More

    ಕೆಆರ್​ಎಸ್​ ಅಣೆಕಟ್ಟೆ ಭರ್ತಿ: ಜಲಾಶಯಕ್ಕೆ 28 ದಿನದಲ್ಲಿ 12 ಅಡಿ ನೀರು

    | ಸಿ.ಎಸ್​.ದೀಪಕ್​ ಕೆ.ಆರ್​.ಸಾಗರ
    ವಿಶ್ವವಿಖ್ಯಾತ ಕೃಷ್ಣರಾಜಸಾಗರ ಅಣೆಕಟ್ಟೆ ನೀರಿನಿಂದ ಭರ್ತಿಯಾಗಿದೆ. ಗುರುವಾರ ಡ್ಯಾಂನಲ್ಲಿ ಗರಿಷ್ಠ ಅಂದರೆ 124.70 ಅಡಿ ನೀರಿನ ಸಂಗ್ರಹವಾಗಿರುವುದು ಜನರು ನಿಟ್ಟುಸಿರು ಬಿಡುವಂತೆ ಮಾಡಿದೆ.

    ಮುಂಗಾರು ಮಳೆ ಕೈ ಕೊಟ್ಟ ಪರಿಣಾಮ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿತ್ತು. 120 ಅಡಿ ದಾಟಿದರೂ ಗರಿಷ್ಠ ಮಟ್ಟ ತಲುಪಲಿಲ್ಲ. ಇದಲ್ಲದೆ ಬರೋಬ್ಬರಿ 9 ಅಡಿ ನೀರಿನ ಸಂಗ್ರಹವೂ ಕಡಿಮೆಯಾಯಿತು. ಆದರೀಗ ಹಿಂಗಾರು ಹಾಗೂ ಬಂಗಾಳಕೊಲ್ಲಿಯಲ್ಲಿ ಉಂಟಾದ ಮೇಲ್ಮೆ ಸುಳಿಗಾಳಿ ಪರಿಣಾಮ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರವಾಗಿ ಮಳೆಯಾಗಿದ್ದರಿಂದ ಡ್ಯಾಂ ಗರಿಷ್ಠ ಮಟ್ಟ ತಲುಪಿದೆ.

    ಆತಂಕ ಹುಟ್ಟಿಸಿದ ಮಳೆ: ಈ ಬಾರಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗುವುದಿಲ್ಲ ಎನ್ನುವ ಹವಾಮಾನ ಇಲಾಖೆ ವರದಿ ನಿಜವಾಯಿತು. ಪರಿಣಾಮ ಜಿಲ್ಲೆಯಲ್ಲಿ ಮುಂಗಾರು ಅಬ್ಬರ ತೋರಲಿಲ್ಲ. ಜೂನ್​ನಲ್ಲಿ 56.5 ಮಿ.ಮೀ. ವಾಡಿಕೆ ಮಳೆಯಾಗಬೇಕಿತ್ತು. ಆದರೆ 42.9 ಮಿ.ಮೀ. ವಾಸ್ತವ ಮಳೆಯಾಯಿತು. ಜುಲೈನಲ್ಲಿ ಬಿದ್ದ ಮಳೆ ರೈತರಿಗೆ ನೆಮ್ಮದಿ ತಂದಿತ್ತು. 59.4 ಮಿ.ಮೀ. ವಾಡಿಕೆ ಮಳೆಗೆ, 122.5 ಮಿ.ಮೀ ವಾಸ್ತವ ಮಳೆಯಾಯಿತು. ಇದರಿಂದ ಮುಂದೆಯೂ ಮಳೆ ಬೀಳಲಿದೆ ಎನ್ನುವ ನಿರೀಕ್ಷೆಯಿಂದ ರೈತರು ಕೃಷಿ ಚಟುವಟಿಕೆಯನ್ನು ಚುರುಕುಗೊಳಿಸಿದರು.

    ಆದರೆ ವರುಣನ ಅವಕೃಪೆಗೆ ಒಳಗಾಗಬೇಕಾಯಿತು. ಆಗಸ್ಟ್​ನಲ್ಲಿ 72.9 ಮಿ.ಮೀ. ವಾಡಿಕೆ ಮಳೆಗೆ 70.6 ಮಿ.ಮೀ. ವಾಸ್ತವ ಮಳೆಯಾಯಿತು. ಈ ತಿಂಗಳಲ್ಲಿ 3 ಮಿ.ಮೀ.ನಷ್ಟು ಮಳೆ ಕೊರತೆ ಎದುರಾಯಿತು. ಸೆಪ್ಟೆಂಬರ್​ನಲ್ಲಿ 129.3 ಮಿ.ಮೀ. ವಾಡಿಕೆ ಮಳೆಗೆ ಕೇವಲ 69.9 ಮಿ.ಮೀ. ವಾಸ್ತವ ಮಳೆಯಾಯಿತು. ಇದರೊಂದಿಗೆ 45.9 ಮಿ.ಮೀ ಮಳೆಯ ಕೊರತೆ ಉಂಟಾಗಿ ಜನರಲ್ಲಿ ಆತಂಕ ತಂದಿತು. ಈ ನಡುವೆ ಹಿಂಗಾರು ಪ್ರಾರಂಭದ ಜತೆಗೆ ಬಂಗಾಳಕೊಲ್ಲಿಯಲ್ಲಿ ಉಂಟಾದ ಮೇಲ್ಮೆ ಸುಳಿಗಾಳಿ ಪರಿಣಾಮ ಮಳೆಯ ಅಬ್ಬರ ಜೋರಾಗಿತ್ತು. ಅದರಂತೆ ಅಕ್ಟೋಬರ್​ 27ರವರೆಗೆ ಜಿಲ್ಲೆಯಲ್ಲಿ 140.3 ಮಿ.ಮೀ. ವಾಡಿಕೆ ಮಳೆಗೆ 269.3 ಮಿ.ಮೀ. ವಾಸ್ತವ ಮಳೆಯಾಯಿತು. ಇದರೊಟ್ಟಿಗೆ ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರಂತರ ಮಳೆಯಾದ ಪರಿಣಾಮ ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ ಏರಿಕೆಯಾಗಿ ಗರಿಷ್ಠ ಮಟ್ಟ ತಲುಪುವಂತಾಯಿತು.

    ಮಳೆಯ ಪ್ರಮಾಣ ಕಡಿಮೆಯಾದ ಪರಿಣಾಮ ಡ್ಯಾಂನಲ್ಲಿ 121 ಅಡಿ ನೀರಷ್ಟೇ ಸಂಗ್ರಹವಾಯಿತು. ಬಳಿಕ ಡ್ಯಾಂನಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಾ ಸಾಗಿತ್ತು. ಸೆ.30ರ ವೇಳೆಗೆ ಅಣೆಕಟ್ಟೆಯಲ್ಲಿ 112.64 ಅಡಿ ನೀರಿನ ಸಂಗ್ರಹವಿತ್ತು. ನಂತರ ಮಳೆಯಾದ ಹಿನ್ನೆಲೆಯಲ್ಲಿ 28 ದಿನದಲ್ಲಿ ಅಂದರೆ ಅ.29ರ ವೇಳೆಗೆ ಗರಿಷ್ಠ ನೀರಿನ ಸಂಗ್ರಹವಾಯಿತು. ಈ ಅವಧಿಯಲ್ಲಿ ಸುಮಾರು 12 ಅಡಿ ನೀರು ಡ್ಯಾಂಗೆ ಹರಿದುಬಂದಿದೆ.

    ಕೆಆರ್​ಎಸ್​ ಅಣೆಕಟ್ಟೆ ಭರ್ತಿ: ಜಲಾಶಯಕ್ಕೆ 28 ದಿನದಲ್ಲಿ 12 ಅಡಿ ನೀರು

    ಬಾಗಿನ ಅರ್ಪಣೆ ಹಿಸ್ಟರಿ: ಸದ್ಯದ ಮಾಹಿತಿ ಪ್ರಕಾರ ನವೆಂಬರ್​ ಮೊದಲ ವಾರ ಅಣೆಕಟ್ಟೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಬಾಗಿನ ಅರ್ಪಿಸುವ ಸಾಧ್ಯತೆ ಇದೆ. ಒಂದು ವೇಳೆ ಈ ಅವಧಿಯಲ್ಲಿಯೇ ಬಾಗಿನ ಅರ್ಪಿಸಿದರೆ ನವೆಂಬರ್​ನಲ್ಲಿ ಬಾಗಿನ ಅರ್ಪಿಸಿದ ರಾಜ್ಯದ ಎರಡನೇ ಮುಖ್ಯಮಂತ್ರಿ ಎನ್ನುವ ಹೆಗ್ಗಳಿಕೆಗೆ ಬಸವರಾಜ ಬೊಮ್ಮಾಯಿ ಪಾತ್ರರಾಗಲಿದ್ದಾರೆ. 1999, ನ.10ರಂದು ಸಿಎಂ ಆಗಿದ್ದ ಎಸ್​.ಎಂ.ಕೃಷ್ಣ ಬಾಗಿನ ಅರ್ಪಿಸಿದ್ದರು. ಇನ್ನು ಐದು ಬಾರಿ ಬಾಗಿನ ಅರ್ಪಿಸಿದ ಮೊದಲ ಸಿಎಂ ಎನ್ನುವ ದಾಖಲೆ ಬಿ.ಎಸ್​.ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. 2007, 2009, 2010, 2019 ಮತ್ತು 2020 ಬಾಗಿನ ಅರ್ಪಿಸಿದ್ದಾರೆ. 1979ರಿಂದ ಡ್ಯಾಂಗೆ ಬಾಗಿನ ಅರ್ಪಿಸುವ ಪದ್ಧತಿಗೆ ಅಂದಿನ ಸಿಎಂ ದೇವರಾಜ ಅರಸು ಚಾಲನೆ ನೀಡಿದರು. ಅಂದಿನಿಂದ ಕಟ್ಟೆ ತುಂಬಿದ ಎಲ್ಲ ವರ್ಷ ಬಾಗಿನ ಅರ್ಪಿಸಿಕೊಂಡು ಬರಲಾಗುತ್ತಿದೆ. ಎಸ್​.ಬಂಗಾರಪ್ಪ ಸಿಎಂ ಆಗಿದ್ದಾಗ 1990, 1991 ಹಾಗೂ 1992ರಲ್ಲಿ ಬಾಗಿನ ಅರ್ಪಿಸಿದ್ದರೆ, ಎಚ್​.ಡಿ. ಕುಮಾರಸ್ವಾಮಿ 2006, 2007 ಹಾಗೂ 2018ರಲ್ಲಿ ಬಾಗಿನ ಅರ್ಪಿಸಿದ್ದಾರೆ. ವಿಶೇಷವೆಂದರೆ ಈ ಇಬ್ಬರು 5 ವರ್ಷ ಅಧಿಕಾರ ಪೂರೈಸಿಲ್ಲ. ಆದರೆ, ನಾಲ್ಕೂವರೆ ವರ್ಷ ಅಧಿಕಾರ ನಡೆಸಿದ ಎಸ್​.ಎಂ.ಕೃಷ್ಣ, 5 ವರ್ಷ ಪೂರೈಸಿದ ಸಿದ್ದರಾಮಯ್ಯರಿಗೆ ಬಾಗಿನ ಬಿಡಲು ಅವಕಾಶ ಸಿಕ್ಕಿದ್ದು ತಲಾ 2 ಬಾರಿ ಮಾತ್ರ. ಇಬ್ಬರ ಅವಧಿಯಲ್ಲೂ 3 ವರ್ಷ ರಾಜ್ಯದಲ್ಲಿ ಭೀಕರ ಬರ ತಾಂಡವವಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

    1983, 84ರಲ್ಲಿ ರಾಮಕೃಷ್ಣ ಹೆಗಡೆ, 1993, 1994ರಲ್ಲಿ ಎಂ.ವೀರಪ್ಪ ಮೋಯ್ಲಿ 2004, 2005ರಲ್ಲಿ ಎನ್​.ಧರ್ಮಸಿಂಗ್​ ಬಾಗಿನ ಅರ್ಪಿಸಿದ್ದಾರೆ. 1981ರಲ್ಲಿ ಗುಂಡೂರಾವ್​, 1988ರಲ್ಲಿ ಸರ್ಕಾರದ ಪ್ರತಿನಿಧಿಯಾಗಿ ಪಿ.ವೆಂಕಟಸುಬ್ಬಯ್ಯ, 1989ರಲ್ಲಿ ವೀರೇಂದ್ರ ಪಾಟೀಲ್​, 1995ರಲ್ಲಿ ಎಚ್​.ಡಿ.ದೇವೇಗೌಡ, 1996ರಲ್ಲಿ ಜೆ.ಎಚ್​.ಪಟೇಲ್​, 2011ರಲ್ಲಿ ಡಿ.ವಿ.ಸದಾನಂದಗೌಡ ಬಾಗಿನ ಅರ್ಪಿಸಿದ್ದಾರೆ. 1979ರಿಂದ ಈ ತನಕ 14 ವರ್ಷ ಕನ್ನಂಬಾಡಿ ಕಟ್ಟೆ ತುಂಬಿಲ್ಲ. ಆ ಅವಧಿಗಳಲ್ಲಿ ಬಾಗಿನ ಸಲ್ಲಿಕೆಯಾಗಿಲ್ಲ ಎಂಬುದು ಗಮನಾರ್ಹ.

    ನೀರಿನ ಸಂಗ್ರಹ ಪ್ರಮಾಣ: 124.80 ಅಡಿ ಗರಿಷ್ಠ ಸಂಗ್ರಹದ ಅಣೆಕಟ್ಟೆಯಲ್ಲಿ ಗುರುವಾರ ಸಂಜೆ ವೇಳೆಗೆ 124.70 ಅಡಿ ನೀರಿನ ಸಂಗ್ರಹವಾಗಿತ್ತು. 9734 ಕ್ಯೂಸೆಕ್​ ನೀರು ಒಳಹರಿವಿದ್ದರೆ, 3665 ಕ್ಯೂಸೆಕ್​ ನೀರನ್ನು ಹೊರಗೆ ಬಿಡಲಾಗುತ್ತಿದೆ.

    ಕುಡಿವ ನೀರಿನ ಪೈಪ್​ನಲ್ಲಿ ಮಾಂಸದ ಮುದ್ದೆ, ಮೂಳೆ ಪತ್ತೆ! ಬಗೆದಷ್ಟೂ ಜಟಿಲವಾಗ್ತಿದೆ ಯುವತಿ ಕಾಲಿನ ರಹಸ್ಯ…

    ಮನೆ ಮುಂದೆ ಬೆತ್ತಲಾಗಿ ತಿರುಗುತ್ತಿದ್ದ ಕಾಮುಕನಿಂದ ನಿನ್ನೆ ಸಂಜೆ ನಡೆಯಿತು ಘೋರ ಕೃತ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts