More

    ಕೈ ಮುಖಂಡರಿಂದ ಒಗ್ಗಟ್ಟಿನ ಮಂತ್ರ

    ತಿಪಟೂರು: ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸಲಾರಂಭಿಸಿದ್ದಾರೆ.

    ನಗರದ ಕಾಂಗ್ರೆಸ್ ಕಚೇರಿಯಲ್ಲಿ ಬುಧವಾರ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಾದ ಮಾಜಿ ಶಾಸಕ ಕೆ.ಷಡಕ್ಷರಿ ಹಾಗೂ ಟೂಡಾ ಮಾಜಿ ಅಧ್ಯಕ್ಷ ಸಿ.ಬಿ.ಶಶಿಧರ್ ಇನ್ನಿತರ ಮುಖಂಡರ ಜತೆ ಒಟ್ಟಾಗಿ ಕುಳಿತು ಸುದ್ದಿಗೋಷ್ಠಿ ನಡೆಸಿರುವುದು ಕ್ಷೇತ್ರದ ಮಟ್ಟಿಗೆ ಹೊಸ ಬೆಳವಣಿಗೆ ಎನಿಸಿದೆ.

    ಅರ್ಜಿ ಸಲ್ಲಿಸಿರುವ ಎಲ್ಲರನ್ನೂ ಪಕ್ಷದ ಚಟುವಟಿಕೆಗಳಲ್ಲಿ ಬಳಸಿಕೊಳ್ಳಬೇಕು ಎಂದು ಇತ್ತೀಚೆಗಷ್ಟೇ ತಿಪಟೂರಿಗೆ ಆಗಮಿಸಿದ್ದ ಎಐಸಿಸಿ ಕಾರ್ಯದರ್ಶಿ ಮಯೂರ ಜಯಕುಮಾರ್ ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ಎಲ್ಲರೂ ಒಟ್ಟಾಗಿ ಸುದ್ದಿಗೋಷ್ಠಿ ನಡೆಸಿದ್ದಾರೆ ಎನ್ನಲಾಗಿದೆ.
    ತಿಪಟೂರು ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಬಯಸಿ ನಾಲ್ವರು ಅರ್ಜಿ ಸಲ್ಲಿಸಿದ್ದಾರೆ. ಪಕ್ಷದ ಕಚೇರಿಯಲ್ಲಿನ ಸುದ್ದಿಗೋಷ್ಠಿಯಲ್ಲಿ ಕೆ.ಷಡಕ್ಷರಿ ಹಾಗೂ ಟೂಡಾ ಶಶಿಧರ್ ಮಾತ್ರ ಭಾಗವಹಿಸಿದ್ದು, ಲೋಕೇಶ್ವರ್ ಹಾಗೂ ಕೆ.ಟಿ.ಶಾಂತಕುಮಾರ್ ಭಾಗವಹಿಸದಿರುವುದು ಎಲ್ಲವೂ ಸರಿಯಿಲ್ಲ ಎಂಬ ಅನುಮಾನವನ್ನು ಹಾಗೆಯೇ ಉಳಿಸಿತು.

    ಕೆ.ಷಡಕ್ಷರಿ ಮಾತನಾಡಿ, ಮಹಿಳೆಯರಲ್ಲಿ ಜಾಗೃತಿ ಮತ್ತು ಆತ್ಮಾಭಿಮಾನ ಹೆಚ್ಚಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ವತಿಯಿಂದ ನಾ-ನಾಯಕಿ ಎಂಬ ಬೃಹತ್ ಮಹಿಳಾ ಸಮಾವೇಶವನ್ನು ಜ.16ರಂದು ಬೆಂಗಳೂರಿನಲ್ಲಿ ಹಮ್ಮಿಕೊಳ್ಳಲಾಗಿದ್ದು ತಾಲೂಕಿನಿಂದಲೂ ಸಾವಿರಾರು ಮಹಿಳೆಯರು ಭಾಗವಹಿಸುವರು ಎಂದರು.

    ಬೆಂಗಳೂರಿನ ಅರಮನೆ ಆವರಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕಾಗಾಂಧಿ ಭಾಗವಹಿಸಲಿದ್ದು ಸಮಾರಂಭ ಯಶಸ್ವಿಗೊಳಿಸುವಂತೆ ಪಕ್ಷದ ಟಿಕೆಟ್ ಆಕಾಂಕ್ಷಿಗಳು, ಹಾಲಿ, ಮಾಜಿ ಶಾಸಕರು, ಸಂಸದರು ಮತ್ತು ಬ್ಲಾಕ್ ಮುಖಂಡರಿಗೆ ಜವಾಬ್ದಾರಿ ವಹಿಸಲಾಗಿದೆ ಎಂದರು.

    ವಾರ್‌ರೂಂ ಜಿಲ್ಲಾ ಸಂಚಾಲಕ ಟೂಡಾ ಶಶಿಧರ್ ಮಾತನಾಡಿ, ಪಕ್ಷದ ವರಿಷ್ಠರ ಆದೇಶದಂತೆ ಟಿಕೆಟ್ ಆಕಾಂಕ್ಷಿಗಳೆಲ್ಲರೂ ಸೇರಿ ನಾ-ನಾಯಕಿ ಸಮಾವೇಶ ಯಶಸ್ವಿಗೊಳಿಸಲು ಸಹಕರಿಸಲಿದ್ದೇವೆ. ವರಿಷ್ಠರ ಸೂಚನೆಯಂತೆ ನಮ್ಮ ತಾಲೂಕಿನಿಂದ ಎರಡು ಸಾವಿರ ಮಹಿಳೆಯರನ್ನು ಸಮಾವೇಶಕ್ಕೆ ಕರೆದೊಯ್ಯುವುದು ಅಂತಹ ಸವಾಲಿನ ಕೆಲಸವೇನೂ ಅಲ್ಲ, ಇದಕ್ಕೆ ನಾವು ಇತ್ತೀಚೆಗೆ ತಾಲೂಕಿನ ಹಾಲ್ಕುರಿಕೆ ಗ್ರಾಮದಲ್ಲಿ ಆಯೋಜಿಸಿದ್ದ ಆರೋಗ್ಯ-ಸಖಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಹಿಳೆಯರೇ ಸಾಕ್ಷಿ ಎಂದರು.

    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಡೇನೂರು ಕಾಂತರಾಜು, ನಗರಾಧ್ಯಕ್ಷ ಟಿ.ಎನ್.ಪ್ರಕಾಶ್. ಮಹಿಳಾ ಘಟಕದ ಅಧ್ಯಕ್ಷೆ ನೂರ್‌ಬಾನು, ಅಲ್ಪ ಸಂಖ್ಯಾತ ಘಟಕದ ಅಧ್ಯಕ್ಷ ಸೈಯದ್ ಶಫಿಉಲ್ಲಾ, ತಾಪಂ ಮಾಜಿ ಸದಸ್ಯ ಎನ್.ಎಂ.ಸುರೇಶ್ ಇತರರು ಇದ್ದರು.

    ಕ್ಷೇತ್ರದಲ್ಲಿ ಈ ಹಿಂದೆ ನಡೆಯುತ್ತಿದ್ದ ಪಕ್ಷದ ಕಾರ್ಯಚಟುವಟಿಕೆಗಳಿಗೆ ಬ್ಯಾಕ್ ಕಾಂಗ್ರೆಸ್ ವತಿಯಿಂದ ನಮ್ಮನ್ನು ಆಹ್ವಾನಿಸುತ್ತಿರಲಿಲ್ಲ. ಆದರೆ, ಬುಧವಾರ ಆಹ್ವಾನಿಸಿದ್ದ ಕಾರಣಕ್ಕೆ ಭಾಗವಹಿಸಿದ್ದೇನೆ. ವರಿಷ್ಠರೂ ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿರುವಂತೆ ಸೂಚಿಸಿದ್ದಾರೆ.
    |ಟೂಡಾ ಶಶಿಧರ್, ಜಿಲ್ಲಾ ವಾರ್ ರೂಂ ಸಂಚಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts