More

    ನೆಚ್ಚಿನ ಶಿಕ್ಷಕನಿಗೆ ಚಿನ್ನ-ಬೆಳ್ಳಿ ನೀಡಿ ಬೀಳ್ಕೊಟ್ಟ ಗ್ರಾಮಸ್ಥರು! ಕುಮಾರಪ್ಪಗೆ ಸನ್ಮಾನಿಸಲು ಸಾಲುಗಟ್ಟಿ ನಿಂತಿದ್ದ ಜನರು

    |ವಿಜಯಕುಮಾರ ನಾಡಿಗೇರ್ ಶಿಕಾರಿಪುರ
    ವೃತ್ತಿಯಲ್ಲಿ ವರ್ಗಾವಣೆ ಸಹಜ. ಆದರೆ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವರ್ಗಾವಣೆಯಾಗುವ ಸಂದರ್ಭದಲ್ಲಿ ಸಿಗುವ ಗೌರವ ಅವರ ವ್ಯಕ್ತಿತ್ವ ಮತ್ತು ಕರ್ತವ್ಯದಲ್ಲಿನ ಬದ್ಧತೆಯನ್ನು ಪ್ರತಿಬಿಂಬಿಸುತ್ತಿದೆ. ಪ್ರಾಥಮಿಕ ಶಾಲಾ ಶಿಕ್ಷಕರೊಬ್ಬರು ವರ್ಗಾವಣೆಯಾದ ಸಂದರ್ಭದಲ್ಲಿ ಇಡೀ ಊರಿಗೆ ಊರೇ ಮನೆಗೆ ಬೀಗ ಹಾಕಿಕೊಂಡು ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನೆನಪಿನ ಕಾಣಿಕೆ ನೀಡಿದೆ. ಜನ ಸಾಲುಗಟ್ಟಿ ನಿಂತು ಶಿಕ್ಷಕನಿಗೆ ಸನ್ಮಾನ ಮಾಡಿದ್ದಾರೆ. ಶಿಕ್ಷಕನಿಗೆ ತೊಡಿಸಿದ ಪೇಟ ಮತ್ತು ಹೂವಿನ ಹಾರಗಳಿಗೆ ಲೆಕ್ಕ ಇಲ್ಲ. ಚಿನ್ನ, ಬೆಳ್ಳಿ, ವಾಚ್ ಸೇರಿ ವಿವಿಧ ರೀತಿಯ ಉಡುಗೊರೆಗಳನ್ನು ನೀಡಿ ಶುಭ ಕೋರಿದ್ದಾರೆ.

    ಶಿಕಾರಿಪುರ ತಾಲೂಕು ಶಿವಾಜಿ ಕಣಿಯ ಗ್ರಾಮದ ಕಿರಿಯ ಪ್ರಾಥಮಿಕ ಶಾಲಾ ಶಿಕ್ಷಕ ಕುಮಾರಪ್ಪ ಇಂಥ ಗೌರವಕ್ಕೆ ಭಾಜನರಾದವರು. ಹೊಳಲ್ಕೆರೆ ತಾಲೂಕಿನ ಹಿರೇಕಂದವಾಡಿಯ ಕುಮಾರಪ್ಪ 27 ವರ್ಷದಿಂದ ಇಲ್ಲಿನ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ತವರು ಜಿಲ್ಲೆಯಲ್ಲಿ ಕೆಲಸ ಮಾಡುವ ಉದ್ದೇಶದಿಂದ ಹೊಳಲ್ಕೆರೆ ತಾಲೂಕಿನ ಕಾಗಳಗೆರೆ ಮೇಗಳಹಟ್ಟಿ ಶಾಲೆಗೆ ವರ್ಗಾವಣೆ ತೆಗೆದುಕೊಂಡಿದ್ದರು. ಅವರಿಗೆ ಶುಭ ವಿದಾಯ ಹೇಳಲು ಊರಿನ ಜನ ಅಭಿನಂದನಾ ಸಮಾರಂಭ ಏರ್ಪಡಿಸಿದ್ದರು. ಈ ಕಾರ್ಯಕ್ರಮ ಕೇವಲ ಔಪಚಾರಿಕವಾಗಿರಲಿಲ್ಲ. ಸುದೀರ್ಘ ವರ್ಷಗಳ ಕಾಲ ಕೆಲಸ ಮಾಡಿ ತಮ್ಮ ಮಕ್ಕಳ ಭವಿಷ್ಯ ರೂಪಿಸಲು ನೆರವಾಗಿದ್ದ ಶಿಕ್ಷಕರಿಗೆ ಪ್ರೀತಿಯ ಉಡುಗೊರೆ ನೀಡಲು ಮತ್ತು ಹಾರ ಹಾಕಲು ಮದುವೆ ಮನೆಯಲ್ಲಿ ನವದಂಪತಿಗೆ ಶುಭಕೋರಲು ಸಾಲುಗಟ್ಟಿದವರಂತೆ ನಿಂತಿದ್ದರು.

    ಶಿಕ್ಷಕನಿಗೆ ಜನರು ಹಾಕಿದ ಪೇಟ ಮತ್ತು ಹೂವಿನ ಹಾರಗಳಿಗೆ ಲೆಕ್ಕ ಇಲ್ಲ. ಚಿನ್ನ, ಬೆಳ್ಳಿ, ವಾಚ್ ಸೇರಿ ವಿವಿಧ ರೀತಿಯ ಉಡುಗೊರೆಗಳನ್ನು ನೀಡಿ ಶುಭ ಕೋರಿದರು. ಅಬಾಲ ವೃದ್ಧರಾದಿಯಾಗಿ ಹೆಣ್ಣುಮಕ್ಕಳು ಕೂಡ ಈ ಶುಭ ವಿದಾಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಜತೆಗೆ ಹಳೇ ಕಣಿಯ, ಗೋಪಾಲ ಕಣಿಯ, ಹಗುರವಳ್ಳಿ, ಕಪ್ಪನಹಳ್ಳಿ, ಚಿಕ್ಕಲವತ್ತಿ, ಹಿರೇಕಲವತ್ತಿ, ಸಂಡ ಗ್ರಾಮದ ಶಾಲೆಯ ಶಿಕ್ಷಕರೂ ಕೂಡ ಆಗಮಿಸಿ ಕುಮಾರಪ್ಪ ಅವರನ್ನು ಸನ್ಮಾನಿಸಿದರು. ಗ್ರಾಮಸ್ಥರಿಗೆಲ್ಲ ಪಾಯಸದ ಊಟದ ವ್ಯವಸ್ಥೆ ಮಾಡಲಾಗಿತ್ತು.

    ನೆಚ್ಚಿನ ಶಿಕ್ಷಕನಿಗೆ ಚಿನ್ನ-ಬೆಳ್ಳಿ ನೀಡಿ ಬೀಳ್ಕೊಟ್ಟ ಗ್ರಾಮಸ್ಥರು! ಕುಮಾರಪ್ಪಗೆ ಸನ್ಮಾನಿಸಲು ಸಾಲುಗಟ್ಟಿ ನಿಂತಿದ್ದ ಜನರು

    ಕುಮಾರಪ್ಪ ಬರೀ ಮೇಷ್ಟ್ರಾಗಿರಲಿಲ್ಲ, ಶಿವಾಜಿಕಣಿಯ ಗ್ರಾಮದ ಪ್ರೀತಿಯ ಅತಿಥಿಯಾಗಿದ್ದರು. ಒಬ್ಬ ಶಿಕ್ಷಕನ ಸಾಮಾಜಿಕ ಕಳಕಳಿ ಮತ್ತು ಶಿಕ್ಷಣ ಮತ್ತು ಮಕ್ಕಳ ಮೇಲಿನ ಪ್ರೇಮ, ಶ್ರದ್ಧೆ, ಕಾಯಕ ನಿಷ್ಠೆ ಮತ್ತು ನೈತಿಕತೆ, ನಡವಳಿಕೆ ಇಡೀ ಗ್ರಾಮದ ಜನರ ಮನಸನ್ನು ಗೆದ್ದಿತ್ತು. ಆಶ್ಚರ್ಯ ಎಂದರೆ ಇವರು ದಾರಿಯಲ್ಲಿ ಹೊರಟರೆ ಕಟ್ಟೆಯ ಮೇಲೆ ಕುಳಿತವರು ಎದ್ದು ನಮಸ್ಕಾರ ಮಾಡುತ್ತಿದ್ದರಂತೆ. ಬದುಕಿನ ಸಾರ್ಥಕತೆ ಎಂದರೆ ಇದೆ ಅಲ್ವಾ? ಇದಕ್ಕಿಂತ ಹೆಚ್ಚಿನ ಪ್ರಶಸ್ತಿಯ ಅಗತ್ಯ ಇದೆಯಾ? ಸದ್ದಿಲ್ಲದೇ ತನ್ನ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ ಕಾರಣಕ್ಕೆ ಸಮಾಜ ಅವರನ್ನು ಗುರುತಿಸಿ ಗೌರವಿಸಿತು.

    ನನಗೆ ಅತ್ಯಂತ ಸಂತಸ ಮತ್ತು ನೋವು ಎರಡೂ ಒಟ್ಟಿಗೇ ಆಗುತ್ತಿದೆ. ಇಡೀ ಗ್ರಾಮದ ಜನ ನನ್ನನ್ನು ಬರೀ ಶಿಕ್ಷಕನೆಂದು ಎಣಿಸದೆ ಕುಟುಂಬದ ಸದಸ್ಯನಂತೆ ಪ್ರೀತಿ ಕೊಟ್ಟಿದ್ದು ನನ್ನ ಬದುಕಿನ ಸಾರ್ಥಕತೆಯನ್ನು ತೋರಿದೆ. ಇಂತಹ ಕುಟುಂಬದಿಂದ ಬೇರೆ ಕಡೆಗೆ ಕಾರ್ಯನಿರ್ವಹಿಸಲು ಹೋಗುತ್ತಿರುವುದಕ್ಕೆ ನೋವಾಗಿದೆ.
    |ಕುಮಾರಪ್ಪ ವರ್ಗಾವಣೆಗೊಂಡ ಶಿಕ್ಷಕ

    ತನ್ನ ಕಾಯಕವನ್ನೇ ನಂಬಿ ಶ್ರದ್ಧೆಯಿಂದ ಮತ್ತು ಕಳಕಳಿಯಿಂದ ಕೆಲಸ ಮಾಡಿದವರನ್ನು ಸಮಾಜ ಅದೆಷ್ಟು ಪ್ರೀತಿಸುತ್ತದೆ ಎನ್ನುವುದಕ್ಕೆ ಈ ಕಾರ್ಯಕ್ರಮ ಪ್ರತ್ಯಕ್ಷ ಉದಾಹರಣೆ. ಜನ ಅವರನ್ನು ಬೀಳ್ಕೊಡುವಾಗ ಕಣ್ಣೀರಾದುದ್ದನ್ನು ನಾನು ಕಂಡೆ.
    |ಮಧುಕೇಶ್ವರ ಶಿಕ್ಷಕ, ತಾಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ

    ಕುಮಾರಪ್ಪ ಅವರು 27 ವರ್ಷ ನಮ್ಮೂರಲ್ಲಿ ಕೆಲಸ ಮಾಡಿದ್ದಾರೆ. ಅವರು ಕೇವಲ ಒಬ್ಬ ಶಿಕ್ಷಕನಾಗಿರಲಿಲ್ಲ. ಈ ಊರಿನ ಕುಟುಂಬದ ಕುಮಾರನಂತೆಯೇ ಇದ್ದರು. ಶಾಲೆ ಬಿಟ್ಟ ಮಕ್ಕಳನ್ನು ಗುರುತಿಸಿ ಕರೆತಂದು ವಿದ್ಯಾದಾನ ಮಾಡುತ್ತಿದ್ದರು. ಅವರ ಕೈಯಿಂದಲೇ ಖರ್ಚು ಮಾಡಿ ಶಾಲೆಯ ಅಭಿವೃದ್ಧಿ ಮಾಡಿದ್ದರು. ಅವರ ಶ್ರದ್ಧೆ ಮತ್ತು ವಿಶ್ವಾಸ ನಮ್ಮನ್ನು ಅವರ ಸ್ನೇಹದಲ್ಲಿ ಕಟ್ಟಿಹಾಕಿದೆ.
    |ಬೀರಪ್ಪ ಎಸ್‌ಡಿಎಂಸಿ ಅಧ್ಯಕ್ಷ

    ನಟ ಚಿಕ್ಕಣ್ಣರ ಬಗ್ಗೆ ಜಾಲತಾಣದಲ್ಲಿ ಸುಳ್ಳು ಸುದ್ದಿ: ಶೂಟಿಂಗ್​ ಸ್ಥಳದಿಂದಲೇ ಸ್ಪಷ್ಟನೆ ಕೊಟ್ಟ ಕಾಮಿಡಿ ಕಿಂಗ್​

    ನೆರೆಮನೆಯ ಸ್ತ್ರೀಯರ ಜತೆ ಶಿಕ್ಷಕನ ಕಾಮದಾಟದ ವಿಡಿಯೋ ವೈರಲ್​! ಆಟ-ಪಾಠದ ನೆಪದಲ್ಲಿ ಮಕ್ಕಳನ್ನೂ ಬಿಟ್ಟಿಲ್ಲ

    ಡಿಕೆಶಿ ಬುಡ ಅಲ್ಲಾಡಿಸಲು ತ್ರಿಶೂಲವ್ಯೂಹ! ‘ವಿಶ್ವನಾಥ್’ ಅಸ್ತ್ರ ಬಳಕೆಗೆ ಅಶ್ವಥ್ ನಾರಾಯಣ, ಸಿಪಿವೈ, ಜಾರಕಿಹೊಳಿ ರಣತಂತ್ರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts