More

    ಸರ್ಕಾರಿ ಹುದ್ದೆಗಳಲ್ಲಿ ತೃತೀಯ ಲಿಂಗಿಗಳಿಗೆ ಮೀಸಲಾತಿ! ದೇಶದಲ್ಲೇ ಈ ಸೌಲಭ್ಯ ಕೊಟ್ಟ ಮೊದಲ ರಾಜ್ಯ ಕರ್ನಾಟಕ

    ಬೆಂಗಳೂರು: ಸರ್ಕಾರಿ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಶೇ.1 ಸಮತಲ ಮೀಸಲು ಕಲ್ಪಿಸುವ ಸಲುವಾಗಿ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮ-1977ಕ್ಕೆ ತಿದ್ದುಪಡಿ ತಂದು ಅಧಿಸೂಚನೆ ಹೊರಡಿಸಲಾಗಿದೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್​ಗೆ ಮಾಹಿತಿ ನೀಡಿದೆ. ಈ ಮೂಲಕ ತೃತೀಯ ಲಿಂಗಿಗಳಿಗೆ ಮೀಸಲಾತಿ ಕಲ್ಪಿಸಿದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ.

    ರಾಜ್ಯ ವಿಶೇಷ ಮೀಸಲು ಕಾನ್​ಸ್ಟೇಬಲ್ ಪಡೆ ಹಾಗೂ ಬ್ಯಾಂಡ್ಸ್​ಮೆನ್ ಹುದ್ದೆಗಳ ನೇಮಕಾತಿಯಲ್ಲಿ ತೃತೀಯ ಲಿಂಗಿಗಳಿಗೆ ಅವಕಾಶ ಕಲ್ಪಿಸದಿರುವುದನ್ನು ಪ್ರಶ್ನಿಸಿ ‘ಸಂಗಮ’ ಸ್ವಯಂಸೇವಾ ಸಂಸ್ಥೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಿಜೆ ಎ.ಎಸ್. ಓಕ್ ನೇತೃತ್ವದ ವಿಭಾಗೀಯ ಪೀಠ ಮಂಗಳವಾರ ವಿಚಾರಣೆ ನಡೆಸಿತು.

    ಸರ್ಕಾರದ ಪರ ವಕೀಲ ವಿಜಯ್ ಕುಮಾರ್ ಎ. ಪಾಟೀಲ್ ಮಾಹಿತಿ ನೀಡಿ, ರಾಜ್ಯದಲ್ಲಿ ಸರ್ಕಾರಿ ನೇಮಕಾತಿಗಳಲ್ಲಿ ತೃತೀಯ ಲಿಂಗಿಗಳಿಗೆ ಶೇ.1 ಸಮತಲ ಮೀಸಲಾತಿ (ಹಾರಿಜಾಂಟಲ್ ರಿಸರ್ವೆಷನ್) ಕಲ್ಪಿಸಲಾಗಿದೆ. ಈ ಸಂಬಂಧ ಕರ್ನಾಟಕ ನಾಗರಿಕ ಸೇವಾ (ಸಾಮಾನ್ಯ ನೇಮಕಾತಿ) ನಿಯಮ-1977ರ ನಿಯಮ 9ಕ್ಕೆ ತಿದ್ದುಪಡಿ ತಂದು 1(ಡಿ) ಸೇರ್ಪಡೆಗೊಳಿಸಲಾಗಿದ್ದು, ಜು. 6ರಂದು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ ಎಂದು ಮಾಹಿತಿ ನೀಡಿದರು. ಸರ್ಕಾರದ ಹೇಳಿಕೆಯನ್ನು ನ್ಯಾಯಪೀಠ ದಾಖಲಿಸಿಕೊಂಡಿತು.

    ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಅರ್ಜಿ ಸಲ್ಲಿಸಿರುವ ‘ಜೀವ’ ಸ್ವಯಂಸೇವಾ ಸಂಸ್ಥೆಯ ಪರ ಹಿರಿಯ ವಕೀಲೆ ಜೇಯ್ನಾ ಕೊಠಾರಿ ವಾದ ಮಂಡಿಸಿ, ತಿದ್ದುಪಡಿ ನಿಯಮ ಕೇವಲ ಸರ್ಕಾರಿ ಹುದ್ದೆಗಳಿಗೆ ಮಾತ್ರ ಅನ್ವಯಿಸುತ್ತದೆ. ಆದ್ದರಿಂದ, ಸರ್ಕಾರದ ಇತರ ನಿಗಮ, ಮಂಡಳಿ ಹಾಗೂ ಪ್ರಾಧಿಕಾರಗಳ ನೇಮಕಾತಿಗಳಲ್ಲಿ ತಿದ್ದುಪಡಿ ನಿಯಮ ಜಾರಿಗೆ ತರಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದರು.

    ಈ ಸಂಬಂಧ ಪ್ರತ್ಯೇಕ ಅರ್ಜಿ ಸಲ್ಲಿಸಿದರೆ, ನ್ಯಾಯಾಲಯ ಸೂಕ್ತ ನಿರ್ದೇಶನ ನೀಡಲಿದೆ ಎಂದು ವಕೀಲೆ ಜೈನಾ ಕೊಠಾರಿ ಅವರಿಗೆ ನ್ಯಾಯಪೀಠ ತಿಳಿಸಿತು. ಇದೇ ವೇಳೆ, ತೃತೀಯ ಲಿಂಗಿಗಳ ಮೀಸಲಾತಿ ವಿಚಾರದಲ್ಲಿ ಕೇಂದ್ರ ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬ ಬಗ್ಗೆ 2 ವಾರಗಳಲ್ಲಿ ಮಾಹಿತಿ ನೀಡುವಂತೆ ಕೇಂದ್ರದ ಪರ ವಕೀಲರಿಗೆ ಸೂಚಿಸಿದ ಪೀಠ, ವಿಚಾರಣೆಯನ್ನು ಆ.18ಕ್ಕೆ ಮುಂದೂಡಿತು.

    ದೇಶದಲ್ಲೇ ಮೊದಲು: ಹಿರಿಯ ವಕೀಲೆ ಜೈನಾ ಕೊಠಾರಿ, ದೇಶದ ಯಾವ ರಾಜ್ಯಗಳಲ್ಲೂ ತೃತೀಯ ಲಿಂಗಿಗಳಿಗೆ ಸರ್ಕಾರಿ ಹುದ್ದೆಗಳಲ್ಲಿ ಮೀಸಲಾತಿ ಕಲ್ಪಿಸಲಾಗಿಲ್ಲ. ಮೀಸಲಾತಿ ಕಲ್ಪಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಕರ್ನಾಟಕ ಪಾತ್ರವಾಗಿದೆ. ರಾಜ್ಯ ಸರ್ಕಾರದ ಕ್ರಮ ನಿಜಕ್ಕೂ ಶ್ಲಾಘನೀಯ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ನ್ಯಾಯಾಲಯ ಸಹ ಸರ್ಕಾರದ ಕ್ರಮವನ್ನು ಪ್ರಶಂಸಿಸಿತು.

    ಅಧಿಸೂಚನೆಯಲ್ಲಿ ಏನಿದೆ?

    • ಸರ್ಕಾರದ ಯಾವುದೇ ನೇಮಕಾತಿಯಲ್ಲಿ ಸಾಮಾನ್ಯ ವರ್ಗ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಹಿಂದುಳಿದ ವರ್ಗಗಳ ಪ್ರತಿಯೊಂದು ಪ್ರವರ್ಗದಿಂದಲೂ ಶೇ.1 ಹುದ್ದೆ ತೃತೀಯ ಲಿಂಗಿಗಳಿಗೆ ಮೀಸಲು ಇರಿಸತಕ್ಕದ್ದು.
    • ನೇಮಕಾತಿ ಪ್ರಾಧಿಕಾರಗಳು ಗ್ರೂಪ್ ಎ, ಬಿ,ಸಿ ಮತ್ತು ಡಿ ವೃಂದಗಳ ಹುದ್ದೆಗಳ ಭರ್ತಿಗೆ ಆಹ್ವಾನಿಸುವ ಅರ್ಜಿಯಲ್ಲಿ ತೃತಿಯ ಲಿಂಗ ಅಭ್ಯರ್ಥಿಗಳ ಅನುಕೂಲಕ್ಕಾಗಿ ಪುರುಷ ಮತ್ತು ಸ್ತ್ರೀ ಜತೆಗೆ ‘ಇತರ’ ಎಂಬ ಪ್ರತ್ಯೇಕ ಕಾಲಂ ಕಲ್ಪಿಸಬೇಕು.
    • ಯಾವುದೇ ಆಯ್ಕೆ ಮತ್ತು ನೇಮಕಾತಿ ಪ್ರಾಧಿಕಾರ ಆಯ್ಕೆ ಪ್ರಕ್ರಿಯೆಯಲ್ಲಿ ತೃತೀಯ ಲಿಂಗಿಗಳಿಗೆ ತಾರತಮ್ಯ ಮಾಡುವಂತಿಲ್ಲ.
    • ತೃತೀಯ ಲಿಂಗಿಗಳಿಗೆ ಮೀಸಲಿಟ್ಟ ಹುದ್ದೆಗಳಿಗೆ ಸೂಕ್ತ ಅಭ್ಯರ್ಥಿಗಳು ಸಿಗದಿದ್ದರೆ, ಆ ಹುದ್ದೆಗಳನ್ನು ಅದೇ ಪ್ರವರ್ಗದ ಪುರುಷ ಅಥವಾ ಮಹಿಳಾ ಅಭ್ಯರ್ಥಿಯಿಂದ ಭರ್ತಿ ಮಾಡತಕ್ಕದ್ದು.

    5 ತಿಂಗಳ ಮಗುವಿನ ಚಿಕಿತ್ಸೆಗೆ 18 ಕೋಟಿ ರೂಪಾಯಿ! ಅಸಹಾಯಕ ಸ್ಥಿತಿಯಲ್ಲಿ ಬಡ ಕುಟುಂಬ

    ಭವಿಷ್ಯ ಕಟ್ಟಿಕೊಳ್ಳಲು ಹುಟ್ಟೂರು ಬಿಟ್ಟು ಬಂದಿದ್ದ ಅಣ್ಣ-ತಂಗಿ ನಿದ್ರೆಯಲ್ಲಿರುವಾಗಲೇ ಹೆಣವಾದರು!

    ಇದೆಂಥಾ ದುರ್ಬುದ್ಧಿ… ಆಂಬುಲೆನ್ಸ್​ಗೆ ದಾರಿ ಬಿಡದೆ ತೊಂದರೆ ಕೊಟ್ಟ

    ಆ ಪ್ರಾಪರ್ಟಿ ದೊಡ್ಡಮನೆಯವರದ್ದು, ಹಾಗಾಗಿ ದರ್ಶನ್​ಗೆ ಆಸ್ತಿ ಕೊಡಲ್ಲ ಅಂದೆ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts