More

    55 ಇಲೆಕ್ಟ್ರಿಕ್ ಚಿಗರಿ ಶೀಘ್ರ ಸೇರ್ಪಡೆ

    ಹುಬ್ಬಳ್ಳಿ: ಈಗಾಗಲೇ ಪ್ರಾಯೋಗಿಕ ಸಂಚಾರ ಕೈಗೊಂಡಿರುವ ಬಿಆರ್​ಟಿಎಸ್ ಯೋಜನೆ ಫೆ. 2ರಂದು ಲೋಕಾರ್ಪಣೆಯಾಗಲಿದ್ದು, ಶೀಘ್ರ 55 ಇಲೆಕ್ಟ್ರಿಕ್ ಬಸ್​ಗಳು ಸಹ ಸೇರ್ಪಡೆಯಾಗಲಿವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ತಿಳಿಸಿದರು.

    ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಯೋಜನೆ ಉದ್ಘಾಟಿಸುವರು. ಮುಖ್ಯಮಂತ್ರಿ ಯಡಿಯೂರಪ್ಪ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಇತರ ಗಣ್ಯರು ಪಾಲ್ಗೊಳ್ಳುವರು ಎಂದರು.

    ವಿಶ್ವ ಬ್ಯಾಂಕ್ ನೆರವಿನೊಂದಿಗೆ ಈವರೆಗೆ 970 ಕೋಟಿ ರೂ. ಖರ್ಚು ಮಾಡಲಾಗಿರುವ ಬಿಆರ್​ಟಿಎಸ್ (ತ್ವರಿತ ಬಸ್ ಸಂಚಾರ ವ್ಯವಸ್ಥೆ) ಯಶಸ್ವಿ ಹಾಗೂ ಮಾದರಿ ಯೋಜನೆಯಾಗಿದೆ. 100 ಬಸ್​ಗಳು ಸದ್ಯ ಓಡಾಡುತ್ತಿದ್ದು, ಅರ್ಟಿಕ್ಯೂಲಿಟೆಡ್ ಬಸ್ ಬದಲಾಗಿ 55 ಇಲೆಕ್ಟ್ರಿಕ್ ಬಸ್ ಖರೀದಿಸುವ ಆಲೋಚನೆ ಇದೆ ಎಂದು ಒಟ್ಟಾರೆ ಯೋಜನೆಯ ಪರಿಚಯ ನೀಡಿದರು.

    ಆರಂಭದಲ್ಲಿ ಬಹುತೇಕ ಯೋಜನೆಗಳು ಲಾಭದಲ್ಲಿ ಇರುವುದಿಲ್ಲ. ಲೋಪದೋಷಗಳು ಸಾಮಾನ್ಯ. ಅವುಗಳನ್ನು ಸರಿಪಡಿಸಿಕೊಳ್ಳಲಾಗುವುದು. ಬೆಂಗಳೂರು ಮೆಟ್ರೋ ಕೂಡ ನಷ್ಟದಲ್ಲಿದೆ ಎಂದರು.

    ಹೊಸ ಡಿಸೈನ್:

    ನವಲೂರ ಬಳಿ ಸೇತುವೆ ನಿರ್ವಿುಸಬೇಕಿದೆ. ಗ್ರಾಮಸ್ಥರ ಕೋರಿಕೆಯಂತೆ ಸೇತುವೆ ವಿನ್ಯಾಸ ಬದಲಾಯಿಸಲಾಗುತ್ತಿದೆ. ಅದಕ್ಕಾಗಿ 6.50 ಕೋಟಿ ರೂ. ಮಂಜೂರಾಗಿದೆ. ಕಾರಿಡಾರ್​ನಲ್ಲಿ ಮಳೆ ನೀರು ನಿಲ್ಲದಂತೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲಲ್ಲಿ ಶೌಚಗೃಹ ನಿರ್ವಿುಸಲಾಗುವುದು. ಪ್ರತ್ಯೇಕ ಪೊಲೀಸ್ ಠಾಣೆ ನಿರ್ವಣ, ವಿಮಾನ ನಿಲ್ದಾಣವರೆಗೆ ಯೋಜನೆ ವಿಸ್ತರಣೆ ಬಗ್ಗೆ ಆಲೋಚನೆ ನಡೆದಿದೆ ಎಂದು ಶೆಟ್ಟರ್ ಹೇಳಿದರು.

    ಹೊಸೂರ ಇಂಟರ್​ಚೇಂಜ್​ಗೆ ಹಳೇ ಬಸ್ ನಿಲ್ದಾಣದ ಬಹುತೇಕ ಬಸ್​ಗಳನ್ನು ಶೀಘ್ರ ಸ್ಥಳಾಂತರಿಸಲಾಗುವುದು ಎಂದೂ ಹೇಳಿದರು.

    ಬೇಂದ್ರೆ ಶೀಘ್ರ ಸ್ಥಗಿತ:

    ಅವಳಿನಗರ ಮಧ್ಯ ಸಂಚರಿಸುತ್ತಿರುವ ಬೇಂದ್ರೆ ನಗರ ಸಾರಿಗೆ ಶೀಘ್ರ ಸ್ಥಗಿತಗೊಳ್ಳಲಿದೆ. ಈ ಬಗ್ಗೆ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಶೆಟ್ಟರ್ ಹೇಳಿದರು.

    ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಪ್ರಸಾದ ಅಬ್ಬಯ್ಯ, ಸಿ.ಎಂ. ನಿಂಬಣ್ಣವರ, ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ್, ಬಿಆರ್​ಟಿಎಸ್ ಎಂಡಿ ರಾಜೇಂದ್ರ ಚೋಳನ್, ಇತರ ಅಧಿಕಾರಿಗಳು ಇದ್ದರು.

    ಬಿಆರ್​ಟಿಎಸ್ ಹೈಲೈಟ್ಸ್:

    ವಿಶ್ವಬ್ಯಾಂಕ್​ನಿಂದ 324 ಕೋಟಿ ರೂ., ರಾಜ್ಯ ಸರ್ಕಾರದಿಂದ 646 ಕೋಟಿ ಸೇರಿ ಒಟ್ಟು 970 ಕೋಟಿ ರೂ. ಖರ್ಚು.

    178 ಕೋಟಿ ರೂ. ಬಸ್​ಗಾಗಿ ಖರ್ಚು.

    ಬಿಆರ್​ಟಿಎಸ್ ಕಾರಿಡಾರ್​ಗೆ ಸಂರ್ಪಸುವ 150 ಕಡೆ 200 ಮೀಟರ್ ರಸ್ತೆ ಅಭಿವೃದ್ಧಿ.

    ಐದು ವರ್ಷಗಳವರೆಗೆ ರಸ್ತೆ ನಿರ್ವಹಣೆ.

    ಅವಳಿನಗರ ಮಧ್ಯ 32 ಬಸ್ ನಿಲ್ದಾಣಗಳು, 3 ಗ್ರೇಡ್ ಸೆಪರೇಟರ್. 6 ಎಫ್​ಒಬಿ.

    ನಿತ್ಯ 100 ಬಸ್ ಸಂಚಾರ, ಲಕ್ಷಕ್ಕಿಂತ ಹೆಚ್ಚು ಜನ ಪ್ರಯಾಣ.

    ಪ್ರತಿ ಬಸ್ 280 ಕಿ.ಮೀ. ಸೇರಿ ಒಟ್ಟು 26,047 ಕಿ.ಮೀ. ಸಂಚರಿಸುತ್ತವೆ.

    ದಿನದ ಒಟ್ಟು ಆದಾಯ 10.41 ಲಕ್ಷ ರೂ. ಆದರೆ, ವೆಚ್ಚ 17.85 ಲಕ್ಷ ರೂ.

    ತಿಂಗಳಿಗೆ ಒಟ್ಟು 2 ಕೋಟಿ ರೂ. ನಷ್ಟ.

    ಸ್ಮಾರ್ಟ್ ಕಾರ್ಡ್:

    ಹುಬ್ಬಳ್ಳಿ ಹೊಸೂರಲ್ಲಿ ನಿರ್ವಿುಸಲಾಗಿರುವ ಬಿಆರ್​ಟಿಎಸ್ ನಿಯಂತ್ರಣ ಕೊಠಡಿ ಉದ್ಘಾಟನೆ ಹಾಗೂ ಪ್ರಯಾಣಿಕರ ಅನುಕೂಲಕ್ಕೆ ಸ್ಮಾರ್ಟ್ ಕಾರ್ಡ್ ಹಾಗೂ ಮೊಬೈಲ್ ಆಪ್​ಗಳನ್ನು ಸಚಿವರು ಬಿಡುಗಡೆ ಮಾಡಿದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts