More

    ಜಗಾಪೂರದಲ್ಲಿ ವೀರಯೋಧರ ಸ್ಮರಣೆ

    ನರಗುಂದ: ಕಾರ್ಗಿಲ್ ವಿಜಯೋತ್ಸವ ದಿನದ ಅಂಗವಾಗಿ ಪಟ್ಟಣದ ಗೃಹರಕ್ಷಕದಳ ಸಿಬ್ಬಂದಿ ತಾಲೂಕಿನ ಜಗಾಪೂರ ಗ್ರಾಮದ ಹುತಾತ್ಮ ಯೋಧ ಬಸವರಾಜ ಯರಗಟ್ಟಿ ಅವರ ಸ್ಮಾರಕಕ್ಕೆ ಬುಧವಾರ ಮಾಲಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಿದರು.

    ಗೃಹರಕ್ಷಕದಳ ಸಿಬ್ಬಂದಿ ಬಿ.ಆರ್.ಸುರೇಬಾನ ಮಾತನಾಡಿ, ಭಾರತದಲ್ಲಿ ಜನಿಸಿದ ನಾವೆಲ್ಲರೂ ಪುಣ್ಯವಂತರು. ದೇಶದ ವಿಷಯ ಬಂದಾಗ ಎಲ್ಲರೂ ಒಂದೇ ಎನ್ನುವುದನ್ನು ವಿರೋಧಿಗಳಿಗೆ ಈಗಾಗಲೇ ತೋರಿಸಿಕೊಟ್ಟಿದ್ದೇವೆ. ಭಾರತೀಯ ಯೋಧರು ಮಳೆ, ಚಳಿ, ಗಾಳಿ ಎನ್ನದೇ ದೇಶದ ರಕ್ಷಣೆ ಮಾಡುತ್ತಿರುವುದರಿಂದ ಪ್ರತಿಯೊಬ್ಬರೂ ನೆಮ್ಮದಿಯಾಗಿ ನೆಲೆಸಿದ್ದೇವೆ. ಹುಟ್ಟು ಸಾವಿನ ನಡುವೆ ದೇಶಕ್ಕಾಗಿ, ಜನರಿಗಾಗಿ ಏನು ಮಾಡಬೇಕು ಎಂಬುವುದನ್ನು ಜಗಾಪೂರದ ಹುತಾತ್ಮ ಯೋಧ ಬಸವರಾಜ ತುಳಸಪ್ಪ ಯರಗಟ್ಟಿ ಅವರು ತಮ್ಮ 21ನೇ ವಯಸ್ಸಿಗೆ ಮಾಡಿ ತೋರಿಸಿಕೊಟ್ಟಿದ್ದಾರೆ ಎಂದರು.

    ಇಂಡೋ-ಟಿಬೆಟಿಯನ್ ಬಾರ್ಡರ್ ಸೆಕ್ಯೂರಿಟಿ ಫೋರ್ಸ್‌ಗೆ ಸೇರಿದ್ದ ಬಸವರಾಜ ಅವರು, 2013ರ ಜೂ.25 ರಂದು ಉತ್ತರಾಖಂಡ ಕೇದಾರನಾಥ ಜಲಪ್ರಳಯದಲ್ಲಿ ಸಿಲುಕಿದ್ದ ಜನರನ್ನು ರಕ್ಷಿಸುವಾಗ ಹೆಲಿಕಾಪ್ಟರ್ ದುರಂತದಲ್ಲಿ ಸಾವನ್ನಪ್ಪಿರುವುದು ಅತ್ಯಂತ ನೋವಿನ ಸಂಗತಿ. 12ನೇ ದಿನಕ್ಕೆ ಯೋಧನ ಪಾರ್ಥಿವ ಶರೀರ ಜಗಾಪೂರಕ್ಕೆ ಆಗಮಿಸಿದ್ದಾಗ ಗ್ರಾಮದ ಯುವಕರು ನಾವು ಕೂಡ ಸೇನೆಗೆ ಸೇರಬೇಕೆಂಬ ಸಂಕಲ್ಪ ತೊಟ್ಟಿದ್ದರು. ಅದರಂತೆಯೇ ಜಗಾಪೂರ ಗ್ರಾಮದ ಅನೇಕರು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಎಂದರು.

    ಗೃಹರಕ್ಷಕ ದಳದ ನರಗುಂದ ಘಟಕ ವ್ಯವಸ್ಥಾಪಕ ದೇವಪ್ಪ ಈಟಿ ಮಾತನಾಡಿದರು. ವೀರೇಶ ಬರಗಿ, ವಿಶ್ವನಾಥ ವಡ್ಡರ, ಮಹೇಶ ಬಡಿಗೇರ, ವಿ.ಜಿ. ಮಠಪತಿ, ಎಲ್.ಎಲ್. ಚಲವಾದಿ, ಗ್ರಾಮದ ಯುವಕರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts