More

    86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಾರ್ಚ್ ಅಂತ್ಯಕ್ಕೆ?

    ವಿಜಯವಾಣಿ ವಿಶೇಷ ಹಾವೇರಿ

    ನಗರದಲ್ಲಿ ಫೆ. 26ರಿಂದ ಮೂರು ದಿನ ನಡೆಸಲು ಉದ್ದೇಶಿಸಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಫೆ. 5ರಂದು ಬೆಂಗಳೂರಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಕಸಾಪ ಪದಾಧಿಕಾರಿಗಳು, ಜಿಲ್ಲೆಯ ಶಾಸಕರು ಹಾಗೂ ಸಚಿವರ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ದಿನಾಂಕ ಮುಂದೂಡಿಕೆಯ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ದಟ್ಟವಾಗಿದೆ.

    ಈಗಾಗಲೇ ನಿಗದಿಪಡಿಸಿದಂತೆ ಸಮ್ಮೇಳನ ಆಯೋಜಿಸಲು ಕೇವಲ 20 ದಿನ ಬಾಕಿ ಉಳಿದಿದೆ. ಇಷ್ಟು ಕಡಿಮೆ ಅವಧಿಯಲ್ಲಿ ವಿವಿಧ ವ್ಯವಸ್ಥೆಗಳನ್ನು ಮಾಡಲು ಅಸಾಧ್ಯ ಎಂಬ ಮಾತು ಕಸಾಪ ವಲಯದಲ್ಲಿ ಕೇಳಿಬರುತ್ತಿದೆ. ಅಲ್ಲದೆ, ಡಿಸೆಂಬರ್​ನಲ್ಲಿಯೇ ದಿನಾಂಕ ನಿಗದಿಪಡಿಸಿದ್ದರೂ ಸರ್ಕಾರದಿಂದ ಈವರೆಗೂ ಸಮ್ಮೇಳನಕ್ಕೆಂದು ನಯಾ ಪೈಸೆ ಅನುದಾನ ಘೊಷಣೆ ಮಾಡಿಲ್ಲ. ಖರ್ಚು ವೆಚ್ಚವಿಲ್ಲದ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು 2 ಬಾರಿ ಸಭೆ ನಡೆಸಿ ಸೂಚನೆ ನೀಡಿದ್ದಾರೆ. ಅದರಂತೆ ಕಸಾಪ ಪದಾಧಿಕಾರಿಗಳು 19 ಸಮಿತಿಗಳನ್ನು ರಚಿಸಿದ್ದಾರೆ. ಸಮಿತಿಗಳ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಒಂದು ಸುತ್ತಿನ ಸಭೆ ನಡೆಸಿ ಖರ್ಚು ವೆಚ್ಚದ ವಿವರವನ್ನು ಕಲೆಹಾಕಿದ್ದಾರೆ. ಆದರೆ ಯಾವ ಸಮಿತಿಯವರೂ ಇಂತಿಷ್ಟೇ ವೆಚ್ಚವಾಗುತ್ತದೆ ಎಂಬ ಕ್ರಿಯಾಯೋಜನೆಯನ್ನು ಸರ್ಕಾರಕ್ಕೆ ಸಲ್ಲಿಸಿಲ್ಲ. ಹೀಗಾಗಿ ಕನಿಷ್ಠ ಒಂದು ತಿಂಗಳಾದರೂ ಸಮ್ಮೇಳನವನ್ನು ಮುಂದೂಡುವುದು ಸೂಕ್ತ ಎಂಬ ಅಭಿಪ್ರಾಯ ಕೇಳಿಬಂದಿದೆ.

    ಮೂಲಸೌಕರ್ಯಕ್ಕೂ ಬೇಕು ಅನುದಾನ: ಅಖಿಲ ಭಾರತ ಮಟ್ಟದ ಸಮ್ಮೇಳನ ನಡೆಯುತ್ತಿರುವುದರಿಂದ ನಗರದಲ್ಲಿನ ರಸ್ತೆ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ವಿದ್ಯುತ್ ದೀಪ, ನೈರ್ಮಲ್ಯ ನಿರ್ವಹಣೆಗೆ ನಗರಸಭೆಗೆ ಕನಿಷ್ಠ 10ಕೋಟಿ ರೂ. ಅನುದಾನ ಬೇಕಿದೆ. ಸಮ್ಮೇಳನಕ್ಕೆ ಲಕ್ಷಾಂತರ ಜನ ಬರುವುದರಿಂದ ನಗರದಲ್ಲಿ ಎಲ್ಲೆಡೆ ಉತ್ತಮ ರಸ್ತೆ, ಸಾರ್ವಜನಿಕ ಶೌಚಗೃಹ ನಿರ್ವಿುಸುವ ಹೊಣೆಗಾರಿಕೆ ನಗರ ಸ್ಥಳೀಯ ಸಂಸ್ಥೆಯ ಮೇಲಿದೆ. ಇದಕ್ಕಾಗಿ ನಗರಸಭೆಯಿಂದ 20 ಕೋಟಿ ರೂ. ಅನುದಾನ ಪ್ರಸ್ತಾವನೆ ಸಲ್ಲಿಸಲಾಗಿದೆ. ಅದಕ್ಕೂ ಮಂಜೂರಾತಿ ದೊರೆತಿಲ್ಲ.

    ಮಾರ್ಚ್ ಅಂತ್ಯಕ್ಕೆ ಸಾಧ್ಯತೆ: ಈಗಾಗಲೇ ನಿಗದಿಯಾಗಿರುವಂತೆ ಫೆ. 26ರ ಬದಲು ಮಾರ್ಚ್ ಅಂತ್ಯಕ್ಕೆ ಸಮ್ಮೇಳನ ನಡೆಸಲು ದಿನಾಂಕವನ್ನು ಮುಂದೂಡುವ ಸಾಧ್ಯತೆಯಿದೆ. ಮಾರ್ಚ್ ಮೊದಲ ವಾರದಲ್ಲಿ ರಾಜ್ಯ ಬಜೆಟ್ ಮಂಡನೆಯಿರುವುದರಿಂದ ಮೊದಲ ವಾರದಲ್ಲಿ ಸಮ್ಮೇಳನ ಆಯೋಜನೆ ಸಾಧ್ಯವಿಲ್ಲ. ಅಲ್ಲದೆ ಬಜೆಟ್​ವರೆಗೆ ಸಚಿವರು, ಶಾಸಕರು ಅಧಿವೇಶನದಲ್ಲಿ ಪಾಲ್ಗೊಳ್ಳುವುದರಿಂದ ಇಲ್ಲಿನ ಸಿದ್ಧತೆಗಳ ಪರಿಶೀಲನೆ ಸಾಧ್ಯವಿಲ್ಲ. ಮಾರ್ಚ್ ಅಂತ್ಯಕ್ಕೆ ಘೊಷಣೆಯಾದರೆ ಸಚಿವರು, ಶಾಸಕರು ಸಕ್ರಿಯವಾಗಿ ಪಾಲ್ಗೊಳ್ಳಲು ಸಾಧ್ಯವಿದೆ. ಇನ್ನು ಈ ಸಮಯ ಕೈಬಿಟ್ಟರೆ ಏಪ್ರಿಲ್​ನಲ್ಲಿ ಜಿಪಂ, ತಾಪಂ ಚುನಾವಣೆ ಘೊಷಣೆಯಾಗುವ ಸಂಭವ ಇರುವುದರಿಂದ ಏಪ್ರಿಲ್​ನಲ್ಲಿಯೂ ಸಮ್ಮೇಳನ ಆಯೋಜನೆ ಕಷ್ಟಕರ. ಹೀಗಾಗಿ ಮಾರ್ಚ್ ಅಂತ್ಯಕ್ಕೆ ಸಮ್ಮೇಳನ ನಡೆಸಬಹುದು ಎಂಬ ಮಾತು ಕೇಳಿ ಬಂದಿದೆ.

    ಸಮ್ಮೇಳನದ ಕುರಿತು ರ್ಚಚಿಸಲು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ಸಚಿವರು, ಶಾಸಕರು, ಕಸಾಪ ಪದಾಧಿಕಾರಿಗಳೊಂದಿಗೆ ಬೆಂಗಳೂರ ವಿಧಾನಸೌಧದಲ್ಲಿ ಶುಕ್ರವಾರ ಸಂಜೆ ಸಭೆ ಆಯೋಜಿಸಲಾಗಿದೆ. ಸಮ್ಮೇಳನದ ಈಗಿನ ಸಿದ್ಧತೆಗಳ ಕುರಿತು ಸಚಿವರ ಗಮನಕ್ಕೆ ತರಲಾಗುವುದು. ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೋ ನೋಡಬೇಕಿದೆ.

    | ಎಚ್.ಬಿ. ಲಿಂಗಯ್ಯ, ಕಸಾಪ ಹಾವೇರಿ ಜಿಲ್ಲಾಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts