ನಮಗೇನಾದ್ರೂ ಆದ್ರೆ ಪೊಲೀಸ್​ನವ್ರೇ ಕಾರಣ... ಒತ್ತುವರಿ ತೆರವು ವೇಳೆ ಪೆಟ್ರೋಲ್​ ಸುರಿದುಕೊಂಡು ದಂಪತಿ ಹೈಡ್ರಾಮ

rajakaluve
Published on

ಬೆಂಗಳೂರು: ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಗೆಂದು ತೆರಳಿದ ಬಿಬಿಎಂಪಿ ಅಧಿಕಾರಿಗಳು ಮತ್ತು ಪೊಲೀಸರಿಗೆ ದಂಪತಿ ಶಾಕ್​ ಕೊಟ್ಟಿದ್ದಾರೆ. ಮೈಮೇಲೆ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳೋದಾಗಿ ಎಚ್ಚರಿಕೆ ನೀಡಿದ್ದಾರೆ. ಕೂಡಲೇ ಸಿಎಂ ಸಾಹೇಬ್ರು ಸ್ಥಳಕ್ಕೆ ಬರಬೇಕು. ಯಾವುದೇ ಕಾರಣಕ್ಕೂ ನಮ್ಮ ಮನೆಯನ್ನ ಒಡೆಯಬಾರದು ಎಂದು ಕೂಗಾಡಿದ್ದಾರೆ.

ಕೆ.ಆರ್​.ಪುರದ ಗಾಯತ್ರಿ ನಗರದಲ್ಲಿ ಬುಧವಾರ ಬೆಳಗ್ಗೆ ಈ ಘಟನೆ ಸಂಭವಿಸಿದೆ. 'ನಮ್ಮ ಮನೆ ಮೇಲೆ 40 ಲಕ್ಷ ರೂಪಾಯಿ ಸಾಲ ಇದೆ. ಆಗ ಇಲ್ಲದ ರಾಜಕಾಲುವೆ ಈಗ ಎಲ್ಲಿಂದ ಬಂತು? ನಮ್ಮ ಮನೆಯನ್ನ ಒಡೆದರೆ ನಾವು ಆತ್ಮಹತ್ಯೆ ಮಾಡ್ಕೋತೀವಿ. ಸಿಎಂ ಸರ್​ನ ಕರೀರಿ... ನಮಗೆ ಆಗ್ತಿಲ್ಲ ಸರ್​, ನಾವು ಸಂಜೆಯೇ ಮೇಲ್​ ಮಾಡಿದ್ದೀವಿ​. ನಮ್ಮ ಮನೆಯನ್ನ ಉಳಿಸಲಿಲ್ಲ ಅಂದ್ರೆ ಆತ್ಮಹತ್ಯೆ ಮಾಡ್ಕೋತೀವಿ ಅಂತ ಎಲ್ಲರಿಗೂ ಹೇಳಿಬಿಟ್ಟಿದ್ದೀವಿ​. ಸಿಎಂ ಬರ್ಬೇಕು, ಮಾತಾಡ್ಬೇಕು. ಅದ್ಯಾರು ಆರ್ಡರ್​ ಕೊಟ್ಟಿದ್ದಾರೋ ಅವರನ್ನ ಕರೀರಿ ಇಲ್ಲಿಗೆ. ಪೊಲೀಸ್​ನವ್ರು ಹಿಂದೆ ಹೋಗ್ರಿ. ನಮಗೇನಾದ್ರು ಆದ್ರೆ ಪೊಲೀಸ್​ನವರೇ ಕಾರಣ... ಸರ್​ ಸಿಎಂ ಅವರಿಗೆ ರಿಕ್ವೆಸ್ಟ್​ ಮಾಡಿ ಇಲ್ಲಿಗೆ ಕರೆಸ್ರೀ ಸರ್​...' ಎಂದು ದಂಪತಿ ಇಬ್ಬರೂ ಪೊಲೀಸರಿಗೆ ತಾಕೀತು ಮಾಡುತ್ತಲೇ ಮೈಮೇಲೆ ಪೆಟ್ರೋಲ್​ ಸುರಿದುಕೊಂಡು ಆತ್ಮಹತ್ಯೆಯ ಬೆದರಿಕೆ ಹಾಕುತ್ತಲೇ ಇದ್ದರು.

ಪೊಲೀಸರು ಎಷ್ಟೇ ಮನವೊಲಿಸಿದರೂ ದಂಪತಿ ಹಠ ಬಿಡದೆ ರಾಜಕಾಲುವೆ ದಡದಲ್ಲೇ ನಿಂತು ಆತ್ಮಹತ್ಯೆ ಬೆದರಿಕೆ ಹಾಕುತ್ತಲೇ ಇದ್ದರು. ಹಿಂದಿನಿಂದ ಬಂದ ರಕ್ಷಣಾ ಕಾರ್ಯಾಚರಣೆ ತಂಡ ದಂಪತಿಯ ಮೇಲೆ ನೀರು ಹಾಯಿಸಿ ಆತ್ಮಹತ್ಯೆ ಯತ್ನವನ್ನ ವಿಫಲಗೊಳಿಸಿ ಹೊರಗೆ ಎಳೆದುಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net