More

    ಮಹಾಗಣಪತಿ ರಥೋತ್ಸವಕ್ಕೆ ಹರಿದುಬಂದ ಭಕ್ತಸಾಗರ

    ಸಾಗರ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಮಹಾಗಣಪತಿ ದೇವರ ಮಹಾಸ್ಯಂಧನ ರಥೋತ್ಸವ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಮಹಾಗಣಪತಿ ಉತ್ಸವ ಮೂರ್ತಿಯನ್ನು ಪಲ್ಲಕ್ಕಿ ಉತ್ಸವದ ನಂತರ ರಥದಲ್ಲಿ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಳಗ್ಗೆ 7.45ರ ಶುಭ ಮುಹೂರ್ತದಲ್ಲಿ ರಥವನ್ನು ಎಳೆಯಲಾಯಿತು.

    ವಿಶೇಷ ಪೂಜೆ ಸಲ್ಲಿಸಿ ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ, ಕಳೆದ ವರ್ಷದ ರಥೋತ್ಸವ ವೇಳೆ ನನಗೆ ಟಿಕೆಟ್ ಘೋಷಣೆಯಾಗಿತ್ತು. ಈ ವರ್ಷ ರಥೋತ್ಸವದಲ್ಲಿ ಪಾಲ್ಗೊಳ್ಳುವ ಅವಕಾಶವನ್ನು ಶ್ರೀ ಮಹಾಗಣಪತಿ ನನಗೆ ಕಲ್ಪಿಸಿದ್ದು, ಬೇಡಿದ ವರವ ನೀಡುವ ಕಲ್ಪವೃಕ್ಷ ಎನ್ನುವುದು ಭಕ್ತರ ಅಭಿಮತವಾಗಿದೆ ಎಂದು ಹೇಳಿದರು.
    200 ವರ್ಷಗಳಷ್ಟು ಹಳೆಯ ರಥ ಇದಾಗಿದ್ದು, ಈ ವರ್ಷ ಉತ್ತಮ ಮಳೆಯಾಗಿ, ಉತ್ತಮ ಬೆಳೆ ಬರಲಿ ಎಂದು ಗಣಪತಿಯಲ್ಲಿ ಜನರು ಪ್ರಾರ್ಥಿಸುತ್ತಿದ್ದಾರೆ. ಮಹಾಗಣಪತಿ ಜಾತ್ರೆಗೆ ಬೇರೆ ಬೇರೆ ಊರಿನಲ್ಲಿ ನೆಲೆಸಿರುವ ಸಾಗರದ ನಾಗರಿಕರು ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳದೆ ರಥೋತ್ಸವಕ್ಕೆ ಬರುತ್ತಾರೆ. ಕೆಳದಿ ಅರಸರ ಕಾಲದಿಂದಲೂ ಮಹಾಗಣಪತಿಯ ಪೂಜೆ ವಿಶೇಷವಾಗಿ ನಡೆದುಕೊಂಡು ಬಂದಿದೆ ಎಂದು ತಿಳಿಸಿದರು.
    ಮಹಾಗಣಪತಿ ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಉಪವಿಭಾಗಾಧಿಕಾರಿ ಆರ್.ಯತೀಶ್ ಮಾತನಾಡಿ, ಗಣಪತಿ ರಥೋತ್ಸವಕ್ಕೆ ಸಹಸ್ರಾರು ಜನರು ಸೇರಿದ್ದು, ಬೆಳಗಿನ ರಥರೋಹಣ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಗಣಪತಿ ಜಾತ್ರೆ ಯಶಸ್ಸಿಗೆ ಬೇಕಾದ ಅಗತ್ಯ ಸಿದ್ಧತೆ ಕೈಗೊಳ್ಳಲಾಗಿದೆ. ಭಕ್ತಾದಿಗಳು ಶಾಂತಿ ಮತ್ತು ಸೌಹಾರ್ದತೆಯಿಂದ ಪಾಲ್ಗೊಳ್ಳಬೇಕು. ನಾಡಿನಲ್ಲಿ ಮಳೆಬೆಳೆ ಸಮೃದ್ಧ ಜೀವನ ಸಿಗಲಿ ಎಂದು ಶ್ರೀ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ ಎಂದರು.
    ರಥೋತ್ಸವ ಕಾರ್ಯಕ್ರಮದಲ್ಲಿ ಸಹಸ್ರಾರು ಭಕ್ತಾದಿಗಳು ಪಾಲ್ಗೊಂಡಿದ್ದರು. ತಹಸೀಲ್ದಾರ್ ಸೈಯದ್ ಕಲಿಮುಲ್ಲಾ, ದೇವಸ್ಥಾನದ ಆಡಳಿತಾಧಿಕಾರಿ ಪ್ರಮೀಳಾ ಕುಮಾರಿ, ಜಾತ್ರಾ ಸಮಿತಿಯ ಟಿ.ವಿ.ಪಾಂಡುರಂಗ, ಐ.ವಿ.ಹೆಗಡೆ, ವಿ.ಟಿ.ಸ್ವಾಮಿ, ತಾರಾಮೂರ್ತಿ, ಬಸವರಾಜ್, ದೇವಸ್ಥಾನದ ಅರ್ಚಕರಾದ ನವೀನ್ ಜೋಯ್ಸ, ನೀಲಕಂಠ ಜೋಯಿಸ್, ಪಿ.ಎಲ್.ಗಜಾನನ ಭಟ್, ರಾಘವೇಂದ್ರ ಭಟ್, ಸದಾಶಿವ ಜೋಯಿಸ್, ಹರ್ಷವರ್ಧನ್ ಭಟ್, ತಾಂತ್ರಿಕರಾದ ಸಮರ್ಥ ಭಟ್, ಉಪಾಧಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts