More

    ನಾನು ಇರೋವರೆಗೂ ರಂಗನಾಥ್​ ಅವರೇ ಕುಣಿಗಲ್​ನ ಕಾಂಗ್ರೆಸ್​ ಅಭ್ಯರ್ಥಿ ಎಂದ ಡಿಕೆಸು​ ವಿರುದ್ಧ ಎಸ್​ಪಿಎಂ ಗರಂ

    ಕುಣಿಗಲ್: ವಿಧಾನಸಭಾ ಚುನಾವಣೆಗೆ ಇನ್ನು ಒಂದೂವರೆ ವರ್ಷ ಇರುವಾಗಲೇ ಕುಣಿಗಲ್​ ಕ್ಷೇತ್ರದ ಕಾಂಗ್ರೆಸ್​ ಟಿಕೆಟ್​ ವಿಚಾರ ಮುನ್ನಲೆಗೆ ಬಂದಿದೆ. ಟಿಕೆಟ್​ಗಾಗಿ ಎಸ್​.ಪಿ. ಮುದ್ದಹನುಮೇಗೌಡ ಮತ್ತು ಎಚ್​.ಡಿ. ರಂಗನಾಥ್​ ನಡುವೆ ನೇರ ಪೈಪೋಟಿ ಏರ್ಪಟಿದ್ದು, ಪಕ್ಷದ ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ. ಸಂಬಂಧಿಯೂ ಆದ ಹಾಲಿ ಶಾಸಕ ಡಾ.ರಂಗನಾಥ್​ ಪರ ಸಂಸದ ಡಿ.ಕೆ.ಸುರೇಶ್​ ಹೇಳಿದ ಆ ಎರಡು ಮಾತು ಎಸ್​ಪಿಎಂ ಬೆಂಬಲಿಗರನ್ನ ಕೆರಳಿಸಿದೆ. ತಳಮಟ್ಟದಿಂದ ಪಕ್ಷವನ್ನ ಕಟ್ಟಿ ಬೆಳೆಸಿದ್ದು ನಾವು. ನಮ್ಮ ಬೆವರು ಹರಿದಿದ್ದರ ಫಲವೇ ಸಂಸದ- ಶಾಸಕರ ಆಯ್ಕೆ ಆಗಿರೋದು… ಎಂದು ಡಿ.ಕೆ. ಸುರೇಶ್​ ಮತ್ತು ಡಾ.ರಂಗನಾಥ್​ಗೆ ಮುದ್ದಹನುಮೇಗೌಡರು ಮಾತಿನಲ್ಲೇ ಚಾಟಿ ಬೀಸಿದ್ದಾರೆ.

    ನಾನು ಇರುವವರೆಗೂ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ, ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಡಾ. ಎಚ್​.ಡಿ. ರಂಗನಾಥ್​ ಅವರೇ ಕಾಂಗ್ರೆಸ್​ ಅಭ್ಯರ್ಥಿ ಎಂದು ಸಂಸದ ಡಿ.ಕೆ.ಸುರೇಶ್​ ಘೋಷಣೆ ಮಾಡಿದ್ದಾರೆ. ಈ ಕುರಿತು ವಿಜಯವಾಣಿಗೆ ಪ್ರತಿಕ್ರಿಯಿಸಿದ ಎಸ್​.ಪಿ.ಮುದ್ದಹನುಮೇಗೌಡ, ಅಸೆಂಬ್ಲಿ ಸೀಟ್​ ಅನ್ನು ಆ ರೀತಿ ಅನೌನ್ಸ್​ ಮಾಡೋಕೆ ಸುರೇಶ್​ಗೆ ಯಾರು ಅಧಿಕಾರ ಕೊಟ್ಟಿದ್ದು? ಎಐಸಿಸಿ ಅಥವಾ ಕೆಪಿಸಿಸಿ ಅಧ್ಯಕ್ಷರು ಮಾತ್ರವೇ ಟಿಕೆಟ್​ ಘೋಷಣೆ ಮಾಡಬಹುದು. ಕುಣಿಗಲ್​ ತಾಲೂಕಿನಲ್ಲಿ ಕಾಂಗ್ರೆಸ್​ ಪಕ್ಷ ಕಟ್ಟುವುದರಲ್ಲಿ ನಮ್ಮ ಬೆವರು ಇದೆ. ನಾವೆಲ್ಲರೂ ಬಹಳ ವರ್ಷದಿಂದ ಬೆವರು ಹರಿಸಿದ್ದೀವಿ’ ಎನ್ನುವ ಮೂಲಕ ಈಗ ಬಂದು ಕ್ಷೇತ್ರದಲ್ಲಿ ಡಿಕೆಸು-ರಂಗನಾಥ್​ ಗೆದ್ದಿದ್ದಾರೆ ಅಂದ್ರು ಅದು ನಮ್ಮೆಲ್ಲರ ಶ್ರಮದ ಫಲ ಎಂದು ಪರೋಕ್ಷವಾಗಿ ಹೇಳಿದ್ದಾರೆ.

    ಕೊಟ್ಟ ಮಾತು ಉಳಿಸಿಕೊಳ್ತಾರಾ ರಾಹುಲ್​: ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದ ಅಭ್ಯರ್ಥಿಯಾಗಿ ದೇವೇಗೌಡರ ವಿರುದ್ಧ ಕಣಕ್ಕಿಳಿಯಬೇಕಿದ್ದ ಮುದ್ದಹನುಮೇಗೌಡರಿಗೆ ಕೊನೇ ಘಳಿಗೆಯಲ್ಲಿ ಟಿಕೆಟ್​ ಕೈತಪ್ಪಿತ್ತು. ಜಿಲ್ಲೆಯಾದ್ಯಂತ ಎಸ್​ಪಿಎಂ ಬೆಂಬಲಿಗರು ಬಿದೀಗಿಳಿದು ಹೋರಾಡಿದ್ದರು. ಬಂಡಾಯ ಅಭ್ಯರ್ಥಿಯಾಗಿಯೇ ಅಖಾಡಕ್ಕಿಳಿಯುವಂತೆ ಎಸ್​ಪಿಎಂಗೆ ಭಾರೀ ಒತ್ತಡ ಬಂದಿತ್ತು. ಟಿಕೆಟ್​ ಕೈ ತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ಎಸ್​ಪಿಎಂ, ಪಕ್ಷಾಂತರ ಮಾಡುತ್ತಾರೆ ಎಂಬ ಸುದ್ದಿ ಜಿಲ್ಲೆಯ ರಾಜಕಾರಣದಲ್ಲಿ ಸಂಚಲನ ಮೂಡಿಸಿತ್ತು. ಆಗ ಕಾಂಗ್ರೆಸ್​ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್​ ಗಾಂಧಿ ಅವರೇ ಖುದ್ದು ಕರೆ ಮಾಡಿ ಎಸ್​ಪಿಎಂಗೆ ಸಮಾಧಾನ ಹೇಳಿದ್ದರು. ಮುಂಬರುವ ಚುನಾವಣೆಯಲ್ಲಿ ನೀವು ಬಯುಸುವ ಕ್ಷೇತ್ರದಿಂದಲೇ​ ಟಿಕೆಟ್​ ಕೊಡುವುದಾಗಿ ಮಾತು ಕೊಟ್ಟಿದ್ದರಂತೆ. ಎಐಸಿಸಿ ಕೊಟ್ಟ ಭರವಸೆ ಮೇರೆಗೆ ಎಸ್​ಪಿಎಂ ಅವರು ಮುಂದಿನ ವಿಧಾನಸಭಾ ಚುನಾವಣೆಗೆ ಕುಣಿಗಲ್​ ಕ್ಷೇತ್ರದಿಂದ ಸ್ಪರ್ಧಿಸಲು ಸಜ್ಜಾಗುತ್ತಿದ್ದಾರೆ. ಎಸ್​ಪಿಎಂ ಬೆಂಬಲಿಗರು ಕ್ಷೇತ್ರದಲ್ಲಿ ಆಕ್ಟೀವ್​ ಆಗಿದ್ದು, ತಳಮಟ್ಟದಿಂದ ಸಂಘಟನೆ ಕಾರ್ಯದಲ್ಲಿ ಬಿಜಿಯಾಗಿದ್ದಾರೆ.

    ನಾನು ಇರೋವರೆಗೂ ರಂಗನಾಥ್​ ಅವರೇ ಕುಣಿಗಲ್​ನ ಕಾಂಗ್ರೆಸ್​ ಅಭ್ಯರ್ಥಿ ಎಂದ ಡಿಕೆಸು​ ವಿರುದ್ಧ ಎಸ್​ಪಿಎಂ ಗರಂ
    ಶಾಸಕ ಡಾ.ಎಚ್​.ಎನ್​. ರಂಗನಾಥ್​

    ರಂಗನಾಥ್​ ಮೇಲಿದೆ ಡಿಕೆ ಬ್ರದರ್ಸ್​ ಶ್ರೀರಕ್ಷೆ:ಕಳೆದ ಚುನಾವಣೆಯಲ್ಲಿ ಬಿಬಿ ರಾಮಸ್ವಾಮಿಗೌಡರಿಗೆ ಟಿಕೆಟ್​ ತಪ್ಪಿಸಿ, ಕೊನೇ ಹಂತದಲ್ಲಿ ಡಿಕೆಶಿ ಸೋದರಳಿಯ ರಂಗನಾಥ್​ಗೆ ಟಿಕೆಟ್​ ಕೊಡಿಸುವಲ್ಲಿ ಡಿ.ಕೆ.ಸುರೇಶ್​​ ಯಶಸ್ವಿಯಾಗಿದ್ದರು. ಇದೀಗ ಹಾಲಿ ಶಾಸಕ ರಂಗನಾಥ್​ಗೆ ಮುಂದಿನ ಚುನಾವಣೆಗೆ ಟಿಕೆಟ್ ಸಿಗಲ್ಲ. ಅದು ಎಸ್​ಪಿಎಂ ಪಾಲಾಗುತ್ತೆ ಎಂಬ ಸುದ್ದಿ ಶಾಸಕರ ಬೆಂಬಲಿಗರಲ್ಲಿ ಗೊಂದಲ ಸೃಷ್ಟಿಸಿದೆ. ಇತ್ತೀಚಿಗೆ ಶಾಸಕರು ಕ್ಷೇತ್ರದಲ್ಲಿ ಕಾಣಿಸಿಕೊಳ್ಳುವುದು ಕಡಿಮೆ ಆಗಿದೆ, ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್​ ಮತ್ತು ರಾಜಾಜಿನಗರದತ್ತ ಗಮನಹರಿಸಿದ್ದಾರೆ ಎಂದು ಕೆಲ ಮೂಲಗಳು ತಿಳಿಸಿವೆ. ಇದರ ಜತೆಗೆ ರಂಗನಾಥ್​ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್​ ಮತ್ತು ಸಂಸದ ಸುರೇಶ್​ರ ಸಂಬಂಧಿ. ಅವರ ಮೇಲೆ ಡಿಕೆ ಸಹೋದರರ ಶ್ರೀರಕ್ಷೆ ಇದೆ. ಯಾವುದೇ ಕಾರಣಕ್ಕೂ ಕುಣಿಗಲ್​ ಕ್ಷೇತ್ರದಲ್ಲಿ ರಂಗನಾಥ್​ ಬದಲಾವಣೆ ಅಸಾಧ್ಯ ಎಂಬ ಮಾತೂ ಕೇಳಿಬರುತ್ತಿದೆ. ಇದನ್ನು ಪುಷ್ಟೀಕರಿಸುತ್ತಿದೆ ಸಂಸದ ಡಿ.ಕೆ.ಸುರೇಶ್​ ಅವರು ಡಿ.4ರಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಸಮ್ಮುಖದಲ್ಲೇ ಎಡೆಯೂರಿನಲ್ಲಿ ಆಡಿದ ಆ ಎರಡು ಮಾತು.

    ವಿಧಾನ ಪರಿಷತ್​ ಕಾಂಗ್ರೆಸ್​ ಅಭ್ಯರ್ಥಿ ಆರ್​.ರಾಜೇಂದ್ರ ಪರವಾಗಿ ಎಡೆಯೂರಿನಲ್ಲಿ ಡಿ.4ರಂದು ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ‘ನಾನು ಇರುವವರೆಗೂ ಕುಣಿಗಲ್​ ಕ್ಷೇತ್ರದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ, ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ಡಾ. ಎಚ್​.ಡಿ. ರಂಗನಾಥ್​ ಅವರೇ ಕಾಂಗ್ರೆಸ್​ ಅಭ್ಯರ್ಥಿ’ ಎಂದು ಸುರೇಶ್​ ಘೋಷಣೆ ಮಾಡಿದರು. ‘ಮುಂದಿನ ಚುನಾವಣೆಯಲ್ಲೂ ಡಾ.ಎಚ್​.ಡಿ.ರಂಗನಾಥ್​ ಅವರೇ ಕಾಂಗ್ರೆಸ್​ ಅಭ್ಯರ್ಥಿ. ಕಾರ್ಯಕರ್ತರಲ್ಲಿ ಆತಂಕ ಬೇಡ. ಕಾಂಗ್ರೆಸ್​ ಹಾಳು ಮಾಡಲು ಕೆಲ ವ್ಯಕ್ತಿಗಳು ವಿನಾಕಾರಣ ಗೊಂದಲ ಸೃಷ್ಟಿ ಮಾಡುವುದು ಒಳ್ಳೆಯ ಬೆಳವಣಿಗೆ ಅಲ್ಲ’ ಎಂದರು. ಈ ಸಮಾರಂಭದಲ್ಲಿ ಕುಣಿಗಲ್​ ಕ್ಷೇತ್ರದ ಮಾಜಿ ಶಾಸಕರೂ ಆದ ಮಾಜಿ ಸಂಸದ ಎಸ್​.ಪಿ.ಮುದ್ದಹನುಮೇಗೌಡ ಗೈರು ಎದ್ದು ಕಾಣಿಸುತ್ತಿತ್ತು. ಕುಣಿಗಲ್​ ಕ್ಷೇತ್ರದಲ್ಲಿ ಕಾಂಗ್ರೆಸ್​ ಟಿಕೆಟ್​ಗೆ ಬೇಡಿಕೆ ಇಟ್ಟಿರುವ ಮುದ್ದಹನುಮೇಗೌಡ ಅವರನ್ನು ಉದ್ದೇಶಪೂರ್ವಕವಾಗಿಯೇ ಸಮಾರಂಭಕ್ಕೆ ಆಹ್ವಾನಿಸಿಲ್ಲ ಎಂದು ಸಭೆಯಲ್ಲಿದ್ದ ಅವರ ಅಭಿಮಾನಿಗಳೇ ಮಾತನಾಡಿಕೊಂಡರು. ಡಿಕೆಸು ಹೇಳಿಕೆ ಕ್ಷೇತ್ರದಲ್ಲಿ ಎಲ್ಲವೂ ಸರಿ ಇಲ್ಲ ಎಂಬುದನ್ನು ದೃಢಪಡಿಸಿತು.

    ಅಸೆಂಬ್ಲಿ ಸೀಟ್​ ಅನ್ನು ಆ ರೀತಿ ಅನೌನ್ಸ್​ ಮಾಡೋಕೆ ಪಕ್ಷದ ಚೌಕಟ್ಟಿನಲ್ಲಿ ಎಂಎಲ್​ಎ, ಎಂಪಿ ಸೇರಿದಂತೆ ಬೇರೆ ಯಾರಿಗೂ ಅಧಿಕಾರ ಇಲ್ಲ. ಎಐಸಿಸಿ ಅಥವಾ ಕೆಪಿಸಿಸಿ ಅಧ್ಯಕ್ಷರು ಮಾತ್ರವೇ ಘೋಷಣೆ ಮಾಡಬಹುದು. ಆ ರೀತಿಯ ಹೇಳಿಕೆ ಕೊಡೋಕೆ ಸುರೇಶ್​ಗೆ ಯಾರು ಅಧಿಕಾರ ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ. ಅದು ನನ್ನ ಪ್ರಕಾರ ಅದು ಪಕ್ಷದ ಶಿಸ್ತಿನ ಉಲ್ಲಂಘನೆ ಎಂದೇ ಭಾವಿಸುವೆ. ಪಕ್ಷವನ್ನು ಯಾರೋ ಹಾಳು ಮಾಡಲು ಬಂದಿದ್ದಾರೆ ಅಂದರೆ ಅಂತಹವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಕುಣಿಗಲ್​ ತಾಲೂಕಿನಲ್ಲಿ ಇವತ್ತು ಕಾಂಗ್ರೆಸ್​ನ ಸಂಸದರು ಮತ್ತು ಶಾಸಕರು ಇದ್ದಾರೆ ಅಂದ್ರೆ ನಮ್ಮೆಲ್ಲರ ಬೆವರು ವಾಸನೆ ಇದೆ. ಮುಂದೆ ಜನರೇ ತೀರ್ಪು ಕೊಡ್ತಾರೆ.
    |ಎಸ್​.ಪಿ.ಮುದ್ದಹನುಮೇಗೌಡ ಮಾಜಿ ಶಾಸಕ

    ಡಿಕೆಶಿ​ಗೆ ಕಾದಿದ್ಯಾ ಗಂಡಾಂತರ? ಡಿ.14ರಂದು ಎಲ್ಲವನ್ನೂ ಬಿಚ್ಚಿಡ್ತಾರಂತೆ ರಮೇಶ್​ ಜಾರಕಿಹೊಳಿ!

    ಹಸೆಮಣೆ ಏರಿದ 65 ವರ್ಷದ ಮೈಸೂರಿನ ವೃದ್ಧಜೋಡಿ: 35 ವರ್ಷದ ಬಳಿಕ ಪ್ರಿಯಕರನ ಸೇರಿದ ಪ್ರೇಯಸಿ

    ಸ್ಕೂಟಿ ನಂಬರ್​ ಪ್ಲೇಟ್​ ಮೇಲೆ ‘SEX’, ಮುಜುಗರಕ್ಕೀಡಾದ ಯುವತಿ ಇದರ ಸಹವಾಸವೇ ಬೇಡ ಅಂತ ಮೂಲೆಗಿಟ್ಟಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts