More

    ಟಿ.ಗಿರಿಜಾ ಜೀವನ ಯುವತಿಯರಿಗೆ ಪ್ರೇರಣೆ  -ಸಹ ಪ್ರಾಧ್ಯಾಪಕಿ ಡಾ.ಗೌರಮ್ಮ ಅನಿಸಿಕೆ

    ದಾವಣಗೆರೆ: ಅನಾರೋಗ್ಯ ಮತ್ತು ಸಾಮಾಜಿಕ ಸಮಸ್ಯೆ ನಡುವೆಯೂ ಸಾಹಿತಿ ದಿ.ಟಿ.ಗಿರಿಜಾ ಅನನ್ಯ ಸಾಹಿತ್ಯ ಕೃಷಿ ಮಾಡಿದರು. ಇಂದಿನ ಯುವತಿಯರಿಗೆ ಅವರ ಜೀವನ ಪ್ರೇರಣೆಯಾಗಬೇಕು ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕಿ ಡಾ.ಎಸ್.ಎ.ಗೌರಮ್ಮ ಹೇಳಿದರು.
    ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ, ಜಿಲ್ಲಾ ವನಿತಾ ಸಾಹಿತ್ಯ ವೇದಿಕೆ ಸಹಯೋಗದಲ್ಲಿ ನಗರದ ಮಹಿಳಾ ಸಮಾಜದ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ಹಮ್ಮಿಕೊಂಡಿದ್ದ ಹಿರಿಯ ಸಾಹಿತಿ ದಿ. ಟಿ.ಗಿರಿಜಾ ಸಂಸ್ಮರಣೆ ಕಾರ್ಯಕ್ರಮದಲ್ಲಿ ದತ್ತಿ ಉಪನ್ಯಾಸ ನೀಡಿದರು.
    ಧನಸಹಾಯ, ಸ್ಕಾಲರ್‌ಶಿಪ್ ನೆರವಿಲ್ಲದೆಯೂ ಟಿ.ಗಿರಿಜಾ ಸ್ವಯಂ ಆಸಕ್ತಿಯಿಂದಲೇ ಕಾದಂಬರಿ, ಇತಿಹಾಸ, ಜೀವನ ಚರಿತ್ರೆ ಎಲ್ಲ ಪ್ರಕಾರದ ಕೃತಿಗಳನ್ನು ಬರೆದರು. ಸ್ತ್ರೀ ಶೋಷಣೆ, ದೇವದಾಸಿ ಪದ್ಧತಿಯಂತಹ ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸಿದರು. ಇಂದಿನ ವಿದ್ಯಾರ್ಥಿನಿಯರು ಅವರಂತೆ ಆಗದಿದ್ದರೂ ಅವರ ಹಾದಿಯಲ್ಲಿ ನಡೆಯುವಂತಾಗಲು ಆತ್ಮವಿಶ್ವಾಸ ರೂಢಿಸಿಕೊಳ್ಳಬೇಕು ಎಂದರು.
    ಯಾವುದೇ ಪದವಿ, ಪಿಎಚ್‌ಡಿ ಪಡೆಯದಿದ್ದರೂ ಇತಿಹಾಸ ಸಂಬಂಧಿತ ಪುಸ್ತಕ ಬರೆಯಲು ಟಿ. ಗಿರಿಜಾ ಮುಂದಾದಾಗ ಕೆಲ ಸ್ವಘೋಷಿತ ಇತಿಹಾಸಕಾರರು ಬರೆಯದಂತೆ ತಾಕೀತು ಮಾಡಿದರು. ಇದನ್ನೇ ಸವಾಲಾಗಿ ಸ್ವೀಕರಿಸಿ ಸೈ ಎನಿಸಿಕೊಂಡರು. ಚಿತ್ರದುರ್ಗ, ದಾವಣಗೆರೆ ಜಿಲ್ಲಾ ದರ್ಶಿನಿ, ದಾವಣಗೆರೆ ಇದು ನಮ್ಮ ಜಿಲ್ಲೆ ಕೃತಿಗಳನ್ನು ಹೊರತಂದರು ಎಂದು ಹೇಳಿದರು.
    ಹಾವೇರಿಯ ಜಾನಪದ ವಿವಿಯಿಂದ 25 ಜಿಲ್ಲೆಗಳ ಗ್ರಾಮ ಚರಿತ್ರೆ ಕೋಶ ಹೊರತರಲು ಕೆಲ ವರ್ಷಗಳಿಂದ ಪ್ರಯತ್ನ ನಡೆಸಿದೆ. ಆದರೆ ಯಾವುದೇ ತಂತ್ರಜ್ಞಾನದ ಸಹಾಯ ಇಲ್ಲದ ಕಾಲದಲ್ಲೇ ಟಿ.ಗಿರಿಜಾ ದಾವಣಗೆರೆ- ಚಿತ್ರದುರ್ಗ ಜಿಲ್ಲೆಗಳ 200ಕ್ಕೂ ಹೆಚ್ಚು ಗ್ರಾಮಗಳ ಚರಿತ್ರೆ ಬರೆದಿದ್ದು ಗಮನಾರ್ಹ ಎಂದು ಶ್ಲಾಘಿಸಿದರು.
    ಕಾರ್ಯಕ್ರಮ ಉದ್ಘಾಟಿಸಿದ ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಮಾತನಾಡಿ, ವಿಜ್ಞಾನಿ ಚಂದ್ರಶೇಖರ್, ಸರ್.ಎಂ.ವಿಶ್ವೇಶ್ವರಯ್ಯ ಮೊದಲಾದವರು ಕನ್ನಡ ಮಾಧ್ಯಮದಲ್ಲೇ ಅಧ್ಯಯನ ಮಾಡಿ ಖ್ಯಾತನಾಮರಾದರು. ಇಂಗ್ಲಿಷ್‌ಮಾತಾಡುವವರೆಲ್ಲ ವಿದ್ವಾಂಸರಲ್ಲ. ಎಲ್ಲರ ಜೀವನದಲ್ಲಿ ಕನ್ನಡ ಭಾಷೆ ಪ್ರಧಾನವಾಗಬೇಕು ಎಂದು ಆಶಿಸಿದರು.
    ವಿದ್ಯಾರ್ಥಿಗಳಲ್ಲಿ ಶಿಸ್ತು, ಪ್ರಾಮಾಣಿಕತೆ ಹಾಗೂ ಛಲವಿದ್ದಲ್ಲಿ ಉನ್ನತ ಸಾಧನೆ ಮಾಡಬಹುದು. ಈ ವಿಚಾರದಲ್ಲಿ ಟಿ. ಗಿರಿಜಾ ಅವರ ಜೀವನಗಾಥೆಯಿಂದ ಪ್ರೇರಣೆ ಪಡೆಯಬೇಕು ಎಂದು ಹೇಳಿದರು. ಕವಯಿತ್ರಿ ಅರುಂಧತಿ ರಮೇಶ್ ಅವರ ‘ಭವದ ಬೆಳಕು’ ಕೃತಿಯನ್ನು ಅವರು ಬಿಡುಗಡೆಗೊಳಿಸಿದರು.
    ವಿಶ್ರಾಂತ ಇಂಗ್ಲಿಷ್ ಪ್ರಾಧ್ಯಾಪಕಿ ಡಾ.ಪಿ.ಎಂ.ಅನುರಾಧಾ ಮಾತನಾಡಿ ಕೆಲವರನ್ನು ಹೊರತುಪಡಿಸಿದರೆ ಸ್ತ್ರೀವಾದಿ ಹಾಗೂ ಬಂಡಾಯ ಸಾಹಿತ್ಯದ ಲೇಖಕಿಯರು ಸಾಹಿತ್ಯಿಕವಾಗಿ ಅನೇಕ ಸವಾಲುಗಳನ್ನು ಎದುರಿಸಿದ್ದಾರೆ. ಲೇಖಕಿಯರು, ಮಹಿಳಾ ಸಾಹಿತಿಗಳು ಆಯಾ ಕಾಲಘಟ್ಟದ ವಿಚಾರಗಳ ಬಗ್ಗೆ ಪ್ರಸ್ತಾವ ಮಾಡದಿದ್ದಲ್ಲಿ ಅದು ಕಾಲಕ್ಕೆ ಮಾಡುವ ಮೋಸ ಆಗಲಿದೆ ಎಂದು ಎಚ್ಚರಿಸಿದರು.
    ಲೇಖಕಿ ಶೈಲಜಾ ಮಾತನಾಡಿ ಗಿರಿಜಾ ಅವರು ಯಾವುದೇ ಭೌತಿಕ ಆಸ್ತಿ ಮಾಡಲಿಲ್ಲ. ಅವರಿಗೆ ಬರುತ್ತಿದ್ದ 8 ಸಾವಿರ ಪಿಂಚಣಿ ಹಣದಲ್ಲಿ ಜೀವನ ನಡೆಸುತ್ತಿದ್ದರು. ಅದರಲ್ಲೇ ಪುಸ್ತಕ ಪ್ರಕಟಣೆ ಮಾಡುತ್ತಿದ್ದರು. ಅವರ ಭಾರತದ ನದಿಗಳು ಕೃತಿಯನ್ನು ಇಂಗ್ಲಿಷ್‌ಗೆ ಅನುದಾನ ಮಾಡುತ್ತಿದ್ದು ಶೀಘ್ರವೇ ಬಿಡುಗಡೆಗೊಳಿಸುವುದಾಗಿ ಹೇಳಿದರು.
    ವನಿತಾ ಮಹಿಳಾ ಸಾಹಿತ್ಯ ವೇದಿಕೆ ಅಧ್ಯಕ್ಷೆ ಮಲ್ಲಮ್ಮ ನಾಗರಾಜ್, ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಕಂಚಿಕೆರೆ ಸುಶೀಲಮ್ಮ, ಕಾರ್ಯದರ್ಶಿ ಜಯಮ್ಮ ನೀಲಗುಂದ, ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯ ಪ್ರಸನ್ನ ರೆಡ್ಡಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts