More

    ಕುವೆಂಪು ವಿವಿ ಘಟಿಕೋತ್ಸವದಲ್ಲಿ 6 ಗಣ್ಯರಿಗೆ ಗೌಡಾ: ಸ್ವಾವಲಂಬಿ ಬದುಕು ರೂಪಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ರಾಜ್ಯಪಾಲರ ಕರೆ

    ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ 31 ಮತ್ತು 32ನೇ ಘಟಿಕೋತ್ಸವ ಗುರುವಾರ ನೆರವೇರಿತು. ಡಿ.ಎಚ್.ಶಂಕರಮೂರ್ತಿ ಸೇರಿ 6 ಗಣ್ಯರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು. ಡಿ.ಎಚ್.ಶಂಕರಮೂರ್ತಿ(ಸಮಾಜಸೇವೆ), ಡಾ.ಗೀತಾ ನಾರಾಯಣ್ (ಶಿಕ್ಷಣ ಕ್ಷೇತ್ರ), ಬ.ಮ.ಶ್ರೀಕಂಠ (ಸಾಮಾಜಿಕ ಸೇವೆ), ಪ್ರೊ.ಟಿ.ವಿ.ಕಟ್ಟೀಮನಿ(ಶಿಕ್ಷಣ ಕ್ಷೇತ್ರ), ಮಹಾಂತೇಶ್ ಜಿ.ಕಿವುಡಸನ್ನವರ್(ಅಂಧರ ಕ್ರಿಕೆಟ್), ಬಾ.ಸು.ಅರವಿಂದ (ಯೋಗ ಶಿಕ್ಷಣ) ಅವರಿಗೆ ಕುವೆಂಪು ವಿವಿಯಿಂದ ಗೌಡಾ ಪ್ರದಾನ ಮಾಡಿ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋತ್​ ಗೌರವಿಸಿದರು.

    ಘಟಿಕೋತ್ಸವದಲ್ಲಿ ಮಾತನಾಡಿದ ರಾಜ್ಯಪಾಲರು, ತಮ್ಮ ನೆಚ್ಚಿನ ವಿಷಯದಲ್ಲಿ ಪದವಿ ಪಡೆದಿರುವ ವಿದ್ಯಾರ್ಥಿಗಳು ಈಗ ಭವಿಷ್ಯದ ದಿಕ್ಕನ್ನು ಸರಿಯಾಗಿ ನಿರ್ಧರಿಸಿಕೊಳ್ಳಬೇಕು. ಪದವಿ ಪಡೆದವರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳನ್ನು ಬಳಸಿಕೊಂಡು ಸ್ವಾವಲಂಬಿಗಳಾಗಬೇಕೆಂದು ಕರೆ ನೀಡಿದರು.

    ನವೋದ್ಯಮ ಸ್ಥಾಪನೆಗೆ ಭಾರತದ ಪರಿಸರವು ಅತ್ಯಂತ ಸೂಕ್ತವಾಗಿದೆ. ಸ್ವಾತಂತ್ರೃದ ಅಮೃತ ಮಹೋತ್ಸವ ಸಂದರ್ಭದಲ್ಲಿ ದೇಶದ ವಿಕಾಸಕ್ಕೆ ಸರ್ಕಾರ ರೂಪಿಸಿರುವ ಯೋಜನೆಗಳೊಂದಿಗೆ ಎಲ್ಲರೂ ಸಹಭಾಗಿಗಳಾಗೋಣ. ಪ್ರಧಾನಿ ನರೇಂದ್ರ ಮೋದಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ರೂಪಿಸಿದ್ದಾರೆ. ನಮ್ಮ ದೇಶದ ಅಭಿವೃದ್ಧಿಯನ್ನು ಬಲಪಡಿಸಲು ಅಗತ್ಯವಾದ ಅವಶ್ಯಕತೆಗಳನ್ನು ಪೂರೈಸುವುದು ಇದರ ಗುರಿಯಾಗಿದೆ. ಕರ್ನಾಟಕದಲ್ಲಿ ಹೊಸ ಶಿಕ್ಷಣ ನೀತಿಯ ಪರಿಚಯದೊಂದಿಗೆ, ಕ್ರೀಡೆಯನ್ನು ಕಡ್ಡಾಯ ಪಠ್ಯಕ್ರಮದ ಭಾಗವಾಗಿಸಲಾಗಿದೆ. ಕೌಶಲ ಹಾಗೂ ಮೌಲ್ಯಯುತ ಶಿಕ್ಷಣದ ಮೂಲಕ ಪ್ರಬಲ ದೇಶ ನಿರ್ಮಿಸುವುದು ಮುಖ್ಯ ಗುರಿಯಾಗಿದೆ. ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸಲು, ಕೇಂದ್ರ ಸರ್ಕಾರ ಅನೇಕ ಪರಿಣಾಮಕಾರಿ ಯೋಜನೆಗಳನ್ನು ರೂಪಿಸಿದೆ ಎಂದು ಹೇಳಿದರು.

    ಕ್ರೀಡೆಯಲ್ಲಿ ಇನ್ನಷ್ಟು ಸಾಧನೆ: ನಮ್ಮ ಸಾಮರ್ಥ್ಯ ಹಾಗೂ ದೇಶದ ಜನಸಂಖ್ಯೆಯನ್ನು ಗಮನಿಸಿದರೆ ಕ್ರೀಡೆಯಲ್ಲಿ ನಮ್ಮ ಸಾಧನೆ ಅಷ್ಟೊಂದು ತೃಪ್ತಿಕರವಾಗಿಲ್ಲ. ಟೋಕಿಯೋದಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಲ್ಲಿ ಕೇವಲ 7 ಪದಕ ನಮ್ಮದಾಗಿತ್ತು. ನಂತರ ನಡೆದ ಪ್ಯಾರಾಒಲಿಂಪಿಕ್ಸ್‌ನಲ್ಲಿ ದೇಶಕ್ಕೆ 19 ಪದಕಗಳು ಸಿಕ್ಕಿದ್ದವು. ಈ ಸಾಧನೆ ಇನ್ನಷ್ಟು ಉತ್ತಮವಾಗಬೇಕು. ವಿವಿಗಳಲ್ಲಿ ಕ್ರೀಡೆಗೆ ಇನ್ನಷ್ಟು ಒತ್ತು ನೀಡಬೇಕೆಂದು ರಾಜ್ಯಪಾಲರು ಹೇಳಿದರು.

    ಕುವೆಂಪು ಪ್ರೇರಣಾದಾಯಿ: ಕುವೆಂಪು ಎಂಬ ಹೆಸರೇ ಅತ್ಯಂತ ಪ್ರೇರಣಾದಾಯಿಯಾದದ್ದು. ವಿಶ್ವ ಮಾನವ ಸಂದೇಶ ನೀಡುವ ಜತೆಗೆ ನಾಡಗೀತೆಯನ್ನೂ ನೀಡಿದವರು ಅವರು. ಜ್ಞಾನಪೀಠ, ರಾಷ್ಟ್ರಕವಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪಡೆದ ಕುವೆಂಪು ಅವರ ಹೆಸರನ್ನು ಹೊಂದಿರುವ ಈ ವಿವಿ ರಾಜ್ಯದ ಪ್ರತಿಷ್ಠೆಯ ಸಂಕೇತ. ಕುವೆಂಪು ವಿವಿಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಅನೇಕ ಗೌರವಗಳು ಲಭಿಸಿವೆ ಎಂದು ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹೇಳಿದರು.

    ಇನ್ನಷ್ಟು ಸಾಧನೆ ಹೊರಹೊಮ್ಮಲಿ: ಕುವೆಂಪು ವಿವಿಯ 31 ಹಾಗೂ 32ನೇ ಘಟಿಕೋತ್ಸವ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರನ್ನು ಗುರುತಿಸಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗಿದೆ. ಇದರೊಂದಿಗೆ ಸಾಧಕರು ತಮ್ಮ ಚಟುವಟಿಕೆಯನ್ನು ಕಡಿಮೆ ಮಾಡಬಾರದು. ಅವರ ಮೇಲೆ ಇನ್ನಷ್ಟು ಹೊಣೆಗಾರಿಕೆಯಿಂದ ಈ ಗೌರವ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇವರಿಂದ ಇನ್ನಷ್ಟು ಸಾಧನೆ ಹೊರಹೊಮ್ಮಲಿ ಎಂದು ಆಶಿಸಿದರು.

    ಮೈಸೂರು ಕೇಂದ್ರೀಯ ಆಹಾ ತಾಂತ್ರಿಕ ಸಂಶೋಧನಾಲಯದ ನಿರ್ದೇಶಕಿ ಡಾ.ಶ್ರೀದೇವಿ ಅನ್ನಪೂರ್ಣ ಸಿಂಗ್, ಕುಲಪತಿ ಪ್ರೊ.ಬಿ.ಪಿ.ವೀರಭದ್ರಪ್ಪ, ಕುಲಸಚಿವೆ ಜಿ.ಅನುರಾಧಾ, ವಿವಿಧ ವಿಭಾಗಗಳ ಡೀನರು, ಸಿಂಡಿಕೇಟ್ ಸದಸ್ಯರು ಉಪಸ್ಥಿತರಿದ್ದರು.

    ಬಾವಿಗೆ ಬೀಳುತ್ತಿದ್ದ ಸಾರಿಗೆ ಬಸ್ ಜಸ್ಟ್ ಮಿಸ್: 70 ಜನರ ಪ್ರಾಣ ಉಳಿಸಿದ ಬೇವಿನ ಮರ

    ದಕ್ಷಿಣ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಐತಿಹಾಸಿಕ ಗೆಲುವು: ಮಧು ಜಿ.ಮಾದೇಗೌಡಗೆ ವಿಜಯ ಮಾಲೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts