More

    ಮಂಡ್ಯದಲ್ಲಿ ಒಂದೇ ಕುಟುಂಬದ ಐವರ ಭೀಕರ ಕೊಲೆ: ಮನೆ ಬಾಗಿಲು ಮುರಿದಿಲ್ಲ.. ಆ ರಾತ್ರಿ ಇವರ ಬದುಕಿಗೆ ಕೊಳ್ಳಿ ಇಟ್ಟಿದ್ಯಾರು?

    ಕೆಆರ್​ಎಸ್​(ಮಂಡ್ಯ): ಕೃಷ್ಣರಾಜಸಾಗರ ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರು ಮಕ್ಕಳು ಸೇರಿ ಐವರನ್ನು ಭೀಕರವಾಗಿ ಕೊಂದ ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಅವರಿನ್ನೂ ಆಟವಾಡಿಕೊಂಡು ಕಾಲ ಕಳೆಯುತ್ತಿದ್ದ ಮಕ್ಕಳು, ತಾಯಿಯೊಂದಿಗೆ ಖುಷಿ ಖುಷಿಯಾಗಿ ಇರುತ್ತಿದ್ದರು, ಅಕ್ಕಪಕ್ಕದ ಮನೆಯವರ ಮನಸ್ಸನ್ನು ಗೆದ್ದಿದ್ದರು. ಆದರೆ ಅದ್ಯಾವ ದುಷ್ಕರ್ಮಿಗಳ ಕಣ್ಣು ಈ ಕುಟುಂಬದ ಮೇಲೆ ಬಿತ್ತೋ? ಊಟ ಮಾಡಿ ನಿದ್ರೆ ಮಾಡುತ್ತಿದ್ದವರು ಮತ್ತೆ ಮೇಲೆ ಏಳಲೇ ಇಲ್ಲ. ಇನ್ನು ಈ ಮಕ್ಕಳ ಸ್ಥಿತಿ ಕಂಡು ಮರುಗದವರಿಲ್ಲ.

    ಗ್ರಾಮದ ಬಜಾರ್​ ಲೈನ್​ನಲ್ಲಿ ವಾಸವಿದ್ದ ಗಂಗಾರಾಮ್​ ಎಂಬುವರ ಪತ್ನಿ ಲಕ್ಷ್ಮಮ್ಮ(30) ಮತ್ತು ಇವರ ಮಕ್ಕಳಾದ ರಾಜ್​(12), ಕೋಮಲ್​(8), ಕುನಾಲ್​(5) ಹಾಗೂ ಗಂಗಾರಾಮ್​ ಅವರ ಸಹೋದರನ ಮಗ ಗೋವಿಂದ(10)ನ ಕೊಲೆ ಪ್ರಕರಣ ಸ್ಥಳೀಯರಲ್ಲಿ ಆತಂಕದ ಜತೆಗೆ ಆಕ್ರೋಶವನ್ನೂ ಹುಟ್ಟು ಹಾಕಿದೆ. ಪುಟ್ಟ ಮಕ್ಕಳನ್ನು ಮನಬಂದಂತೆ ಮಾರಾಕಾಸ್ತ್ರದಿಂದ ಹೊಡೆದು ಕೊಲೆ ಮಾಡುವ ವಿಕೃತ ಮನಸ್ಸಿನ ದುಷ್ಕರ್ಮಿಗಳಿಗೆ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ. ಇಂದು(ಸೋಮವಾರ) ಶ್ರೀರಂಗಪಟ್ಟಣ ತಾಲೂಕಿನ ಕೆಆರ್​ಎಸ್​ ಗ್ರಾಮದಲ್ಲಿ ಸಾಮೂಹಿಕ ಅಂತ್ಯಸಂಸ್ಕಾರ ನೆರವೇರಿದ್ದು, ಸಂಬಂಧಿಕರು ಮತ್ತು ಗ್ರಾಮಸ್ಥರ ಗೋಳಾಟ ಮನಕಲಕುವಂತಿತ್ತು. ಸಾವಿಗೂ ಮುನ್ನ ಈ ನಾಲ್ಕು ಮಕ್ಕಳೂ ಬರ್ತ್​ ​ಡೇಗೆ ಹೋಗಿದ್ದರು. ಬಳಿಕ ದೊಡ್ಡ ದುರಂತವೇ ನಡೆದುಹೋಗಿದೆ.

    ಬರ್ತ್​ ​ಡೇಗೆ ಹೋಗಿದ್ದರು: ಸುಮಾರು ವರ್ಷದಿಂದ ಬಜಾರ್​ ಲೈನ್​ನಲ್ಲಿ ಗಂಗಾರಾಮ್​ ಮತ್ತು ಲಕ್ಷ್ಮಮ್ಮ ದಂಪತಿ ವಾಸವಿದ್ದರು. ಇವರಿಗೆ ರಾಜ್​, ಕೋಮಲ್​, ಕುನಾಲ್​ ಎಂಬ ಮುದ್ದಾದ ಮಕ್ಕಳು. ಇನ್ನು ಗಂಗಾರಾಮ್​ ಸಹೋದರ ಗಣೇಶ್​ ಮತ್ತು ಕುಟುಂಬ ಬಟ್ಟೆ ವ್ಯಾಪಾರ ಮಾಡಲು ಊರೂರಿನ ಮೇಲೆ ಹೋಗುತ್ತಿರುತ್ತಾರೆ. ಈ ಹಿನ್ನೆಲೆಯಲ್ಲಿ ಇವರ ಮಗ ಗೋವಿಂದನನ್ನು ಗಂಗಾರಾಮ್​ ಮನೆಯಲ್ಲೇ ಸಾಕುತ್ತಿದ್ದರು. ರಾಜ್​ 6ನೇ ತರಗತಿ, ಗೋವಿಂದ 5ನೇ ತರಗತಿ, ಕೋಮಲ್​ 3ನೇ ತರಗತಿ ಹಾಗೂ ಕುನಾಲ್​ ಅಂಗನವಾಡಿಗೆ ಹೋಗುತ್ತಿದ್ದ. ಇನ್ನು ಈ ಕುಟುಂಬದವರು ಅಕ್ಕಪಕ್ಕದ ಮನೆಯವರೊಂದಿಗೆ ಚೆನ್ನಾಗಿದ್ದು, ಎಲ್ಲರ ವಿಶ್ವಾಸ ಗಳಿಸಿಕೊಂಡಿದ್ದರು. ಅಂತೆಯೇ ಮೂರು ಮನೆಯಿರುವ ವಠಾರದಲ್ಲಿ ವಾಸವಿದ್ದರು. ಶನಿವಾರ ರಾತ್ರಿ ತಮ್ಮ ಬಡಾವಣೆಯ ಒಬ್ಬರ ಮನೆಯಲ್ಲಿ ಜನ್ಮದಿನ ಆಚರಣೆಗೆಂದು ನಾಲ್ವರು ಮಕ್ಕಳೂ ಹೋಗಿದ್ದರು. ತಡವಾದ ಕಾರಣ ಲಕ್ಷ್ಮಮ್ಮ ಫೋನ್​ ಮಾಡಿ ಅವರನ್ನೆಲ್ಲ ಮನೆಗೆ ಕರೆಸಿಕೊಂಡರು. ನಂತರ ಊಟ ಮಾಡಿ ಎಲ್ಲರೂ ಮಲಗಿದ್ದಾರೆ. ಆದರೆ ಬೆಳಗಾಗುವುದರೊಳಗೆ ದೊಡ್ಡ ದುರಂತವೇ ನಡೆದುಹೋಗಿದೆ.

    ಕೊಠಡಿಯಲ್ಲಿ ಚೆಲ್ಲಾಡಿತ್ತು ರಕ್ತ: ಲಕ್ಷ್ಮಮ್ಮ ಮತ್ತು ಮೂವರು ಮಕ್ಕಳು ನೆಲದ ಮೇಲೆ ಹಾಗೂ ಒಂದು ಮಗು ಹಾಸಿಗೆ ಮೇಲೆ ಮಲಗಿತ್ತು. ದುಷ್ಕರ್ಮಿಗಳು ನಡೆಸಿದ ದಾಳಿಯಿಂದ ಅವರೆಲ್ಲರೂ ನಿದ್ರೆ ಮಾಡುತ್ತಿದ್ದ ಸ್ಥಿತಿಯಲ್ಲಿಯೇ ಹೆಣವಾಗಿದ್ದಾರೆ. ಕೊಠಡಿಯಲ್ಲಿ ರಕ್ತ ಚೆಲ್ಲಾಡಿದೆ. ಮತ್ತೊಂದೆಡೆ, ಮಕ್ಕಳ ತಲೆಗಳು ಒಡೆದು ವಿಕಾರವಾಗಿರುವುದನ್ನು ಕಂಡು ಸ್ಥಳೀಯರು ಕಣ್ಣೀರಿಡುತ್ತಿದ್ದ ದೃಶ್ಯ ಮನಕಲಕುವಂತಿತ್ತು.

    ಬಾಗಿಲು ಒಡೆದಿಲ್ಲ: ಗಂಭೀರ ಪ್ರಕರಣವಾಗಿರುವ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿ ಹಂತದಲ್ಲಿಯೂ ಸಾಕ್ಷ್ಯ ಸಂಗ್ರಹಿಸುತ್ತಿದ್ದಾರೆ. ಪ್ರಮುಖವಾಗಿ ಮನೆಯೊಳಗಿನ ಬೀರುವಿನ ಬಾಗಿಲು ತೆರೆದಿದ್ದು, ಒಳಗಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ಆದರೆ ಒಳಗೆ ಹಣ ಅಥವಾ ಚಿನ್ನಾಭರಣ ಇತ್ತೆ ಎನ್ನುವ ಮಾಹಿತಿ ಸಿಕ್ಕಿಲ್ಲ. ಗಮನಾರ್ಹ ಅಂಶವೆಂದರೆ, ಮನೆಯ ಬಾಗಿಲು ಮುರಿದಿಲ್ಲ. ಆದ್ದರಿಂದ ಯಾರಾದರೂ ಪರಿಚಯಸ್ಥರು ಅಥವಾ ಗೊತ್ತಿರುವ ವ್ಯಕ್ತಿಗಳು ಬಂದಿರಬಹುದೆಂಬ ಶಂಕೆ ವ್ಯಕ್ತವಾಗಿದೆ.

    ವಿವಿಧ ಆಯಾಮದಿಂದ ತನಿಖೆ: ಈ ಘಟನೆ ಎಂತಹವರನ್ನೂ ಬೆಚ್ಚಿ ಬೀಳಿಸುವಂತಿದೆ. ಮಕ್ಕಳ ಮೇಲೆ ಇಂತಹ ಭೀಕರ ಕೃತ್ಯ ನಡೆಸಿರುವುದು ಆತಂಕಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಪೊಲೀಸರು ವಿವಿಧ ಆಯಾಮದಲ್ಲಿ ತನಿಖೆ ಪ್ರಾರಂಭಿಸಿದ್ದಾರೆ. ಜಿಲ್ಲೆ ಅಥವಾ ಹೊರ ಜಿಲ್ಲೆಯಲ್ಲಿ ಹಿಂದಿನ ವರ್ಷಗಳಲ್ಲಿ ಇಂತಹ ಕೃತ್ಯ ನಡೆದಿರುವ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ಮೈಸೂರಿನ ಕೆ.ಆರ್​. ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಗಂಗಾರಾಮ್​ಗೆ ಹಸ್ತಾಂತರಿಸಿದರು. ಬಳಿಕ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಚಿತೆಗಳಿಗೆ ಅಗ್ನಿಸ್ಪರ್ಶ ಮಾಡಲಾಯಿತು.

    ಮಂಡ್ಯ ಜಿಲ್ಲೆಯಲ್ಲಿ ಇಂತಹ ಘಟನೆ ನಡೆದಿಲ್ಲ. ಎಫ್​ಎಸ್​ಎಲ್​, ಬೆರಳಚ್ಚು ಸಿಬ್ಬಂದಿ ಹಾಗೂ ಶ್ವಾನದಳ ತಪಾಸಣೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಅಲ್ಲಿಂದ ವರದಿ ಬರಬೇಕು. ಪ್ರಕರಣದ ತನಿಖೆ ಹಾಗೂ ಆರೋಪಿಗಳ ಬಂಧನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ತಂಡ ರಚನೆ ಸೇರಿದಂತೆ ಎಲ್ಲ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎನ್​.ಯತೀಶ್​ ತಿಳಿಸಿದ್ದಾರೆ.

    ಲವರ್​ ಜತೆ ಮದ್ವೆ ಆಗ್ಬೇಕು, 18 ವರ್ಷ ಆಗುವರೆಗೂ ನನ್ನನ್ನು ಬಾಲಮಂದಿರದಲ್ಲಿಡಿ… ಠಾಣೆ ಮೆಟ್ಟಿಲೇರಿದ ಪಿಯು ವಿದ್ಯಾರ್ಥಿನಿ

    ತಿಂಡಿ ತಿನ್ನಲು ಕುಳಿತ ಕಾನೂನು ವಿದ್ಯಾರ್ಥಿ ಹಠಾತ್​ ಸಾವು! ಹುಣಸೂರಲ್ಲಿ ಘಟನೆ, ಸಾವಿನ ಕೊನೇ ಕ್ಷಣ ಸಿಸಿಟಿವಿಯಲ್ಲಿ ಸೆರೆ

    ನಿಮ್ಮ ಮಸೀದಿಯಲ್ಲಿ ನಿಮ್ಗೆ ಪ್ರವೇಶವಿಲ್ಲ, ಹಕ್ಕಿಗಾಗಿ ಅಲ್ಲಿ ಧ್ವನಿ ಎತ್ತಿ… ಶಿಕ್ಷಣ ವ್ಯವಸ್ಥೆಯಲ್ಲಿ ಹೋರಾಟ ಮಾಡ್ಬೇಡಿ: ನಾಗೇಶ್

    ಮದ್ವೆ ಆಸೆ ಹುಟ್ಟಿಸಿ ದೈಹಿಕ ಸಂಪರ್ಕ ಬೆಳೆಸಿದ, ಕೊನೆಗೆ ಹೇಳಬಾರದ್ದು ಹೇಳಿದ, ಪ್ಲೀಸ್​ ನ್ಯಾಯ ಕೊಡಿಸಿ… ಕಣ್ಣೀರಿಟ್ಟ ಸಂತ್ರಸ್ತೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts