ಹೋಬರ್ಟ್: ಭಾರತದ ಅಗ್ರ ಆಟಗಾರ್ತಿ ಸಾನಿಯಾ ಮಿರ್ಜಾ ತಾಯ್ತನದ ಬಿಡುವಿನ ಬಳಿಕ ಗೆಲುವಿನೊಂದಿಗೆ ವೃತ್ತಿಪರ ಟೆನಿಸ್ಗೆ ಮರಳಿದ್ದಾರೆ. ಹೋಬರ್ಟ್ ಇಂಟರ್ನ್ಯಾಷನಲ್ ಟೆನಿಸ್ ಟೂರ್ನಿಯ ಮಹಿಳೆಯರ ಡಬಲ್ಸ್ ವಿಭಾಗದಲ್ಲಿ ಉಕ್ರೇನ್ನ ನಾಡಿಯಾ ಕಿಚೆನೋಕ್ ಜತೆಯಾಗಿ ಆಡಿದ 33 ವರ್ಷದ ಸಾನಿಯಾ ಮಿರ್ಜಾ ಕ್ವಾರ್ಟರ್ಫೈನಲ್ಗೇರಿದ್ದಾರೆ.
ಎರಡು ವರ್ಷಗಳ ಬಳಿಕ ಡಬ್ಲ್ಯುಟಿಎ ಸರ್ಕ್ಯೂಟ್ಗೆ ಮರಳಿದ ಸಾನಿಯಾ ಹಾಗೂ ಕಿಚನೋಕ್ 2-6, 7-6 (3), 10-3 ರಿಂದ ಜಾರ್ಜಿಯಾದ ಒಕ್ಸಾನಾ ಕಲಾಶ್ನಿಕೋವಾ ಹಾಗೂ ಜಪಾನ್ನ ಮಿಯು ಕಾಟೋ ಜೋಡಿಯನ್ನು 1 ಗಂಟೆ 41 ನಿಮಿಷದ ಹೋರಾಟದಲ್ಲಿ ಮಣಿಸಿದರು. ಇಂಡೋ-ಉಕ್ರೇನ್ ಜೋಡಿ ಮುಂದಿನ ಸುತ್ತಿನಲ್ಲಿ ಅಮೆರಿಕದ ವಾನಿಯಾ ಕಿಂಗ್ ಹಾಗೂ ಕ್ರಿಸ್ಟಿನಾ ಮೆಕ್ಹಾಲೆ ಜೋಡಿಯನ್ನು ಎದುರಿಸಲಿದೆ. ಅಮೆರಿಕದ ಜೋಡಿ, 4ನೇ ಶ್ರೇಯಾಂಕದ ಜೋಡಿ ಸ್ಪೇನ್ನ ಜಿಯಾರ್ಜಿನಾ ಗಾರ್ಸಿಯಾ ಪರೇಜ್ ಹಾಗೂ ಸಾರಾ ಸೋರಿಬೆಸ್ ಟೋರ್ವೆರನ್ನು 6-2, 7-5 ರಿಂದ ಸೋಲಿಸಿತು.
ಸಾನಿಯಾ ಜೋಡಿ ಉತ್ತಮ ಆರಂಭ ಪಡೆದುಕೊಂಡಿರಲಿಲ್ಲ. ಮೊದಲ ಸೆಟ್ನ ಆರಂಭದಲ್ಲಿಯೇ ಡಬಲ್ ಫಾಲ್ಟ್ ಮಾಡಿ ಕೊಂಡಿದ್ದಲ್ಲದೆ, ತಮಗೆ ಸಿಕ್ಕಿದ 7 ಬ್ರೇಕ್ ಪಾಯಿಂಟ್ ಅವಕಾಶವನ್ನು ಬಳಸಿಕೊಳ್ಳುವಲ್ಲಿ ವಿಫಲರಾದರು. ಎರಡು ಬಾರಿ ಸರ್ವ್ ಬ್ರೇಕ್ಗೂ ಒಳಗಾಗಿದ್ದರಿಂದ ಸೋಲು ಕಂಡಿದ್ದರು. ಆದರೆ, 2ನೇ ಸೆಟ್ನಲ್ಲಿ ಎದುರಾಳಿ ಆಟಗಾರ್ತಿಯರ ಅಸ್ಥಿರ ನಿರ್ವಹಣೆ ಸಮಬಲ ಸಾಧಿಸಲು ನೆರವಾಯಿತು. ಅಂತಿಮ ಸೆಟ್ನಲ್ಲಿ ಸಾನಿಯಾ ಜೋಡಿ ಅದ್ಭುತ ನಿರ್ವಹಣೆ ತೋರುವ ಮೂಲಕ ಗೆಲುವು ಕಂಡರು. ಗಾಯದಿಂದಾಗಿ ವಿಶ್ರಾಂತಿ ಪಡೆದುಕೊಂಡಿದ್ದ ಸಾನಿಯಾ, 2018ರ ಏಪ್ರಿಲ್ನಿಂದ ಪುತ್ರ ಇಜಾನ್ನ ಜನನದ ಕಾರಣದಿಂದಾಗಿ ಟೆನಿಸ್ನಿಂದ ವಿಶ್ರಾಂತಿ ಪಡೆದುಕೊಂಡಿದ್ದರು. 2017ರ ಅಕ್ಟೋಬರ್ನಲ್ಲಿ ನಡೆದ ಚೀನಾ ಓಪನ್ನಲ್ಲಿ ಸಾನಿಯಾ ಕೊನೆಯದಾಗಿ ಆಡಿದ್ದರು.
ಭಾರತೀಯ ಟೆನಿಸ್ನ ಅಗ್ರ ಹೆಸರುಗಳಲ್ಲಿ ಒಂದಾಗಿರುವ ಸಾನಿಯಾ, ಹಿಂದೊಮ್ಮೆ ಡಬಲ್ಸ್ನಲ್ಲಿ ನಂ.1 ಆಟಗಾರ್ತಿಯಾಗಿದ್ದರು. ಅದಲ್ಲದೆ, 6 ಗ್ರಾ್ಯಂಡ್ ಸ್ಲಾಂ ಪ್ರಶಸ್ತಿಗಳನ್ನೂ ಇವರು ಜಯಿಸಿದ್ದಾರೆ.