೇ ಬದಿ ಮಾತ್ರ, ಇನ್ನೊಂದಿಷ್ಟ ಕಡೆ ಎರಡೂ ಬದಿಯಲ್ಲಿ ಗಟಾರಕ್ಕಾಗಿ ತಗ್ಗು ತೋಡಲಾಗಿದೆ. ಈ ತಗ್ಗುಗಳಿಂದ ತೆಗೆದ ಮಣ್ಣನ್ನು ಪಕ್ಕದಲ್ಲೇ ರಸ್ತೆ ಮೇಲೆಯೇ ಸುರಿಯಲಾಗಿದೆ. ಹೀಗಾಗಿ, ಮೊದಲೇ ಇಕ್ಕಟ್ಟಾದ ರಸ್ತೆಗಳಲ್ಲಿ ಅರ್ಧದಷ್ಟು ಭಾಗವನ್ನು ತಗ್ಗು ಹಾಗೂ ಅದರ ಮಣ್ಣು ಆಕ್ರಮಿಸಿಕೊಂಡಿದೆ. ಇದರಿಂದಾಗಿ, ಕೆಲವೆಡೆ ಜನ ಹಾಗೂ ವಾಹನ ಸಂಚಾರಕ್ಕೆ ನಾಲ್ಕೈದು ಅಡಿ ಮಾತ್ರ ಜಾಗ ಉಳಿದುಕೊಂಡಿದೆ. ಒಂದು ಆಟೋ ಬಂದರೆ, ಎದುರಿನಿಂದ ಕಾರು ಆಗಮಿಸಿದರೆ ಎರಡೂ ಪಾಸ್ ಆಗಲು ಜಾಗವಿಲ್ಲದೆ ಸವಾರರು ಜಗಳ ಆಡಬೇಕಾದ ಪರಿಸ್ಥಿತಿ ತಲೆದೋರಿದೆ.

    ಈಗ ಹೇಳಿ ಕೇಳಿ ಮಳೆಗಾಲ. ಜಿಟಿಜಿಟಿ ಮಳೆ ಬಂದರೂ ಸಾಕು ಬೈಕ್ ಸವಾರರು ಜಾರುಬಂಡಿ ಆಟ ಆಡಬೇಕಾಗುತ್ತದೆ. ಬ್ಯಾಲೆನ್ಸ್ ತಪ್ಪಿದರೆ ಗಟಾರಕ್ಕೆ ತೆಗೆದ ಗುಂಡಿಗೆ ಬೀಳುವುದು ಗ್ಯಾರಂಟಿ ಎಂಬಂತಾಗಿದೆ. ಹೀಗಾಗಿ, ಬಹಳಷ್ಟು ಜನರು ಈ ರಸ್ತೆಗಳಲ್ಲಿ ಸಂಚರಿಸುವುದೇ ಬೇಡ ಎಂದು ಮಾರುಕಟ್ಟೆ ಪ್ರದೇಶದಿಂದ ದೂರವೇ ಉಳಿಯುತ್ತಿದ್ದಾರೆ.

    ಮಳೆ ಬಂತು ಅಂದ್ರ, ಗದ್ದೆ ರಾಡಿಯಲ್ಲಿ ಬೇಕಾದ್ರೂ ಓಡಾಡಬಹುದ್ರಿ. ಹುಬ್ಬಳ್ಳಿಯಲ್ಲಿ ಮಾತ್ರ ಓಡಾಡಕ ಆಗ್ವಲ್ದು. ಅಭಿವೃದ್ಧಿ ಕೆಲಸ ಮಾಡ್ಲಿ, ಯಾರು ಬ್ಯಾಡಾ ಅನ್ನಂಗ್ಹಿಲ್ಲ. ಆದ್ರ, ಸರಿಯಾಗಿ ಮಾಡ್ಲಿ. ಮೊದಲೇ ಲಾಕ್ ಡೌನ್​ನಿಂದ ಜನ ಕಂಗಾಲ ಆಗ್ಯಾರ. ಈಗ ಊರು ತುಂಬ ಅಗ್ದು, ಮಣ್, ರಾಡಿ ಮಾಡ್ಯಾರ್. ಪ್ಯಾಟಿ ಕಡಿ ಜನ ಬರಾಕ ಹಿಂದ್-ಮುಂದ್ ನೋಡೋ ಸ್ಥಿತಿ ಐತಿ. ಗಾಡಿ ನಿಂತಲ್ಲೇ ನಿಂತ ಇರ್ತಾವ… ಟ್ರಾಫಿಕ್ ಜಾಮ್ ಒಟ್ಟಾ ಈ ಕೆಲಸದ ಕ್ರಮ ನೋಡಿದ್ರ ಬ್ಯಾಸರ ಆಗತೈತಿ. ಹೀಂಗಾದ್ರ ಊರು ಚೋಲೋ ಆದ್ಹಾಂಗ.

    | ಮೃತ್ಯುಂಜಯ ಹಿರೇಮಠ, ಸ್ಥಳೀಯರು, ಮೂರು ಸಾವಿರ ಮಠದ ಹತ್ತಿರ

    ಈ ಕೆಲಸ ಆಗುವ ಮೊದಲು ಬಂಕಾಪುರ ಚೌಕದಿಂದ ಅಕ್ಕಿಹೊಂಡ ಮಾರ್ಗವಾಗಿ ಚನ್ನಮ್ಮ ಸರ್ಕಲ್​ಗೆ 20 ನಿಮಿಷಕ್ಕೆ ತಲುಪಬಹುದಿತ್ತು. ಈಗ ಸ್ಮಾರ್ಟ್ ಸಿಟಿ ಕೆಲಸ ಎಂದು ಎಲ್ಲ ಕಡೆ ಮಣ್ಣಿನ ರಾಶಿ ಹಾಕಿದ್ದಾರೆ. ಈಗ ಒಂದು ತಾಸು ಬೇಕು. ಒಂದು ಕಡೆಯಿಂದ ಮತ್ತೊಂದು ಕಡೆಗೆ ಬೇಗ ತಲುಪತ್ತೇವೆ ಎನ್ನುವ ಆಸೆ ಬಿಟ್ಟು ಮನೆಯಿಂದ ಹೊರಡಬೇಕಾಗಿದೆ. ಮಳೆಗಾಲದಲ್ಲಿ ಇಂತಹ ಕೆಲಸ ಮಾಡಿದ್ರೆ ಪ್ರಯೋಜನ ಇಲ್ಲ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.

    | ವಿನಾಯಕ ಜೋಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts