More

    ರೇಷ್ಮೆ ಬೆಲೆ ತೀವ್ರ ಕುಸಿತ

    ಶಿರಸಿ: ಜಿಲ್ಲೆಯ ಪಾಲಿಗೆ ಅಳಿವಿನಂಚಿನಲ್ಲಿರುವ ರೇಷ್ಮೆ ಕೃಷಿಯು ಪ್ರಸಕ್ತ ವರ್ಷ ಕರೊನಾ ಲಾಕ್​ಡೌನ್ ಕಾರಣಕ್ಕೆ ಇನ್ನಷ್ಟು ಕೃಷವಾಗಿದೆ. ರೇಷ್ಮೆ ಗೂಡಿನ ಧಾರಣೆ ಜತೆಗೆ ರೇಷ್ಮೆ ಬೆಲೆ ಕುಸಿದ ಕಾರಣ ಇದನ್ನೇ ನೆಚ್ಚಿಕೊಂಡಿದ್ದ ರೈತರು ಅತಂತ್ರರಾಗಿದ್ದಾರೆ.

    ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳಲ್ಲಿ ರೇಷ್ಮೆ ಕೃಷಿ ಸ್ವಲ್ಪ ಪ್ರಮಾಣದಲ್ಲಿ ಜೀವ ಉಳಿಸಿಕೊಂಡಿದ್ದು, ಶಿರಸಿ, ಮುಂಡಗೋಡ ಮತ್ತು ಹಳಿಯಾಳ ಭಾಗದಲ್ಲಿ ರೇಷ್ಮೆ ಬೆಳೆಗಾರರ ಸಂಖ್ಯೆ ಹೆಚ್ಚಿದೆ. ಒಟ್ಟು 435 ರೇಷ್ಮೆ ಬೆಳೆಗಾರರಿದ್ದು, 518 ಎಕರೆ ಪ್ರದೇಶದಲ್ಲಿ ಹಿಪ್ಪನೇರಳೆ ಕೃಷಿ ನಡೆಸಿದ್ದಾರೆ. 23,670 ರೇಷ್ಮೆ ಗೂಡುಗಳ ಛಾಟಿಯಿದ್ದು, 2020-21ನೇ ಸಾಲಿನಲ್ಲಿ 15.521 ಮೆಟ್ರಿಕ್ ಟನ್ ಗೂಡು ಉತ್ಪಾದನೆ ಮಾಡಿದ್ದಾರೆ. ಆದರೆ, ಮೂರು ತಿಂಗಳ ಹಿಂದೆ 500 ರೂ. ಗಡಿಯಲ್ಲಿದ್ದ ಕೆ.ಜಿ. ರೇಷ್ಮೆ ಕರೊನಾ ಲಾಕ್​ಡೌನ್ ಕಾರಣಕ್ಕೆ ದಿಢೀರ್ ಆಗಿ 250ಕ್ಕೆ ಇಳಿಕೆಯಾಗಿದೆ. ರೇಷ್ಮೆ ಗೂಡು 1 ಕೆ.ಜಿ.ಗೆ 500 ರೂ. ಇದ್ದಾಗ ರೇಷ್ಮೆ ಕೆಜಿಗೆ 4,500 ರೂ. ಇತ್ತು. ಈಗ ಕೆ.ಜಿ. ಗೂಡು 250 ರೂ. ಇದ್ದರೂ ಕೆಜಿ ರೇಷ್ಮೆಯು 2,200 ರೂ. ಆಸುಪಾಸಿನಲ್ಲಿದೆ. ಹೀಗಾಗಿ, ಸಂಕಷ್ಟದ ನಡುವೆಯೇ ರೇಷ್ಮೆ ಬೆಳೆಯುತ್ತಿದ್ದ ಬೆಳೆಗಾರರು ಮತ್ತೆ ಸಂಕಷ್ಟಕ್ಕೆ ಒಳಗಾಗಿದ್ದಾರೆ.

    ರೇಷ್ಮೆ ಕೃಷಿ ತ್ಯಜಿಸಿದ ರೈತ: ಕರೊನಾ ಲಾಕ್​ಡೌನ್ ಕಾರಣಕ್ಕೆ ಮದುವೆ, ಹಬ್ಬ, ಜಾತ್ರೆ, ಶುಭ ಸಮಾರಂಭಗಳಿಗೆ ಬ್ರೇಕ್ ಬಿದ್ದಿದೆ. ಹೀಗಾಗಿ, ಮಾರಾಟದಲ್ಲೂ ಭಾರಿ ತೊಡಕಾಗಿದೆ. ರೈತ ರೇಷ್ಮೆ ಗೂಡು ಬೆಳೆಯಲು ಖರೀದಿ ಮಾಡುವ ರಸಗೊಬ್ಬರ, ಔಷಧ, ರೇಷ್ಮೆಹುಳು ಇದೆಲ್ಲವೂ ಕಡಿಮೆಯಾಗಿಲ್ಲ. ಎಲ್ಲ ಬೆಲೆಯು ದಿನದಿಂದ ದಿನಕ್ಕೆ ಏರಿಕೆ ಆಗುತ್ತಿದೆ. ಆದರೂ ಹೆಚ್ಚು ಹಣ ಕೊಟ್ಟು ಖರೀದಿಸುವ ರೈತ ತಾನು ಬೆಳೆದ ರೇಷ್ಮೆ ಗೂಡಿಗೆ ಖರ್ಚಿನ ಮೇಲೆ ಇಷ್ಟೇ ಲಾಭಾಂಶ ಬೇಕೆಂದು ಬೆಲೆ ನಿಗದಿ ಮಾಡಿ ಮಾರಾಟ ಮಾಡಲಾಗುತ್ತಿಲ್ಲ. 1 ಕೆ.ಜಿ. ರೇಷ್ಮೆ ಗೂಡು ಉತ್ಪಾದನೆಗೆ ಕನಿಷ್ಠ 300 ರೂ. ಖರ್ಚಾಗುತ್ತಿದ್ದರೂ ಮಾರುಕಟ್ಟೆಯಲ್ಲಿ 250 ರೂ. ಸಿಗುತ್ತಿಲ್ಲ. ಇದು ಬೆಳೆಗಾರರ ನಿರುತ್ಸಾಹಕ್ಕೆ ಕಾರಣವಾಗಿದೆ. ಈಗಾಗಲೇ 50ಕ್ಕೂ ಹೆಚ್ಚು ಬೆಳೆಗಾರರು ರೇಷ್ಮೆ ಕೃಷಿ ತ್ಯಜಿಸಲು ಮುಂದಾಗಿದ್ದಾರೆ.

    ಸರ್ಕಾರವೇ ಪರಿಹಾರ ಸೂಚಿಸಲಿ: ಜಿಲ್ಲೆಯಲ್ಲಿ ಕಳೆದ 15 ವರ್ಷದಲ್ಲಿ ರೇಷ್ಮೆ ಪ್ರಗತಿ ಸಾಕಷ್ಟು ಏರಿಳಿತ ಕಂಡಿದೆ. ಇತ್ತೀಚಿನ ದಿನಗಳಲ್ಲಿ ಹೌದೋ ಅಲ್ಲವೋ ಎಂಬಷ್ಟು ರೇಷ್ಮೆ ಉತ್ಪಾದನೆ ಆಗುತ್ತಿದೆ. ಈ ನಡುವೆಯೂ ಕೆಲವರು ಉತ್ಸಾಹದಿಂದ ರೇಷ್ಮೆ ಕೃಷಿ ಮಾಡುತ್ತಿದ್ದು, ಇಲಾಖೆಯ ಜೀವಂತಿಕೆಗೆ ಸಹಕಾರ ನೀಡುತ್ತಿದ್ದಾರೆ. ಇದೀಗ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಆದರೆ, ಸರ್ಕಾರ ಹಾಗೂ ಇಲಾಖೆಯಿಂದ ಯಾವುದೇ ಸ್ಪಂದನೆಯಿಲ್ಲ. ಈ ಬಾರಿ ಲಾಕ್​ಡೌನ್​ಗಿಂತ ಮುಂಚೆ ರೇಷ್ಮೆ ಗೂಡಿನ ಬೆಲೆ 500 ರೂ. ಗರಿಷ್ಠ ಮಟ್ಟ ತಲುಪಿತ್ತು. ಆಗ ರೇಷ್ಮೆ ಗೂಡು ಹೆಚ್ಚಾಗಿ ಮಾರುತ್ತಿದ್ದರು. ಈಗ 1 ಕೆ.ಜಿ. ಗೂಡು 200 ರಿಂದ 250 ರೂ. ಇದೆ. ಸರ್ಕಾರ ರೇಷ್ಮೆ ಬೆಲೆ ಕಡಿಮೆಯಾದಾಗ ಬೆಂಬಲ ಬೆಲೆಯಡಿ ಕೆ.ಜಿ.ಗೆ 30 ರೂ. ಕೊಡುತ್ತಿತ್ತು. ಅದನ್ನು ಕೂಡ ಸ್ಥಗಿತ ಮಾಡಲಾಗಿದೆ. ರೇಷ್ಮೆ ಬೆಲೆ ಕಡಿಮೆ ಆಗಿರುವುದರಿಂದ ರೀಲರ್ಸ್ ಜತೆ ಬೆಳೆಗಾರರೂ ಸಹ ತೊಂದರೆಯಲ್ಲಿದ್ದಾರೆ. ಸರ್ಕಾರವೇ ಇದಕ್ಕೆ ಪರಿಹಾರ ಸೂಚಿಸಬೇಕು ಎಂಬುದು ಬೆಳೆಗಾರರ ಮಾತಾಗಿದೆ.

    ಕರೊನಾದಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸರ್ಕಾರವು ರೇಷ್ಮೆ ಬೆಳಗಾರರ ಸಹಕಾರಕ್ಕೆ ಬರಬೇಕು. ಬೆಂಬಲ ಬೆಲೆಯಡಿ ಪ್ರೋತ್ಸಾಹ ಧನ ನೀಡಬೇಕು. ತೋಟಗಾರಿಕೆ ಬೆಳೆಗೆ ಪರಿಹಾರ ನೀಡದಂತೆ ರೇಷ್ಮೆ ಬೆಳೆಗಾರರಿಗೂ ಪರಿಹಾರ ನೀಡಬೇಕು. ಇಲ್ಲವಾದರೆ ಜಿಲ್ಲೆಯಲ್ಲಿ ರೇಷ್ಮೆ ಕೃಷಿ ಅವಸಾನವಾಗಲಿದೆ.

    | ಸದಾಶಿವಪ್ಪ ಹಳಿಯಾಳ ರೇಷ್ಮೆ ಕೃಷಿಕ

    ಕಳೆದ ವರ್ಷದ ಲಾಕ್​ಡೌನ್ ಸಮಯದಲ್ಲಿ ಕರ್ನಾಟಕ ಸಿಲ್ಕ್ ಮಾರ್ಕೆಟಿಂಗ್ ಬೋರ್ಡ್ (ಕೆಎಸ್​ಎಂಬಿ) ರೇಷ್ಮೆ ಖರೀದಿ ಮಾಡಿ ರೀಲರ್ಸ್​ಗೆ ಬೆಂಬಲವಾಗಿ ನಿಂತಿತ್ತು. ಈ ಬಾರಿ ರೇಷ್ಮೆ ಬೆಲೆಯು ಕುಸಿತವಾಗಿ ರೀಲರ್ಸ್ ಸಂಕಷ್ಟದಲ್ಲಿದ್ದರೂ ಕೆಎಸ್​ಎಂಬಿನವರು ರೇಷ್ಮೆ ಖರೀದಿ ಮಾಡಿಲ್ಲ. ಈ ನಡೆಯಿಂದ ಬೆಳೆಗಾರರಿಗೆ ದೊಡ್ಡ ಪೆಟ್ಟಾಗಿದೆ.

    ಹೆಸರು ಹೇಳಲಿಚ್ಛಿಸದ ರೇಷ್ಮೆ ಇಲಾಖೆ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts