ದುಬೈ: ಕರೊನಾ ವೈರಸ್ ಭೀತಿಯಿಂದಾಗಿ ಭಾರತೀಯ ಕ್ರೀಡಾ ಚಟುವಟಿಕೆಗಳೇ ಸಂಪೂರ್ಣ ಅಸ್ತವ್ಯಸ್ಥವಾಗಿವೆ. ದಿನದಿಂದ ದಿನಕ್ಕೆ ಕರೊನಾ ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಸದ್ಯಕ್ಕೆ ಯಾವುದೇ ಕ್ರೀಡಾ ಚಟುವಟಿಕೆಗಳು ಆರಂಭಗೊಳ್ಳುವ ಲಕ್ಷಣವಿಲ್ಲ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಪಾಲಿನ ಚಿನ್ನದ ಮೊಟ್ಟೆಯಂತಿರುವ ಇಂಡಿಯನ್ ಪ್ರೀಮಿಯರ್ ಲೀಗ್ಗೂ (ಐಪಿಎಲ್) ಮುಹೂರ್ತ ಕೂಡಿಬಂದಿಲ್ಲ. ಟಿ20 ವಿಶ್ವಕಪ್ ಮುಂದೂಡಿಕೆಯಾದರೆ ಈ ವೇಳೆ ಐಪಿಎಲ್ ಆಯೋಜಿಸಲು ಬಿಸಿಸಿಐ ಯೋಜನೆ ರೂಪಿಸಿದೆ. ಮತ್ತೊಂದೆಡೆ, ಇಂಥ ಪ್ರತಿಷ್ಠಿತ ಲೀಗ್ ಆಯೋಜಿಸಲು ಬಿಸಿಸಿಐ ತೀರ್ಮಾನಿಸಿದರೆ, ಸಂಪೂರ್ಣ ಸನ್ನದ್ಧವಾಗಿರುವುದಾಗಿ ದುಬೈ ಸ್ಪೋರ್ಟ್ಸ್ ಸಿಟಿಯ ಕ್ರಿಕೆಟ್ ಮುಖ್ಯಸ್ಥ ಸಲ್ಮಾನ್ ಹನೀಫ್ ಹೇಳಿದ್ದಾರೆ.
ಇದನ್ನೂ ಓದಿ: ದ್ಯುತಿಗಿಲ್ಲ ಪ್ರಾಯೋಜಕರ ಕೊರತೆ, ಕಾರು ಮಾರಾಟಕ್ಕೆ ರೈಲು ಬಿಟ್ಟ ಅಥ್ಲೀಟ್!
ಎಲ್ಲವೂ ಅಂದುಕೊಂಡಂತೆ ಆಗಿದ್ದರೆ ಈ ವೇಳೆಗೆ ಐಪಿಎಲ್ ಮುಕ್ತಾಯಗೊಂಡು ಒಂದೂವರೆ ತಿಂಗಳಾಗಬೇಕಿತ್ತು. ಆದರೆ, ಕೋವಿಡ್-19 ಮಹಾಮಾರಿ ಎಲ್ಲದಕ್ಕೂ ಅಡ್ಡಿಯಾಗಿದೆ. ಇಂಥ ಸಂಕಷ್ಟದ ಸಮಯದಲ್ಲೂ ಶತಾಯಗತಾಯ ಐಪಿಎಲ್ ಆಯೋಜಿಸಲು ತೀರ್ಮಾನಿಸಿರುವ ಬಿಸಿಸಿಐ, ಹಲವು ಮಾರ್ಗಗಳನ್ನು ಹುಡುಕುತ್ತಿದೆ. ಯುಎಇಯಲ್ಲಿ ಐಪಿಎಲ್ ಆಯೋಜಿಸಲಾಗುತ್ತಿದೆ ಎಂಬ ಊಹಾಪೋಹಗಳಿಗೆ ಪ್ರತಿಕ್ರಿಯಿಸಿರುವ ದುಬೈ ಸ್ಪೋರ್ಟ್ಸ್ ಸಿಟಿ ಮುಖ್ಯಸ್ಥರು, ಐಪಿಎಲ್ ಆಯೋಜಿಸಲು ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಡುವುದಾಗಿ ಹೇಳಿದ್ದಾರೆ. ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂ ಸೇರಿದಂತೆ, ಕೆಲ ಸ್ಟೇಡಿಯಂಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಆದರೆ, ಐಸಿಸಿ ಟಿ20 ವಿಶ್ವಕಪ್ ಮುಂದೂಡಿಕೆ ಕುರಿತು ಅಂತಿಮ ತೀರ್ಮಾನ ಕೈಗೊಂಡರಷ್ಟೇ ಬಿಸಿಸಿಐ ಐಪಿಎಲ್ ಭವಿಷ್ಯ ನಿರ್ಧರಿಸಲಿದೆ. ಭಾರತಕ್ಕೆ ಹೋಲಿಸಿದರೆ ಯುಎಇಯಲ್ಲಿ ಕೋವಿಡ್-19ರ ಅಬ್ಬರ ಕಡಿಮೆಯಿದೆ. ಇದುವರೆಗೂ 50 ಸಾವಿರಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದರೂ 300 ಮಂದಿ ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ಮುಂಬೈ ಫುಟ್ಬಾಲ್ ಕೋಚ್ಗಳು ಈಗ ತರಕಾರಿ, ಕಬಾಬ್ ಮಾರುತ್ತಿದ್ದಾರೆ!
ಎಷ್ಟೇ ತಂಡಗಳು ಆಗಮಿಸಿದರೂ ಅಭ್ಯಾಸಕ್ಕೆ ವ್ಯವಸ್ಥೆ ಮಾಡಿಕೊಡಬಹುದು. ಐಸಿಸಿ ಅಕಾಡೆಮಿವೊಂದರಲ್ಲೇ 38 ಪಿಚ್ಗಳಿವೆ. ಎರಡು ಓವೆಲ್ ಮೈದಾನಗಳಿವೆ. ಜತೆಗೆ ಒಳಾಂಗಣದ ವ್ಯವಸ್ಥೆ ಮಾಡಲಾಗಿದೆ ಎಂದು ಹನೀಫ್ ಹೇಳಿದ್ದಾರೆ. 2014ರಲ್ಲಿ ಸಾರ್ವತ್ರಿಕ ಚುನಾವಣೆ ಹಿನ್ನೆಲೆಯಲ್ಲಿ ದುಬೈನಲ್ಲಿ ಕೆಲ ಪಂದ್ಯಗಳನ್ನು ಆಯೋಜಿಸಲಾಗಿತ್ತು. 2009ರಲ್ಲಿ ಸಂಪೂರ್ಣ ಟೂರ್ನಿಯನ್ನು ದಕ್ಷಿಣ ಆಫ್ರಿಕಾಗೆ ಸ್ಥಳಾಂತರಿಸಲಾಗಿತ್ತು.
ಯುಎಇಯಲ್ಲಿ ಐಪಿಎಲ್ ಆಯೋಜನೆಗೆ ಬಿಸಿಸಿಐ ಪ್ಲ್ಯಾನ್ ಹೇಗಿದೆ ಗೊತ್ತಾ?