ಭೋಪಾಲ್: ತನ್ನ ಮೇಲೆ 10 ತಿಂಗಳಿಂದ ನಿರಂತರವಾಗಿ ಅತ್ಯಾಚಾರ ಎಸಗುತ್ತಿದುದ್ದಲ್ಲದೆ, ಕೆಲಸ ಬಿಡದಂತೆ ತಡೆಯುತ್ತಿದ್ದ ಅಬಕಾರಿ ಇಲಾಖೆಯ ಸಬ್ ಇನ್ಸ್ಪೆಕ್ಟರ್ (ಎಸ್ಐ) ಅನ್ನು ಸ್ವತಃ ಬಾಲಕಿಯೇ ಪೊಲೀಸರ ವಶಕ್ಕೆ ಒಪ್ಪಿಸಿದ್ದಾಳೆ.
ಮಧ್ಯಪ್ರದೇಶ ಅಬಕಾರಿ ಇಲಾಖೆಯ ಎಸ್ಐ ಪಂಕಜ್ ಜೈನ್ ಬಂಧಿತರು. ಉಜ್ಜೈನ್ನಲ್ಲಿನ ಹೋಟೆಲ್ಗೆ ಬರುವಂತೆ ಬಾಲಕಿಗೆ ಸೂಚಿಸಿದ್ದ ಎಸ್ಐ, ಬೇರೊಬ್ಬರ ಹೆಸರಿನಲ್ಲಿ ಕೊಠಡಿಯನ್ನು ಕಾಯ್ದಿರಿಸಿದ್ದರು. ಅಲ್ಲಿಗೆ ಪೊಲೀಸ್ ತಂಡದೊಂದಿಗೆ ಹೋದ ಬಾಲಕಿ ಎಸ್ಐ ಅವರನ್ನು ಹಿಡಿದುಕೊಟ್ಟಳು ಎನ್ನಲಾಗಿದೆ.
ಪಂಕಜ್ ಜೈನ್ ಮನೆಯಲ್ಲಿ 17 ವರ್ಷದ ಬಾಲಕಿ ಮನೆಗೆಲಸ ಮಾಡುತ್ತಿದ್ದಳು. ಕಳೆದ 10 ತಿಂಗಳಿಂದ ಆಕೆಯ ಮೇಲೆ ಎಸ್ಐ ನಿರಂತರವಾಗಿ ಅತ್ಯಾಚಾರ ಎಸಗುತ್ತಿದ್ದರು. ಇವರ ಪೀಡನೆಗೆ ಬೇಸತ್ತು ಆಕೆ ಕೆಲಸ ಬಿಡಲು ಮುಂದಾದಾಗ, ಸುಳ್ಳು ಪೊಲೀಸ್ ಕೇಸ್ನಲ್ಲಿ ಸಿಲುಕಿಸಿ ಜೈಲಿಗೆ ಕಳುಹಿಸುವುದಾಗಿ ಬೆದರಿಸುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ: ಅನ್ಲಾಕ್-2: ಇನ್ಮುಂದೆ ರಾಜ್ಯದಲ್ಲಿ ರಾತ್ರಿ 9 ಗಂಟೆಯಿಂದ ಕರ್ಫ್ಯೂ…
ಸೋಮವಾರದಂದು (ಜು.20) ಉಜ್ಜೈನ್ನ ಹೋಟೆಲ್ ಬರುವಂತೆ ತಾಕೀತು ಮಾಡಿದ್ದ ಎಸ್ಐ, ಬೇರೊಬ್ಬರ ಹೆಸರಿನಲ್ಲಿ ಕೊಠಡಿ ಕಾಯ್ದಿರಿಸಿದ್ದರು ಎನ್ನಲಾಗಿದೆ. ಪೀಡನೆಯಿಂದ ಬೇಸತ್ತಿದ್ದ ಬಾಲಕಿ ಇವರಿಂದ ಬಿಡುಗಡೆ ಪಡೆಯಲೇ ಬೇಕು ಎಂಬ ಗಟ್ಟಿ ನಿರ್ಧಾರ ಕೈಗೊಂಡು, ಸ್ಥಳೀಯ ಪೊಲೀಸ್ ತಂಡದೊಂದಿಗೆ ಹೋಟೆಲ್ಗೆ ತೆರಳಿದ್ದಳು.
ಮೊದಲು ಒಳ ಹೋದ ಪೊಲೀಸರಿಗೆ ಪಂಕಜ್ ಜೈನ್ ಏನೇನೋ ಸಬೂಬು ಹೇಳಿ ಸಾಗಹಾಕಲು ಯತ್ನಿಸಿದ್ದರು. ಆದರೆ, ಬಾಲಕಿ ಕೊಠಡಿಗೆ ಬಂದು ವಾಸ್ತವವನ್ನು ವಿವರಿಸಿದ ನಂತರದಲ್ಲಿ ನಿರುತ್ತರರಾದ ಪಂಕಜ್ ಜೈನ್ ಪೊಲೀಸರಿಗೆ ಶರಣಾದರು ಎನ್ನಲಾಗಿದೆ.
ಈ ವಿಷಯವನ್ನು ತಿಳಿಸಿದ ಉಜ್ಜೈನ್ನ ಸಿಎಸ್ಪಿ ರಜನೀಶ್ ಕಶ್ಯಪ್, ಸದ್ಯ ಪಂಕಜ್ ಜೈನ್ ಅವರನ್ನು ಬಂಧಿಸಲಾಗಿದೆ. ಪೋಕ್ಸೋ ಕಾಯ್ದೆಯಡಿ ಅವರ ಮೇಲೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.