More

    85@ ವೋಟಿಂಗ್ ಫ್ರಂ ಹೋಂ

    ಅರವಿಂದ ಅಕ್ಲಾಪುರ ಶಿವಮೊಗ್ಗ
    ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೇ 7ರಂದು ಮತದಾನ ನಡೆಯಲಿದೆ. ಆದರೆ ಅದಕ್ಕೂ ಮುನ್ನವೇ ಹಕ್ಕು ಚಲಾಯಿಸುವ, ಅದೂ ಮನೆಯಲ್ಲಿ ಕುಳಿತೇ ಮತ ಹಾಕುವ ಅವಕಾಶ 10 ಸಾವಿರಕ್ಕೂ ಅಧಿಕ ಮಂದಿಗೆ ಸಿಗಲಿದೆ!

    ಹೌದು. ಕಳೆದ ವಿಧಾನಸಭೆ ಚುನಾವಣೆಯಲ್ಲಿ 80 ವರ್ಷ ಮೇಲ್ಪಟ್ಟವರಿಗೆ ಮನೆಯಿಂದಲೇ ಮತದಾನ ಮಾಡುವ ಅವಕಾಶವನ್ನು ಚುನಾವಣಾ ಆಯೋಗ ಕಲ್ಪಿಸಿತ್ತು. ಇದಕ್ಕೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆದರೆ ಈ ಲೋಕಸಭಾ ಚುನಾವಣೆಯಲ್ಲಿ ಈ ಮಿತಿಯನ್ನು ಹೆಚ್ಚು ಮಾಡಲಾಗಿದೆ. ಅಂದರೆ 85 ವರ್ಷ ಮೇಲ್ಟಟ್ಟ ಹಿರಿಯ ನಾಗರಿಕರು ಬಯಸಿದರೆ ಮನೆಯಿಂದಲೇ ಹಕ್ಕು ಚಲಾಯಿಸಬಹುದು.
    ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ 85 ವರ್ಷ ಮೇಲ್ಪಟ್ಟ 15,315 ಮಂದಿ ಹಾಗೂ ಅಂಗವೈಕಲ್ಯ ಹೊಂದಿರುವ 18,888 ಮತದಾರರಿದ್ದಾರೆ. ಈ ಮತದಾರರ ವಿವರ ಈಗಾಗಲೇ ಆಯೋಗದ ಬಳಿಯಿದೆ. ಮತಗಟ್ಟೆ ಸಹಾಯಕ ಅಧಿಕಾರಿಗಳು ಇವರೆಲ್ಲರ ಮನೆಗೆ ಭೇಟಿ ನೀಡಿ ಇನ್ನೊಮ್ಮೆ ಖಾತ್ರಿಪಡಿಸಿಕೊಳ್ಳುತ್ತಾರೆ.
    ಈ ಮತದಾರರು ವಿಳಾಸದಲ್ಲಿ ವಾಸವಿದ್ದಾರೆಯೇ? ಬೇರೆ ಕಡೆ ತೆರಳಿದ್ದಾರೆಯೆ? ಮತದಾರರ ಪಟ್ಟಿಯಲ್ಲಿರುವ ವ್ಯಕ್ತಿ ಜೀವಂತವಾಗಿದ್ದಾರೆಯೆ? ಮನೆಯಲ್ಲೇ ಮತ ಚಲಾಯಿಸುವ ಇರಾದೆ ಹೊಂದಿದ್ದಾರೆಯೆ? ಎಂಬ ಮಾಹಿತಿ ಸಂಗ್ರಹಿಸಲಿದ್ದಾರೆ. ಬಳಿಕ ಅವರ ಹೆಸರನ್ನು ಪ್ರತ್ಯೇಕವಾಗಿ ಪಟ್ಟಿ ಮಾಡಲಾಗುತ್ತದೆ.
    ವಿವರವನ್ನು ಸಂಬಂಧಿಸಿದ ಮತಗಟ್ಟೆಗೂ ನೀಡಲಾಗುತ್ತದೆ. ಮನೆಯಲ್ಲಿ ಹಕ್ಕು ಚಲಾಯಿಸಲು ಸಹಮತ ವ್ಯಕ್ತಪಡಿಸಿದ ಮತದಾರರು ಮತಗಟ್ಟೆಗೆ ತೆರಳುವಂತಿಲ್ಲ. ಈ ಮತದಾರರಿಗೆ ನಿರ್ದಿಷ್ಟ ದಿನ ಹಾಗೂ ಸಮಯವನ್ನು ತಿಳಿಸಲಾಗುತ್ತದೆ. ಆ ದಿನದಂದು ಮತಗಟ್ಟೆ ಅಧಿಕಾರಿಗಳು, ಒಬ್ಬ ಪೊಲೀಸ್ ಹಾಗೂ ವಿಡಿಯೋ ಗ್ರಾಫರ್ ತಂಡ ನೋಂದಾಯಿತ ಮತದಾರರ ಮನೆಗೆ ತೆರಳಿ, ಮತದಾನಕ್ಕೆ ಅವಕಾಶ ಕಲ್ಪಿಸಲಿದೆ. ಇಡೀ ಪ್ರಕ್ರಿಯೆಯನ್ನು ಚಿತ್ರಿಕರಣ ಮಾಡಲಾಗುತ್ತದೆ
    ಒಂದು ವೇಳೆ ಚುನಾವಣಾ ಆಯೋಗದ ತಂಡ ಮನೆಗೆ ತೆರಳಿದಾಗ ಮತದಾರ ಲಭ್ಯವಿಲ್ಲದಿದ್ದರೆ, ಮತ್ತೊಂದು ಬಾರಿ ಭೇಟಿ ಕೊಡಲಿದ್ದಾರೆ. ಆಗಲೂ ಮತದಾರ ಲಭ್ಯವಾಗದಿದ್ದರೆ ಮತದಾನ ಮಾಡಲು ಅವಕಾಶ ಇರುವುದಿಲ್ಲ. ಮುಖ್ಯವಾಗಿ ಆ ಮತದಾರ ಮತಗಟ್ಟೆಗೆ ಬಂದು ವೋಟು ಹಾಕುವ ಅವಕಾಶವನ್ನೂ ಕಳೆದುಕೊಳ್ಳಬೇಕಾಗುತ್ತದೆ.
    ಪ್ರಮಾಣ ಪತ್ರ ಅವಶ್ಯ:ಅಂಗವಿಕಲರು ಮನೆಯಿಂದಲೇ ಮತ ಚಲಾಯಿಸಲು ಮಾರ್ಗಸೂಚಿಯೂ ಇದೆ. ಶೇ.40ಕ್ಕೂ ಅಧಿಕ ಅಂಗವೈಕಲ್ಯ ಹೊಂದಿರುವವರು ಮಾತ್ರ ಮನೆಯಿಂದ ಹಕ್ಕು ಚಲಾಯಿಸಬಹುದು. ಶೇ.40ಕ್ಕೂ ಹೆಚ್ಚು ಅಂಗವೈಕಲ್ಯವಿದೆ ಎಂಬುದಕ್ಕೆ ಇವರು ವೈದ್ಯರ ಬಳಿ ಪ್ರಮಾಣ ಪತ್ರ ಪಡೆದಿರಬೇಕು. ಮತದಾನ ಪ್ರಕ್ರಿಯೆಗೂ ಮುನ್ನ ಅಧಿಕಾರಿಗಳು ಮನೆಗೆ ಭೇಟಿ ನೀಡಿದ ಸಂದರ್ಭ ಈ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತೋರಿಸಬೇಕು.
    ಕರೊನಾ ಸೋಂಕಿತರಿಗೂ ಅವಕಾಶ:ಕರೊನಾ ಪಾಸಿಟಿವ್ ಆಗಿ ಚಿಕಿತ್ಸೆ ಪಡೆಯುತ್ತಿರುವವರು, ಕ್ವಾರಂಟೈನ್‌ನಲ್ಲಿ ಇರುವವರೂ ತಾವಿರುವ ಜಾಗದಿಂದಲೇ ಹಕ್ಕು ಚಲಾಯಿಸಬಹುದು. 85 ವರ್ಷ ಮೇಲ್ಪಟ್ಟವರು ಹಾಗೂ ಅಂಗವಿಕಲರಿಗೆ ನೀಡುವಂತೆ ಕರೊನಾ ಸೋಂಕಿತರಿಗೂ ಪಾರ್ಮ್-12ಡಿ ನೀಡಲಾಗುತ್ತದೆ.
    ಮೂರ‌್ನಾಲ್ಕು ದಿನಗಳಲ್ಲಿ ಪಟ್ಟಿ ಸಿದ್ಧ:ಎಲ್ಲರೂ ಮತಗಟ್ಟೆಗೆ ಬಂದು ಮತಚಲಾಯಿಸಲಿ ಎಂಬುದು ಚುನಾವಣಾ ಆಯೋಗದ ಆಶಯ. ಅಂಗವಿಕಲರು, ವೃದ್ಧರಿಗೆ ಮತಗಟ್ಟೆಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುತ್ತದೆ. 85 ವರ್ಷ ಮೇಲ್ಪಟ್ಟವರು, ಶೇ.40ಕ್ಕಿಂತ ಹೆಚ್ಚು ಅಂಗವೈಕಲ್ಯ ಇರುವವರು ಒಂದು ವೇಳೆ ಮನೆಯಿಂದಲೇ ಮತ ಚಲಾಯಿಸಲು ನಿರ್ಧರಿಸಿದರೆ ಅದಕ್ಕೂ ವ್ಯವಸ್ಥೆ ಮಾಡಲಾಗುತ್ತದೆ. ಈ ಬಗೆಯ ಅರ್ಹ ಮತದಾರರ ಪಟ್ಟಿ ಇನ್ನು ಮೂರ‌್ನಾಲ್ಕು ದಿನಗಳಲ್ಲಿ ಅಂತಿಮಗೊಳ್ಳಲಿದೆ. ಇವರೆಲ್ಲರೂ ಮೇ.7ಕ್ಕೆ ಮುನ್ನವೇ ಹಕ್ಕು ಚಲಾಯಿಸಲಿದ್ದಾರೆ ಎಂದು ಜಿಲ್ಲಾ ಚುನಾವಣಾಧಿಕಾರಿ ಗುರುದತ್ತ ಹೆಗಡೆ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts