More

    ಸಂಪಾದನೆ ಜತೆಗೆ ವ್ಯಕ್ತಿತ್ವ ವಿಕಸನವೂ ಬಹಳ ಮುಖ್ಯ; ಸ್ಫೂರ್ತಿಯಿಂದ ರಮೇಶ್….

    ಸಂಪಾದನೆ ಜತೆಗೆ ವ್ಯಕ್ತಿತ್ವ ವಿಕಸನವೂ ಬಹಳ ಮುಖ್ಯ; ಸ್ಫೂರ್ತಿಯಿಂದ ರಮೇಶ್....ಕೀರ್ತಿ, ಹಣ, ಅಧಿಕಾರ ಎನ್ನುವ ‘ಮಿನುಗುಹಾರ’ಗಳ ಹಿಂದೆ ಓಡುವ ಅವಸರದಲ್ಲಿ ಕರುಣೆ, ದಯೆ, ಸಹಾನುಭೂತಿ ಎನ್ನುವ ಗುಣಗಳು ಕೆಲವೊಮ್ಮೆ ಬಲಿಯಾಗುವ ಸಾಧ್ಯತೆ ಇರುತ್ತದೆ. ಏನೇ ಮಾಡಿದರೂ ಮಾನವೀಯ ಗುಣಗಳನ್ನು ಎಂದೂ ಮರೆಯಬೇಡಿ.

     

    ಸ್ಟೀವ್ ಜಾಬ್ಸ್ ಬಗ್ಗೆ ಒಂದು ಕಥೆ ಇದೆ. ಆಪಲ್ ಕಂಪನಿಯಿಂದ ಐಫೋನ್​ನ ಹೊಸ ಮಾಡೆಲ್ ಮಾಡಬೇಕು ಎಂದು ತೀರ್ಮಾನವಾಗುತ್ತದೆ. ಅತ್ಯಂತ ತೆಳುವಾದ ಐಫೋನ್ ನಿರ್ವಿುಸಲು ತಂತ್ರಜ್ಞರು ಹಗಲು-ರಾತ್ರಿ ಕೆಲಸ ಮಾಡಿ, ಕೊನೆಗೊಂದು ದಿನ ಫೋನನ್ನು ಸ್ಟೀವ್ ಜಾಬ್ಸ್ ಕೈಗಿಡುತ್ತಾರೆ. ಅವರು ಅದನ್ನು ಸೂಕ್ಷ್ಮವಾಗಿ ಗಮನಿಸಿ, ‘ಇದಕ್ಕಿಂತ ತೆಳು ಮಾಡಲು ಸಾಧ್ಯವಿಲ್ಲವಾ?’ ಎಂದು ಕೇಳಿದರಂತೆ. ಅದಕ್ಕೆ ತಂತ್ರಜ್ಞರು, ‘ಇಲ್ಲ ಸಾರ್, ಒಳಗೆ ಜಾಗವೇ ಇಲ್ಲ. ಇದಕ್ಕಿಂತ ತೆಳುವಾಗಿ ಮಾಡುವುದಕ್ಕೆ ಸಾಧ್ಯವೇ ಇಲ್ಲ’ ಎಂದರಂತೆ. ಆಗ ಸ್ಟೀವ್ ಆ ಫೋನನ್ನು ಅಲ್ಲೇ ಇದ್ದ ಫಿಶ್ ಟ್ಯಾಂಕ್ ಒಳಕ್ಕೆ ಎಸೆಯುತ್ತಾರೆ. ಅದರಿಂದ ಬುಳುಬುಳು ಎಂದು ಗುಳ್ಳೆ ಬರುತ್ತದೆ. ‘ಬಬಲ್ಸ್ ಬರುತ್ತಿದೆ ಎಂದರೆ ಒಳಗೆ ಗಾಳಿ ಇದೆ ಎಂದರ್ಥ; ಗಾಳಿ ಇದೆ ಎಂದರೆ ಇನ್ನೂ ಜಾಗ ಇದೆ ಎಂಬುದು ಸ್ಪಷ್ಟ’ ಎಂದು ಅರ್ಥಮಾಡಿಸಿದರಂತೆ. ಹಾಗಾಗಿ, ಅನವಶ್ಯಕವಾದ ಜಾಗ ಕಡಿಮೆ ಮಾಡಿ, ಇನ್ನೂ ತೆಳುವಾದ ಫೋನ್ ಮಾಡಿಕೊಂಡು ಬನ್ನಿ ಎಂದು ಹೇಳಿಕಳುಹಿಸಿದರಂತೆ.

    ಈ ಕಥೆಯ ತಾತ್ಪರ್ಯ- ನಾವೊಂದು ಕೆಲಸವನ್ನು ಶ್ರೇಷ್ಠವಾಗಿ ಮಾಡಿದ್ದೀವಿ ಅಂತ ಅನಿಸಿದರೂ, ಇನ್ನೂ ಶ್ರೇಷ್ಠವಾಗಿ ಮಾಡೋದಕ್ಕೆ ಅವಕಾಶವಿರುತ್ತದೆ ಎನ್ನುವುದನ್ನು ಮರೆಯಬಾರದು. ಈ ಅಪ್ರೋಚ್ ಸದಾ ನಮ್ಮನ್ನು ತುದಿಗಾಲಲ್ಲಿ ನಿಲ್ಲಿಸುತ್ತದೆ; ಕೆಲಸವನ್ನು ಇನ್ನೂ ಶ್ರದ್ಧೆಯಿಂದ ಮಾಡುವುದಕ್ಕೆ ಪ್ರೇರೇಪಿಸುತ್ತದೆ. ಜಪಾನ್​ನಲ್ಲಿ Kaizen ಎಂಬ ಪದ ಇದೆ. ಅದರ ಅರ್ಥ constant improvement ಅಂತ. ‘ನೀವು ಸದಾ ಏಳ್ಗೆಯ ಬಗ್ಗೆ ಗಮನ ಕೊಡಬೇಕು’ ಎಂದು ಜಪಾನೀಯರು ಹೇಳುತ್ತಾರೆ. ಪ್ರತಿದಿನ, ಪ್ರತಿಕ್ಷಣ ನಾವು ಮಾಡುವ ಕೆಲಸಗಳನ್ನು ಇನ್ನೂ ಚೆನ್ನಾಗಿ ಹೇಗೆ ಮಾಡುವುದು ಎಂಬುದು ಈ ಫಿಲಾಸಫಿಯ ಉದ್ದೇಶ. ಮಾಡುವ ಕೆಲಸವನ್ನು ನಮ್ಮ ಕೈಯಲ್ಲಿ ಎಷ್ಟು ಅಚ್ಚುಕಟ್ಟಾಗಿ ಮಾಡೋಕೆ ಸಾಧ್ಯವೋ, ಅಷ್ಟು ಚೆನ್ನಾಗಿ ಮಾಡಿಬಿಡಬೇಕು. ಅದು ಒಂದು ಸಾಲಿರಬಹುದು, ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೆಸೇಜ್ ಇರಬಹುದು ಅಥವಾ ಮಹಾಕಾರ್ಯವಿರಬಹುದು. ಎಲ್ಲದರಲ್ಲೂ ಶ್ರೇಷ್ಠತೆ ಸಾಧಿಸುವುದಕ್ಕೆ ಪ್ರಯತ್ನಪಡಬೇಕು. ಎಷ್ಟೋ ಸಲ ಸಣ್ಣ-ಪುಟ್ಟ ವಿಷಯಗಳ ಬಗ್ಗೆ ನಾವು ಹೆಚ್ಚು ಗಮನಹರಿಸುವುದೇ ಇಲ್ಲ. ಕಸದಬುಟ್ಟಿಗೆ ಒಂದು ಪೇಪರ್ ಬಿಸಾಕಿದಾಗ, ಅದು ಬುಟ್ಟಿಗೆ ಬೀಳದೆ ಪಕ್ಕಕ್ಕೆ ಬೀಳುತ್ತದೆ. ಅದೇ ಗಮನವಿಟ್ಟು ಹಾಕಿದರೆ ಡಬ್ಬಿಯೊಳಗೆ ಖಂಡಿತಾ ಬೀಳುತ್ತದೆ.

    ಮಲಗೆದ್ದ ನಂತರ ಬೆಡ್​ಶೀಟ್ ಮಡಚಿಡುತ್ತೇವೆ. ಅಸಡ್ಡೆಯಿಂದ ಮಾಡಿದರೆ ಸರಿಯಾಗಿ ಆಗುವುದಿಲ್ಲ. ಅದೇ ಕೆಲಸವನ್ನು ಅಕ್ಕರೆಯಿಂದ ಮಾಡಿದರೆ, ಸರಿಯಾಗಿ ಮಡಚಿಡಬಹುದು. ಯಾವುದೇ ಕೆಲಸವಾದರೂ ಸರಿ, ಶ್ರೇಷ್ಠವಾಗಿ ಮಾಡುವ ಅಭ್ಯಾಸ ಮಾಡಿಕೊಂಡರೆ, ಅದು ನಮಗೆ ದೊಡ್ಡ ರೀತಿಯಲ್ಲಿ ಸಹಾಯ ಮಾಡುತ್ತದೆ. ಎಷ್ಟೋ ಸಲ, ಒಂದೇ ವ್ಯಾಪಾರದಲ್ಲಿರುವ ಇಬ್ಬರು ವ್ಯಕ್ತಿಗಳಲ್ಲಿ ಒಬ್ಬ ಅಪಾರ ಯಶಸ್ಸು ಕಂಡರೆ, ಇನ್ನೊಬ್ಬ ಸಾಧಾರಣ ಯಶಸ್ಸು ಕಾಣುತ್ತಾನೆ. ಅವರಿಬ್ಬರೂ ಮಾರುತ್ತಿರುವುದು ಒಂದೇ ವಸ್ತುವನ್ನು. ಆದರೂ ಒಬ್ಬನಿಗೆ ಯಶಸ್ಸು ಸಿಗೋಕೆ ಕಾರಣ, ಅವನು ಆ ಕೆಲಸವನ್ನು ಮಾಡುತ್ತಿರುವ ರೀತಿ. ಹಾಗಾಗಿ, ನೀವು ಏನು ಮಾಡುತ್ತಿದ್ದೀರ ಎನ್ನುವುದಕ್ಕಿಂತ ಹೇಗೆ ಮಾಡುತ್ತಿದ್ದೀರಾ ಎನ್ನುವುದು ಬಹಳ ಮುಖ್ಯವಾಗುತ್ತದೆ.

    ಈ ನಿರಂತರ ಏಳಿಗೆ ಎಂಬ approach ಬರೀ ನಮ್ಮ ಕೆಲಸಕ್ಕೆ ಮಾತ್ರವಲ್ಲ, ನಮ್ಮ ವಿಷಯಕ್ಕೂ ಹೊಂದುತ್ತದೆ. ಈ ವಿಷಯವಾಗಿ ಒಂದು ಘಟನೆ ಹೇಳುತೀನಿ. ‘ಶಾಂತಿ ಕ್ರಾಂತಿ’ ಚಿತ್ರ ನಾಲ್ಕು ಭಾಷೆಗಳಲ್ಲಿ ತಯಾರಾಯಿತು. ತಮಿಳು ಮತ್ತು ತೆಲುಗಿನಲ್ಲಿ ಕ್ರಾಂತಿಯಾಗಿ ಕ್ರಮವಾಗಿ ರಜನಿಕಾಂತ್ ಮತ್ತು ನಾಗಾರ್ಜುನ ಅಭಿನಯಿಸಿದರೆ, ಶಾಂತಿಯಾಗಿ ರವಿಚಂದ್ರನ್ ನಟಿಸಿದ್ದರು. ಇನ್ನು, ಕನ್ನಡದಲ್ಲಿ ರವಿಚಂದ್ರನ್ ಕ್ರಾಂತಿಯಾದರೆ, ನಾನು ಶಾಂತಿಯಾಗಿ ನಟಿಸಿದ್ದೆ. ಆ ಸಂದರ್ಭದಲ್ಲಿ ರಜನಿಕಾಂತ್ ಜತೆಗೆ ಬೆಂಗಳೂರಿನಿಂದ ಕುದುರೆಮುಖಕ್ಕೆ ಹೋಗುವ ಅವಕಾಶ ಸಿಕ್ಕಿತ್ತು. ರಜನಿಕಾಂತ್ ಹೇಗೆ ಸೂಪರ್​ಸ್ಟಾರ್ ಆದರು ಎಂಬ ಕುತೂಹಲ ನನಗೆ ಮೊದಲಿನಿಂದಲೂ ಇತ್ತು. ಒಮ್ಮೆ ಬಿಡುವಿದ್ದಾಗ ಅವರನ್ನು ಈ ವಿಷಯವಾಗಿ ಕೇಳಿದೆ. ‘ನಾನು ಪ್ರತಿರಾತ್ರಿ ಮಲಗುವುದಕ್ಕಿಂತ ಮುಂಚೆ, ಇಡೀ ದಿನವನ್ನು ರಿವೈಂಡ್ ಮಾಡಿಕೊಳ್ಳುತ್ತೇನೆ. ಅಂದು ನಾನು ಏನೇನು ಮಾಡಿದೆ, ಯಾರ್ಯಾರ ಹತ್ತಿರ ಹೇಗೆ ವ್ಯವಹರಿಸಿದೆ, ಏನೇನು ಮಾತಾಡಿದೆ ಅಂತ ರಿವೈಂಡ್ ಮಾಡಿಕೊಳ್ಳುತ್ತೇನೆ. ಎಲ್ಲಾದರೂ ತಪು್ಪ ಮಾಡಿದೆ ಅಂತನಿಸಿದರೆ, ಮುಂದಿನ ದಿನ ಅದನ್ನು ಮಾಡದೆ ಇರುವ ಹಾಗೆ ನೋಡಿಕೊಳ್ಳುತ್ತೀನಿ’ ಎಂದು ಹೇಳಿದರು.

    ಇದನ್ನೇ ಸೆಲ್ಪ್ ಕರೆಕ್ಷನ್ ಅಂತ ಹೇಳೋದು. ಅಂದರೆ, ನಮ್ಮನ್ನು ನಾವು ವಿಶ್ಲೇಷಿಸಿಕೊಂಡು, ಮಾಡಿರುವ ತಪು್ಪಗಳನ್ನು ಗ್ರಹಿಸಿಕೊಂಡು, ಅದನ್ನು ಆದಷ್ಟು ಬೇಗ ತಿದ್ದಿಕೊಳ್ಳೋದು ಬಹಳ ಬಹಳ ಮುಖ್ಯ. ಉಡಛ್ಟಿಢಛಚಢ ಜ್ಞಿ ಛಿಡಛ್ಟಿಢಡಿಚಢ, ಢಟ್ಠ ಠಜಟ್ಠ್ಝ ಚಿಛಿ ಚಿಛಿಠಿಠಿಛ್ಟಿ ಅಂತ ಹೇಳುತ್ತಾರೆ. ನಿನ್ನೆಯ ರಮೇಶ್​ಗಿಂತ ಇವತ್ತಿನ ರಮೇಶ್, ಯಾವುದೋ ಸಣ್ಣರೀತಿಯಲ್ಲಿ ಬೆಟರ್ ಆಗಿರಬೇಕು.

    ನಾಳೆಯ ರಮೇಶ್ ಇವತ್ತಿನ ರಮೇಶ್​ಗಿಂತ ಬೆಟರ್ ಆಗಿರಬೇಕು. ನೀವು ಯಾರೇ ಆಗಿದ್ದರೂ, ನಿಮ್ಮಲ್ಲಿ ನಿಮಗಿಂತ ಉತ್ತಮವಾದ ವ್ಯಕ್ತಿಯೊಬ್ಬ ಇರುತ್ತಾನೆ. ಅವನನ್ನು ಹೊರಗೆ ತೆಗೆಯೋದು ನಿಮ್ಮ ಜೀವನದ ಗುರಿಯಾಗಿರಬೇಕು. ನೀವು ಏನು ಮಾಡುತ್ತಿದ್ದೀರಾ ಎನ್ನುವುದಕ್ಕಿಂತ, ನೀವು ಏನು ಆಗುತ್ತಿದ್ದೀರಾ ಎನ್ನುವುದು ಬಹಳ ಮುಖ್ಯ.

    ನೀವು ಏನು ಆಗುತ್ತಿದ್ದೀರಾ ಎಂದರೆ, ಮಾನವೀಯತೆಯ ದೃಷ್ಟಿಯಲ್ಲಿ ನೀವೆಲ್ಲಿದ್ದೀರಾ ಅಂತ? Are you being a better human being? ನಮ್ಮ ಈ ಕೀರ್ತಿ, ಹಣ, ಅಧಿಕಾರ ಎನ್ನುವ ‘ಮಿನುಗುಹಾರ’ಗಳ ಹಿಂದೆ ಓಡುವ ಅವಸರದಲ್ಲಿ ಕರುಣೆ, ದಯೆ, ಸಹಾನುಭೂತಿ ಎನ್ನುವ ಗುಣಗಳು ಕೆಲವೊಮ್ಮೆ ಬಲಿಯಾಗುವ ಸಾಧ್ಯತೆ ಇರುತ್ತದೆ. ನೂರಾರು ಮನಸ್ಸುಗಳನ್ನು ನೋಯಿಸಿ, ನೂರಾರು ಕೋಟಿಗಳನ್ನು ಮಾಡುವುದರಲ್ಲಿ ಅರ್ಥವಿಲ್ಲ. ಅದಕ್ಕೇ ಹೇಳಿದ್ದು, ನೀವು ಏನಾಗುತ್ತಿದ್ದೀರಾ ಎನ್ನುವುದನ್ನು ಮೊದಲು ಯೋಚಿಸಿ ಅಂತ. ಎಲ್ಲಕ್ಕಿಂತ ಹೆಚ್ಚಾಗಿ, ಏನೇ ಮಾಡಿದರೂ ಮಾನವೀಯ ಗುಣಗಳನ್ನು ಎಂದೂ ಮರೆಯಬೇಡಿ.

    ಹಾಗಾಗಿ, ಎರಡು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಿ. ಒಂದು- ಏನೇ ಕೆಲಸ ಮಾಡುತ್ತಿದ್ದರೂ, ಅದನ್ನು ಇನ್ನೂ ಶ್ರೇಷ್ಠವಾಗಿ ಹೇಗೆ ಮಾಡಬಹುದು ಎಂಬ ವಿಷಯದ ಬಗ್ಗೆ ಗಮನಕೊಡಿ. ಎರಡನೆಯದು- ನೀವು ಏನು ಮಾಡುತ್ತಿದ್ದೀರಿ ಎನ್ನುವುದಕ್ಕಿಂತ, ನೀವು ಏನಾಗುತ್ತಿದ್ದೀರಿ ಎಂಬ ಬಗ್ಗೆಯೂ ಗಮನವಿರಲಿ. ಏಕೆಂದರೆ, ನಿಮ್ಮ ಸಂಪಾದನೆ ಹೆಚ್ಚಾಗೋದು, ಬಿಸಿನೆಸ್ ವೃದ್ಧಿಸೋದರ ಜತೆಗೆ ನಿಮ್ಮ ವ್ಯಕ್ತಿತ್ವ ವಿಕಸನವಾಗೋದು ಸಹ ಬಹಳ ಮುಖ್ಯ.

    (ಲೇಖಕರು ನಟ, ನಿರ್ದೇಶಕ)

    ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್​ ಮಾಡಿ

    10 ಲಕ್ಷ ಜನರಿಗೆ ಒಟ್ಟು 1,500 ಕೋಟಿ ರೂ. ಮೋಸ; ಬೆಂಗಳೂರಿನ ಕಂಪನಿಯ 24 ಜನರನ್ನು ಬಂಧಿಸಿದ ಸೈಬರಾಬಾದ್ ಪೊಲೀಸರು

    ‘ಕಾಲೂರಲು’ ಸಿಗದ ‘ಬೆಂ’ಬಲ; ಉತ್ತರ ಕನ್ನಡ ಸಂಸದ ಅನಂತಕುಮಾರ ಹೆಗಡೆ ರಾಜಕೀಯ ನಿವೃತ್ತಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts