More

    ಅಧಿಕಾರದ ದರ್ಪ ತೋರಿದವರ ಸೋಲಿಸಿದ ಜನತೆ

    ಹಿರೇಕೆರೂರ: ತಾಲೂಕಿನಲ್ಲಿ ಮತದಾರರು ಹಣಬಲ, ಅಹಂಕಾರ, ಅಧಿಕಾರದ ದರ್ಪ ತೋರಿದವರನ್ನು ಸೋಲಿಸುವ ಮೂಲಕ ಸೂಕ್ತ ವ್ಯಕ್ತಿ ಆಯ್ಕೆ ಮಾಡಿದ್ದಾರೆ ಎಂದು ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಹೇಳಿದರು.

    ಪಟ್ಟಣದ ಬಯಲು ಬಸವೇಶ್ವರ ದೇವಸ್ಥಾನದ ಸಭಾಭವನದಲ್ಲಿ ಶಾಸಕ ಯು.ಬಿ. ಬಣಕಾರ ಆಯ್ಕೆಯ ಹಿನ್ನೆಲೆಯಲ್ಲಿ ತಾಲೂಕು ಕಾಂಗ್ರೆಸ್ ವತಿಯಿಂದ ಮಂಗಳವಾರ ಏರ್ಪಡಿಸಿದ್ದ ಮತದಾರರ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು.
    ಸೂಕ್ತ ಸಮಯದಲ್ಲಿ ಸೂಕ್ತ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದರಿಂದ ಈ ಗೆಲುವಾಗಿದೆ. ಕಾರ್ಯಕರ್ತರ, ಅಭಿಮಾನಿಗಳ ಶ್ರಮಕ್ಕೆ ನಿಜವಾದ ಫಲ ದೊರಕಿದೆ. ನೂತನ ಶಾಸಕರು ತಾಲೂಕಿನ ಅಭಿವೃದ್ಧಿ, ಸಮಾಜದ ಅಭಿವೃದ್ಧಿ ಮಾಡುವ ಮೂಲಕ ಮತದಾರರ ಋಣ ತೀರಿಸುವ ಕಾರ್ಯ ಮಾಡಬೇಕು ಎಂದರು.

    ಮುಖ್ಯಮಂತ್ರಿ ಸಿದ್ದರಾಮಯ್ಯನವರು 5 ಭರವಸೆ ಈಡೇರಿಸುತ್ತಾರೆ. ಬಿಜೆಪಿಯವರು ನೀಡಿದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಜಮೆ, ಪ್ರತಿವರ್ಷ 2 ಕೋಟಿ ಉದ್ಯೋಗ, ರೈತರ ಆದಾಯ ದ್ವಿಗುಣ ಭರವಸೆ ಈಡೇರಿಸದ ಪ್ರಧಾನಿ ಕಿತ್ತೊಸೆಯುವ ಕಾಲ ಸನ್ನಿದ್ಧವಾಗುತ್ತಿದೆ ಎಂದರು.

    ಶಾಸಕ ಯು.ಬಿ. ಬಣಕಾರ ಮಾತನಾಡಿ, ಕ್ಷೇತ್ರದ ಮತದಾರು ಹಣಬಲ, ಆಮಿಷ, ದುರಾಡಳಿತ, ದುರಹಂಕಾರದಿಂದ ಗೆಲುವು ನಮ್ಮದೇ ಎಂದವರನ್ನು ಮನೆಗೆ ಕಳುಹಿಸಿ, ಮೌಲ್ಯಾಧಾರಿತ, ಸರಳತೆ, ಸಜ್ಜನಿಕೆಯ ರಾಜಕಾರಣಿಗೆ ಗೆಲುವು ತಂದುಕೊಟ್ಟಿದ್ದಾರೆ ಎಂದರು.

    2004ಕ್ಕಿಂತ ಮುಂಚೆ ಈ ಕ್ಷೇತ್ರದಲ್ಲಿ ಹಣ, ಆಮಿಷದ ಚುನಾವಣೆಯಾಗುತ್ತಿರಲಿಲ್ಲ. ಮಾಜಿ ಸಚಿವರು ಬಂದ ನಂತರ ಹಣದ ಆಮಿಷ, ದಬ್ಬಾಳಿಕೆ ರಾಜಕೀಯ ಆರಂಭವಾಗಿತ್ತು. ಮೂರು ಬಾರಿ ನನ್ನನ್ನು ಸೋಲಿಸಿದ್ದೇನೆ ಎಂದು ಬೀಗುತ್ತಿದ್ದವರನ್ನು ಸೋಲಿಸಲಾಗಿದೆ. 2028ರ ಚುನಾವಣೆಯಲ್ಲಿ ಮತ್ತೆ ಗೆಲ್ಲುತ್ತೇನೆ ಎಂದು ಈಗಲೇ ಹೇಳಿಕೊಳ್ಳುತ್ತಿರುವ ಬಿ.ಸಿ. ಪಾಟೀಲರಿಗೆ 2033ರ ಚುನಾವಣೆಯಲ್ಲೂ ಗೆಲ್ಲಲು ಆಗುವುದಿಲ್ಲ ಎಂದರು.

    ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಅವರ ಹಿರಿತನಕ್ಕೆ ತಕ್ಕಂತೆ ಸೂಕ್ತ ನಿಗಮ ಸ್ಥಾನ ನೀಡುವಂತೆ ನಿಯೋಗ ತೆಗೆದುಕೊಂಡು ಹೋಗಿ ವರಿಷ್ಠರ, ಮುಖ್ಯಮಂತ್ರಿಗಳ ಮೇಲೆ ಒತ್ತಡ ತರಲಾಗುವುದು. ತುಂಗಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡ ಎಲ್ಲ ರೈತರಿಗೆ ಪರಿಹಾರ, ಸಕ್ಕರೆ ಕಾರ್ಖಾನೆಯಲ್ಲಿ ಸ್ಥಳೀಯರಿಗೆ ಉದ್ಯೋಗಾವಕಾಶ ಸೇರಿದಂತೆ ಎಲ್ಲ ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗುವುದು ಎಂದರು.

    ಶಾಸಕ ಯು.ಬಿ. ಬಣಕಾರ ಅವರು ಮಾಜಿ ಶಾಸಕ ಬಿ.ಎಚ್. ಬನ್ನಿಕೋಡ ಅವರ ಕಾಲಿಗೆ ನಮಸ್ಕರಿಸುವ ಮೂಲಕ ಕೃತಜ್ಞತೆ ಸಲ್ಲಿಸಿದರು. ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ ಮಡಿವಾಳರ, ಪಪಂ ಅಧ್ಯಕ್ಷ ಕಂಠಾಧರ ಅಂಗಡಿ, ಜಿಪಂ ಮಾಜಿ ಸದಸ್ಯರಾದ ಎಸ್.ಕೆ. ಕರಿಯಣ್ಣನವರ, ಪ್ರಕಾಶ ಬನ್ನಿಕೋಡ, ಸುಮಿತ್ರಾ ಪಾಟೀಲ, ನಾರಾಯಣಪ್ಪ ಗೌರಕ್ಕನವರ, ಶಿವರಾಜ ಹರಿಜನ, ಮುಖಂಡರಾದ ಮಂಜುನಾಥ ತಂಬಾಕದ, ದಿಗ್ವಿಜಯ ಹತ್ತಿ, ಪಪಂ ಉಪಾಧ್ಯಕ್ಷೆ ವಿಜಯಶ್ರೀ ಬಂಗೇರ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts