ಚಂದ್ರಶೇಖರ ಗುರೂಜಿ ಹಂತಕರ ಬಂಧನ: ತನಿಖೆಗಾಗಿ 5 ತಂಡ ರಚನೆ

Sarala Vastu Chandrashekhara Guruji
Published on

ಹುಬ್ಬಳ್ಳಿ: ಸರಳ ವಾಸ್ತು ಖ್ಯಾತಿಯ ಚಂದ್ರಶೇಖರ ಗುರೂಜಿ ಹಂತಕರನ್ನ ಪೊಲೀಸರು ಬಂಧಿಸಿದ್ದಾರೆ. ಚಂದ್ರಶೇಖರ ಗುರೂಜಿ ಕೊಲೆಯಾದ ನಾಲ್ಕು ಗಂಟೆಯಲ್ಲೇ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳಿಬ್ಬರನ್ನೂ ರಾಮದುರ್ಗದಲ್ಲಿ ಬಂಧಿಸಿದ್ದಾರೆ. ಗುರೂಜಿಯನ್ನು ಕೊಂದು ಕಾರಿನಲ್ಲಿ ಬೆಳಗಾವಿ ಕಡೆ ಹೊರಟಿದ್ದ ಆರೋಪಿಗಳ ಹೆಡೆಮುರಿ‌ಕಟ್ಟಿದೆ ಎಸಿಪಿ ವಿನೋದ ನೇತೃತ್ವದ ತಂಡ.

ಮಹಾಂತೇಶ ಶಿರೂರ ಮತ್ತು ಮಂಜುನಾಥ ಮರೇವಾಡ ಬಂಧಿತರು. ಇವರಿಬ್ಬರೂ ಕಲಘಟಗಿ ತಾಕೂಕಿನ ಧುಮ್ಮವಾಡದವರು. ಆರೋಪಿ ಮಹಾಂತೇಶ ಶಿರೂರ, ಸರಳ ವಾಸ್ತು ಸಂಸ್ಥೆಯ ಮಾಜಿ ಉದ್ಯೋಗಿ. ಈತನ ಪತ್ನಿ ವನಜಾಕ್ಷಿಯೂ ಇದೇ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.

ಚಂದ್ರಶೇಖರ ಗುರೂಜಿ ಅವರನ್ನು ಕೊಂದ ಆರೋಪಿಗಳು
ಚಂದ್ರಶೇಖರ ಗುರೂಜಿ ಅವರನ್ನು ಕೊಂದ ಆರೋಪಿಗಳು

ಮಂಗಳವಾರ ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಪ್ರೆಸಿಡೆಂಟ್​ ಹೋಟೆಲ್​ನ ರಿಸೆಪ್ಶನ್​ನಲ್ಲಿ ಭಕ್ತರ ಸೋಗಿನಲ್ಲಿ ಬಂದಿದ್ದ ಇವರಿಬ್ಬರೂ ಚಂದ್ರಶೇಖರ ಗುರೂಜಿ ಅವರನ್ನ ಅಟ್ಟಾಡಿಸಿಕೊಂಡು ಚಾಕುವಿನಿಂದ 60ಕ್ಕೂ ಹೆಚ್ಚು ಬಾರಿ ಚುಚ್ಚಿ ಅಮಾನುಷವಾಗಿ ಕೊಂದು ಪರಾರಿಯಾಗಿದ್ದರು. ಕೊಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಚಂದ್ರಶೇಖರ ಗುರೂಜಿ ಜತೆ ಮಹಾಂತೇಶ ಶಿರೂರ
ಚಂದ್ರಶೇಖರ ಗುರೂಜಿ ಜತೆ ಮಹಾಂತೇಶ ಶಿರೂರ

ಮುಂಚಿನ ಕಾರ್ಯಾಚರಣೆ ಕೈಗೊಂಡ ಪೊಲೀಸರು, 'ಸರಳ ವಾಸ್ತು' ಸಂಸ್ಥೆಯ ಮಾಜಿ ಉದ್ಯೋಗಿ ವನಜಾಕ್ಷಿಯನ್ನ ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಇದರ ಬೆನ್ನಲ್ಲೇ ಕೊಲೆ ಆರೋಪಿಗಳಿಬ್ಬರನ್ನು ವಿದ್ಯಾನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಪ್ರಕರಣದ ತನಿಖೆಗಾಗಿ 5 ತಂಡಗಳನ್ನ ರಚಿಸಲಾಗಿದ್ದು, ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ. ಮೇಲ್ನೋಟಕ್ಕೆ ಆಸ್ತಿ ಮತ್ತು ಹಣಕಾಸಿನ ವಿಚಾರವಾಗಿ ಹತ್ಯೆ ನಡೆದಿದೆ ಎನ್ನಲಾಗಿದೆಯಾದರೂ ತನಿಖೆ ಬಳಿಕ ನಿಖರ ಮಾಹಿತಿ ಸಿಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net