More

    ರಂಗಪಂಚಮಿ ಸರಳ ಆಚರಣೆಗೆ ಸೂಚನೆ

    ಹುಬ್ಬಳ್ಳಿ: ನಗರದಲ್ಲಿ ರಂಗ ಪಂಚಮಿಯ ದಿನವಾದ ಏಪ್ರಿಲ್ 1ರಂದು ನಡೆಯಲಿರುವ ಹೋಳಿ ಹಬ್ಬವನ್ನು ಮನೆಯಲ್ಲೇ ಸಂಕ್ಷಿಪ್ತವಾಗಿ ಆಚರಿಸಬೇಕು. ಗುಂಪು ಸೇರುವುದನ್ನು, ಸಾರ್ವಜನಿಕ ಆಚರಣೆ ಮಾಡುವುದನ್ನು ನಿಷೇಧಿಸಲಾಗಿದೆ. ನಿಯಮ ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತ ಲಾಭೂರಾಮ ಎಚ್ಚರಿಕೆ ನೀಡಿದ್ದಾರೆ. ಆದರೆ, ಯಾವ ರೀತಿಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬುದನ್ನು ಮಾತ್ರ ಅವರು ತಿಳಿಸಿಲ್ಲ.

    ರಾಜ್ಯ ಸರ್ಕಾರದ ಕೋವಿಡ್ ನಿಯಮಾವಳಿ ಪ್ರಕಾರ ಹೋಳಿ ಆಚರಿಸಬೇಕು. ಯಾವುದೇ ಕಾರಣಕ್ಕೂ ನಿಯಮ ಉಲ್ಲಂಘನೆಗೆ ಅವಕಾಶ ನೀಡುವುದಿಲ್ಲ. ಮೆರವಣಿಗೆ ಮಾಡಲು ಅವಕಾಶವಿಲ್ಲ. ಗುಂಪು ಗುಂಪಾಗಿ ಬಣ್ಣದಾಟ ಆಡುವಂತಿಲ್ಲ. ಮನೆಯಲ್ಲಿ ಆಚರಿಸಲು ಯಾವುದೇ ಅಡ್ಡಿ ಇಲ್ಲ ಎಂದು ಅವರು ತಿಳಿಸಿದ್ದಾರೆ.

    ಕರೊನಾ ಪ್ರಕರಣಗಳು ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿ ಗುಂಪು ಸೇರದಂತೆ ನಿರ್ಬಂಧಗಳನ್ನು ವಿಧಿಸಿದೆ. ಹೀಗಾಗಿ, ಈ ಬಾರಿಯ ರಂಗ ಪಂಚಮಿ ಮಂಕಾಗುವ ಸಾಧ್ಯತೆ ದಟ್ಟವಾಗಿದ್ದು, ಸರಳ ಆಚರಣೆಗೆ ಸೀಮಿತವಾಗಲಿದೆ.

    ಪೊಲೀಸ್ ಬಿಗಿ ಭದ್ರತೆ

    ಕರೊನಾ ನಿಯಮಾವಳಿ ಕಡ್ಡಾಯ ಪಾಲನೆ ನಿಟ್ಟಿನಲ್ಲಿ ಹುಬ್ಬಳ್ಳಿ- ಧಾರವಾಡ ಪೊಲೀಸ್ ಕಮಿಷನರೇಟ್ ಭಾರಿ ಸಿದ್ಧತೆ ಮಾಡಿಕೊಂಡಿದೆ. ಹೋಳಿ ಹಬ್ಬದ ಭದ್ರತೆಗಾಗಿ ಕಮಿಷನರೇಟ್ ವತಿಯಿಂದ 3 ಕೆಎಸ್​ಆರ್​ಪಿ ತುಕಡಿ, 12 ನಗರ ಸಶಸ್ತ್ರ ಮೀಸಲು ಪಡೆ (ಸಿಎಆರ್) ಸೇರಿದಂತೆ 2 ಸಾವಿರಕ್ಕೂ ಅಧಿಕ ಅಧಿಕಾರಿ, ಸಿಬ್ಬಂದಿ ನೇಮಿಸಲಾಗಿದೆ. ಇಬ್ಬರು ಡಿಸಿಪಿ, ಮೂವರು ಎಸಿಪಿ, 20ಕ್ಕೂ ಹೆಚ್ಚು ಇನ್​ಸ್ಪೆಕ್ಟರ್​ಗಳು ಭದ್ರತೆ ಕೈಗೊಳ್ಳಲಿದ್ದಾರೆ ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.

    ಮೆರವಣಿಗೆಗೆ ಬ್ರೇಕ್

    ಕರೊನಾ ವೈರಸ್ ತಡೆಗಟ್ಟುವ ಸಲುವಾಗಿ ಈ ಬಾರಿ ಹೋಳಿ ಹಬ್ಬದ ಮೆರವಣಿಗೆ ರದ್ದುಪಡಿಸಲಾಗಿದೆ ಎಂದು ಕಮರಿಪೇಟೆ ಎಸ್​ಎಸ್​ಕೆ ಪಂಚ ಕಮಿಟಿ ತಿಳಿಸಿದೆ.

    ಬಣ್ಣದ ವ್ಯಾಪಾರಕ್ಕೆ ಅಡ್ಡಿ ಆತಂಕ

    ಕರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಬಣ್ಣದ ವ್ಯಾಪಾರಕ್ಕೆ ಅಡ್ಡಿಯುಂಟಾಗುವ ಆತಂಕ ವ್ಯಾಪಾರಿಗಳಲ್ಲಿ ಮನೆ ಮಾಡಿದೆ. ಆದರೂ ಕೊನೆ ಘಳಿಗೆಯಲ್ಲಿ ಬಣ್ಣ, ಮುಖವಾಡ, ಪಿಚಕಾರಿಗೆ ಹೆಚ್ಚು ಬೇಡಿಕೆ ಉಂಟಾಗುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿಗಳು.

    ಕರೊನಾ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಸರಳವಾಗಿ ಹೋಳಿ ಆಚರಿಸಲಾಗುತ್ತಿದೆ. ಹತ್ತಕ್ಕಿಂತ ಕಡಿಮೆ ಜನರಿಂದ ಸಾಂಪ್ರದಾಯಿಕವಾಗಿ ಕಾಮ ದಹನ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

    | ಅಮರೇಶ ಹಿಪ್ಪರಗಿ, ದಿವಟೆ ಓಣಿ ಕಾಮ- ರತಿ ಮೂರ್ತಿ ಪ್ರತಿಷ್ಠಾಪನೆ ಆಯೋಜಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts